ಕಮಲ್ ಹಾಸನ್ ಸಿನಿಮಾದಲ್ಲಿ 'ಲಕ್ಷ್ಮಿ ನಿವಾಸ'ದ ನಟ ಅಜಯ್ ರಾಜ್ ನಟನೆ: ಅದ್ಯಾವುದು ಗೊತ್ತೇ?
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳ ಪೈಕಿ 'ಲಕ್ಷ್ಮಿ ನಿವಾಸ'ವೂ ಒಂದು. ಕೌಟುಂಬಿಕ ಕಥಾಹಂದರವನ್ನೊಳಗೊಂಡಿರುವ 'ಲಕ್ಷ್ಮಿನಿವಾಸ' ಧಾರಾವಾಹಿಯ ಕಥೆಯ ಜೊತೆಗೆ ಪಾತ್ರ ವರ್ಗದ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆಯುತ್ತಿದೆ. 'ಲಕ್ಷ್ಮಿನಿವಾಸ' ಧಾರಾವಾಹಿಯಲ್ಲಿ ಲಕ್ಷ್ಮಿ ಹಾಗೂ ಶ್ರೀನಿವಾಸರ ಮಗ ಹರೀಶನಾಗಿ ನಟಿಸುತ್ತಿರುವ ನಟ ಅಜಯ್ ರಾಜ್.
ತಮ್ಮ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದಿರುವ ಅಜಯ್ ರಾಜ್ ಈ ಹಿಂದೆ ಸುಂದರನಾಗಿ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದರು. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸತ್ಯಂ ಶಿವಂ ಸುಂದರಂ' ಧಾರಾವಾಹಿಯಲ್ಲಿ ಸುಂದರನಾಗಿ ಅಜಯ್ ರಾಜ್ ನಟಿಸಿದ್ದರು.

ಟಿ. ಎನ್ ಸೀತಾರಾಮ್ ನಿರ್ದೇಶನದ 'ಮುಕ್ತ' ಧಾರಾವಾಹಿಯ ನಂಜುಂಡ ಪಾತ್ರದಲ್ಲಿ ಅಭಿನಯಿಸಿದ ಇವರು ಕಿರುತೆರೆಯಲ್ಲಿ ಜನಪ್ರಿಯತೆ ಗಿಟ್ಟಿಸಿಕೊಂಡಿದ್ದರು ಎಂದರೇ ಅವರ ನಿಜವಾದ ಹೆಸರು ನಂಜುಂಡ ಎಂದೇ ಅನೇಕರು ಅಂದುಕೊಂಡಿದ್ದರು. ಸದ್ಯ ಹರೀಶ ಪಾತ್ರದ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆಯುತ್ತಿರುವ ಅಜಯ್ ರಾಜ್ 'ಮುಕ್ತ' ಧಾರಾವಾಹಿಯ ನಂಜುಂಡ ಪಾತ್ರದ ನಂತರ ಸುಮಾರು ಐದು ವರುಷಗಳ ಸುದೀರ್ಘ ಬ್ರೇಕ್ ತೆಗೆದುಕೊಂಡಿದ್ದರು.
ತಮಿಳಿನ ಕೆಲವೊಂದು ಸಿನಿಮಾಗಳಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿರುವ ಅಜಯ್ ರಾಜ್ ಕಮಲ್ ಹಾಸನ್ ನಟನೆಯ 'ಉತ್ತಮ ವಿಲನ್' ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಮಾತ್ರವಲ್ಲದೇ ವೆಟ್ರಿಮಾರನ್ ಅವರ ಚಿತ್ರದಲ್ಲಿ ಸೆಕೆಂಡ್ ಹೀರೋ ಆಗಿಯೂ ಅಜಯ್ ರಾಜ್ ನಟಿಸಿದ್ದಾರೆ. ಹಿಂದಿ ಮತ್ತು ತಮಿಳು ಭಾಷೆಗಳ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಅಜಯ್ ರಾಜ್ ರಂಗಭೂಮಿಯಲ್ಲೂ ಸಕ್ರಿಯವಾಗಿದ್ದವರು.
ಕೇವಲ ಕನ್ನಡ ನಾಟಕ ಮಾತ್ರವಲ್ಲದೇ ತಮಿಳು, ಹಿಂದಿ ಭಾಷೆಯ ನಾಟಕಗಳಲ್ಲೂ ಬಣ್ಣ ಹಚ್ಚಿರುವ ಅಜಯ್ ರಾಜ್, ಭಾರ್ಗವಿ ನಾರಾಯಣ್ ಅವರ ನಾಟಕ ತಂಡದಲ್ಲೂ ಗುರುತಿಸಿಕೊಂಡವರು. ಇದರ ಜೊತೆಗೆ ಶಕುನಿ ಎಂಬ ಏಕಪಾತ್ರಭಿನಯದಲ್ಲಿ ಅಭಿನಯಿಸಿರುವ ಅಜಯ್ ರಾಜ್ ಅವರಿಗೆ ನಟನೆ ಎಂಬುದು ರಕ್ತಗತವಾಗಿ ಬಂದಿದೆ ಎಂದರೆ ತಪ್ಪಾಗಲಾರದು. ಏಕೆಂದರೆ ಅಜಯ್ ರಾಜ್ ಅವರ ಅಜ್ಜ ಅಜ್ಜಿಯ ಕಾಲದಿಂದಲೂ ರಂಗಭೂಮಿಯ ನಂಟನ್ನು ಹೊಂದಿದ್ದರು.

ಮಿತ್ರ ಸಂಘ ಕಲಾವಿದರು ಎಂಬ ತಂಡದ ಮೂಲಕ ಮನೆ ಮುಂದೆ ಇರುವ ದೊಡ್ಡ ಜಾಗದಲ್ಲಿ ನಾಟಕಗಳನ್ನು ಮಾಡಿಸುತ್ತಿದ್ದರು. ಇನ್ನು ಧಾರಾವಾಹಿಯ ವಿಚಾರ ಬಂದರೆ 'ಮನ್ವಂತರ', 'ಮುಕ್ತ' ಸೇರಿದಂತೆ ಸುಮಾರು ಹದಿನೆಂಟು ಧಾರಾವಾಹಿಗಳಲ್ಲಿ ಅಭಿನಯಿಸಿರುವ ಅಜಯ್ ರಾಜ್ ಅವರು 'ರಾಕಿ' ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟರು. ತದ ನಂತರ 'ನನ್ನ ಲೈಫಲ್ಲಿ', 'ಪ್ರದೇಶ ಸಮಾಚಾರ', 'ಡೈಮಂಡ್ ಕ್ರಾಸ್', 'ಮುಂದಿನ ನಿಲ್ದಾಣ', 'ಮುಂದುವರಿದ ಅಧ್ಯಾಯ', 'ಒಂದು ಗಂಟೆಯ ಕಥೆ', 'ಅಬ್ಬಬ್ಬ', 'ಆರ್ಕೆಸ್ಟ್ರಾ ಮೈಸೂರು', 'ಮನ್ ರೇ' ಸಿಬಿಮಾಗಳಲ್ಲಿ ಅಜಯ್ ರಾಜ್ ನಟಿಸಿದ್ದಾರೆ.
ಇದೀಗ 'ಲಕ್ಷ್ಮಿ ನಿವಾಸ' ಧಾರಾವಾಹಿಯ ಹರೀಶನಾಗಿ ಕಿರುತೆರೆಯಲ್ಲಿ ಮೋಡಿ ಮಾಡುತ್ತಿರುವ ನಟ ಅಜಯ್ ರಾಜ್ ಅವರು 'ಸತ್ಯಂ ಶಿವಂ ಸುಂದರಂ' ಧಾರಾವಾಹಿಯ ನಂತರ ಬ್ರೇಕ್ ತೆಗೆದುಕೊಂಡಿದ್ದರು. ಆದರೆ ಇದೀಗ ಹರೀಶ ಆಗಿ ಮತ್ತೆ ಕಿರುತೆರೆಯತ್ತ ಮುಖ ಮಾಡಿದ್ದು ಕಂಡು ಕಿರುತೆರೆ ವೀಕ್ಷಕರು ಸಂತಸ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ 'ಮುಕ್ತ' ಧಾರಾವಾಹಿಯ ಅಭಿಮಾನಿಗಳಂತೂ ನಂಜುಂಡನೇ ಮರಳಿ ಕಿರುತೆರೆಗೆ ಬಂದನೇನೋ ಎಂಬ ಖುಷಿಯಲ್ಲಿದ್ದಾರೆ. ಒಟ್ಟಿನಲ್ಲಿ ತಮ್ಮ ನಟನೆಯ ಮೂಲಕ ನಟ ಅಜಯ್ ರಾಜ್ ಕಿರುತೆರೆ ವೀಕ್ಷಕರ ಮನ ಸೆಳೆಯುತ್ತಿದ್ದಾರೆ.


Click it and Unblock the Notifications











