ಕಿರುತೆರೆಗೆ ಕಾಲಿಟ್ಟ 'ಕಾಟೇರ್' ಡೈರೆಕ್ಟರ್; 'ಮಹಾನಟಿ' ಹುಡುಕಾಟದಲ್ಲಿ ತರುಣ್ ಸುಧೀರ್!
ನಿರ್ದೇಶಕ ತರುಣ್ ಸುಧೀರ್‌ರವರು ಎಲ್ಲರಿಗೂ ಚಿರಪರಿಚಿತ. ಕನ್ನಡದ ಬೆಳ್ಳಿತೆರೆಗೆ ಹಲವಾರು ಅದ್ಭುತವಾದ ಸಿನಿಮಾಗಳನ್ನು ಕೊಟ್ಟ ಇವರು ಇತ್ತೀಚೆಗಷ್ಟೇ 'ಕಾಟೇರ' ಸಿನಿಮಾದ ಯಶಸ್ಸಿನಲ್ಲಿದ್ದಾರೆ. ಅವರ ನಿರ್ದೇಶನ ಹಾಗೂ ಅದರ ನೈಪುಣ್ಯತೆಯನ್ನು ನಾವು 'ಕಾಟೇರ' ಸಿನಿಮಾದಲ್ಲಿ ಕಾಣಬಹುದು.
ಅಷ್ಟೆಲ್ಲದೇ ಇನ್ನು ಹಲವಾರು ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟಿರುವ ನಿರ್ದೇಶಕ ತರುಣ್ ಸುಧೀರ್ ಕನ್ನಡ ಸಿನಿಮಾ ಇಂಡಸ್ಟ್ರಿ ಕಂಡ ಹಲವು ಅದ್ಭುತ ನಿರ್ದೇಶಕ ನಿರ್ದೇಶಕರಲ್ಲೊಬ್ಬರು. 'ವಿಕ್ಟರಿ 2' ಸಿನಿಮಾಗೆ ಮೆಂಟರ್ ಆಗಿ ಕೆಲಸ ಮಾಡಿದ್ದಾರೆ. ಹಾಗೇ 'ಚೌಕ', 'ರಾಬರ್ಟ್', 'ಕಾಟೇರ'ದಂತಹ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿ ಹ್ಯಾಟ್ರಿಕ್ ನಿರ್ದೇಶಕರು ಎನಿಸಿಕೊಂಡಿದ್ದಾರೆ.

ಇದೀಗ ನಿರ್ದೇಶಕ ತರುಣ್ ಸುಧೀರ್ ಕಿರುತೆರೆಗೆ ಕಾಲಿಟ್ಟಿರುವುದು ಅಚ್ಚರಿ ಹಾಗೂ ವಿಶೇಷ ಎನಿಸಿದೆ. ನಿರ್ದೇಶಕ ತರುಣ್ ಸುಧೀರ್ ಕಿರುತೆರೆಗೆ ಕಾಲಿಟ್ಟಿದ್ದು, ಇದೀಗ ಮಹಾನಟಿಯ ಹುಡುಕಾಟದಲ್ಲಿದ್ದಾರೆ. ಹೌದು, 'ಮಹಾನಟಿ' ರಿಯಾಲಿಟಿ ಶೋವಿನ ತೀರ್ಪುಗಾರರಾಗಿ ಕಾಣಿಸಿಕೊಳ್ಳುವ ಮೂಲಕ ಇದೇ ಮೊದಲ ಬಾರಿಗೆ ನಿರ್ದೇಶಕ ತರುಣ್ ಸುಧೀರ್ ಕಿರುತೆರೆಗೆ ಕಾಲಿಟ್ಟಿದ್ದಾರೆ.
ಅಂದ ಹಾಗೆ ಜೀ ಕನ್ನಡ ವಾಹಿನಿಯಲ್ಲಿ ಇದೇ ಶನಿವಾರದಿಂದ ಪ್ರಸಾರವಾಗುತ್ತಿರುವ 'ಮಹಾನಟಿ' ಎಂಬ ರಿಯಾಲಿಟಿ ಶೋ ಆರಂಭಕ್ಕೂ ಮುನ್ನವೇ ಸಾಕಷ್ಟು ಸದ್ದು ಮಾಡಿತ್ತು. ಜೀ ಕನ್ನಡ ವಾಹಿನಿ ಅವರು ಬೇರೆ ಬೇರೆ ರೀತಿಯ ಪ್ರೋಮೋಗಳನ್ನು ಬಿಟ್ಟಿದ್ದು ಕಿರುತೆರೆ ವೀಕ್ಷಕರ ಮನ ಸೆಳೆದಿತ್ತು.
ಇನ್ನು ತರುಣ್ ಸುಧೀರ್ ಅವರ ಪರಿಚಯದ ಪ್ರೋಮೋವನ್ನು ಕೂಡ ವಾಹಿನಿಯು ಸಕತ್ತಾಗಿ ರಿಲೀಸ್ ಮಾಡಿತ್ತು. ಒಬ್ಬ ಯುವ ನಟಿ ಐಷಾರಾಮಿ ಕಾರ್‌ನಲ್ಲಿ ತನ್ನ ಡೈರೆಕ್ಟರ್‌ಗೆ ಬಾಯ್ ಹೇಳಿ ಹೊರಡುವಾಗ, ಅಲ್ಲೇ ನಿಂತಿದ್ದ ಡೈರೆಕ್ಟರ್‌ನ ಕಾರು ಡ್ರೈವರ್ "ಇನ್ನು ನಾಲ್ಕೈದು ಸಿನಿಮಾ ಮಾಡಿಲ್ಲ. ಆಗಲೇ ಕೋಟಿಗಟ್ಟಲೆ ಕಾರ್‌ನಲ್ಲಿ ಓಡಾಡುತ್ತಿದ್ದಾರೆ. ಇವರೇ ದುಡಿದ ದುಡ್ಡು ಅಥವಾ ಯಾರಾದರೂ ಕೊಡಿಸಿದ್ದೋ?!" ಎಂಬ ವ್ಯಂಗ್ಯ ಟೀಕೆಯನ್ನು ಮಾಡುತ್ತಾರೆ.
ಇದನ್ನು ಗಮನಿಸುವ ಆ ಡೈರೆಕ್ಟರ್ ಆ ಡ್ರೈವರ್ ಅನ್ನು ತಮ್ಮ ಬಳಿ ಕರೆದು ಅವರ ಮಗಳ ಮದುವೆಗೆ ಯಾವುದೇ ರೀತಿಯ ದುಡ್ಡಿನ ಸಹಾಯ ಬೇಕಾದಲ್ಲಿ ಕೇಳಬೇಕಾಗಿ ಹೇಳುತ್ತಾರೆ. ಹಾಗಾದರೆ ಡ್ರೈವರ್ ಬಹಳ ಹೆಮ್ಮೆಯಿಂದ ತನ್ನ ಮಗಳು ಅವಳ ಮದುವೆಗೆ ಅವಳೇ ನಿಯತ್ತಾಗಿ ದುಡಿದು ಜವಾಬ್ದಾರಿಯಿಂದ ಹಣವನ್ನು ಸಂಪಾದಿಸಿದ್ದಾಳೆ ಎಂದು ಹೇಳಿಕೊಳ್ಳುತ್ತಾರೆ.

ಇದಕ್ಕೆ ಉತ್ತರವಾಗಿ ಆ ಡೈರೆಕ್ಟರ್ "ನಿಮ್ಮ ಮಗಳು ದುಡಿದು ದುಡ್ಡು ಮಾಡಿದ್ರೆ ಅದು ಜವಾಬ್ದಾರಿ. ಸಿನಿಮಾದ ನಟಿಯರು ದುಡಿದು ದುಡ್ಡು ಮಾಡಿದ್ರೆ ಅದು ಅಡ್ಡದಾರಿನಾ?" ಅಂತ ಕೇಳ್ತಾರೆ. ಒಟ್ಟಿನಲ್ಲಿ ಈ ಪ್ರೋಮೋ ಮೂಲಕ ನಿರ್ದೇಶಕ ತರುಣ್ ಸುಧೀರ್ ಪ್ರಾಮಾಣಿಕತೆಯಿಂದ ನಟಿಸಿದರೆ ಎಂತವರು ಕೂಡ ಹಣ ಹಾಗೂ ಯಶಸ್ಸನ್ನು ಪಡೆಯಬಹುದು ಎಂಬ ಬಹುದೊಡ್ಡ ಸಂದೇಶವನ್ನು ಸಾರಿದ್ದಾರೆ.
ಜೊತೆಗೆ ಇನ್‌ಸ್ಟಾಗ್ರಾನಲ್ಲಿ ಈ ಸಿಹಿಸುದ್ದಿಯನ್ನು ತರುಣ್ ಸುಧೀರ್ ಕೂಡಾ ಹಂಚಿಕೊಂಡಿದ್ದರು. "ಮಹಾನಟಿಯ ಹುಡುಕಾಟದಲ್ಲಿ ತೀರ್ಪುಗಾರನಾಗಿ ಕನಸುಗಳ ಕಿರುತೆರೆಗೆ ನನ್ನ ಪ್ರವೇಶ. ನಿಮ್ಮ ಆಶೀರ್ವಾದವಿರಲಿ"ಎಂದು ಬರೆದುಕೊಂಡಿದ್ದರೆ. ಈ ಬಗ್ಗೆ ಕನಸುಗಾರ ಅಭಿಮಾನಿಗಳು ಹಾಗೂ ಫಾಲೋವರ್ಸ್ ಬಹಳ ಖುಷಿಯಾಗಿದ್ದು ತಮ್ಮ ಶುಭಾಶಯಗಳನ್ನು ತಿಳಿಸಿದ್ದರು.
ಒಟ್ಟಿನಲ್ಲಿ ಬಹಳ ಸಂಚಲನ ಹಾಗೂ ಕುತೂಹಲ ಮೂಡಿಸಿರುವ ರಿಯಾಲಿಟಿ ಶೋ 'ಮಹಾನಟಿ' ಇದೀಗ ಆರಂಭವಾಗಿದ್ದು, ಅದು ಯಾವ ರೀತಿ ಇದು ಪ್ರೇಕ್ಷಕರನ್ನು ರಂಜಿಸುತ್ತದೆ ಹಾಗೂ ಮಹಾನಟಿಯರನ್ನು ಹುಡುಕುತ್ತದೆ ಎಂಬುದನ್ನು ನೋಡಬೇಕಿದೆ.


Click it and Unblock the Notifications











