ಈವರೆಗೆ 'ವೀಕೆಂಡ್ ವಿತ್ ರಮೇಶ್' ಶೋನಲ್ಲಿ ಅತಿ ಹೆಚ್ಚು TRP ಬಂದಿದ್ದು ಯಾರ ಸಂಚಿಕೆಗೆ?
ಕನ್ನಡ ಕಿರುತೆರೆಯ ಜನಪ್ರಿಯ ಸಂದರ್ಶನ ಕಾರ್ಯಕ್ರಮ 'ವೀಕೆಂಡ್ ವಿತ್ ರಮೇಶ್' 5ನೇ ಸೀಸನ್ ಯಶಸ್ವಿಯಾಗಿ ನಡೀತಿದೆ. ಈಗಾಗಲೇ ನಾಲ್ವರು ಸಾಧಕರ ಜೀವನ ಚರಿತ್ರೆಯನ್ನು ನಟ ರಮೇಶ್ ಅರವಿಂದ್ ರಿವೈಂಡ್ ಮಾಡಿ ತೋರಿಸಿದ್ದಾರೆ. ಈ ವಾರ ಡಾಲಿ ಧನಂಜಯ ಅತಿಥಿಯಾಗಿ ಬರ್ತಿದ್ದಾರೆ. ಇದೆಲ್ಲದರ ನಡುವೆ ಶೋ TRP ಬಗ್ಗೆ ಹಳೇ ವಿಡಿಯೋ ವೈರಲ್ ಆಗ್ತಿದೆ.
ಹೊಸ ಸೀಸನ್‌ನಲ್ಲಿ ರಮ್ಯಾ ಸಂಚಿಕೆಗೆ ಕೊಂಚ ಟ್ರೋಲ್ ಆಗಿತ್ತು. ಪ್ರಭುದೇವ ಜೀವನಗಾಥೆ ಕೇಳಿ ವೀಕ್ಷಕರು ಮೆಚ್ಚಿಕೊಂಡಿದ್ದರು. ಇನ್ನು ಕಳೆದ ವಾರದ ಹಿರಿಯ ನಟ ದತ್ತಣ್ಣ ಹಾಗೂ ಖ್ಯಾತ ಹೃದ್ರೋಗ ತಜ್ಞ, ಜಯದೇವ ಆಸ್ಪತ್ರೆ ನಿರ್ದೇಶಕ ಡಾ. ಸಿ. ಎನ್ ಮಂಜುನಾಥ್ ಅವರು ಅತಿಥಿಯಾಗಿ ಬಂದಿದ್ದರು. ಇವರಿಬ್ಬರ ಸಾಧನೆಯ ಕಥೆಗೆ ಒಂದೊಂದು ಸಂಚಿಕೆ ಸಾಕಗಲಿಲ್ಲ ಎಂದು ವೀಕ್ಷಕರು ಹೇಳುತ್ತಿದ್ದಾರೆ. ಈಗಾಗಲೇ ಡಾಲಿ ಧನಂಜಯ ಸಂಚಿಕೆಯ ಪ್ರೋಮೊ ರಿಲೀಸ್ ಆಗಿ ಸದ್ದು ಮಾಡ್ತಿದೆ.

ಯಾವುದೇ ಕಿರುತೆರೆ ಶೋ ಸಕ್ಸಸ್ ಆಗಿದ್ಯೋ ಇಲ್ವೋ ಅನ್ನುವುದನ್ನು ಅದಕ್ಕೆ ಬರುವ ಟಿಆರ್‌ಪಿ ರೇಟಿಂಗ್ ಆಧರಿಸಿ ನಿರ್ಧರಿಸಲಾಗುತ್ತಿದೆ. ಕಳೆದ 9 ವರ್ಷಗಳಲ್ಲಿ 5 ಸೀಸನ್‌ಗಳಾಗಿ 'ವೀಕೆಂಡ್ ವಿತ್ ರಮೇಶ್' ಶೋ ಪ್ರಸಾರವಾಗಿದೆ. ಕಾರ್ಯಕ್ರಮಕ್ಕೆ ಸಿಗುವ ಟಿಆರ್‌ಪಿ ರೇಟಿಂಗ್‌ನಲ್ಲೂ ಏರುಪೇರಾಗಿದೆ. ಕೆಲವರನ್ನು ಇಷ್ಟು ಬೇಗ ಸಾಧಕರ ಸೀಟ್‌ನಲ್ಲಿ ಕೂರಿಸಿದ್ದು ಯಾಕೆ? ಎನ್ನುವ ಚರ್ಚೆ ಕೂಡ ನಡೆದಿತ್ತು. ಕೆಲ ಸಾಧಕರನ್ನು ಕರೆಸಲೇಬೇಕು ಎನ್ನುವ ಬೇಡಿಕೆಯನ್ನು ಇಡುತ್ತಿದ್ದಾರೆ.
ವೀಕೆಂಡ್ ವಿತ್ ರಮೇಶ್ ಮೊದಲ ಸೀಸನ್‌ನಲ್ಲಿ 20 ಸಾಧಕರ 26 ಸಂಚಿಕೆ, ಎರಡನೇ ಸೀಸನ್‌ನಲ್ಲಿ 24 ಸಾಧಕರ 34 ಸಂಚಿಕೆ, ಮೂರನೇ ಸೀಸನ್‌ನಲ್ಲಿ ಇಲ್ಲಿಯವರೆಗೂ 21 ಸಾಧಕರ 28 ಸಂಚಿಕೆ, ಸಾಧಕರ 21 ಸಂಚಿಕೆ, ನಾಲ್ಕನೇ ಸೀಸನ್‌ನಲ್ಲಿ 18 ಜನ ಸಾಧಕರ 22 ಸಂಚಿಕೆಗಳು ಹಾಗೂ 5 ಸೀಸನ್‌ನಲ್ಲಿ ಈವರೆಗೆ 6 ಸಂಚಿಕೆಗಳಲ್ಲಿ 4 ಜನ ಸಾಧಕರ ಕಥೆಯನ್ನು ಹೇಳಲಾಗಿದೆ. ಆದರೆ ಇಷ್ಟು ಸಂಚಿಕೆಯಲ್ಲಿ ನಟ ದರ್ಶನ್ ಅವರ ಸಂಚಿಕೆಗೆ ಹೆಚ್ಚು ಟಿಆರ್‌ಪಿ ಬಂದಿತ್ತು.

ಈಗ ಕಿರಿತೆರೆ ಕಾರ್ಯಕ್ರಮಗಳ ಟಿಆರ್‌ಪಿ ರೇಟಿಂಗ್ ಸಿಗುತ್ತಿದೆ. 7 ವರ್ಷಗಳ ಹಿಂದೆ ಅಷ್ಟು ಸುಲಭವಾಗಿ ಸಿಗುತ್ತಿರಲಿಲ್ಲ. ಅದು ಸೀಕ್ರೆಟ್ ಆಗಿಯೇ ಇರುತ್ತಿತ್ತು. ಆದರೆ ಸುದ್ದಿಗೋಷ್ಠಿಯೊಂದರಲ್ಲಿ ಜೀ ಕನ್ನಡ ವಾಹಿನಿಯ ಬಿಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ಈ ಬಗ್ಗೆ ಮತನಾಡಿದ್ದರು. ''ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಇಲ್ಲಿಯವರೆಗೆ ಅತಿಹೆಚ್ಚು ಟಿ.ಆರ್.ಪಿ ಗಳಿಸಿರುವುದು ದರ್ಶನ್ ರವರ ಎಪಿಸೋಡ್'' ಅಂತ ಹೇಳಿದ್ದರು. ಇದೀಗ ದರ್ಶನ್ ಅಭಿಮಾನಿಗಳು ಈ ವಿಡಿಯೋ ವೈರಲ್ ಮಾಡಿ ಕಾಲರ್ ಎಗರಿಸುತ್ತಿದ್ದಾರೆ.
2016, ಜನವರಿ 30 ಹಾಗೂ 31ರಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿದ್ದರು. ಸಾಧಕರ ಸೀಟ್ ಅಲಂಕರಿಸಿದ್ದರು. ತಮ್ಮ ಜೀವನದ ಏಳುಬೀಳಿನ ಕಥೆಯನ್ನು ಅನಾವರಣ ಮಾಡಿದ್ದರು. ನಟ ದರ್ಶನ್‌ಗೆ ದೊಡ್ಡ ಅಭಿಮಾನಿ ಬಳಗ ಇದೆ. ಅಂದು ಈ ಎರಡು ಸಂಚಿಕೆಯನ್ನು ಮುಗಿಬಿದ್ದು ನೋಡಿದ್ದರು. ಮೊದಲು ಕಾರ್ಯಕ್ರಮಕ್ಕೆ ಬರಲು ಒಪ್ಪದ ದರ್ಶನ್ ಒಂದು ಷರತ್ತಿನ ಮೇರೆಗೆ ಭಾಗವಹಿಸಿದ್ದರು.

ರಿಯಾಲಿಟಿ ಶೋಗಳಲ್ಲಿ ಭಾಗವಹಿಸಲು ದರ್ಶನ್ ನಿರಾಕರಿಸುತ್ತಲೇ ಬರ್ತಿದ್ದಾರೆ. ಅದೇ ರೀತಿ ರಿಯಾಲಿಟಿ ಶೋ ಹೋಸ್ಟ್ ಮಾಡುವ ಅವಕಾಶವನ್ನು ಒಪ್ಪಿಕೊಳ್ಳುತ್ತಿಲ್ಲ. ರೈತರ ಸರಣಿ ಆತ್ಮಹತ್ಯೆಯಿಂದ ನೊಂದಿದ್ದ ದರ್ಶನ್, ''ಯಾವುದೇ ರಿಯಾಲಿಟಿ ಶೋ ಇರಲಿ, ಅದರಿಂದ ಒಂದು ಲಕ್ಷ ರೂಪಾಯಿಯನ್ನು ರೈತರ ಕುಟುಂಬಕ್ಕೆ ಪರಿಹಾರ ರೂಪದಲ್ಲಿ ನೀಡುವುದಾದರೆ, ನಾನು ರಿಯಾಲಿಟಿ ಶೋನಲ್ಲಿ ಭಾಗವಹಿಸಲು ಸಿದ್ದ' ಎಂದು ಹೇಳಿದ್ದರಂತೆ. ಅದಕ್ಕೆ ಜೀ ಕನ್ನಡ ವಾಹಿನಿ ಒಪ್ಪಿಕೊಂದು ದರ್ಶನ್ ಅವರನ್ನು ಕರೆತಂದಿತ್ತು.
ಹೇಳಿದಂತೆಯೇ 'ವೀಕೆಂಡ್ ವಿತ್ ರಮೇಶ್' ಶೋನಿಂದ ಬಂದ ಗೌರವಧನವನ್ನು ಮೃತ ರೈತರ ಕುಟುಂಬಕ್ಕೆ ನೀಡಿದ್ದರು. 'ನಟ ದರ್ಶನ್ ಹಾಗೂ ಪುನೀತ್ ರಾಜ್ ಕಮಾರ್ ಅವರು ತಮ್ಮ ಗೌರವಧನದ ಹಣವನ್ನು ಮೃತ ರೈತ ಕುಟುಂಬಗಳಿಗೆ ಹಾಗೂ ಮೈಸೂರಿನ ಶಕ್ತಿಧಾಮಕ್ಕೆ ನೀಡಿದ್ದಾರೆ'' ಎಂದು ರಾಘವೇಂದ್ರ ಹುಣಸೂರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು.
2014, ಆಗಸ್ಟ್ 2 ಮತ್ತು 3ರಂದು ಪುನೀತ್ ರಾಜ್‌ಕುಮಾರ್ ಅವರ ಸಂಚಿಕೆಯೊಂದಿಗೆ 'ವೀಕೆಂಡ್ ವಿತ್ ರಮೇಶ್' ಶೋ ಆರಂಭವಾಗಿತ್ತು. ಸಿನಿಮಾ ಮಾತ್ರವಲ್ಲದೇ ವಿವಿಧ ಕ್ಷೇತ್ರಗಳ ಸಾಕಷ್ಟು ಸಾಧಕರು ಈ ಸಾಧಕರ ಸೀಟ್‌ನಲ್ಲಿ ಕೂತು ತಮ್ಮ ಜೀವನದ ಕಥೆಯನ್ನು ಒಮ್ಮೆ ತಿರುಗಿ ನೋಡಿದ್ದಾರೆ. ಚಿತ್ರರಂಗದ ಬಹುತೇಕ ಸಾಧಕರ ಕಥೆ ವೀಕೆಂಡ್ ಶೋನಲ್ಲಿ ಅನಾವರಣವಾಗಿದೆ.


Click it and Unblock the Notifications











