ನಿರ್ಮಾಪಕಗೆ ಲಕ್ಷಾಂತರ ವಂಚನೆ, ಧಾರಾವಾಹಿ ನಿರ್ದೇಶಕ ಅರವಿಂದ್ ಕೌಶಿಕ್ ಬಂಧನ
ನಿರ್ಮಾಕರಿಗೆ ಲಕ್ಷಾಂತರ ರುಪಾಯಿ ಹಣ ವಂಚನೆ ಪ್ರಕರಣದಲ್ಲಿ ಧಾರಾವಾಹಿ ಹಾಗೂ ಸಿನಿಮಾ ನಿರ್ದೇಶಕ ಅರವಿಂದ್ ಕೌಶಿಕ್ ಅನ್ನು ಬಂಧಿಸಲಾಗಿದೆ.
'ಕಮಲಿ' ಧಾರಾವಾಹಿ ನಿರ್ದೇಶನ ಮಾಡಿದ್ದ ಅರವಿಂದ್ ಕೌಶಿಕ್ ಧಾರಾವಾಹಿ ನಿರ್ಮಾಪಕ ರೋಹಿತ್ ಅವರಿಂದ 73 ಲಕ್ಷ ರುಪಾಯಿ ಪಡೆದಿದ್ದರು. ಆದರೆ ಹಣವನ್ನು ಹಿಂತಿರುಗಿಸದೆ ಮೋಸ ಎಸಗಿದ್ದರು ಹಾಗಾಗಿ ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದೀಗ ಬೆಂಗಳೂರಿನ ವೈಯ್ಯಾಲಿ ಕಾವಲ್ ಪೊಲೀಸ್ ಠಾಣೆಯವರು ಅರವಿಂದ್ ಕೌಶಿಕ್ ಅನ್ನು ಬಂಧಿಸಿದ್ದಾರೆ.
2020ರಲ್ಲಿಯೇ ರೋಹಿತ್ ಎಸ್, ಅರವಿಂದ್ ಕೌಶಿಕ್ ಹಾಗೂ ಇನ್ನಿತರರ ವಿರುದ್ಧ ದೂರು ನೀಡಿದ್ದರು. 28 ಮೇ 2018 ರಿಂದ ಜೀ ಕನ್ನಡ ವಾಹಿನಿಯಲ್ಲಿ ಪ್ರಾರಂಭವಾದ ಸೀರಿಯಲ್ 'ಕಮಲಿ'. ಈ ಧಾರಾವಾಹಿಯನ್ನು ರೋಹಿತ್.ಎಸ್ ನಿರ್ಮಾಣ ಮಾಡಿದ್ದಾರೆ. ಮೊದಮೊದಲು 'ಕಮಲಿ' ಸಂಚಿಕೆಗಳ ಟೈಟಲ್ ಕಾರ್ಡ್ ನಲ್ಲಿ 'ನಿರ್ಮಾಪಕ: ರೋಹಿತ್.ಎಸ್' ಎಂದೇ ತೋರಿಸಲಾಗಿದೆ. ಬಳಿಕ ರೋಹಿತ್ ಹೆಸರನ್ನ ತೆಗೆದು ಹಾಕಲಾಗಿತ್ತು. ತಾವು ನಿರ್ದೇಶಕ ಅರವಿಂದ್ ಕೌಶಿಕ್ ಸತ್ವ ಮೀಡಿಯಾಗೆ 73 ಲಕ್ಷ ರುಪಾಯಿ ಹಣ ನೀಡಿರುವುದಾಗಿಯೂ ಆದರೆ ಧಾರಾವಾಹಿ ಪ್ರಾರಂಭವಾದಾಗಿನಿಂದಲೂ ಒಂದು ರುಪಾಯಿ ಲಾಭವನ್ನು ಸಹ ತಾವು ಪಡೆದಿಲ್ಲವೆಂದು ಹೇಳಿದ್ದರು.

ವಯ್ಯಾಲಿ ಕಾವಲ್ ಪೊಲೀಸ್ ಠಾಣೆಯಲ್ಲಿ ನಿರ್ದೇಶಕ ಅರವಿಂದ್ ಕೌಶಿಕ್, ಶಿಲ್ಪಾ, ನವೀನ್ ಸಾಗರ್ ಮತ್ತು ಜೀ ಕನ್ನಡ ವಾಹಿನಿ ಮುಖ್ಯಸ್ಥ ರಾಘವೇಂದ್ರ ಹುಣಸೂರು ವಿರುದ್ಧ ಎಸ್ ರೋಹಿತ್ ದೂರು ನೀಡಿದ್ದರು. ಆದರೆ ಈಗ ನಿರ್ದೇಶಕ ಅರವಿಂದ್ ಕೌಶಿಕ್ ಅನ್ನು ಅಷ್ಟೆ ಪೊಲೀಸರು ಬಂಧಿಸಿದ್ದಾರೆ.
2020ರಲ್ಲಿ ತಮ್ಮ ವಿರುದ್ಧ ಎಸ್ ರೋಹಿತ್ ದೂರು ದಾಖಲಿಸಿದಾಗ ಫಿಲ್ಮಿಬೀಟ್ ಕನ್ನಡದ ಜೊತೆ ಮಾತನಾಡಿದ್ದ ಅರವಿಂದ್ ಕೌಶಿಕ್, ''ನಾನು, ನವೀನ್ ಸಾಗರ್ ಹಾಗೂ ಶಿಲ್ಪಾ ಸೇರಿ ಸತ್ವ ಮೀಡಿಯಾ ಎಂದು ಒಂದು ಸಂಸ್ಥೆ ಮಾಡಿದ್ವಿ. ನಮ್ಮ ಸಂಸ್ಥೆಗೆ ಒಂದು ಧಾರಾವಾಹಿ ಮಾಡಿ ಎಂದು ಜೀ ಕನ್ನಡ ವಾಹಿನಿ ಒಂದು ಸ್ಲಾಟ್ ನೀಡಿತ್ತು. ಅದಕ್ಕೆ ನಮಗೆ ಒಂದಷ್ಟು ಬಂಡವಾಳ ಬೇಕಾಗಿತ್ತು. ಆಗ ರೋಹಿತ್ ಫೈನಾನ್ಸ್ ಅವ್ರು ನನ್ನನ್ನು ಹತ್ತಾರು ಬಾರಿ ಸಂಪರ್ಕ ಮಾಡಿದರು. ನನಗೆ ಅವರು ಪರಿಚಯ ಇದ್ದ ಕಾರಣ ಒಪ್ಪಿಕೊಂಡಿದ್ದೆ. ಫೈನಾನ್ಸ್ ಹಾಕಿದ್ದ ಅವರು ನನಗೂ ಒಂದು ಹೆಸರು ಬೇಕು ಎಂದು ಅವರು ಕೇಳಿದರು. ನಿರ್ಮಾಪಕರು ಎಂದು ನನ್ನ ಹೆಸರು ಹಾಕಬೇಕು ಎಂದರು. ನಮ್ಮ ಚಾನಲ್ ನಡುವೆ ಒಪ್ಪಂದ ಆಗಿದ್ದ ಕಾರಣ ಯಾವುದೇ ಸಮಸ್ಯೆ ಇಲ್ಲ ಎಂದು ಸಹ ನಿರ್ಮಾಪಕ ಎಂದು ನೀಡಲು ಒಪ್ಪಿದೆವು. ಒಂದು ಸಂಚಿಕೆಗೆ ಒಂದಷ್ಟು ಹಣ ನೀಡಲು ಮಾತುಕತೆ ಆಯ್ತು. ಇವರ ರೀತಿಯೇ ಇನ್ನು ಕೆಲವರು ಫೈನಾನ್ಸ್ ಹಾಕಿದ್ದರು. ಧಾರಾವಾಹಿ ಶುರು ಆದ ಮೇಲೆ ಸೆಟ್ ಗೆ ಬರಲು ಪ್ರಾರಂಭ ಮಾಡಿದರು. ನಾನೇ ನಿರ್ಮಾಪಕ ಇವರೆಲ್ಲ ನಡೆಸಿಕೊಂಡು ಹೋಗುತ್ತಿದ್ದಾರೆ ಅಷ್ಟೇ ಎಂದು ಹೇಳಿಕೊಂಡು ಒಡಾಡುತ್ತಿದರು. ಆಮೇಲೆ ಪತ್ರಿಕೆ ಹಾಗೂ ಬೇರೆ ಬೇರೆ ಕಡೆ ನಾನೇ 'ಕಮಲಿ' ನಿರ್ಮಾಪಕ ಎಂದು ಬರೆಸಿಕೊಂಡರು. ನಾನು ಧಾರಾವಾಹಿ ನಿರ್ಮಾಣಕ್ಕಾಗಿ ಬೇರೆಯವರ ಬಳಿ ಕೂಡ ಫೈನಾನ್ಸ್ ತಂದಿರುತ್ತೇನೆ. ಆಗ ಅವರೆಲ್ಲ ನೀನು ನಿರ್ಮಾಪಕ ಅಂತ ಹೇಳಿದ್ದೆ. ಇವರು ನಿರ್ಮಾಪಕರು ಅಂತ್ತಿದ್ದಾರೆ'' ಎಂದಿದ್ದರು.
Recommended Video

ಫೈನಾನ್ಸ್ ಹಾಕಿದ್ದೇನೆ ಎಂಬ ಕಾರಣಕ್ಕೆ ಧಾರಾವಾಹಿಯ ಹಣಕಾಸಿನ ವ್ಯಾವಹಾರದ ಬಗ್ಗೆ ಕೇಳುತ್ತಿದ್ದರು. ಕೊನೆಗೆ ಇದ್ದಕ್ಕಿದ್ದ ಹಾಗೆ ಲೀಗನ್ ನೋಟಿಸ್ ಕಳುಹಿಸಿದರು. ಇವರು ಸಹ ನಿರ್ಮಾಪಕ ಎಂಬುದನ್ನು ಮಿಸ್ ಯೂಸ್ ಮಾಡಿಕೊಳ್ಳುತ್ತಿದ್ದಾರೆ ಅನಿಸಿ ಹೆಸರು ತೆಗೆದೆವು. ಸಮಸ್ಯೆ ಬಗೆ ಹರಿಯುವವರೆಗೆ ಅವರ ಹೆಸರು ಮಾತ್ರವಲ್ಲ ಯಾವ ನಿರ್ಮಾಪಕರ ಹೆಸರನ್ನು ಹಾಕುವುದು ಬೇಡ ಎಂದು ಸುಮ್ಮನಾಗಿದ್ದೆವು. ಧಾರಾವಾಹಿ ತುಂಬ ಚೆನ್ನಾಗಿ ಹೋಗುತ್ತಿದೆ. ಆದರೆ, ಹಿಂದೆ 9 ಪಾಯಿಂಟ್ ಇದ್ದ ಟಿ ಆರ್ ಪಿ 10 ಮೇಲೆ ಬರಬೇಕು ಎಂದು ವಾಹಿನಿಯವರು ಹೇಳಿದರು. ಅದಕ್ಕೆ ನಮ್ಮ ಶ್ರಮ ಹಾಕಿದ್ವಿ. ಯಾವಾಗ ವಾಹಿನಿಯ ನಿರೀಕ್ಷೆಗೆ ತಲುಪಲಿಲ್ಲವೋ ಆಗ ನಾನು ಧಾರಾವಾಹಿ ಮಾಡುವುದಿಲ್ಲ ಎಂದು ಎಂದೆ. ಈ ವಿಷಯ ಅವರಿಗೆ ತಲುಪಿ ನಾನು ದುಡ್ಡು ನೀಡುವುದಿಲ್ಲ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ನಾನು ದುಡ್ಡು ನೀಡುವುದಿಲ್ಲ ಎಂದು ಎಂದಿಗೂ ಹೇಳಿಲ್ಲ. ಇದನ್ನು ಇಷ್ಟು ದೊಡ್ಡದು ಮಾಡುವ ಅಗತ್ಯವಿರಲಿಲ್ಲ. ಅವರ ಪ್ರಚಾರಕ್ಕಾಗಿ ಈ ರೀತಿ ಮಾಡಿದ್ದಾರೆ ಅಷ್ಟೇ ಎಂದು ಆಗ ಅರವಿಂದ್ ಕೌಶಿಕ್ ಫಿಲ್ಮಿಬೀಟ್ ಕನ್ನಡಕ್ಕೆ ಮಾಹಿತಿ ನೀಡಿದ್ದರು.


Click it and Unblock the Notifications











