Dhurandhar: ಬ್ಲಾಕ್‌ಬಸ್ಟರ್ 'ಧುರಂಧರ್' ಸಿನಿಮಾ ಟಿವಿಯಲ್ಲಿ ಪ್ರಸಾರ; ಕನ್ನಡದಲ್ಲೇ ನೋಡಿ
'ಧುರಂಧರ್'-2 ಸಿನಿಮಾ ಈ ವಾರ ಓಟಿಟಿಗೆ ಬರ್ತಿದೆ. ಆದರೆ 'ಧುರಂಧರ್' ಮೊದಲ ಭಾಗ ಟೆಲಿವಿಷನ್ ಪ್ರೀಮಿಯರ್‌ಗೆ ಸಜ್ಜಾಗಿದೆ. ಈಗಾಗಲೇ ಓಟಿಟಿಗೆ ಬಂದಿರುವ ಸಿನಿಮಾ ಸದ್ಯ ನಿಮ್ಮ ಮನೆಯ ಟಿವಿಯಲ್ಲಿ ವೀಕ್ಷಿಸುವ ಅವಕಾಶ ಸಿಗುತ್ತಿದೆ. ವಿಶೇಷ ಅಂದ್ರೆ ಕನ್ನಡದಲ್ಲೇ ಸಿನಿಮಾ ವೀಕ್ಷಿಸಬಹುದು.
ಯಾವುದೇ ನಿರೀಕ್ಷೆ ಇಲ್ಲದೇ ಬಂದಿದ್ದ 'ಧುರಂಧರ್' ಸಿನಿಮಾ ಕಳೆದ ವರ್ಷ ಬಾಕ್ಸಾಫೀಸ್ ಕೊಳ್ಳೆ ಹೊಡೆದಿತ್ತು. ಆದಿತ್ಯಧರ್ ನಿರ್ದೇಶನದಲ್ಲಿ ರಣ್‌ವೀರ್ ಸಿಂಗ್ ನಟನೆಯ ಸಿನಿಮಾ ಬಾಲಿವುಡ್ ಬಾಕ್ಸಾಫೀಸ್ ದಾಖಲೆಗಳನ್ನು ಧೂಳೀಪಟ ಮಾಡಿತ್ತು. 1300 ಕೋಟಿ ರೂ. ಕಲೆಕ್ಷನ್ ಮಾಡಿ ಸಂಚಲನ ಸೃಷ್ಟಿಸಿತ್ತು. ಅಷ್ಟೇ ಅಲ್ಲ ಸೀಕ್ವೆಲ್ ಬಗ್ಗೆ ನಿರೀಕ್ಷೆ ಹೆಚ್ಚುವಂತೆ ಮಾಡಿತ್ತು. ಕಳೆದ ವರ್ಷ ಡಿಸೆಂಬರ್ 5ರಂದು ಸಿನಿಮಾ ಬಿಡುಗಡೆ ಆಗಿತ್ತು.

ಬಳಿಕ 4 ತಿಂಗಳ ಅಂತರದಲ್ಲಿ 'ಧುರಂಧರ್'-2 ಸಿನಿಮಾ ತೆರೆಗಪ್ಪಳಿಸಿ ಬಾಕ್ಸಾಫೀಸ್ ಕೊಳ್ಳೆ ಹೊಡೆದಿದ್ದು ಗೊತ್ತೇಯಿದೆ. 1500 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿ ಸರಣಿಯ 2 ಸಿನಿಮಾಗಳ ಕಲೆಕ್ಷನ್ 3000 ಕೋಟಿ ರೂ. ಗಡಿ ದಾಟಿತ್ತು. ಸ್ಪೈ ಥ್ರಿಲ್ಲರ್ ಸಿನಿಮಾ ಬಾಲಿವುಡ್ ಬಾಕ್ಸಾಫೀಸ್ ತಾಕತ್ತು ಎಂಥದ್ದು ಎಂದು ಸಾಬೀತು ಮಾಡಿತ್ತು. 'ಧುರಂಧರ್' ಸಿನಿಮಾ ಹಿಂದಿಯಲ್ಲಿ ಮಾತ್ರ ಬಿಡುಗಡೆ ಆಗಿತ್ತು. ಬಳಿಕ ದಕ್ಷಿಣದ ಭಾಷೆಗಳಿಗೆ ಡಬ್ ಮಾಡಿ ಓಟಿಟಿಗೆ ಬಿಟ್ಟಿದ್ದರು.
ಸೀಕ್ವೆಲ್ ಕ್ರೇಜ್ ನೋಡಿ ಏಕಕಾಲಕ್ಕೆ 5 ಭಾಷೆಗಳಲ್ಲಿ ಡಬ್ ಮಾಡಿದ್ದರು. 'ಧುರಂಧರ್'-2 ಕನ್ನಡ ವರ್ಷನ್ ಕೂಡ ಹಿಟ್ ಆಗಿತ್ತು. ಇದೇ ಭಾನುವಾರ ಕಲರ್ಸ್ ಕನ್ನಡ ವಾಹಿನಿಯಲ್ಲಿ 'ಧುರಂಧರ್' ಸಿನಿಮಾ ಪ್ರಸಾರವಾಗಲಿದೆ. ಮಧ್ಯಾಹ್ನ 2.30ಕ್ಕೆ ಸಿನಿಮಾ ವೀಕ್ಷಿಸಬಹುದು. ವೀಕೆಂಡ್ ಮನೆಯಲ್ಲಿ ಒಳ್ಳೆ ಮನರಂಜನೆ ಸಿಗಲಿದೆ.
ಕಳೆದ ಶನಿವಾರ(ಮೇ 30) 'ಧುರಂಧರ್' ಹಿಂದಿ ವರ್ಷನ್ ಟಿವಿಯಲ್ಲಿ ಪ್ರಸಾರವಾಗಿತ್ತು. ಸ್ಟಾರ್ ಗೋಲ್ಡ್, ಸ್ಟಾರ್ ಗೋಲ್ಡ್-2 ಹಾಗೂ ಕಲರ್ಸ್ ಸಿನಿಪ್ಲೆಕ್ಸ್ ಹೀಗೆ 3 ವಾಹಿನಿಗಳಲ್ಲಿ ಸಿನಿಮಾ ಮೂಡಿ ಬಂದಿತ್ತು. ಇದೀಗ ದಕ್ಷಿಣದ ಭಾಷೆಗಳಲ್ಲಿ ಟಿವಿ ಪ್ರೀಮಿಯರ್ ನಡೀತಿದೆ. ತೆಲುಗು ವರ್ಷನ್ ಮೇ 31ರಂದು ಸ್ಟಾರ್ ಮಾ ವಾಹಿನಿಯಲ್ಲಿ ಪ್ರಸಾರವಾಗಿತ್ತು.
ಬಾಕ್ಸಾಫೀಸ್ ಕೊಳ್ಳೆ ಹೊಡೆದು ಓಟಿಟಿಯಲ್ಲೂ ಸಂಚಲನ ಸೃಷ್ಟಿಸಿದ 'ಧುರಂಧರ್' ಸಿನಿಮಾ ಟಿವಿಯಲ್ಲಿ ಪ್ರಸಾರವಾಗಿ ಹೇಗೆ ಸದ್ದು ಮಾಡುತ್ತದೆ ಕಾದು ನೋಡಬೇಕು. ಟಿಆರ್‌ಪಿ ರೇಟಿಂಗ್ ಎಷ್ಟು ಇರಲಿದೆ ಎನ್ನುವ ಕುತೂಹಲ ಮೂಡಿದೆ. ಈಗಾಗಲೇ ಸಿನಿಮಾ ಓಟಿಟಿಯಲ್ಲಿ ಬಂದಿದೆ. ಸಾಕಷ್ಟು ಜನ ನೋಡಿಬಿಟ್ಟಿದ್ದಾರೆ. ಈ ವಾರ ಪಾರ್ಟ್-2 ಓಟಿಟಿಯಲ್ಲಿ ಬರುತ್ತಿರುವುದರಿಂದ ಟಿವಿಯಲ್ಲಿ 'ಧುರಂಧರ್' ಚಿತ್ರಕ್ಕೆ ರೆಸ್ಪಾನ್ಸ್ ಹೇಗಿರುತ್ತೆ ಕಾದು ನೋಡಬೇಕಿದೆ.
ಜಿಯೋ ಸ್ಟುಡಿಯೋಸ್ ಹಾಗೂ B62 ಸ್ಟುಡಿಯೋಸ್ ಸಂಸ್ಥೆಗಳು ಜಂಟಿಯಾಗಿ 'ಧುರಂಧರ್' ಚಿತ್ರ ನಿರ್ಮಾಣ ಮಾಡಿದ್ದವು. ಶಾಶ್ವತ್ ಸಚ್‌ದೇವ್ ಸಂಗೀತ ಚಿತ್ರಕ್ಕಿತ್ತು. ರಣ್‌ವೀರ್ ಜೊತೆಗೆ ಅಕ್ಷಯ್ ಖನ್ನಾ, ಅರ್ಜುನ್ ರಾಂಪಾಲ್, ಆರ್.ಮಾಧವನ್, ಸಂಜಯ್ ದತ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. IC-814 ಹೈಜಾಕ್ ಮತ್ತು ಪಾರ್ಲಿಮೆಂಟ್ ದಾಳಿಯನ್ನು ಆಧರಿಸಿ ಸಿನಿಮಾ ಕಟ್ಟಿಕೊಡಲಾಗಿತ್ತು.
ನೈಜ ಘಟನೆಗಳನ್ನು ಆಧರಿಸಿ ಒಂದಷ್ಟು ಕಾಲ್ಪನಿಕ ವಿಚಾರಗಳನ್ನು ಸೇರಿಸಿ ಭಾವನಾತ್ಮಕವಾಗಿ ಅಷ್ಟೇ ಕುತೂಹಲಭರಿತವಾಗಿ 'ಧುರಂಧರ್' ಸಿನಿಮಾ ತೆರೆಗೆ ತಂದಿದ್ದರು ಆದಿತ್ಯಧರ್. ಅವರ ಪ್ರಯತ್ನಕ್ಕೆ ಭರ್ಜರಿ ಯಶಸ್ಸು ಸಿಕ್ಕಿತ್ತು. ಭಾರತದ ಮೇಲೆ ಪದೇ ಪದೆ ದಾಳಿಗೆ ಸಂಚು ನಡೆಸುವ ಉಗ್ರರನ್ನು ಮಟ್ಟಹಾಕಲು, ಕರಾಚಿಯ ಭೂಗತ ಲೋಕಕ್ಕೆ ಎಂಟ್ರಿ ಕೊಡುವ ಭಾರತದ ಸ್ಪೈ ಕಥೆ ಚಿತ್ರದಲ್ಲಿದೆ. ರಣ್‌ವೀರ್ ಸಿಂಗ್ ಅಭಿನಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು.


Click it and Unblock the Notifications