ಓಟಿಟಿಗೆ ಲಗ್ಗೆ ಇಟ್ಟ ಮತ್ತೊಂದು ಕನ್ನಡ ಸಿನಿಮಾ '#ಪಾರುಪಾರ್ವತಿ'; ಎಲ್ಲಿ ನೋಡಬಹುದು?
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸೂಪರ್ ನ್ಯಾಚುರಲ್ ಧಾರಾವಾಹಿ 'ನಾಗಿಣಿ'ಯಲ್ಲಿ ನಾಯಕಿ ಅಮೃತಾಳಾಗಿ ನಟಿಸಿ ವೀಕ್ಷಕರ ಮನ ಸೆಳೆದ ನಟಿ ದೀಪಿಕಾ ದಾಸ್ . 'ಕೃಷ್ಣ ತುಳಸಿ' ಧಾರಾವಾಹಿಯ ಮೂಲಕ ದೀಪಿಕಾ ದಾಸ್ ಕಿರುತೆರೆಯ ನಂಟು ಬೆಳೆಸಿಕೊಂಡಿದ್ದರೂ ಜನ ಗುರುತಿಸಿದ್ದು ಮಾತ್ರ ಅಮೃತಾಳಾಗಿ ಬದಲಾದ ಬಳಿಕವೇ. ಬರೋಬ್ಬರಿ ಐದಾರು ವರ್ಷಗಳ ಕಾಲ ಅಮೃತಳಾಗಿ ಅಭಿನಯಿಸಿ ಕಿರುತೆರೆ ವೀಕ್ಷಕರನ್ನು ನಟಿ ದೀಪಿಕಾ ದಾಸ್ ರಂಜಿಸಿದ್ದರು.
ತಮ್ಮ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದಿರುವ ದೀಪಿಕಾ ದಾಸ್ ಅವರಿಗೆ ಮತ್ತಷ್ಟು ಜನಪ್ರಿಯತೆ ನೀಡಿದ್ದು ಬಿಗ್ ಬಾಸ್ ಕನ್ನಡ. ಹೌದು, ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 9 ಸ್ಪರ್ಧಿಯಾಗಿ ದೊಡ್ಮನೆಯೊಳಗೆ ಕಾಲಿಟ್ಟಿದ್ದ ದೀಪಿಕಾ ತಮ್ಮ ನಡೆ, ನುಡಿಯ ಮೂಲಕ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯೂ ಆದರು. ಮಾತ್ರವಲ್ಲ ಪ್ರಸ್ತುತ ಸೀಸನ್ ನ ಎರಡನೇ ರನ್ನರ್ ಅಪ್ ಆಗಿಯೂ ಆಕೆ ಹೊರಹೊಮ್ಮಿದ್ದರು.

ಇದರ ಬೆನ್ನಲ್ಲೇ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದ ದೀಪಿಕಾ ದಾಸ್ ಮತ್ತೆ ಕಾಣಿಸಿಕೊಂಡಿದ್ದು ಹಿರಿತೆರೆಯಲ್ಲಿ. ಹೌದು, 'ಪಾರು ಪಾರ್ವತಿ' ಎನ್ನುವ ಸಿನಿಮಾದಲ್ಲಿ ದೀಪಿಕಾ ದಾಸ್ ಅವರು ಬಣ್ಣ ಹಚ್ಚಿದ್ದು ಆ ಸಿನಿಮಾ ಇದೇ ಜನವರಿಯಲ್ಲಿ ಬಿಡುಗಡೆಗೊಂಡಿತ್ತು. ಸಿನಿಪ್ರಿಯರಿಂದ, ಚಿತ್ರ ವಿಮರ್ಶಕರಿಂದ ಈ ಸಿನಿಮಾಗೆ ಉತ್ತಮವಾದ ಪ್ರತಿಕ್ರಿಯೆಯೂ ಬಂದಿತ್ತು. ವಿಪರ್ಯಾಸವೆಂದರೆ ಆ ಸಿನಿಮಾ ಥಿಯೇಟರ್‌ನಲ್ಲಿ ಜಾಸ್ತಿ ದಿನ ಇರಲಿಲ್ಲ.
ಆದರೆ, ಸಿನಿಪ್ರಿಯರಿಗೆ ಈಗ 'ಪಾರು ಪಾರ್ವತಿ' ಸಿನಿಮಾ ನೋಡುವ ಅವಕಾಶವಿದೆ. ಹೌದು, ಥಿಯೇಟರ್‌ನಲ್ಲಿ ಈ ಸಿನಿಮಾ ನೋಡಲು ಸಾಧ್ಯವಾಗದವರು ಈಗ ಓಟಿಟಿಯಲ್ಲಿ ಈ ಸಿನಿಮಾ ನೋಡಬಹುದು. ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ 'ಪಾರು ಪಾರ್ವತಿ' ಸಿನಿಮಾ ರಿಲೀಸ್ ಆಗಿದ್ದು ಸಿನಿ ಪ್ರಿಯರು ಹಾಗೂ ದೀಪಿಕಾ ದಾಸ್ ಅಭಿಮಾನಿಗಳು ಸಿನಿಮಾವನ್ನು ನೋಡಬಹುದು.
ಅಂದ ಹಾಗೇ 'ಪಾರು ಪಾರ್ವತಿ' ಸಿನಿಮಾ ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೇ ಯುಕೆ ಮತ್ತು ಐರ್ಲ್ಯಾಂಡ್‌ನಲ್ಲಿಯೂ ರಿಲೀಸ್ ಆಗಿತ್ತು. ಇನ್ನು ಮುಖ್ಯವಾದ ವಿಚಾರವೆಂದರೆ ಈ ಸಿನಿಮಾ ಕಡಿಮೆ ಸಂಖ್ಯೆಯ ಥಿಯೇಟರ್‌ಗಳಲ್ಲಿ ರಿಲೀಸ್ ಆಗಿದ್ದರೂ, ಆರಂಭದಲ್ಲಿಯೇ 60 ಲಕ್ಷ ರೂ. ಗಳಿಕೆ ಮಾಡಿತ್ತು.
ಇನ್ನು ಪ್ರವಾಸ ಕಥನದ ಕಥಾಹಂದರವನ್ನೊಳಗೊಂಡಿರುವ ಈ ಸಿನಿಮಾದ ಚಿತ್ರೀಕರಣವನ್ನು ಕೇವಲ ಬೆಂಗಳೂರಿನಲ್ಲಿ ಮಾತ್ರವಲ್ಲದೇ ಗೋವಾ, ಮಹಾರಾಷ್ಟ್ರ, ರಾಜಸ್ಥಾನ ಮತ್ತು ಉತ್ತರಾಖಂಡದಲ್ಲಿ ಮಾಡಲಾಗಿದೆ. ರೋಹಿತ್ ಕೀರ್ತಿ ಈ ಚಿತ್ರವನ್ನು ನಿರ್ದೇಶನದ ಈ ಸಿನಿಮಾದಲ್ಲಿ ನಟಿ ದೀಪಿಕಾ ದಾಸ್ ಹೊರತಾಗಿ ಪೂನಂ ಸರ್ ನಾಯಕ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇವರ ಹೊರತಾಗಿ ಕಾರ್ ಕೂಡಾ ಪ್ರಮುಖ ವಸ್ತುವಾಗಿ ಕಾಣಿಸಿಕೊಂಡಿರುವುದು ವಿಶೇಷ. ಅಬಿನ್ ರಾಜೇಶ್ ಈ ಸಿನಿಮಾಗೆ ಛಾಯಾಗ್ರಹಣ ಮಾಡಿದ್ದು, ಆರ್ ಹರಿ ಸಂಗೀತ ನಿರ್ದೇಶನ ಮಾಡಿದ್ದಾರೆ.
ಪಿ. ಪ್ರೇಮನಾಥ್ ನಿರ್ಮಿಸಿರುವ ಈ ಸಿನಿಮಾದ ಟ್ರೇಲರ್ ರಿಲೀಸ್ ಕೂಡಾ ಸಕತ್ ಸದ್ದು ಮಾಡಿತ್ತು. ಹೌದು, '#ಪಾರು ಪಾರ್ವತಿ' ಸಿನಿಮಾದ ಟ್ರೈಲರ್ ಅನ್ನು ಕಿಚ್ಚ ಸುದೀಪ್ ಅವರು ರಿಲೀಸ್ ಮಾಡಿದ್ದು ವಿಶೇಷ. ಟ್ರೈಲರ್ ರಿಲೀಸ್ ಮಾಡಿದ ಬಾದ್ ಶಾ ಸುದೀಪ್ ದೀಪಿಕಾ ದಾಸ್ ಸೇರಿದಂತೆ ಇಡೀ ಸಿನಿಮಾ ತಂಡಕ್ಕೆ ವಿಶ್ ಮಾಡಿದ್ದರು. ಇದೀಗ ಈ ಸಿನಿಮಾ ಓಟಿಟಿಯಲ್ಲಿ ಬಿಡುಗಡೆಯಾಗಿದ್ದು ಸಿನಿಪ್ರಿಯರು ಬಿಡುವು ಮಾಡಿಕೊಂಡು ನೋಡಬಹುದು.


Click it and Unblock the Notifications











