ಇದೇ 'ಗೌರಿಶಂಕರ' ಧಾರಾವಾಹಿಯ ದಿವ್ಯಾ ವಾಗೂಕರ್ ನಟಿಸಿದ ಮೊದಲ ಧಾರಾವಾಹಿ
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳ ಪೈಕಿ 'ಗೌರಿಶಂಕರ'ವೂ ಒಂದು. 'ಗೌರಿಶಂಕರ' ಧಾರಾವಾಹಿಯಲ್ಲಿ ನಾಯಕಿ ಗೌರಿಯಾಗಿ ನಟಿಸಿ ಕಿರುತೆರೆ ವೀಕ್ಷಕರ ಮನ ಸೆಳೆಯುತ್ತಿರುವ ಚೆಂದುಳ್ಳಿ ಚೆಲುವೆಯ ಹೆಸರು ದಿವ್ಯಾ ವಾಗೂಕರ್. ಮುದ್ದಾದ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆಯುತ್ತಿರುವ ದಿವ್ಯಾ ವಾಗೂಕರ್ ಅವರಿಗೆ ಸ್ಟಾರ್ ಸುವರ್ಣದ ನಂಟು ಇದು ಮೊದಲನೇ ಬಾರಿಯದ್ದಲ್ಲ.
ಬದಲಿಗೆ ಈ ಹಿಂದೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮರಳಿ ಮನಸ್ಸಾಗಿದೆ' ಧಾರಾವಾಹಿಯಲ್ಲಿ ನಾಯಕಿ ಸ್ಪಂದನಾ ಪಾತ್ರಕ್ಕೆ ದಿವ್ಯಾ ವಾಗೂಕರ್ ಜೀವ ತುಂಬಿದ್ದರು. 'ಮರಳಿ ಮನಸ್ಸಾಗಿದೆ' ಧಾರಾವಾಹಿ ಮುಕ್ತಾಯಗೊಂಡ ಬಳಿಕ ಒಂದೆರಡು ಧಾರಾವಾಹಿಗಳಲ್ಲಿ ಅತಿಥಿ ಪಾತ್ರದ ಮೂಲಕ ಮೋಡಿ ಮಾಡಿದ ಈಕೆ ನಾಯಕಿಯಾಗಿ ಕಾಣಿಸಿಕೊಂಡಿದ್ದು ಇದೇ 'ಗೌರಿಶಂಕರ' ಧಾರಾವಾಹಿಯಲ್ಲಿ.

ಅಂದ ಹಾಗೇ 'ಗೌರಿಶಂಕರ' ಧಾರಾವಾಹಿ ಆರಂಭವಾದಾಗ ಗೌರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ದಿವ್ಯಾ ವಾಗೂಕರ್ ಅಲ್ಲ, ಬದಲಿಗೆ ಕೌಸ್ತುಭಮಣಿ. ಮುಂದೆ ಮದುವೆಯ ಸಲುವಾಗಿ ಕೌಸ್ತುಭಮಣಿಯವರು ಗೌರಿಯ ಪಾತ್ರದಿಂದ ಹೊರಬಂದಾಗ ಆ ಜಾಗಕ್ಕೆ ದಿವ್ಯಾ ಅವರು ಆಯ್ಕೆಯಾದರು. ಇದೀಗ ಗೌರಿಯಾಗಿ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿರುವ ದಿವ್ಯಾ ವಾಗೂಕರ್ ಅವರ ನಟನಾ ಪಯಣ ಶುರುವಾಗಿದ್ದು ಶ್ರಾವಣಿ ಪಾತ್ರದ ಮೂಲಕ.
ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮಾಂಗಲ್ಯಂ ತಂತು ನಾನೇನಾ' ಧಾರಾವಾಹಿಯಲ್ಲಿ ನಾಯಕಿ ಶ್ರಾವಣಿಯಾಗಿ ಅಭಿನಯಿಸುವ ಮೂಲಕ ಕಿರುತೆರೆಗೆ ಕಾಲಿಟ್ಟ ದಿವ್ಯಾ ವಾಗೂಕರ್ ಮೊದಲ ಧಾರಾವಾಹಿಯಲ್ಲಿಯೇ ಕಿರುತೆರೆ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾದರು.
ನಂತರ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಗೀತಾ' ಧಾರಾವಾಹಿಯಲ್ಲಿ ದಾಸ್ವಾಳ ಎನ್ನುವ ಪಾತ್ರದಲ್ಲಿ ಬಣ್ಣ ಹಚ್ಚಿದ ಈಕೆ ಡಕಾಯಿತರ ತಂಡದ ನಾಯಕಿಯಾಗಿ ನಟಿಸಿ ಸೈ ಎನಿಸಿಕೊಂಡರು. ಅಂದ ಹಾಗೇ ದಾಸ್ವಾಳ ಆಗಿ ಈಕೆ ನಟಿಸಿದ್ದು ಒಂದೆರಡು ಸಂಚಿಕೆಗಳಲ್ಲಷ್ಟೇ ಆದರೂ ನಟನೆಯ ಮೂಲಕ ವೀಕ್ಷಕರ ಮನ ಸೆಳೆದಿದ್ದಾರೆ.

ಮುಂದೆ 'ಮರಳಿ ಮನಸ್ಸಾಗಿದೆ' ಧಾರಾವಾಹಿಯಲ್ಲಿ ಸ್ಪಂದನಾ ಆಗಿ ಬಣ್ಣ ಹಚ್ಚಿದ ಈಕೆ ಅಲ್ಲೂ ಕೂಡಾ ತಮ್ಮ ನಟನೆಯ ಮೂಲಕ ಜನಪ್ರಿಯತೆಯನ್ನು ಗಿಟ್ಟಿಸಿಕೊಂಡರು. 'ಮರಳಿ ಮನಸ್ಸಾಗಿದೆ' ಧಾರಾವಾಹಿಯ ನಂತರ ಕಿರುತೆರೆಯಿಂದ ಕೊಂಚ ದೂರವಿದ್ದ ಈಕೆ ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಭೂಮಿಗೆ ಬಂದ ಭಗವಂತ' ಧಾರಾವಾಹಿಯಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಪಾರ್ವತಿದೇವಿಯಾಗಿ ಅಭಿನಯಿಸಿದ್ದಾರೆ.
ಸದ್ಯ ಗೌರಿಯಾಗಿ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿರುವ ದಿವ್ಯಾ ವಾಗೂಕರ್ ಮುದ್ದಾದ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನೆ, ಮನ ಸೆಳೆದಿದ್ದಾರೆ. ಇಂತಿಪ್ಪ ಈಕೆ ಮುಂದೊಂದು ದಿನ ಹಿರಿತೆರೆಯಲ್ಲಿ ಕಾಣಿಸಿಕೊಂಡರೆ ಆಶ್ಚರ್ಯವೇನಿಲ್ಲ.


Click it and Unblock the Notifications











