'ಯಾರೇ ನೀ ಮೋಹಿನಿ'ಯ ನಟಿ ಸುಷ್ಮಾ ಶೇಖರ್ ಮೊದಲ ಧಾರಾವಾಹಿ ಯಾವುದು ಗೊತ್ತೇ?
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಧಾರಾವಾಹಿಗಳ ಪೈಕಿ 'ಯಾರೇ ನೀ ಮೋಹಿನಿ' ಯೂ ಒಂದು. ಸೂಪರ್ ನ್ಯಾಚುರಲ್ ಧಾರಾವಾಹಿ 'ಯಾರೇ ನೀ ಮೋಹಿನಿ'ಯಲ್ಲಿ ನಾಯಕಿ ಬೆಳ್ಳಿಯಾಗಿ ನಟಿಸಿ ಕಿರುತೆರೆ ವೀಕ್ಷಕರ ಮನ ಸೆಳೆದ ಚೆಂದುಳ್ಳಿ ಚೆಲುವೆಯ ಹೆಸರು ಸುಷ್ಮಾ ಶೇಖರ್. ಐದಾರು ವರ್ಷಗಳ ಕಾಲ ಬೆಳ್ಳಿಯ ಪಾತ್ರದ ಮೂಲಕ ಕಿರುತೆರೆಯಲ್ಲಿ ಜನಪ್ರಿಯತೆಯನ್ನು ಗಿಟ್ಟಿಸಿಕೊಂಡಿರುವ ಈಕೆ ಇತ್ತೀಚೆಗಷ್ಟೇ ಮುಕ್ತಾಯಗೊಂಡಿರುವ 'ಜನನಿ' ಧಾರಾವಾಹಿಯಲ್ಲಿಯೂ ಬಣ್ಣ ಹಚ್ಚಿದ್ದಾರೆ.
ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ, ಇತ್ತೀಚೆಗೆ ಮುಕ್ತಾಯಗೊಂಡಿರುವ 'ಜನನಿ' ಧಾರಾವಾಹಿಯಲ್ಲಿ ಭುವನೇಶ್ವರಿ ಪಾತ್ರದಲ್ಲಿ ಸುಷ್ಮಾ ನಟಿಸಿದ್ದರು. 'ಯಾರೇ ನೀ ಮೋಹಿನಿ' ಧಾರಾವಾಹಿಯ ನಂತರ ಕಿರುತೆರೆಯಿಂದ ದೂರವಿದ್ದ ಸುಷ್ಮಾ ಶೇಖರ್ ಮತ್ತೆ ಕಿರುತೆರೆಗೆ ಮರಳಿದ್ದು 'ನೇಹಾ'ಳಾಗಿ.

ಉತ್ತರ ಕರ್ನಾಟಕದ ಸೊಬಗಿನ ಭಾಷೆಯ 'ಗಿಣಿರಾಮ' ಧಾರಾವಾಹಿಯಲ್ಲಿ ನಾಯಕ ಶಿವರಾಮನ ಪ್ರೇಯಸಿ ನೇಹಾಳಾಗಿ ನಟಿಸಿದ್ದರು ಸುಷ್ಮಾ. ನೇಹಾ ಪಾತ್ರದ ಮೂಲಕ ಸೀರಿಯಲ್ ಪ್ರಿಯರ ಮನ ಸೆಳೆದಿರುವ ಸುಷ್ಮಾ ಮೊದಲಿಗೆ ಖಳನಾಯಕಿಯಾಗಿ ತೆರೆಯ ಮೇಲೆ ಕಾಣಿಸಿಕೊಂಡಿದ್ದು ನಂತರದ ದಿನಗಳಲ್ಲಿ ಅದು ಪಾಸಿಟಿವ್ ಪಾತ್ರವಾಗಿ ಬದಲಾಗಿತ್ತು.
'ಜನನಿ' ಧಾರಾವಾಹಿಯ ನಂತರ ಕಿರುತೆರೆಯಲ್ಲಿ ಅಷ್ಟಾಗಿ ಕಾಣಿಸಿಕೊಂಡಿರದ ಸುಷ್ಮಾ ಶೇಖರ್ ಸೋಶಿಯಲ್ ಮೀಡಿಯಾದಲ್ಲಂತೂ ಸಖತ್ ಆ್ಯಕ್ಟಿವ್ ಎಂದರೆ ತಪ್ಪಾಗಲಾರದು. ಈಗಾಗಲೇ 119k ಫಾಲೋವರ್ಸ್ ಅನ್ನು ಹೊಂದಿರುವ ಸುಷ್ಮಾ ಶೇಖರ್ ಸಮಯ ಸಿಕ್ಕಾಗಲೆಲ್ಲಾ ರೀಲ್ಸ್ ಮಾಡುತ್ತಾ ನೆಟ್ಟಿಗರನ್ನು ಎಂಗೇಜ್ ಮಾಡುತ್ತಿರುತ್ತಾರೆ.
ಅಂದ ಹಾಗೇ 'ವೆಂಕಟೇಶ್ವರ ಮಹಿಮೆ' ಧಾರಾವಾಹಿಯ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದರು ನಟಿ ಸುಷ್ಮಾ ಶೇಖರ್. ನಂತರ 'ಕುಸುಮಾಂಜಲಿ' ಧಾರಾವಾಹಿಯಲ್ಲಿ ಬಣ್ಣ ಹಚ್ಚಿದ್ದ ಈಕೆ ನಂತರ ಬದಲಾದುದು 'ಲಕುಮಿ' ಯಾಗಿ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಲಕುಮಿ' ಧಾರಾವಾಹಿಯಲ್ಲಿ ನಾಯಕಿ ಲಕುಮಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಸುಷ್ಮಾ ಶೇಖರ್ ಆ ಪಾತ್ರದ ಮೂಲಕ ಜನಪ್ರಿಯತೆಯನ್ನು ಗಿಟ್ಟಿಸಿಕೊಂಡಿದ್ದರು.
ನಂತರ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕನಕ' ಧಾರಾವಾಹಿಯಲ್ಲಿ ನಾಯಕಿ ಕನಕ ಪಾತ್ರದಲ್ಲಿ ಅಭಿನಯಿಸಿದ್ದ ಸುಷ್ಮಾ ಶೇಖರ್ ಅಲ್ಲೂ ಸೀರಿಯಲ್ ಪ್ರಿಯರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. 'ಕನಕ' ಧಾರಾವಾಹಿಯ ನಂತರ ಕಿರುತೆರೆಯಿಂದ ದೂರವಿದ್ದ ಸುಷ್ಮಾ ಶೇಖರ್ ಓದಿನ ಸಲುವಾಗಿ ನಟನೆಯಿಂದ ದೂರ ಉಳಿದಿದ್ದರು.
ಮುಂದೆ ಬಿಬಿಎ ಪದವಿ ಪಡೆದಿರುವ ಸುಷ್ಮಾ ಶೇಖರ್ 'ಯಾರೇ ನೀ ಮೋಹಿನಿ' ಧಾರಾವಾಹಿಯ ಬೆಳ್ಳಿಯಾಗಿ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದು ತಮ್ಮ ನಟನೆಯ ಮೂಲಕ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದಾರೆ. ಸದ್ಯ ಕಿರುತೆರೆಯಲ್ಲಿ ಕಾಣಿಸಿಕೊಂಡಿರದ ಈಕೆ ಮತ್ತೊಮ್ಮೆ ಕಿರುತೆರೆಯಲ್ಲಿ ನಟಿಸುತ್ತಾರಾ ಎಂಬುದು ಇನ್ನೂ ಕುತೂಹಲ.


Click it and Unblock the Notifications











