ಪ್ರತಿಷ್ಠಿತ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿದ್ದ ಚೈತ್ರಾ ರಾವ್ ಬದುಕು ಬದಲಿಸಿದ್ದು ಫ್ಯಾಷನ್ ಶೋ!
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳ ಪೈಕಿ 'ಅವನು ಮತ್ತು ಶ್ರಾವಣಿ' ಯೂ ಒಂದು. 'ಅವನು ಮತ್ತು ಶ್ರಾವಣಿ' ಧಾರಾವಾಹಿಯಲ್ಲಿ ನಾಯಕ ಅಭಿಮನ್ಯುವಿನ ಚಿಕ್ಕಮ್ಮ ಸಂಯುಕ್ತಾಳಾಗಿ ಅಭಿನಯಿಸುತ್ತಿದ್ದಾರೆ ಚೈತ್ರಾ ಸಚಿನ್ ರಾವ್.
ಈ ಧಾರಾವಾಹಿಯಲ್ಲಿ ಎದುರಿಗೆ ಪಾಸಿಟಿವ್‌ನಂತೆ ಕಂಡರೂ ಸಂಪೂರ್ಣ ನೆಗೆಟಿವ್ ಛಾಯೆ ಹೊಂದಿರುವಂತಹ ಪಾತ್ರವದು. ಮನೆಯ ಆಸ್ತಿಗಾಗಿ ಹೊಂಚುಹಾಕುವ ಸಂಯುಕ್ತಾ ಎಲ್ಲರ ಎದುರು ಒಳ್ಳೆಯವಳಂತೆ ನಟಿಸುತ್ತಾಳೆ. ಅದ್ಯಾವಾಗ ಆಕೆಯ ನಿಜವಾದ ಬಣ್ಣ ನಾಯಕ ಅಭಿಗೆ, ಮನೆಯವರಿಗೆ ತಿಳಿಯುತ್ತದೋ ಮುಂದಿನ ದಿನಗಳಲ್ಲಿ ಗೊತ್ತಾಗುತ್ತೆ.

ಅಂದ ಹಾಗೇ ಚೈತ್ರಾ ಸಚಿನ್ ರಾವ್ ಅವರು ನಟನಾ ಲೋಕಕ್ಕೆ ಕಾಲಿಟ್ಟಿದ್ದು ತೀರಾ ಆಕಸ್ಮಿಕ. ಅಮೆಜಾನ್, ಲಿಂಕ್ಡಿನ್ನಂತಹ ಪ್ರತಿಷ್ಠಿತ ಕಂಪನಿಗಳಲ್ಲಿ ಬರೋಬ್ಬರಿ ಹದಿನಾಲ್ಕು ವರ್ಷಗಳ ಕಾಲ ಎಚ್ ಆರ್ ಆಗಿ ಕೆಲಸ ಮಾಡಿದ ಅನುಭವವಿರುವ ಚೈತ್ರಾ ಸಚಿನ್ ರಾವ್ ಅವರ ಬದುಕನ್ನು ಬದಲಾಯಿಸಿದ್ದು ಫ್ಯಾಷನ್ ಶೋ ಎಂದರೆ ನಂಬಲು ಸಾಧ್ಯವೇ?
ಆಶ್ಚರ್ಯ ಎಂದೆನಿಸಿದರೂ ಇದು ಸತ್ಯ. 'ಮಿಸೆಸ್ ಇಂಡಿಯಾ ಕರ್ನಾಟಕ' ಎಂಬ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಚೈತ್ರಾ 'ಮಿಸೆಸ್ ಬ್ಯೂಟಿಫುಲ್ ಐಸ್' ಪ್ರಶಸ್ತಿಯನ್ನು ಪಡೆದರು. ಮುಂದೆ ನಟನೆಯತ್ತ ಮುಖ ಮಾಡಿದ ಚೈತ್ರಾ ಸಚಿನ್ ರಾವ್ ಅವರು ಮೊದಲು 'ನಾಗಕನ್ನಿಕೆ' ಧಾರಾವಾಹಿಯಲ್ಲಿ ನಟಿಸಿದ್ದರು.
ಕೆ.ಎಸ್. ರಾಮ್ ಜೀ ನಿರ್ದೇಶನದ 'ನಾಗಕನ್ನಿಕೆ' ಧಾರಾವಾಹಿಯಲ್ಲಿ ನಟಿಸುವ ಮೂಲಕ ಕಿರುತೆರೆಗೆ ಕಾಲಿಟ್ಟ ಚೈತ್ರಾ ಸಚಿನ್ ರಾವ್ ಅವರು ಮುಂದೆ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸರಯೂ' ಧಾರಾವಾಹಿಯಲ್ಲಿ ನಿರ್ಮಲಾ ಪಾತ್ರದಲ್ಲಿ ಅಭಿನಯಿಸಿದ್ದರು. ನಂತರ ನಟ ದಿಲೀಪ್ ರಾಜ್ ಅವರ ನಿರ್ದೇಶನದಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ವಿದ್ಯಾ ವಿನಾಯಕ' ಧಾರಾವಾಹಿಯಲ್ಲಿ ಪ್ರಭಾವತಿಯ ಪಾತ್ರಕ್ಕೆ ಜೀವ ತುಂಬಿದ್ದರು.
ಮೊದಲ ಬಾರಿಗೆ ನೆಗೆಟಿವ್ ಪಾತ್ರದ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದ ಚೈತ್ರಾ ಅವರು ನಂತರ 'ಗಿಣಿರಾಮ' ಧಾರಾವಾಹಿಯಲ್ಲಿ ಆಯಿ ಸಾಹೇಬರಾಗಿ ಮೋಡಿ ಮಾಡಿದರು. ಉತ್ತರ ಕನ್ನಡ ಸೊಬಗಿನ ಭಾಷೆಯನ್ನೊಳಗೊಂಡ 'ಗಿಣಿರಾಮ' ಧಾರಾವಾಹಿಯಲ್ಲಿ ಅರಳು ಹುರಿದಂತೆ ಪಟಪಟನೆ ಮಾತನಾಡುತ್ತಾ ಕಿರುತೆರೆ ವೀಕ್ಷಕರ ಮನ ಸೆಳೆದ ಚೈತ್ರಾ ಅವರ ಖಡಕ್ ಅಭಿನಯಕ್ಕೆ ಮನಸೋಲದವರಿಲ್ಲ.
ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ನೇತ್ರಾವತಿ' ಧಾರಾವಾಹಿಯಲ್ಲಿ ತ್ರಿಶಾಲಾ ದೇವಿಯಾಗಿ ನಟಿಸಿದ ಈಕೆ ವಿಲನ್ ಆಗಿ ವೀಕ್ಷಕರನ್ನು ರಂಜಿಸಿದರು. ಇನ್ನು ಇತ್ತೀಚೆಗಷ್ಟೇ ಮುಕ್ತಾಯಗೊಂಡ 'ಕೆಂಡಸಂಪಿಗೆ' ಧಾರಾವಾಹಿಯಲ್ಲಿಯೂ ನಾಯಕ ತೀರ್ಥಂಕರ್‌ನ ಸೋದರತ್ತೆ ಕಾತ್ಯಾಯಿನಿಯಾಗಿ ನಟಿಸಿದ ಈಕೆ ಅಲ್ಲೂ ಜೀವ ತುಂಬಿದ್ದು ನೆಗೆಟಿವ್ ರೋಲ್‌ಗೆ. ಆದರೆ, ಧಾರಾವಾಹಿ ಮುಕ್ತಾಯಗೊಳ್ಳುವಾಗ ಆಕೆಯ ಪಾತ್ರ ಸಂಪೂರ್ಣ ಪಾಸಿಟಿವ್ ಆಗಿ ಬದಲಾಗಿತ್ತು.
ಇದೀಗ 'ಅವನು ಮತ್ತು ಶ್ರಾವಣಿ' ಧಾರಾವಾಹಿಯಲ್ಲಿ ಸಂಯುಕ್ತಾಳಾಗಿ ನಟಿಸುತ್ತಿರುವ ಈಕೆ ಗಾಯಕಿಯಾಗಿಯೂ ಗುರುತಿಸಿಕೊಂಡಿದ್ದಾರೆ ಎಂಬ ವಿಷಯ ಅನೇಕರಿಗೆ ತಿಳಿದಿರಲಿಕ್ಕಿಲ್ಲ. ಸುಮಾರು 20 ವರ್ಷಗಳಿಂದ ಗಾಯಕಿಯಾಗಿ ಗುರುತಿಸಿಕೊಂಡಿರುವ ಚೈತ್ರಾ ಸಚಿನ್ ರಾವ್ ಕನ್ನಡದ ಜನಪ್ರಿಯ ಗಾಯಕ ರಾಜು ಅನಂತಸ್ವಾಮಿ ಅವರೊಂದಿಗೆ ಹಾಡಿದ್ದಾರೆ. ಇನ್ನು ಸಂಗೀತದಲ್ಲಿ ಸೀನಿಯರ್ ಪರೀಕ್ಷೆಯನ್ನು ಪಾಸ್ ಮಾಡಿರುವ ಈಕೆ ನೂರಕ್ಕೂ ಹೆಚ್ಚಿನ ವೇದಿಕೆಗಳಲ್ಲಿ ಹಾಡಿ ಸೈ ಎನಿಸಿಕೊಂಡಿದ್ದಾರೆ.


Click it and Unblock the Notifications











