"ಪುಟ್ಟಕ್ಕನ ಮಕ್ಕಳು ತಂಡಕ್ಕೆ ಹಂಸಾ ಮೋಸ, ನಾವು ದೂರು ಕೊಟ್ಟಿದ್ದೀವಿ"; ಆರೂರು ಜಗದೀಶ್
ಬಿಗ್‌ಬಾಸ್ ಶೋನಲ್ಲಿ ಸ್ಪರ್ಧಿಯಾಗಿ ಹಂಸಾ ಪ್ರತಾಪ್ ಗಮನ ಸೆಳೆದಿದ್ದು ಗೊತ್ತೇಯಿದೆ. ಲಾಯರ್ ಜಗದೀಶ್ ಜೊತೆಗಿನ ಕೆಮೆಸ್ಟ್ರಿಯಿಂದ ಕೊಂಚಮಟ್ಟಿಗೆ ಸುದ್ದಿ ಆಗಿದ್ದು ಇದೆ. ಬಹಳ ವರ್ಷಗಳಿಂದ ಸಿನಿಮಾ ಹಾಗೂ ಕಿರುತೆರೆಯಲ್ಲಿ ಹಂಸಾ ಗುರ್ತಿಸಿಕೊಂಡಿದ್ದಾರೆ. ಇತ್ತೀಚೆಗೆ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯ ರಾಜಿ ಪಾತ್ರದಿಂದ ಹೆಚ್ಚು ಜನಪ್ರಿಯತೆ ಸಾಧಿಸಿದ್ದರು.
ಗ್ರ್ಯಾಂಡ್ ಪ್ರೀಮಿಯರ್‌ನಲ್ಲಿ 10ನೇ ಸ್ಪರ್ಧಿಯಾಗಿ ಹಂಸಾ ದೊಡ್ಮನೆ ಒಳಗೆ ಹೋಗಿದ್ದರು. ಬಿಗ್‌ಬಾಸ್ ಮನೆಯ ಮೊದಲ ಕ್ಯಾಪ್ಟನ್ ಆಗಿದ್ದರು. ಜಗದೀಶ್ ಜೊತೆಗಿನ ಜಗಳ, ಡುಯೆಟ್ ಕಾರಣಕ್ಕೆ ಹಂಸಾ ವೀಕ್ಷಕರ ಮನಗೆದ್ದಿದ್ದು ಸುಳ್ಳಲ್ಲ. ಆದರೆ ಜಗದೀಶ್ ಶಿಕ್ಷೆ ಅನುಭವಿಸಿದ ಹೊರ ಬಂದ ಬಳಿಕ ಹಂಸಾ ಸೈಲೆಂಟ್ ಆಗಿದ್ದರು. 28ನೇ ದಿನಕ್ಕೆ ಬಿಗ್‌ಬಾಸ್ ಜರ್ನಿ ಮುಗಿಸಿ ಹೊರ ಬಂದಿದ್ದರು.

ವೀಕ್ಷಕರು ಯಾವುದೇ ಧಾರಾವಾಹಿಯನ್ನು ನೋಡ್ತಾ ನೋಡ್ತಾ ತಮ್ಮದಾಗಿಸಿಕೊಂಡುಬಿಡ್ತಾರೆ. ಅಲ್ಲಿ ನಡೆಯುವ ಕಥೆ ನಮ್ಮ ಸುತ್ತ ನಡೆಯುತ್ತಿದೆ, ಅಲ್ಲಿನ ಪಾತ್ರಗಳು ನಮ್ಮ ನಡುವೆಯೇ ಇದೆ ಎಂದು ಭಾವಿಸುತ್ತಾರೆ. ಯಾವುದೇ ಪಾತ್ರಕ್ಕೆ ಖುಷಿಯಾದಾಗ ತಾವು ಸಂಭ್ರಮಿಸುತ್ತಾರೆ. ನೋವಾದಾಗ ಬೇಸರಗೊಳ್ಳುತ್ತಾರೆ. ಖಳ ಪಾತ್ರಗಳ ಮೇಲೆ ಗರಂ ಆಗುತ್ತಾರೆ. 'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ನೆಗೆಟಿವ್ ಶೇಡ್ ರಾಜಿ ಪಾತ್ರವನ್ನು ಕೂಡ ಅಪ್ಪಿಕೊಂಡಿದ್ದರು.
ದಿಢೀರ್ ಬಿಗ್‌ಬಾಸ್ ಮನೆಗೆ
ಧಾರಾವಾಹಿಯಲ್ಲಿ ರಾಜಿ ಪಾತ್ರದಲ್ಲಿ ಹಂಸಾ ಸೊಗಸಾಗಿ ನಟಿಸುತ್ತಿದ್ದರು. ಆದರೆ ದಿಢೀರನೆ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟರು. ನಮಗೂ ಯಾವುದೇ ಮಾಹಿತಿ ನೀಡದೇ ಹಂಸಾ ಬಿಗ್‌ಬಾಸ್‌ಗೆ ಹೋಗಿದ್ದಾರೆ ಎಂದು ನಿರ್ದೇಶಕ ಆರೂರು ಜಗದೀಶ್ ಬೇಸರ ವ್ಯಕ್ತಪಡಿಸಿದ್ದಾರೆ. ನನಗೆ ಕರೆ ಮಾಡಿ 40 ದಿನಗಳ ಕಾಲ ಸಿನಿಮಾ ಚಿತ್ರೀಕರಣಕ್ಕಾಗಿ ವಿದೇಶಕ್ಕೆ ಹೋಗುತ್ತಿರುವುದಾಗಿ ಹೇಳಿದ್ದರು. ಬಳಿಕ ಬಿಗ್‌ಬಾಸ್ ಪ್ರೋಮೊದಲ್ಲಿ ಆಕೆಯನ್ನು ನೋಡಿ ಶಾಕ್ ಆಗಿತ್ತು ಎಂದಿದ್ದಾರೆ.

ಹೇಳಿ ಹೋಗಬಹುದಿತ್ತು
ಪಂಚಮಿ ಟಾಕ್ಸ್ ಎಂಬ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಆರೂರು ಜಗದೀಶ್ ಮಾತನಾಡಿದ್ದಾರೆ. ವಿದೇಶಕ್ಕೆ ಚಿತ್ರೀಕರಣಕ್ಕೆ ಹೋದರೂ ಹಂಸ ಮತ್ತೆ ಬಂದು ಧಾರಾವಾಯಿಯಲ್ಲಿ ನಟಿಸ್ತಾರೆ ಎಂದುಕೊಂಡಿದ್ವಿ. ಆದರೆ ಬಿಗ್‌ಬಾಸ್‌ಗೆ ಹೋಗುವ ಬಗ್ಗೆ ನಮಗೆ ಹೇಳಲಿಲ್ಲ. ಹೇಳಿದ್ದರೆ ನಾವು ಒಪ್ಪುತ್ತಿದ್ದೆವು. ಕಲಾವಿದರಾಗಿ ಆ ನೈತಿಕತೆ ಇಟ್ಟುಕೊಳ್ಳಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಹಂಸಾ ವಿರುದ್ಧ ದೂರು
ಹೀಗೆ ಹೇಳದೇ ಕೇಳದ ಧಾರವಾಹಿ ಬಿಟ್ಟು ಹಂಸಾ ಬಿಗ್‌ಬಾಸ್‌ಗೆ ಹೋಗಿದ್ದಕ್ಕೆ ಕನ್ನಡ ಟೆಲಿವಿಷನ್ ಅಸೋಷಿಯೇಷನ್‌ಗೆ ದೂರು ಕೊಟ್ವಿ. ಅವರು ಏನು ನಿರ್ಧಾರ ಕೈಗೊಂಡ್ರು ಎನ್ನುವುದು ಗೊತ್ತಿಲ್ಲ. ಆದರೆ ಕಾಲಾವಿದರಿಗೆ ಎಥಿಕ್ಸ್ ಬೇಕು, ಬಿಗ್‌ಬಾಸ್‌ಗೆ ಹೋಗ್ತೀವಿ ಅಂದ್ರೆ ನಾವು ತಡೆಯಲ್ಲ. ಬಟ್ ಹೇಳಿ ಹೋಗಿ, ಹೀಗೆ ಮಾಡುವುದು ಸರಿಯಲ್ಲ ಎಂದು ಸಲಹೆ ನೀಡಿದ್ದಾರೆ.
ಮತ್ತೆ ನಟಿಸುವಂತೆ ಕೇಳಿದೆವು
ಹಂಸಾ ಬಿಗ್‌ಬಾಸ್ ಮನೆಯಿಂದ ಹೊರ ಬಂದ ಮೇಲೆ ನಾವು ಸಂಪರ್ಕಿಸಿದೆವು. ಮತ್ತೆ ಬಂದು ನಟಿಸಲು ಕೇಳಿದೆವು. ಆದರೆ ಅವರು ಒಪ್ಪಲಿಲ್ಲ. ಬಿಗ್‌ಬಾಸ್ ಕಮೀಟ್‌ಮೆಂಟ್ ಇದೆ, ಒಪ್ಪಂದ ಆಗಿದೆ ಎಂದರು. ಆದರೆ ಜಗದೀಶ್ ಡಿಕೆಡಿಗೆ ಬಂದಿದ್ದಾರೆ ಎಂದು ಹೇಳಿದ್ದಕ್ಕೆ ಅವರು ಲಾಯರ್, ರೂಲ್ಸ್ ಎಲ್ಲಾ ಮಾತಾಡ್ತಾರೆ. ನನಗೆ ಅದೆಲ್ಲಾ ಆಗೊಲ್ಲ.
ರಾಜಿ ಪಾತ್ರ ಇರಬೇಕಿತ್ತು
ನಿಜಕ್ಕೂ ಹಂಸಾ ಒಳ್ಳೆ ನಟಿ. ಆಕೆಯ ಜೊತೆ ನನಗೂ ಉತ್ತಮ ಒಡನಾಟವಿದೆ. 'ಗುಪ್ತಗಾಮಿನಿ' ಧಾರಾವಾಹಿಯಿಂದ ನೋಡುತ್ತಿದ್ದೇನೆ. ಹಂಸಾ ಮೊದಲೇ ಬಿಗ್‌ಬಾಸ್ ಬಗ್ಗೆ ಹೇಳಿದ್ದರೆ ನಾವು ಏನಾದರೂ ಮಾಡಬಹುದಿತ್ತು. ಸ್ನೇಹಾ ಪಾತ್ರ ಸತ್ತಾಗ ರಾಜಿ ಪಾತ್ರವೂ ಸನ್ನಿವೇಶದಲ್ಲಿ ಇರಬೇಕಿತ್ತು. ಆದರೆ ಹಂಸಾ ಇಲ್ಲದ್ದಕ್ಕೆ ಅದನ್ನೆಲ್ಲಾ ತೋರಿಸಲು ಸಾಧ್ಯವಾಗಲಿಲ್ಲ ಎಂದು ಜಗದೀಶ್ ವಿವರಿಸಿದ್ದಾರೆ.


Click it and Unblock the Notifications











