ಶ್ರೇಷ್ಠಾ ಅಲಿಯಾಸ್ ಕಾವ್ಯ ಗೌಡ ನಟನಾ ಜರ್ನಿ ಶುರುವಾಗಿದ್ದು ಹೇಗೆ ಗೊತ್ತಾ?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳ ಪೈಕಿ 'ಭಾಗ್ಯಲಕ್ಷ್ಮಿ"ಯೂ ಒಂದು. ವಿಭಿನ್ನ ರೀತಿಯ ಕೌಟುಂಬಿಕ ಕಥಾಹಂದರವನ್ನು ಒಳಗೊಂಡಿರುವ "ಭಾಗ್ಯಲಕ್ಷ್ಮಿ" ಧಾರಾವಾಹಿಯು ವೀಕ್ಷಕರ ಮನ ಸೆಳೆದಿದೆ. "ಭಾಗ್ಯಲಕ್ಷ್ಮಿ" ಧಾರಾವಾಹಿಯಲ್ಲಿ ನಾಯಕ ತಾಂಡವ್ ಹಾಗೂ ನಾಯಕಿ ಭಾಗ್ಯ ಹೊರತಾಗಿ ಗಮನ ಸೆಳೆಯುವ ಮಗದೊಂದು ಪಾತ್ರವೆಂದರೆ ಅದು ಶ್ರೇಷ್ಠಾ ಪಾತ್ರ.
ತಾಂಡವ್ ನ ಪ್ರೇಯಸಿ ಶ್ರೇಷ್ಠಾ ಆಗಿ ಅಭಿನಯಿಸುವ ಮೂಲಕ ಕನ್ನಡ ಕಿರುತೆರೆಯಲ್ಲಿ ಸದ್ದು ಮಾಡುತ್ತಿರುವ ಈಕೆಯ ಹೆಸರು ಕಾವ್ಯ ಗೌಡ. ಮೊದಲ ಬಾರಿಗೆ ಖಳನಾಯಕಿಯಾಗಿ ನಟಿಸಿ ಸೈ ಎನಿಸಿಕೊಂಡಿರುವ ಕಾವ್ಯ ಗೌಡ "ಭಾಗ್ಯಲಕ್ಷ್ಮಿ" ಧಾರಾವಾಹಿ ಆರಂಭವಾದಾಗ ಶ್ರೇಷ್ಠಾ ಆಗಿ ನಟಿಸುತ್ತಿರಲಿಲ್ಲ. ಬದಲಿಗೆ ಅರ್ಧದಲ್ಲಿ ಧಾರಾವಾಹಿ ತಂಡ ಸೇರಿದ ಬೆಡಗಿ ಈಕೆ.

ಆದರೂ ತಮ್ಮ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆಯುವಲ್ಲಿ ಈಕೆ ಯಶಸ್ವಿಯಾಗಿರುವುದು ನಿಜವಾಗಿಯೂ ಖುಷಿಯ ಸಂಗತಿ. ಅಂದ ಹಾಗೇ "ಭಾಗ್ಯಲಕ್ಷ್ಮಿ" ಧಾರಾವಾಹಿ ಆರಂಭವಾದ ಸಮಯದಲ್ಲಿ ಗೌತಮಿ ಗೌಡ ಅವರು ಶ್ರೇಷ್ಠಾ ಆಗಿ ನಟಿಸುತ್ತಿದ್ದರು. ಆದರೆ ಮುಂದೆ ಕಾರಣಾಂತರಗಳಿಂದ ಗೌತಮಿ ಗೌಡ ಅವರು ಆ ಪಾತ್ರಕ್ಕೆ ವಿದಾಯ ಹೇಳಿದರು. ಆಗ ಶ್ರೇಷ್ಠಾ ಆಗಿ ಕಿರುತೆರೆಗೆ ಕಾಲಿಟ್ಟವರೇ ಕಾವ್ಯ ಗೌಡ.
ಬಿಕಾಂ ಪದವೀಧರೆಯಾಗಿರುವ ಕಾವ್ಯ ಗೌಡ ಅವರ ಕಿರುತೆರೆ ಪಯಣ ಶುರುವಾಗಿದ್ದು "ಮಿಸ್ಟರ್ ಆ್ಯಂಡ್ ಮಿಸೆಸ್ ರಂಗೇಗೌಡ" ಧಾರಾವಾಹಿಯ ಮೂಲಕ. ಆ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಕಾವ್ಯ ಗೌಡ ಬರೋಬ್ಬರಿ ನೂರು ಸಂಚಿಕೆಯಲ್ಲಿ ಕಾಣಿಸಿಕೊಂಡಿದ್ದರು. ತದ ನಂತರ ಆ ಧಾರಾವಾಹಿಯಿಂದ ಹೊರಬಂದ ಈಕೆ ಮುಂದೆ ಕಾಣಿಸಿಕೊಂಡಿದ್ದು ತೆಲುಗು ಕಿರುತೆರೆಯಲ್ಲಿ.
ಬರೋಬ್ಬರಿ ಐದಾರು ವರ್ಷಗಳ ಕಾಲ ತೆಲುಗು ಕಿರುತೆರೆ ವೀಕ್ಷಕರನ್ನು ರಂಜಿಸಿದ ಕಾವ್ಯ ಗೌಡ ಮುಂದೆ "ದೇವಯಾನಿ" ಧಾರಾವಾಹಿಯಲ್ಲಿ ನಟಿಸಿದ್ದರೂ, ಆಕೆಯನ್ನು ಜನ ಗುರುತಿಸಿದ್ದು ಮಾತ್ರ ಶ್ರೇಷ್ಠಾ ಆಗಿ ಬದಲಾದ ಬಳಿಕವೇ. ಅಂದ ಹಾಗೇ ಕಾವ್ಯ ಗೌಡ ಅವರಿಗೆ ಶ್ರೇಷ್ಠಾ ಪಾತ್ರದಲ್ಲಿ ಅಭಿನಯಿಸುವ ಅವಕಾಶ ದೊರೆತಾಗ ಖುಷಿಯಾಗಿತ್ತು.
ಜೊತೆಗೆ ಜನ ಶ್ರೇಷ್ಠಾ ಆಗಿ ತನ್ನನ್ನು ಹೇಗೆ ಸ್ವೀಕರಿಸುತ್ತಾರೆ ಎಂಬ ಆತಂಕವೂ ಆಕೆಯೂ ಕಾಡಿತ್ತು. ಏನಾದರಾಗಲಿ ಎಂಬ ಚಾಲೆಂಜ್ ನಿಂದ ಶ್ರೇಷ್ಠಾ ಪಾತ್ರವನ್ನು ಒಪ್ಪಿಕೊಂಡ ಕಾವ್ಯ ಗೌಡ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಜೊತೆಗೆ ಇವರ ನಟನೆಗೆ ನೆಗೆಟಿವ್ ಮತ್ತು ಪಾಸಿಟಿವ್ ಕಮೆಂಟ್ ಗಳು ಬರುತ್ತಿದ್ದು ಆಕೆ ಫುಲ್ ಖುಷಿಯಾಗಿದ್ದಾರೆ.
ಸದ್ಯ ಕಿರುತೆರೆಯಲ್ಲಿ ಬ್ಯುಸಿಯಾಗಿರುವ ಕಾವ್ಯ ಗೌಡ ಈಗಾಗಲೇ ಹಿರಿತೆರೆಯಲ್ಲಿಯೂ ಗುರುತಿಸಿಕೊಂಡಿದ್ದಾರೆ. "ರಿಂಗ ರಿಂಗ ರೋಸ್" ಹಾಗೂ "ಶೋಧ" ಸಿನಿಮಾದಲ್ಲಿ ಈಕೆ ಬಣ್ಣ ಹಚ್ಚಿರುವ ಕಾವ್ಯ ಗೌಡ ಮುಂದಿನ ದಿನಗಳಲ್ಲಿ ಬೇರೆ ಸಿನಿಮಾಗಳಲ್ಲಿ ನಟಿಸುತ್ತಾರಾ ಎಂಬುದು ತಿಳಿಯಬೇಕಿದೆ.


Click it and Unblock the Notifications











