ಎದೆಮೇಲೆ ದರ್ಶನ್ ಟ್ಯಾಟೂ ಹಾಕಿಸಿಕೊಂಡ ಅಭಿಮಾನಿ; ಬಿಗ್‌ಬಾಸ್ ಅವಕಾಶ ಸಿಗುತ್ತಾ?
ಸ್ಟಾರ್ ನಟರ ಹೆಸರು, ಭಾವಚಿತ್ರವನ್ನು ಅಭಿಮಾನಿಗಳು ಹಚ್ಚೆ ಹಾಕಿಸಿಕೊಳ್ಳುವುದು ಹೊಸದೇನು ಅಲ್ಲ. ಇತ್ತೀಚೆಗೆ ಈ ಪ್ರವೃತ್ತಿ ಹೆಚ್ಚಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಆ ಫೋಟೊ, ವೀಡಿಯೋ ವೈರಲ್ ಆಗುತ್ತದೆ. ನಟ ದರ್ಶನ್ ಮೇಲೆ ಏನೇ ಆರೋಪಗಳಿದ್ದರೂ ಅಭಿಮಾನಿಗಳು ಬಿಟ್ಟುಕೊಡುತ್ತಿಲ್ಲ.
ಇದೀಗ ದರ್ಶನ್ ಅಭಿಮಾನಿ ಅವಿನಾಶ್ ಕೂಡ ಎದೆಮೇಲೆ ನೆಚ್ಚಿನ ನಟನ ಭಾವಚಿತ್ರದ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಅವಿನಾಶ್ ಎಂದರೆ ಯಾರು ಎಂದು ಗೊತ್ತಾಗುವುದು ಕಷ್ಟ. ಆದರೆ ಜ್ಯೂ. ಡಿಬಾಸ್ ಅವಿನಾಶ್ ಅಂದ್ರೆ ಕೆಲವರಿಗೆ ತಕ್ಷಣ ಗೊತ್ತಾಗುತ್ತದೆ. ಈ ಹಿಂದೆ 'ಮಜಾ ಭಾರತ' ಕಿರುತೆರೆ ಕಾರ್ಯಕ್ರಮದಲ್ಲಿ ಅವರು ಭಾಗಿ ಆಗಿದ್ದರು.

ಥೇಟ್ ನಟ ದರ್ಶನ್ ರೀತಿಯ ಸ್ಟೈಲ್, ಮ್ಯಾನರಿಸಂ ಹಾಗೂ ಡೈಲಾಗ್ ಡೆಲಿವರಿಯಿಂದ ಅವಿನಾಶ್ ಗಮನ ಸೆಳೆದವರು. ಶೋನಲ್ಲಿ ಅವಿನಾಶ್ ಹಾವಭಾವ ನೋಡಿ ತೀರ್ಪುಗಾರ್ತಿ ರಚಿತಾ ರಾಮ್ ಕೂಡ ಶಾಕ್ ಆಗಿದ್ದರು. ಚಿಕ್ಕಮಗಳೂರು ಮೂಲದ ಅವಿನಾಶ್ ವೃತ್ತಿಯಲ್ಲಿ ಆಟೋ ಡ್ರೈವರ್. ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ರೀತಿ ರೀಲ್ಸ್ ಮಾಡಿ ಗಮನ ಸೆಳೆದಿದ್ದರು. ಬಳಿಕ 'ಮಜಾ ಭಾರತ' ಶೋ ಅವಕಾಶ ಸಿಕ್ಕಿತ್ತು.
ನಟ ದರ್ಶನ್ ರೀತಿ ಸ್ಟೈಲ್, ಡ್ಯಾನ್ಸ್, ಡೈಲಾಗ್ ಡೆಲಿವರಿಂದ ನೋಡುಗನ ಮನಗೆದ್ದ ಅವಿನಾಶ್ ಬಳಿಕ ಒಂದೆರಡು ಸಿನಿಮಾಗಳಲ್ಲಿ ನಟಿಸಿದ್ದರು. 'ರಣವ್ಯೂಹ' ಹಾಗೂ 'ದಂಡ ತೀರ್ಥ' ಎಂಬ ಚಿತ್ರಗಳಲ್ಲಿ ನಟಿಸೋ ಅವಕಾಶ ಸಿಕ್ಕಿತ್ತು. ಬಳಿಕ ಯಾವುದೇ ಸುಳಿವು ಸಿಗಲಿಲ್ಲ. ಬಿಗ್‌ಬಾಸ್ ಶೋಗೆ ಸ್ಪರ್ಧಿಯಾಗಿ ಅವಿನಾಶ್ ಹೋಗುತ್ತಾರೆ ಎನ್ನುವ ಊಹಾಪೋಹ ಕೂಡ ಶುರುವಾಗಿತ್ತು. ಆದರೆ ಅದು ನಿಜವಾಗಲಿಲ್ಲ.
ಸದ್ಯ ಬಿಗ್‌ಬಾಸ್ ಕನ್ನಡ ಸೀಸನ್ 12ಕ್ಕೆ ದಿನಗಣನೆ ಶುರುವಾಗಿದೆ. ಇಂತಹ ಸಮಯದಲ್ಲೇ ಅವಿನಾಶ್ ಮತ್ತೆ ಸುದ್ದಿಯಲ್ಲಿದ್ದಾರೆ. ಎದೆ ಮೇಲೆ ನೆಚ್ಚಿನ ನಟನ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ನೀತು ವನಜಾಕ್ಷಿ ಒಡೆತನದ ಟ್ಯಾಟೂ ಶಾಪ್‌ನಲ್ಲೇ ಅವಿನಾಶ್ ಟ್ಯಾಟೂ ಹಾಕಿಸಿಕೊಂಡಿದ್ದು ಅದಕ್ಕೆ ಸಂಬಂಧಿಸಿದ ಫೋಟೊಗಳು ವೈರಲ್ ಆಗುತ್ತಿದೆ.
ದರ್ಶನ್ ಫ್ಯಾನ್ ಎಂದು ಹೇಳಿದ್ದಕ್ಕೆ ನನ್ನನ್ನು ಬಿಗ್‌ಬಾಸ್‌ನಿಂದ ರಿಜೆಕ್ಟ್ ಮಾಡಿದ್ದರು ಎಂದು ನಟ ಅಂಜನ್ ದೀಪು ಆರೋಪಿಸಿದ್ದು ಗೊತ್ತೇಯಿದೆ. ಸದ್ಯ ಅವಿನಾಶ್ ಕೂಡ ತಾವು ದರ್ಶನ್ ಅಭಿಮಾನಿ ಎಂದು ಹೇಳುತ್ತಾ ಬರ್ತಿದ್ದಾರೆ. ಹಾಗಾಗಿ ಅವಿನಾಶ್‌ಗೆ ಈ ಬಾರಿ ಬಿಗ್‌ಬಾಸ್ ಅವಕಾಶ ಸಿಗೋದು ಅನುಮಾನ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ದರ್ಶನ್ ಅಭಿಮಾನಿಗಳಿಗೆ ಬಿಗ್‌ಬಾಸ್ ಅವಕಾಶ ಸಿಗಲ್ಲ ಎನ್ನುವುದೆಲ್ಲಾ ಸುಳ್ಳು. ಕಳೆದ ಸೀಸನ್‌ನಲ್ಲಿ ನಾಲ್ವರು ದರ್ಶನ್ ಅಭಿಮಾನಿಗಳು ದೊಡ್ಮನೆ ಒಳಗೆ ಹೋಗಿದ್ದರು.
ಈ ಬಾರಿ ಕೂಡ ನಟ ಸುದೀಪ್ ಬಿಗ್‌ಬಾಸ್ ಶೋ ನಿರೂಪಣೆ ಮಾಡುತ್ತಿದ್ದಾರೆ. ನಟ ವಿಜಯ್ ಸೂರ್ಯ, ಕಿರುತೆರೆ ನಟ ಧನುಷ್, ಗಾಯಕ ಸುನೀಲ್, ನಟಿ ಶ್ವೇತಾ ಆರ್ ಪ್ರಸಾದ್, ನಟಿ ಮೇಘಾ ಶೆಟ್ಟಿ ಸೇರಿದಂತೆ ಕೆಲವರು ದೊಡ್ಮನೆ ಒಳಗೆ ಎಂಟ್ರಿ ಕೊಡುತ್ತಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೀತಿದೆ. ಆದರೆ ಬಿಗ್‌ಬಾಸ್ ಆಯೋಜಕರ ಲೆಕ್ಕಾಚಾರವೇ ಬೇರೆ ಆಗಿರುತ್ತದೆ. ವಿವಾದಗಳಿಂದ ಸುದ್ದಿಯಾದವರು ಈ ಬಾರಿ ಮನೆಯೊಳಗೆ ಹೋಗುವುದು ಕಷ್ಟ ಕಷ್ಟ.


Click it and Unblock the Notifications











