ಈ ಕಿರುತೆರೆ ನಟಿ ಜರ್ಮನಿಯಲ್ಲಿ ಇಂಗ್ಲಿಷ್ ಪ್ರೋಫೆಸರ್ ಆಗಿದ್ದರು ಅನ್ನೋದು ವಿಷಯ ಗೊತ್ತೇ?
ಚಿತ್ಕಲಾ ಬಿರಾದಾರ್.. ಅಮ್ಮಮ್ಮನಾಗಿ ಕಿರುತೆರೆಯಲ್ಲಿ ಫೇಮಸ್ ಆಗಿರುವ ಚಿತ್ಕಲಾ ಬಿರಾದಾರ್ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ? ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ 'ಕನ್ನಡತಿ' ಧಾರಾವಾಹಿಯಲ್ಲಿ ನಾಯಕನ ಹರ್ಷನ ತಾಯಿ ರತ್ನಮಾಲಾ ಆಲಿಯಾಸ್ ಅಮ್ಮಮ್ಮನಾಗಿ ಅಭಿನಯಿಸಿ ಕಿರುತೆರೆ ಪ್ರಿಯರ ಮನ ಸೆಳೆದಿರುವ ಚಿತ್ಕಲಾ ಬಿರಾದಾರ್ ಭಾಗ್ಯಾಳಾಗಿ ನಿಮ್ಮ ಮುಂದೆ ಬರಲಿದ್ದಾರೆ.
ಹೌದು, 'ಅಮೃತಧಾರೆ' ಧಾರಾವಾಹಿಯಲ್ಲಿ ಎರಡು ಹೊಸ ಪಾತ್ರಗಳ ಎಂಟ್ರಿಯಾಗಿದೆ. ಸುಧಾ ಮತ್ತು ಭಾಗ್ಯಾ ಎನ್ನುವ ಎರಡು ಪಾತ್ರಗಳ ಎಂಟ್ರಿಯಾಗಿದ್ದು, ಅದು ನಾಯಕ ಗೌತಮ್ ದಿವಾನ್ ಅವರ ಅಮ್ಮ ಮತ್ತು ತಂಗಿ ಆಗಿರಬೇಕು ಎಂಬ ಮಾತುಗಳು ಕೇಳಿ ಬರುತ್ತಿದೆ. ಆದರೆ, ಅದು ಇನ್ನು ಕೂಡಾ ಖಚಿತವಾಗಿಲ್ಲ. ಅಂದ ಹಾಗೇ ಭಾಗ್ಯಾಳಾಗಿ ಅಭಿನಯಿಸುವ ಮೂಲಕ ಕಿರುತೆರೆ ವೀಕ್ಷಕರನ್ನು ರಂಜಿಸಲಿದ್ದಾರೆ ಚಿತ್ಕಲಾ ಬಿರಾದಾರ್.

'ಅಮೃತಧಾರೆ' ಧಾರಾವಾಹಿಯಲ್ಲಿ ತಮ್ಮ ಎಂಟ್ರಿಯಾಗುವ ಪ್ರೋಮೋವೊಂದನ್ನು ಚಿತ್ಕಲಾ ಬಿರಾದಾರ್ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು "ಮತ್ತೊಂದು ಪಾತ್ರ, ಹೊಸದೊಂದು ಪ್ರಯಾಣ.. ಯಾವಾಗ ಮತ್ತೆ ನಿಮ್ಮನ್ನು ನೋಡೋದು ಮೇಡಂ ಅನ್ನುವ ನಿಮ್ಮೆಲ್ಲರ ಪ್ರಶ್ನೆಗೆ ಇದೇ ಉತ್ತರ. ನೋಡಿ, ಹರಸಿ, ಹಾರೈಸಿ" ಎಂದು ಬರೆದುಕೊಂಡಿದ್ದಾರೆ.
ಅಂದ ಹಾಗೇ ಚಿತ್ಕಲಾ ಬಿರಾದಾರ್ ಅವರು ಈ ಹಿಂದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಬೃಂದಾವನ' ಧಾರಾವಾಹಿಯಲ್ಲಿ ನಾಯಕನ ಅಜ್ಜಿ ಸುಧಾಮೂರ್ತಿ ಆಗಿ ಅಭಿನಯಿಸಿದ್ದರು. ರತ್ನಮಾಲಾ ಪಾತ್ರದ ನಂತರ ಸುಧಾಮೂರ್ತಿಯಾಗಿಯೂ ಕಿರುತೆರೆ ವೀಕ್ಷಕರ ಮನ ಸೆಳೆದಿರುವ ಇವರು ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಜರ್ಮನಿಯಲ್ಲಿ ಇಂಗ್ಲಿಷ್ ಪ್ರಾಧ್ಯಾಪಕಿಯಾಗಿ ಕೆಲಸ ಮಾಡುತ್ತಿದ್ದ ಚಿತ್ಕಲಾ ಬಿರಾದಾರ್ 'ಬಂದೇ ಬರುತಾವ ಕಾಲ' ಧಾರಾವಾಹಿಯ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. 'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ನಾಯಕಿ ಸನ್ನಿಧಿ ಅಮ್ಮ ಸುಮತಿಯಾಗಿ ಬಣ್ಣ ಹಚ್ಚಿರುವ ಈಕೆ ತದ ನಂತರ ಬದಲಾದುದು ಪುಷ್ಪವಲ್ಲಿಯಾಗಿ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಅವನು ಮತ್ತು ಶ್ರಾವಣಿ' ಧಾರಾವಾಹಿಯಲ್ಲಿ ನಾಯಕಿ ಅಮ್ಮ ಪುಷ್ಪವಲ್ಲಿಯಾಗಿ ಕಾಣಿಸಿಕೊಂಡ ಚಿತ್ಕಲಾ ಅವರಿಗೆ ಆ ಪಾತ್ರ ಸಾಕಷ್ಟು ಜನಪ್ರಿಯತೆಯನ್ನು ನೀಡಿತ್ತು.
ತದ ನಂತರ 'ಆರತಿಗೊಬ್ಬ ಕೀರ್ತಿಗೊಬ್ಬ', 'ಮನಸಾರೆ' ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಈಕೆ ಸಿನಿಮಾದಲ್ಲಿಯೂ ಮಿಂಚಿರುವ ಪ್ರತಿಭೆ. 'ಧರ್ಮದೇವತೆ' ಸಿನಿಮಾದಲ್ಲಿ ಅಭಿನಯಿಸಿದ್ದ ಇವರು ಮುಂದೆ ಬರೋಬ್ಬರಿ ಒಂಭತ್ತು ವರ್ಷಗಳ ಕಾಲ ಬೆಳ್ಳಿತೆರೆಯಿಂದ ಬ್ರೇಕ್ ಪಡೆದುಕೊಂಡರು. 'ಮದುವೆ ಮನೆ' ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಕಂ ಬ್ಯಾಕ್ ಆದ ಇವರು ಏನೆಂದು ಹೆಸರಿಡಲಿ', 'ಹಗಲು ಕನಸು', 'ಬಜಾರ್', 'ಯುವರತ್ನ', 'ಸ್ಟೀಲ್ ಪಾತ್ರೆ ಸಾಮಾನು', 'ನಿನ್ನ ಸನಿಹಕೆ', 'ಪ್ರೇಮಂ ಪೂಜ್ಯಂ', 'ವಿಕ್ರಾಂತ್ ರೋಣ', 'ರಾಘವೇಂದ್ರ ಸ್ಟೋರ್ಸ್' ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದ್ದಾರೆ.


Click it and Unblock the Notifications











