'ನೀನಾದೆ ನಾ' ಧಾರಾವಾಹಿ ಮೂಲಕ ಮತ್ತೆ ಕಿರುತೆರೆ ಎಂಟ್ರಿ ಕೊಟ್ಟ ದಿವ್ಯಶ್ರೀ ನಾಯಕ್; ಪಾತ್ರ ಯಾವುದು?
ವಿಭಿನ್ನ ಕಥೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದಿರುವ ಧಾರಾವಾಹಿಗಳ ಪೈಕಿ 'ನೀನಾದೆ ನಾ' ಕೂಡಾ ಒಂದು. 'ನೀನಾದೆ ನಾ' ಧಾರಾವಾಹಿಯ ಹೊಸ ಅಧ್ಯಾಯ ಇದೀಗ ಆರಂಭವಾಗಿದೆ. ಹಳೆ ಜೋಡಿ, ಹೊಸ ಕಥೆ ಎಂದು ಹೇಳಿದರೂ ತಪ್ಪಾಗಲಾರದು. ನಾಯಕ ವಿಕ್ರಮ್ ಆಗಿ ದಿಲೀಪ್ ಶೆಟ್ಟಿ, ನಾಯಕಿ ವೇದಾಳಾಗಿ ಖುಷಿ ಶಿವು ಅಭಿನಯಿಸುತ್ತಿದ್ದ ಈ ಹೊಸ ಕಥೆಯ ಅಧ್ಯಾಯವು ಕರ್ನಾಟಕದ ಸುಂದರ ತಾಣ ದೈವಾರಾಧನೆಯ ತವರೂರಾಗಿರುವ ತುಳುನಾಡಿನಲ್ಲಿ ಆರಂಭವಾಗಿದೆ.
ನಾಯಕ ವಿಕ್ರಮ್ ಗೂಂಡಾಗಿರಿ ಮಾಡುತ್ತಾ, ದಂಧೆ ನಡೆಸುತ್ತಿರುವ ಹುಡುಗ. ಮಂಗಳೂರಿನ ಡಾನ್ ಕರುಣಾಕರ್ ಶೆಟ್ಟಿಯ ಬಲಗೈ ಬಂಟ ಈತ. ಸಂಪ್ರದಾಯಸ್ಥ ಮನೆತನಕ್ಕೆ ಸೇರಿರುವ ನಾಯಕಿ ವೇದಾ ಉಡುಪಿ ಕೃಷ್ಣನ ಪರಮ ಭಕ್ತೆ. ಮಾತ್ರವಲ್ಲದೇ ತನ್ನದೇ ಆದ ಸ್ವಂತ ಅಂಗಡಿಯನ್ನು ಹೊಂದಿರುವ ಈಕೆ ಮತ್ತು ವಿಕ್ರಮ್ ಹೇಗೆ ಒಂದಾಗುತ್ತಾರೆ? ಎರಡು ವಿರುದ್ಧ ಮನಸ್ಸುಗಳನ್ನು ಹೊಂದಿರುವ ಇವರು ಅದು ಹೇಗೆ ಜೊತೆಯಾಗುತ್ತಾರೆ ಎಂಬುದು ಕಥಾಹಂದರ.

'ನೀನಾದೆ ನಾ' ಧಾರಾವಾಹಿಯಲ್ಲಿ ನಾಯಕಿ ವೇದಾಳ ದೊಡ್ಡಮ್ಮನ ಮಗಳು ಸೌಂದರ್ಯ ಆಗಿ ಅಭಿನಯಿಸುವ ಮೂಲಕ ಕಿರುತೆರೆಗೆ ಮರಳಿದ್ದಾರೆ ದಿವ್ಯಶ್ರೀ ನಾಯಕ್. ಹೌದು, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಗೃಹಪ್ರವೇಶ' ಧಾರಾವಾಹಿಯಲ್ಲಿ ನಾಯಕಿಯ ಚಿಕ್ಕಮ್ಮ ಶಾಂಭವಿಯಾಗಿ ನಟಿಸಿದ್ದರು ದಿವ್ಯಶ್ರೀ ನಾಯಕ್. 'ಗೃಹಪ್ರವೇಶ' ಧಾರಾವಾಹಿಯ ನಂತರ ಬೇರೆ ಯಾವ ಧಾರಾವಾಹಿಯಲ್ಲೂ ನಟಿಸಿರದ ಈಕೆ ಇದೀಗ ಸೌಂದರ್ಯ ಆಗಿ ಕಿರುತೆರೆಗೆ ಕಮ್ ಬ್ಯಾಕ್ ಮಾಡಿದ್ದಾರೆ.
"ನಾನು ನೀನಾದೆ ನಾ ಧಾರಾವಾಹಿಯಲ್ಲಿ ನಾಯಕಿಯ ಅಕ್ಕ ಸೌಂದರ್ಯ ಆಗಿ ಅಭಿನಯಿಸುತ್ತಿದ್ದೇನೆ. ಸಂಪೂರ್ಣ ಪಾಸಿಟಿವ್ ರೋಲ್ ಇದು. ಗೃಹಪ್ರವೇಶ ಧಾರಾವಾಹಿಯಲ್ಲಿ ನಾನು ಖಳನಾಯಕಿಯಾಗಿ ಕಾಣಿಸಿಕೊಂಡಿದ್ದೆ. ಆದಾದ ನಂತರ ಇದೀಗ ಸೌಂದರ್ಯ ಆಗಿ ನಿಮ್ಮ ಮುಂದೆ ಬರುತ್ತಿರುವುದಕ್ಕೆ ಖುಷಿಯಾಗುತ್ತಿದೆ" ಎಂದು ಫಿಲ್ಮಿಬೀಟ್ ಕನ್ನಡ ಜೊತೆಗೆ ದಿವ್ಯಶ್ರೀ ನಾಯಕ್ ಖುಷಿಯನ್ನು ಹಂಚಿಕೊಂಡಿದ್ದಾರೆ.

"ಮುದ್ದಾಗಿರುವ ಹುಡುಗಿ ಸೌಂದರ್ಯಾ ಈಗ ಗರ್ಭಿಣಿ. ಸೌಂದರ್ಯಾಳಿಗೆ ತಂಗಿ ವೇದಾಳನ್ನು ಕಂಡರೆ ತುಂಬಾ ಇಷ್ಟ. ವೇದಾಳ ಮನೆಯವರನ್ನು ಎಲ್ಲರೂ ದ್ವೇಷ ಮಾಡುತ್ತಿದ್ರೆ, ಸೌಂದರ್ಯಾಳಿಗೆ ಮಾತ್ರ ವೇದಾ ಮನೆಯವರು ಎಂದರೆ ಅಕ್ಕರೆ, ಪ್ರೀತಿ. ಎಲ್ಲದರಲ್ಲೂ, ಎಲ್ಲರಲ್ಲೂ ಒಳ್ಳೆಯದನ್ನೇ ಬಯಸುವ ನಾಯಕಿ ವೇದಾಗೆ ಯಾವತ್ತಿಗೂ ಒಳ್ಳೆಯದಾಗಬೇಕು ಎಂದು ಬಯಸುವುದು ಸೌಂದರ್ಯ ಮಾತ್ರ" ಎಂದು ತಮ್ಮ ಪಾತ್ರದ ಬಗ್ಗೆಯೂ ಫಿಲ್ಮಿಬೀಟ್ ಜೊತೆಗೆ ಹಂಚಿಕೊಂಡಿದ್ದಾರೆ ದಿವ್ಯಶ್ರೀ ನಾಯಕ್.
"ಉದಯ ವಾಹಿನಿಯಲ್ಲಿ ಬರಲಿರುವ ಹೊಸ ಧಾರಾವಾಹಿಯಲ್ಲಿ ನಾನು ನಟಿಸುತ್ತಿದ್ದೇನೆ. ಆ ಸಮಯದಲ್ಲಿಯೇ ನೀನಾದೆ ನಾ ಧಾರಾವಾಹಿಯ ತಂಡದವರು ನನ್ನನ್ನು ಕಾಂಟಾಕ್ಟ್ ಮಾಡಿದ್ರು. ಎರಡು ಧಾರಾವಾಹಿಯಲ್ಲಿ ಬಣ್ಣ ಹಚ್ಚುತ್ತಿರುವ ಕಾರಣ ಸಹಜವಾಗಿ ಡೇಟ್ಸ್ ಕ್ಲಾಶ್ ಆಗ್ತಾ ಇತ್ತು. ಎಷ್ಟಾಗುತ್ತೆ ಅಷ್ಟು ಅಡ್ಜೆಸ್ಟ್ ಮಾಡೋದಕ್ಕೆ ಆಗುತ್ತಾ ಅಂಥ ಪ್ರಯತ್ನಿಸಿದೆ. ಕೊನೆಯ ಕ್ಷಣದಲ್ಲಿ ಎಲ್ಲವೂ ಅಂದುಕೊಂಡಂತೆ ಆದ ಕಾರಣ ನೀನಾದೆ ತಂಡ ಸೇರಿಕೊಂಡೆ" ಎಂದು ದಿವ್ಯಶ್ರೀ ನಾಯಕ್ ಹೇಳುತ್ತಾರೆ.
"ಧಾರಾವಾಹಿ ತಂಡದವರು ನಾನೇ ಸೌಂದರ್ಯಾ ಪಾತ್ರ ಮಾಡಬೇಕು ಎಂದು ಬಯಸಿದ್ದರು. ನಾನು ಕೂಡಾ ಅಷ್ಟೇ, ಸೌಂದರ್ಯಾ ಪಾತ್ರಕ್ಕೆ ಜೀವ ತುಂಬಬೇಕು ಎಂದು ಬಯಸಿದ್ದೆ. ಯಾಕೆಂದರೆ ಇಲ್ಲಿಯ ತನಕ ನೆಗೆಟಿವ್ ರೋಲ್ ಜಲ್ಲಿ ನಟಿಸಿದ್ದ ನಾನು ಇದೀಗ ಪಾಸಿಟಿವ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದಕ್ಕೆ ತುಂಬಾ ಸಂತಸಪಡುತ್ತಿದ್ದೇನೆ. ನಿಜ ಹೇಳ್ಬೇಕು ಅಂತ ಅಂದ್ರೆ ನನಗೆ ಪಾಸಿಟಿವ್ ರೋಲ್‌ನಲ್ಲಿ ಕಾಣಿಸಿಕೊಳ್ಳುವುದು ಕೂಡಾ ತುಂಬಾ ಇಷ್ಟ" ಎಂದು ಫಿಲ್ಮಿಬೀಟ್ ಕನ್ನಡ ಸಂದರ್ಶನದಲ್ಲಿ ಮಾತನಾಡುವಾಗ ದಿವ್ಯಶ್ರೀ ನಾಯಕ್ ಹೇಳಿದ್ದಾರೆ .
"ನಾನಿಂದು ಸೌಂದರ್ಯ ಆಗಿ ತೆರೆಯ ಮೇಲೆ ಬರುತ್ತಿದ್ದೇನೆ ಎಂದರೆ ಅದಕ್ಕೆ ಪಿಂಗಾರ ಪ್ರೊಡಕ್ಷನ್ ಅವರೇ ಕಾರಣ. ಅವರು ನೀಡಿದ ಅವಕಾಶದಿಂದಲೇ ಇದು ಸಾಧ್ಯವಾದುದು. ಅವರಿಗೆ ನಾನು ಯಾವತ್ತಿಗೂ ಚಿರಋಣಿ. ಇನ್ನು ಈ ಧಾರಾವಾಹಿಯ ಸಂಪೂರ್ಣ ಚಿತ್ರೀಕರಣ ನಮ್ಮ ಕರಾವಳಿಯಲ್ಲಿ ನಡೆಯುತ್ತಿದೆ. ಅದು ಕೂಡಾ ನನಗೆ ಖುಷಿಯಿದೆ" ಎಂದು ದಿವ್ಯಶ್ರೀ ನಾಯಕ್ ಸಂತಸ ವ್ಯಕ್ತಪಡಿಸುತ್ತಾರೆ.
ರಂಗಭೂಮಿ ಕಲಾವಿದೆಯಾಗಿರುವ ದಿವ್ಯಶ್ರೀ ನಾಯಕ್ 'ಅಂತರ್ಮುಖ' ಎನ್ನುವ ಕಲಾತ್ಮಕ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟರು. 'ಮತ್ತೆ ಮಾಯಾಮೃಗ' ಧಾರಾವಾಹಿಯ ವೈಜಯಂತಿಯಾಗಿ ಕಿರುತೆರೆಗೆ ಕಾಲಿಟ್ಟರುವ ಈಕೆ 'ಗೃಹಪ್ರವೇಶ' ಧಾರಾವಾಹಿಯ ಶಾಂಭವಿಯಾಗಿ ಮಿಂಚಿದರು. ಇದರ ಜೊತೆಗೆ ಶಿವಧ್ವಜ್ ನಿರ್ದೇಶನದ ತುಳು ಸಿನಿಮಾ 'ಕೊರಮ್ಮ'ದಲ್ಲಿಯೂ ಪ್ರಮುಖ ಪಾತ್ರದಲ್ಲಿ ಈಕೆ ಬಣ್ಣ ಹಚ್ಚಿದ್ದಾರೆ.


Click it and Unblock the Notifications











