ಪಿಯುಸಿ ಓದುವಾಗಲೇ ನಟನೆಯ ನಂಟು ಬೆಳೆಸಿಕೊಂಡ ಈ ನಟಿ ಯಾರು ಗೊತ್ತೇ? ಈಕೆಯ ಹಿನ್ನೆಲೆಯೇನು?
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮಿ ನಿವಾಸ' ಧಾರಾವಾಹಿಯಲ್ಲಿ ಇತ್ತೀಚೆಗಷ್ಟೇ ಹೊಸ ಪಾತ್ರದ ಆಗಮನವಾಗಿದೆ. ಹೌದು, ರಾಜಕಾರಣಿ ಮುನಿಸ್ವಾಮಿ ಮಗಳು ಪೂರ್ವಿಯ ಪಾತ್ರದಲ್ಲಿ ನಟಿಸುವ ಮೂಲಕ ಕಿರುತೆರೆಗೆ ಪ್ರಕೃತಿ ಪ್ರಸಾದ್ ಮರಳಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ನಮ್ಮನೆ ಯುವರಾಣಿ' ಧಾರಾವಾಹಿಯಲ್ಲಿ ನಾಯಕಿ ಅಹಲ್ಯಾಳ ತಂಗಿ ನಮಿತಾ ಆಗಿ ಪ್ರಕೃತಿ ಪ್ರಸಾದ್ ನಟಿಸಿದ್ದರು. ಮುಂದೆ ಕಾರಣಾಂತರಗಳಿಂದ ಆ ಪಾತ್ರದಿಂದ ಹೊರಬಂದ ಈಕೆ ನಂತರ ಕಾಣಿಸಿಕೊಂಡಿದ್ದು ಮಲಯಾಳಂ ಕಿರುತೆರೆಯಲ್ಲಿ.
ಹೌದು, ಮಲೆಯಾಳಂನ 'ಅಮ್ಮಕ್ಕಿಲಿಕ್ಕೂಡು' ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುವ ಸುವರ್ಣಾವಕಾಶ ಪಡೆದುಕೊಂಡಿರುವ ಪ್ರಕೃತಿ ಪ್ರಸಾದ್ ಪರಭಾಷೆಯ ಕಿರುತೆರೆಯಲ್ಲಿಯೂ ತನ್ನ ನಟನಾ ಕಂಪನ್ನು ಪಸರಿಸಿದ ಬೆಡಗಿ. ನಂತರ ಪೂರ್ವಿಯಾಗಿ ಕನ್ನಡ ಕಿರುತೆರೆಗೆ ಮರಳಿರುವ ಈಕೆ ಉತ್ತಮ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆಯುತ್ತಿದ್ದಾರೆ.

'ಸೌಭಾಗ್ಯವತಿ' ಧಾರಾವಾಹಿಯ ಮೂಲಕ ಕಿರುತೆರೆಗೆ ಪರಿಚಿತರಾದ ಪ್ರಕೃತಿ ಪ್ರಸಾದ್ ನಂತರ ಅಭಿನಯಿಸಿದ್ದು 'ಗಂಗಾ' ಧಾರಾವಾಹಿಯಲ್ಲಿ. ಉತ್ತರ ಕನ್ನಡ ಸೊಬಗಿನ ಭಾಷೆಯನ್ನೊಳಗೊಂಡ 'ಗಂಗಾ' ಧಾರಾವಾಹಿಯಲ್ಲಿ ನಾಯಕ ಸಾಗರ್‌ನ ಪ್ರೇಯಸಿಯಾಗಿ ಈಕೆ ಬಣ್ಣ ಹಚ್ಚಿದ್ದರು. ಹೌದು, ಧಾರಾವಾಹಿಯ ಕೊನೆಯ ಕೆಲವು ಸಂಚಿಕೆಗಳಷ್ಟೇ ಈಕೆಯ ಪಾತ್ರವಿದ್ದರೂ ಆಕೆ ಬಲು ಸೊಗಸಾಗಿ ನಟಿಸಿ ವೀಕ್ಷಕರಿಂದ ಶಹಬ್ಬಾಸ್ ಗಿರಿ ಪಡೆದುಕೊಂಡಿದ್ದರು. ಸಂಪೂರ್ಣ ನೆಗೆಟಿವ್ ಶೇಡ್ ಇರುವ ಪಾತ್ರ ಅದಾಗಿದ್ದು, ಅದರಲ್ಲಿ ಆಕೆ ಅದ್ಭುತವಾಗಿ ನಟಿಸಿದ್ದರು.
ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮನಸಾರೆ' ಧಾರಾವಾಹಿಯಲ್ಲಿಯೂ ನಾಯಕಿ ಪ್ರಾರ್ಥನಾ ತಂಗಿ ಪಾವನಿಯಾಗಿ ನಟಿಸಿ ಸೈ ಎನಿಸಿಕೊಂಡಿದ್ದ ಈಕೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಬೆಟ್ಟದ ಹೂ' ಧಾರಾವಾಹಿಯಲ್ಲಿ ನಾಯಕಿ ಮಾಲಿನಿ ಆಗಿ ಮೋಡಿ ಮಾಡಿದಾಕೆ. 'ಬೆಟ್ಟದ ಹೂ' ಧಾರಾವಾಹಿಯಲ್ಲಿ ಪಾಸಿಟಿವ್ ಹಾಗೂ ನೆಗೆಟಿವ್ ಪಾತ್ರಗಳನ್ನು ಸರಿದೂಗಿಸಿಕೊಂಡು ಸಾಗಿದ ಈಕೆ ಪಿಯುಸಿ ವಿದ್ಯಾರ್ಥಿನಿಯಾಗಿದ್ದಾಗಲೇ ನಟನೆಯ ನಂಟು ಬೆಳೆಸಿಕೊಂಡಾಕೆ.

ಸಣ್ಣ ವಯಸ್ಸಿನಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ, ಅದರಲ್ಲೂ ನಾಟಕಗಳಲ್ಲಿ ತೊಡಗಿಸಿಕೊಂಡಿದ್ದ ಈಕೆ ಮುಂದೆ ರೂಪಾ ಪ್ರಭಾಕರ್ ಅವರ ನಟನಾ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದುಕೊಂಡರು.
ನಟನೆಯ ಆಗು ಹೋಗುಗಳನ್ನು ಅರಿತುಕೊಂಡು ನಟನೆಗೆ ಕಾಲಿಟ್ಟ ಈಕೆ ನಟನೆ ಮತ್ತು ಓದನ್ನು ಬ್ಯಾಲೆನ್ಸ್ ಮಾಡಿಕೊಂಡು ಬಂದ ಗಟ್ಟಿಗಿತ್ತಿ. ಸ್ನಾತಕೋತ್ತರ ಪದವೀಧರೆಯಾಗಿರುವ ಪ್ರಕೃತಿ ಪ್ರಸಾದ್ ಅವರಿಗೆ ಉತ್ತಮ ಪಾತ್ರ ಸಿಕ್ಕರೆ ಸಿನಿಮಾದಲ್ಲಿಯೂ ಕಾಣಿಸಿಕೊಳ್ಳುವ ಹಂಬಲವಿದೆ. ಸಿಕ್ಕಿರುವ ಪಾತ್ರ ಚಿಕ್ಕದಾದರೂ ಪರವಾಗಿಲ್ಲ ಆದರೆ ನಟನೆಗೆ ಪ್ರಾಮುಖ್ಯತೆ ಇರಬೇಕು ಎಂಬುದು ಆಕೆಯ ಮಾತು.


Click it and Unblock the Notifications











