'ಅಣ್ಣಯ್ಯ' ಧಾರಾವಾಹಿಯಲ್ಲಿ ಈ ನಟಿ ಇಂಡಸ್ಟ್ರಿಯಲ್ ಇಂಜಿನಿಯರ್; ರಿಜೆಕ್ಟ್ ಆಗಿದ್ದವರು ಸೆಲೆಕ್ಟ್ ಆಗಿ ಗೆದ್ದಿದ್ದೇಗೆ?
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಯ ಪೈಕಿ 'ಅಣ್ಣಯ್ಯ'ವೂ ಒಂದು. 'ಅಣ್ಣಯ್ಯ' ಧಾರಾವಾಹಿಯಲ್ಲಿ ಜಿಮ್ ಸೀನನ ತಾಯಿ ಲೀಲಾ ಪಾತ್ರದಲ್ಲಿ ನಟಿಸುತ್ತಿರುವ ಶ್ರುತಿ ಕುಶಾಲ್ ಡಾನ್ಸ್ ವಿಡಿಯೋ ಒಂದೂ ಇತ್ತೀಚೆಗೆ ಇನ್‌ಸ್ಟಾಗ್ರಾಂನಲ್ಲಿ ಭಾರೀ ವೈರಲ್ ಆಯ್ತು. ಆ ನಂತರ ಶ್ರುತಿ ಅವರ ನಿಜ ವಯಸ್ಸಿನ ಬಗ್ಗೆ, ವೈಯಕ್ತಿಕ ಜೀವನದ ಬಗ್ಗೆ ನೆಟ್ಟಿಗರಿಗೆ, ಕಿರುತೆರೆ ಪ್ರೇಕ್ಷಕರಿಗೆ ಹಾಗೂ ಅಭಿಮಾನಿಗಳಿಗೆ ಕುತೂಹಲ ಮೂಡಿದೆ.
ಅಂದಹಾಗೆ 'ಅಣ್ಣಯ್ಯ' ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದು ಯಾವ ಚಿತ್ರಕತೆಗೂ ಕಮ್ಮಿ ಇರದಂತೆ ವಿಭಿನ್ನವಾಗಿ, ತಮಾಷೆಯ ಅಂಶಗಳನ್ನೆಲ್ಲ ಅಳವಡಿಸಿಕೊಂಡು ಇತರೆ ಧಾರಾವಾಹಿಗಳಿಗೆ ಒಳ್ಳೆಯ ಪೈಪೋಟಿ ನೀಡುತ್ತಿದೆ. ಜಿಮ್ ಸೀನನ ತಾಯಿ ಪಾತ್ರದಲ್ಲಿ ನಟಿ ಶ್ರುತಿ ಕುಶಾಲ್ ನಟಿಸುತ್ತಿದ್ದಾರೆ. ಈಕೆಯ ನಟನೆ ಬಹಳ ನೈಜವಾಗಿ ಬರುತ್ತಿದ್ದು, ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅಸಲಿಗೆ ಶ್ರುತಿ ಕುಶಾಲ್ ತಮ್ಮ ವಯಸ್ಸಿಗೂ ಮೀರಿದ ಪಾತ್ರ ಮಾಡುತ್ತಿದ್ದಾರೆ. ಇವರಿಗಿನ್ನೂ ಪುಟಾಣಿ ಮಕ್ಕಳಿದ್ದು, ನಟನೆಗೂ ಬರುವ ಮುನ್ನ ಈಕೆ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಹೌದು, ಶ್ರುತಿ ಕುಶಾಲ್ ಅವರು ನಟನಾ ಇಂಡಸ್ಟ್ರಿಗೆ ಬರುವ ಮೊದಲು ಇಂಡಸ್ಟ್ರಿಯಲ್ ಇಂಜಿನಿಯರ್ ಆಗಿ ವಿಪ್ರೋ ಟೆಕ್ನಾಲಜಿಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಮದುವೆಯ ನಂತರ ರಂಗಶಂಕರಕ್ಕೆ ಸೇರಿ ಅಭಿನಯವನ್ನು ಕಲಿತುಕೊಂಡರು.
ಅಣ್ಣಯ್ಯ ಧಾರಾವಾಹಿಗೂ ಮೊದಲು ನಟಿ ಶೃತಿ ಕುಶಾಲ್ 'ನಾಗಕನ್ನಿಕೆ', 'ಮುದ್ದು ಲಕ್ಷ್ಮಿ', 'ಯುಗಾಂತರ', 'ಪುಣ್ಯವತಿ' ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ತಮ್ಮ ನಟನಾ ಜರ್ನಿ ಬಗ್ಗೆ ಮಾತನಾಡಿರುವ ನಟಿ ಶ್ರುತಿ ಕುಶಾಲ್ ರಂಗಶಂಕರದಲ್ಲಿ ಅಭಿನಯ ಕಲಿತ ನಂತರ ಕೆಲವು ಸೀರಿಯಲ್‌ಗಳಿಂದ ಆಫರ್ ಬಂದವು. ಎರಡು ಮೂರು ಬಾರಿ ಲುಕ್ ಟೆಸ್ಟ್ ಎಂದು ಕರೆದು ಕೊನೆಗೆ ರಿಜೆಕ್ಟ್ ಮಾಡಿದರು.

'ಅಣ್ಣಯ್ಯ' ಧಾರಾವಾಹಿಗೆ ಕರೆದ ನಂತರ ಆ ಪಾತ್ರಕ್ಕೆ ನನ್ನ ವಯಸ್ಸು ಬಹಳ ಚಿಕ್ಕದಾಯಿತು ಎಂದು ರಿಜೆಕ್ಟ್ ಮಾಡಿದ್ದರು. ಮೂರು ನಾಲ್ಕು ತಿಂಗಳ ನಂತರ ಮತ್ತೆ ಲುಕ್ ಟೆಸ್ಟ್ ಮಾಡಿ ಧಾರಾವಾಹಿಗೆ ಸೇರಿಸಿಕೊಂಡರು. ಈ ಪಾತ್ರ ನನ್ನ ವಯಸ್ಸಿಗೆ ಮೀರಿದ್ದಾದರೂ ನನಗೆ ಬಹಳ ನೆಚ್ಚಿನ ಪಾತ್ರಗಳಲ್ಲೊಂದು ಎಂದು ಹೇಳಿಕೊಂಡಿದ್ದಾರೆ.
ಇದರ ಜೊತೆಗೆ ಮೊದಮೊದಲು ರಂಗಭೂಮಿ ಅಭಿನಯಕ್ಕೂ ಧಾರಾವಾಹಿ ಸೆಟ್ ಅಭಿನಯಕ್ಕೂ ಬಹಳ ವ್ಯತ್ಯಾಸ ಇರುವುದರಿಂದ ನನಗೆ ನಟಿಸಲು ಕಷ್ಟವಾಯಿತು ಕ್ರಮೇಣ ಎಲ್ಲವನ್ನು ಕಲಿತುಕೊಂಡೆ ಎಂದಿದ್ದಾರೆ.
ಕೆಲಸ, ಆಫರ್‌ಗಳು ಬಂದರೆ ಒಂದರ ಹಿಂದೆ ಒಂದು ಬರುತ್ತಲೇ ಇರುತ್ತವೆ. ಇಲ್ಲವಾದರೆ ಯಾವ ಕೆಲಸವೂ ಇಲ್ಲದೆ ಕಾಲಿ ಕೈಯಲ್ಲಿ ಕಾಲ ಕಳೆಯುವಂತಾಗುತ್ತದೆ. ಈ ಫೀಲ್ಡ್‌ನಲ್ಲಿ ಈ ರೀತಿಯಾಗುವುದು ಸಾಮಾನ್ಯ. ನಾವು ಧೃತಿಗೆಡದೆ ಕಾಯಬೇಕು. ನಮಗೆ ಸಿಗಬೇಕಾದ ಪಾತ್ರಗಳು, ಅವಕಾಶಗಳು ಕೊನೆಗೆ ಸಿಕ್ಕೇ ಸಿಗುತ್ತವೆ ಎಂಬ ಆತ್ಮವಿಶ್ವಾಸ ನಂಬಿಕೆ ಇರಬೇಕು ಎಂದು ನಟಿ ಶೃತಿ ಕುಶಾಲ್ ಹೇಳಿದ್ದಾರೆ.
'ಅಣ್ಣಯ್ಯ' ಧಾರಾವಾಹಿಯ ಹೊರತಾಗಿ ಭಾರ್ಗವಿ ಎಲ್.ಎಲ್.ಬಿ ಧಾರಾವಾಹಿಯಲ್ಲಿಯೂ ಈಕೆ ನಟಿಸುತ್ತಿದ್ದಾರೆ. ಹೌದು, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಭಾರ್ಗವಿ ಎಲ್.ಎಲ್.ಬಿ' ಧಾರಾವಾಹಿಯಲ್ಲಿ ನಿರ್ಮಲಾ ಪಾಟೀಲ್ ತಂಗಿಯಾಗಿ ಶ್ರುತಿ ಕುಶಾಲ್ ಅಭಿನಯಿಸುತ್ತಿದ್ದಾರೆ. ಮಾತ್ರವಲ್ಲ 'ಅಣ್ಣಯ್ಯ' ಧಾರಾವಾಹಿಯಲ್ಲಿ ಈಕೆಯನ್ನು ಕಂಡಿದ್ದ ವೀಕ್ಷಕರು 'ಭಾರ್ಗವಿ ಎಲ್.ಎಲ್.ಬಿ' ಧಾರಾವಾಹಿಯಲ್ಲಿ ಈಕೆಯ ಸ್ಟೈಲ್ ಕಂಡು ಫಿದಾ ಆಗಿದ್ದಾರೆ. ಇವರೇನಾ ಜಿಮ್ ಸೀನನ ತಾಯಿಯಾಗಿ ನಟಿಸುತ್ತಿದ್ದವರು ಎಂದು ಫಿದಾ ಆಗಿದ್ದಾರೆ. ಎರಡು ವಿಭಿನ್ನ ಶೇಡ್ ಇರುವ ಪಾತ್ರಗಳಲ್ಲಿ ಈ ನಟಿಯನ್ನು ನೋಡಿದ ವೀಕ್ಷಕರು ಥ್ರಿಲ್ ಆಗಿದ್ದಾರೆ.


Click it and Unblock the Notifications











