'ಡ್ಯಾನ್ಸಿಂಗ್ ಸ್ಟಾರ್' ಹೋಗಿದ್ದವರು ನಟಿಯಾಗಿದ್ದೇಗೆ? 'ಲಕ್ಷ್ಮಿ ಬಾರಮ್ಮ' ನಟಿಯ ಹಿನ್ನೆಲೆಯೇನು?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳ ಪೈಕಿ 'ಲಕ್ಷ್ಮಿ ಬಾರಮ್ಮ'ವೂ ಒಂದು. 'ಲಕ್ಷ್ಮಿ ಬಾರಮ್ಮ' ಧಾರಾವಾಹಿಯಲ್ಲಿ ನಾಯಕಿ ಲಕ್ಷ್ಮಿಯಾಗಿ ನಟಿಸಿ ಕಿರುತೆರೆ ವೀಕ್ಷಕರ ಮನೆ, ಮನ ಸೆಳೆದಿರುವ ಈಕೆಯ ಹೆಸರು ಭೂಮಿಕಾ ರಮೇಶ್. ಮೊದಲ ಧಾರಾವಾಹಿಯಲ್ಲಿಯೇ ನಾಯಕಿಯಾಗಿ ನಟಿಸಿ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದ ಭೂಮಿಕಾ ರಮೇಶ್ ಕಳೆದ ವರ್ಷದ ಅನುಬಂಧ ಅವಾರ್ಡ್ಸ್‌ನಲ್ಲಿ ಜನ ಮೆಚ್ಚಿದ ಹೊಸ ಪರಿಚಯ ಪ್ರಶಸ್ತಿಯನ್ನು ಕೂಡಾ ಪಡೆದುಕೊಂಡಿದ್ದರು.
ಲಕ್ಷ್ಮಿ ಆಲಿಯಾಸ್ ಲಡ್ಡು ಆಗಿ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ ಭೂಮಿಕಾ ರಮೇಶ್ ಅವರು ಮೊದಲಿಗೆ ಭಾಗವಹಿಸಿದ್ದು 'ದೊರೆಸಾನಿ' ಧಾರಾವಾಹಿಯ ಆಡಿಶನ್‌ನಲ್ಲಿ. ಹೌದು, 'ದೊರೆಸಾನಿ' ಧಾರಾವಾಹಿಯ ಆಡಿಶನ್‌ಗೆ ಹೋದ ಭೂಮಿಕಾ ರಮೇಶ್ ಆಗ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದರು. ತುಂಬಾ ಚಿಕ್ಕವಳಿದ್ದ ಕಾರಣವೋ ಏನೋ ಆಕೆ ಆ ಪಾತ್ರಕ್ಕೆ ಆಯ್ಕೆಯಾಗಿರಲಿಲ್ಲ. ಮುಂದೆ ಅದೇ ಧಾರಾವಾಹಿ ತಂಡ ತಮ್ಮ ಮುಂದಿನ ಧಾರಾವಾಹಿಗೆ ಭೂಮಿಕಾ ರಮೇಶ್ ಅವರನ್ನು ಕರೆಸಿತ್ತು. ಆದರೆ ಅದು ಆಡಿಶನ್‌ಗೆ ಅಲ್ಲ, ಬದಲಿಗೆ ಡೈರೆಕ್ಟ್ ಆಗಿ ಲುಕ್ ಟೆಸ್ಟ್‌ಗೆ.

ಅದರಲ್ಲಿ ಆಯ್ಕೆಯಾದ ಭೂಮಿಕಾ ರಮೇಶ್ ಸದ್ಯ ಕಿರುತೆರೆ ವೀಕ್ಷಕರ ಪಾಲಿಗೆ ಪ್ರೀತಿಯ ಲಕ್ಷ್ಮಿ. ಕಿರುತೆರೆಯ ಜೊತೆಗೆ ಬೆಳ್ಳಿತೆರೆಯಲ್ಲಿಯೂ ನಟಿಸಬೇಕು ಎಂಬುದು ಈಕೆಯ ಬಹುದಿನದ ಕನಸಾಗಿತ್ತು. ಆಕೆಯ ಕನಸು ಕೂಡಾ ಇದೀಗ ನನಸಾಗಿದೆ. ನಾಗರಾಜ್ ಎಂ. ಜಿ ಗೌಡ ನಿರ್ದೇಶನದ 'ಡಿಸೆಂಬರ್ 24' ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಸ್ಯಾಂಡಲ್‌ವುಡ್‌ಗೂ ಕಾಲಿಟ್ಟಿದ್ದಾರೆ ಭೂಮಿಕಾ ರಮೇಶ್. ಹಾರರ್ ಥ್ರಿಲ್ಲರ್ ಶೈಲಿಯ ಈ ಸಿನಿಮಾ ಮೆಡಿಕಲ್ ರಿಸರ್ಚ್‌ಗೆ ಸಂಬಂಧಪಟ್ಟದ್ದು ಹುಲಿಯೂರು ದುರ್ಗದಲ್ಲಿ ನಡೆದ ನೈಜ ಘಟನೆಯೊಂದು ಈ ಸಿನಿಮಾಕ್ಕೆ ಪ್ರೇರಣೆ.
ಇದರ ಜೊತೆಗೆ ತೆಲುಗಿನ 'ಮೇಘಸಂದೇಶಂ' ಧಾರಾವಾಹಿಯಲ್ಲಿ ನಾಯಕಿ ಭೂಮಿಯಾಗಿ ಕಾಣಿಸಿಕೊಳ್ಳುವ ಮೂಲಕ ಪರಭಾಷೆಯ ಕಿರುತೆರೆಗೆ ಕಾಲಿಟ್ಟಿರುವ ಭೂಮಿಕಾ ರಮೇಶ್ ಅಲ್ಲೂ ನಟನಾ ಛಾಪನ್ನು ಪಸರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕನ್ನಡ ಸೀರಿಯಲ್ ಜೊತೆಗೆ ತೆಲುಗು ಸೀರಿಯಲ್‌ನಲ್ಲಿ ಬಣ್ಣ ಹಚ್ಚುತ್ತಿರುವ ಭೂಮಿಕಾ ಅವರ ಕಿರುತೆರೆ ಪಯಣ ಶುರುವಾಗಿದ್ದು ರಿಯಾಲಿಟಿ ಶೋ ಮೂಲಕ.

ಅಂದ ಹಾಗೇ ಭೂಮಿಕಾ ರಮೇಶ್ ಮೊದಲ ಬಾರಿಗೆ ತೆಲುಗು ರಿಯಾಲಿಟ ಶೋವಿನಲ್ಲಿ ಕಾಣಿಸಿಕೊಂಡಾಗ ಆಕೆ ಕೇವಲ ನಾಲ್ಕನೇ ತರಗತಿಯ ವಿದ್ಯಾರ್ಥಿನಿ ಆಗಿದ್ದಳು. ಮುಂದೆ ತೆಲುಗಿನ ಮಗದೊಂದು ರಿಯಾಲಿಟಿ ಶೋ 'ಸೈ ಅಂಟೆ ಸೈ' ಶೋವಿನಲ್ಲಿ ಮಿಂಚಿದ ಈಕೆ ಕನ್ನಡ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದು ಡ್ಯಾನ್ಸಿಂಗ್ ಸ್ಟಾರ್ ರಿಯಾಲಿಟಿ ಶೋ ಮೂಲಕ.
ರಿಯಾಲಿಟಿ ಶೋ ಸ್ಪರ್ಧಿಯಾಗಿದ್ದಾಗ ಪಾಶ್ಚಾತ್ಯ ನೃತ್ಯವನ್ನು ಕಲಿತಿದ್ದ ಭೂಮಿಕಾ ರಮೇಶ್ ನಂತರವಷ್ಟೇ ಭರತನಾಟ್ಯ ನೃತ್ಯವನ್ನು ಕಲಿಯಲಾರಂಭಿಸಿದರು. ಇದೀಗ ಸೀನಿಯರ್ ಮುಗಿಸಿ ವಿದ್ವತ್ತಿನ ಹಂತವನ್ನು ಕಲಿಯುತ್ತಿರುವ ಭೂಮಿಕಾ ರಮೇಶ್ ಅವರು ತಾವು ಅಂದುಕೊಂಡಂತೆ ಬಣ್ಣದ ಬದುಕಿನಲ್ಲಿ ಬದುಕು ರೂಪಿಸಿಕೊಂಡಿದ್ದಾರೆ.


Click it and Unblock the Notifications











