Divya Uruduga: ಈ ನಟಿ 8 ವರ್ಷ ಧಾರಾವಾಹಿಗಳನ್ನು ಒಪ್ಪಿಕೊಳ್ಳದೆ ಇರಲು ಕಾರಣವೇನು?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಚಿಟ್ಟೆ ಹೆಜ್ಜೆ' ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟ ಬೆಡಗಿ ದಿವ್ಯಾ ಉರುಡುಗ. ಮುಂದೆ 'ಅಂಬಾರಿ', 'ಖುಷಿ', 'ಓಂ ಶಕ್ತಿ ಓಂ ಶಾಂತಿ' ಧಾರಾವಾಹಿಗಳಲ್ಲಿ ಮುಖ್ಯ ಪಾತ್ರಧಾರಿಯಾಗಿ ನಟಿಸಿದ ದಿವ್ಯಾ ಉರುಡುಗ ಕಿರುತೆರೆ ವೀಕ್ಷಕರ ಮನ ಸೆಳೆದ ಚೆಲುವೆ. ತದ ನಂತರ ಬೆಳ್ಳಿತೆರೆಗೆ ಹಾರಿದ ಈಕೆ ಅಲ್ಲೂ ಕೂಡಾ ತಮ್ಮ ನಟನೆಯ ಮೂಲಕ ಗುರುತಿಸಿಕೊಂಡಿದ್ದಾರೆ.
ಮುಂದೆ ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್ ಸೀಸನ್ 8' ರ ಸ್ಪರ್ಧಿಯಾಗಿ ಕಾಣಿಸಿಕೊಂಡ ಈಕೆ ಅಲ್ಲೂ ಕೂಡಾ ಸಖತ್ ಸದ್ದು ಮಾಡಿದ್ದರು. ಕೇವಲ ದಿವ್ಯಾ ಉರುಡುಗ ಮಾತ್ರವಲ್ಲದೇ ಅರವಿಂದ್ ಕೆ.ಪಿ ಅವರ ಜೋಡಿಯೂ ತುಂಬಾ ಮೋಡಿ ಮಾಡಿತ್ತು. 'ಪದವಿ ಪೂರ್ವ', 'ಅರ್ಧಂಬರ್ಧ ಪ್ರೇಮ ಕಥೆ' ಸಿನಿಮಾಗಳಲ್ಲಿ ಅಭಿನಯಿಸಿರುವ ದಿವ್ಯಾ ಉರುಡುಗ ಇದೀಗ 'ನಿನಗಾಗಿ' ಧಾರವಾಹಿಯ ಮೂಲಕ ಮತ್ತೆ ಕಿರುತೆರೆಗೆ ಮರಳುತ್ತಿರುವ ವಿಚಾರ ಎಲ್ಲರಿಗೂ ತಿಳಿದೇ ಇದೆ.

'ನಿನಗಾಗಿ' ಧಾರಾವಾಹಿಯಲ್ಲಿ ಸೆಲೆಬ್ರೆಟಿ ರಚನಾ ಪಾತ್ರದಲ್ಲಿ ನಟಿ ದಿವ್ಯಾ ಉರುಡುಗ ನಟಿಸಲಿದ್ದಾರೆ. ಅಂದ ಹಾಗೆ ಸಣ್ಣ ಗ್ಯಾಪ್ ನ ನಂತರ ಮತ್ತೆ ಕಿರುತೆರೆಯತ್ತ ಮರಳುತ್ತಿರುವುದಕ್ಕೆ ಉತ್ಸಾಹದಿಂದಿರುವ ನಟಿ ದಿವ್ಯಾ ಉರುಡುಗ ಈ ಬಗ್ಗೆ ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಮನ ಬಿಚ್ಚಿ ಮಾತನಾಡಿದ್ದಾರೆ. "ನಾನು ಕಿರುತೆರೆ ಮೂಲಕವೇ ನಟನಾರಂಗಕ್ಕೆ ಕಾಲಿಟ್ಟವಳು. 2017 ರ ನಂತರ ಯಾವುದೇ ಧಾರಾವಾಹಿಗಳನ್ನು ಮಾಡಲಿಲ್ಲ. ಅಲ್ಲಿವರೆಗೂ ನಾಲ್ಕು ಧಾರವಾಹಿಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೇನೆ. ಸಿನಿಮಾಗಳಲ್ಲಿ ಬ್ಯುಸಿಯಾದ ನಂತರವೂ ನನಗೆ ಹಲವಾರು ಧಾರಾವಾಹಿಗಳ ಪ್ರೊಡಕ್ಷನ್ ಹೌಸ್‌ಗಳಿಂದ ಕಾಲ್ ಬಂದಿದೆ. ಧಾರಾವಾಹಿಗಳಿಗೆ ಒಪ್ಪಿಕೊಂಡು ಸಿನಿಮಾಗೆ ತೊಂದರೆ ಆಗಬಹುದು ಎಂಬ ಕಾರಣಕ್ಕೆ ಎಲ್ಲಾ ಆಫರ್‌ಗಳನ್ನು ರಿಜೆಕ್ಟ್ ಮಾಡಿದೆ. ಆದರೂ ನನ್ನ ಮೇಲಿನ ಪ್ರೀತಿ ಹಾಗೂ ಅಭಿಮಾನಕ್ಕೆ ಧಾರಾವಾಹಿಗಳಿಂದ ಕರೆಗಳು ಬರುತ್ತಲೇ ಇದ್ದವು. ಈ ವಿಚಾರವಾಗಿ ನಾನು ಕಿರುತೆರೆಗೆ ಸದಾಋಣಿ" ಎಂದು ಸಂದರ್ಶನದಲ್ಲಿ ಮಾತನಾಡುವಾಗ ನಟಿ ದಿವ್ಯಾ ಉರುಡುಗ ಹೇಳಿಕೊಂಡಿದ್ದಾರೆ.
"ಮೊದಲೆಲ್ಲಾ ಧಾರಾವಾಹಿಯಲ್ಲಿ ನಟಿಸಿರುವವರಿಗೆ ಸಿನಿಮಾಗಳಲ್ಲಿ ಅವಕಾಶ ಕಮ್ಮಿಯಾಗುತ್ತಿತ್ತು. ಅಥವಾ ಸಿನಿಮಾಗಳಿಗೆ ಕಾಲಿಟ್ಟ ಮೇಲೆ ಮತ್ತೆ ಧಾರಾವಾಹಿಗೆ ಮರಳುವುದು ತೀರಾ ಕಡಿಮೆ. ಆದರೆ ಈಗ ಹಾಗಲ್ಲ, ಸೋಶಿಯಲ್ ಮೀಡಿಯಾ ಸೇರಿದಂತೆ ನಮ್ಮನ್ನು ನಾವು ಗುರುತಿಸಿಕೊಳ್ಳುವುದಕ್ಕೆ ಹಲವಾರು ವೇದಿಕೆಗಳಿರುವುದರಿಂದ ಜನರು ತುಂಬಾ ಓಪನ್ ಮೈಂಡೆಡ್ ಆಗಿದ್ದಾರೆ" ಎಂದು ಹೇಳಿಕೊಂಡಿದ್ದಾರೆ ನಟಿ ದಿವ್ಯಾ ಉರುಡುಗ.

"ಜನರು ಸಿನಿಮಾ, ಧಾರಾವಾಹಿ ಎಂದು ಹೆಚ್ಚಿನ ತಮ್ಮ ಪ್ರೀತಿ ಕೊಡುತ್ತಿದ್ದಾರೆ. ಸಿನಿಮಾ ಪುರುಷ ಪ್ರಧಾನ ಕ್ಷೇತ್ರ, ಧಾರಾವಾಹಿ ಸ್ತ್ರೀ ಪ್ರಧಾನ ವೇದಿಕೆ. ಈ ಎರಡರಲ್ಲೂ ಭಾಗವಹಿಸಿ ಜನ ಮೆಚ್ಚುಗೆ ಹಾಗೂ ಪ್ರೀತಿ ಗಳಿಸಿರುವುದಕ್ಕೆ ನನಗೆ ಸಂತೋಷವಿದೆ" ಎಂದಿದ್ದಾರೆ ಕಿರುತೆರೆ ನಟಿ ದಿವ್ಯಾ ಉರುಡುಗ.
ಇನ್ನು 'ನಿನಗಾಗಿ' ಧಾರಾವಾಹಿಯ ಪ್ರೋಮೋ ಕೂಡಾ ಈಗಾಗಲೇ ರಿಲೀಸ್ ಆಗಿದೆ. ಬರೋಬ್ಬರಿ ಎಂಟು ವರ್ಷಗಳ ಗ್ಯಾಪ್‌ನ ನಂತರ ತಮ್ಮ ನೆಚ್ಚಿನ ನಟಿಯನ್ನು ಕಿರುತೆರೆಯಲ್ಲಿ ನೋಡುತ್ತಿರುವುದಕ್ಕೆ ಕಿರುತೆರೆ ವೀಕ್ಷಕರು ಕೂಡಾ ಕಾತರದಿಂದ ಕಾಯುತ್ತಿದ್ದಾರೆ. ಅಂದ ಹಾಗೇ ಧಾರಾವಾಹಿ ಯಾವ ಸಮಯದಲ್ಲಿ ಪ್ರಸಾರವಾಗಲಿದೆ ಎಂಬ ಮಾಹಿತಿ ಮುಂದಿನ ದಿನಗಳಲ್ಲಿ ತಿಳಿಯಬೇಕಿದೆ.


Click it and Unblock the Notifications











