'ಕೆಜಿಎಫ್' ತಾಯಿ ಅರ್ಚನಾ ಜೋಯಿಸ್ ನಟಿಸಿದ ಮೊದಲ ಧಾರಾವಾಹಿ ಯಾವುದು ಗೊತ್ತೇ?
ಕಿರುತೆರೆ ನಟಿ ಅರ್ಚನಾ ಜೋಯಿಸ್ ಬಗ್ಗೆ ನಿಮಗೆ ಗೊತ್ತಾ ಎಂದು ಕೇಳುವ ಬದಲು, 'ಕೆಜಿಎಫ್' ಸಿನಿಮಾದ ಶಾಂತಮ್ಮ ಗೊತ್ತಾ ಎಂದು ಕೇಳಿದರೆ ಬಹುಬೇಗನೇ ಅವರ ಪರಿಚಯ ತಿಳಿಯಬಹುದು. ಹೌದು, 'ಕೆಜಿಎಫ್' ಸಿನಿಮಾದಲ್ಲಿ ರಾಕಿ ಭಾಯಿಯ ತಾಯಿ ಪಾತ್ರದಲ್ಲಿ ಬಹಳ ಭಾವನಾತ್ಮಕವಾಗಿ ನಟಿಸಿ ತಮ್ಮ ನಟನೆಗೆ ಇಡೀ ಸಿನಿಮಾ ಜಗತ್ತೇ ಜೈ ಎನ್ನುವಷ್ಟು ಪಾಪ್ಯುಲಾರಿಟಿ ಪಡೆದಿರುವ ನಟಿ ಅರ್ಚನಾ ಜೋಯಿಸ್.
'ಕೆಜಿಎಫ್ ಚಾಪ್ಟರ್ 1' ಹಾಗೂ 'ಕೆಜಿಎಫ್ ಚಾಪ್ಟರ್ 2' ಎರೆಡರಲ್ಲೂ ರಾಕಿ ಭಾಯಿಯ ನೆನಪುಗಳಲ್ಲಿ ಅಮರಳಾಗಿರುವ ಆ ತಾಯಿ ಪಾತ್ರಕ್ಕೆ ಬಹುದೊಡ್ಡ ಪ್ರೇಕ್ಷಕರ ವೃಂದ ತಲೆದೂಗಿಸಿತ್ತು. ಅಂದ ಹಾಗೆ ಜಗತ್ ವಿಖ್ಯಾತಿ ಪಡೆದ ಈ ಸಿನಿಮಾದಲ್ಲಿ ಅಂಥದೊಂದು ಅವಿಸ್ಮರಣೀಯ ಪಾತ್ರಕ್ಕೆ ಜೀವ ತುಂಬಿದ ನಟಿ ಅರ್ಚನಾ ಮೊದಲಿಗೆ ಕಾಣಿಸಿಕೊಂಡಿದ್ದು ಧಾರಾವಾಹಿ ನಟಿಯಾಗಿ.

ಹೌದು, ನಟಿ ನಿರ್ದೇಶಕಿ ಹಾಗೂ ನಿರ್ಮಾಪಕಿ ಶೃತಿ ನಾಯ್ಡು ಅವರ ಧಾರಾವಾಹಿಯಾದ 'ಮಹಾದೇವಿ'ಯಲ್ಲಿ ತ್ರಿಪುರಸುಂದರಿ ಪಾತ್ರದ ಮೂಲಕ ಅರ್ಚನಾ ಕಿರುತೆರೆ ಪ್ರೇಕ್ಷಕರ ಮನ ಗೆದ್ದಿದ್ದರು. ದೇವಿಯೊಂದಿಗೆ ಮುನಿಸಿಕೊಂಡು, ಆ ದೇವರನ್ನೇ ಪ್ರಶ್ನೆ ಮಾಡುವ ವಿಭಿನ್ನ ಪಾತ್ರ ಅದಾಗಿತ್ತು. ಅಸಲಿಗೆ ಈ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡರೂ ನಟಿ ಅರ್ಚನಾ ಬರೀ ನೂರು ಎಪಿಸೋಡ್‌ಗಳನ್ನು ಪೂರೈಸಿ ಧಾರಾವಾಹಿಯಿಂದ ಹೊರ ನಡೆದ್ದಿದ್ದರು. ಕೇವಲ 100 ಎಪಿಸೋಡ್‌ಗಳಲ್ಲಿ ಕಿರುತೆರೆ ಪ್ರೇಕ್ಷಕರ ಮನ ಗೆದ್ದಿದ್ದಂತೂ ಸುಳ್ಳಲ್ಲ.
'ಕೆಜಿಎಫ್' ಸಿನಿಮಾದಿಂದ ಪಡೆದ ಪಾಪ್ಯುಲರಿಟಿಯಿಂದ ಈಕೆ ಇನ್ನಷ್ಟು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಂದ ಹಾಗೆ ನಟನೆಯ ಬಗ್ಗೆ ಕಿಂಚಿತ್ತು ತಿಳುವಳಿಕೆ ಇಲ್ಲದ ನಟಿ ಅರ್ಚನಾ ಜೋಯಿಸ್ ಅವರು ತಮ್ಮ ನಟನ ಸಾಮರ್ಥ್ಯದ ಕ್ರೆಡಿಟ್ ಎಲ್ಲವನ್ನು ಶ್ರುತಿ ನಾಯ್ಡು ಹಾಗೂ ಇಂದಿರಾ ರಮೇಶ್ ಅವರಿಗೆ ಕೊಡುತ್ತಾರೆ.
ಅವರೇ ಹಲವಾರು ಸಂದರ್ಶನಗಳಲ್ಲಿ ಹೇಳಿಕೊಂಡಂತೆ ಸ್ನೇಹಿತರ ಒತ್ತಾಯಕ್ಕೆ ಆಡಿಶನ್ ನೀಡಿದ್ದ ಇವರು 'ಮಹಾದೇವಿ' ಧಾರಾವಾಹಿಗೆ ಸೆಲೆಕ್ಟ್ ಆಗಿಬಿಟ್ಟರಂತೆ. ನಟನೆಯ ಎಬಿಸಿಡಿಯಿಂದ ಹಿಡಿದು ಎಲ್ಲವನ್ನೂ ನಟಿ ನಿರ್ದೇಶಕಿ ಶ್ರುತಿ ನಾಯ್ಡು ಹಾಗೂ ಇಂದಿರಾ ರಮೇಶ್ ಅವರೇ ಕಲಿಸಿದ್ದಂತೆ. ಅಸಲಿಗೆ ಆಕೆಗೆ ನಟನೆಗಿಂತಲೂ ನೃತ್ಯದಲ್ಲಿ ಹೆಚ್ಚಿನ ಆಸಕ್ತಿ ಇತ್ತಂತೆ. ಮಾಯಾ ರಾವ್ ಇನ್ಸ್ಟಿಟ್ಯೂಟ್ ಆಫ್ ಕಥಕ್ ಅಂಡ್ ಕೊರಿಯೋಗ್ರಫಿಯಲ್ಲಿ ಪದವಿ ಪಡೆದಿರುವ ನಟಿ ಅರ್ಚನಾ ಜೋಯಿಸ್ ಈಗಂತೂ ಚಂದನವನದಲ್ಲಿ ಸಾಲು ಸಾಲು ಸಿನಿಮಾಗಳಲ್ಲೇ ಬಿಜಿಯಾಗಿದ್ದಾರೆ.

ದೃಷ್ಟಿ ಆರ್ಟ್ ಸೆಂಟರ್ ಹಾಗೂ ತಂಡದ ಮೂಲಕ ಇದುವರೆಗೂ 300ಕ್ಕೂ ಹೆಚ್ಚು ನೃತ್ಯ ಕಾರ್ಯಕ್ರಮಗಳನ್ನು ಹಾಗೂ ಪ್ರದರ್ಶನಗಳನ್ನು ನೀಡಿರುವ ಹೆಗ್ಗಳಿಕೆ ಅರ್ಚನಾ ಜೋಯಿಸ್ ಅವರದ್ದು. ಇದರ ಜೊತೆಗೆ ಶ್ರೇಯಸ್ ಉಡುಪ ಎಂಬುವವರನ್ನು ವರಿಸಿರುವ ನಟಿ ಅರ್ಚನಾ ಜೋಯಿಸ್ ಅವರು ನಟನೆ ಹಾಗೂ ವೈವಾಹಿಕ ಬದುಕನ್ನು ಬ್ಯಾಲೆನ್ಸ್ ಮಾಡುತ್ತಾ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಯೋಜನೆಯಲ್ಲಿದ್ದಾರಂತೆ.
'ಕಲಾಂತಕ', 'ಮುಂದೆ ಒಂದು ದಿನ', 'ನಕ್ಷೆ', 'ವಿಜಯ ರಥ', 'ಮ್ಯೂಟ್', 'ಹೊಂದಿಸಿ ಬರೆಯಿರಿ', ಜೊತೆಗೆ ನಟ ಶಿವರಾಜ್ ಕುಮಾರ್ ಅವರ ಅಭಿನಯದ 'ಘೋಸ್ಟ್' ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ನಟಿಸಿ ಚಂದನವನದ ಪ್ರಮುಖ ನಟಿಯರಲ್ಲಿ ಒಬ್ಬರಾಗಿ ಗುರುತಿಸಿಕೊಳ್ಳುತ್ತಿದ್ದಾರೆ ನಟಿ ಅರ್ಚನಾ ಜೋಯಿಸ್. ಇವರ ಮುಂದಿನ ಪ್ರಾಜೆಕ್ಟ್‌ಗಳೇನು ಎಂಬ ಕುತೂಹಲ ಇವರ ಅಭಿಮಾನಿ ಹಾಗೂ ಪ್ರೇಕ್ಷಕರೆಲ್ಲರಲ್ಲಿಯೂ ಮೂಡಿದೆ.


Click it and Unblock the Notifications











