'ಶ್ರೀರಸ್ತು ಶುಭಮಸ್ತು' ಧಾರಾವಾಹಿಯ ಈ ಸುಂದರಿ ಯಾರು? ಇವರ ನಟನಾ ಜರ್ನಿ ಶುರುವಾಗಿದ್ದು ಹೇಗೆ?
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ 'ಶ್ರೀರಸ್ತು ಶುಭಮಸ್ತು'. ಈ ಧಾರಾವಾಹಿಯಲ್ಲಿ ನಾಯಕಿ ತುಳಸಿ ಮಗಳು ಸಂಧ್ಯಾ ಪಾತ್ರದಲ್ಲಿ ಅಭಿನಯಿಸುತ್ತಿರುವ ದೀಪಾ ಕಟ್ಟೆ, ತಮ್ಮ ನಟನೆಯ ಮೂಲಕ ಕಿರುತೆರೆ ಲೋಕದಲ್ಲಿ ಮನೆ ಮಾತಾಗಿದ್ದಾರೆ.
ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ಪದವೀಧರೆಯಾಗಿರುವ ದೀಪಾ ಕಟ್ಟೆ ನಿರೂಪಕಿಯಾಗಿ ಕಿರುತೆರೆಗೆ ಕಾಲಿಟ್ಟಿದ್ದರು. ಇಂಚರಾ ವಾಹಿನಿಯಲ್ಲಿ ನಿರೂಪಕಿಯಾಗಿ ಕಾಣಿಸಿಕೊಳ್ಳುವ ಮೂಲಕ ಕಿರುತೆರೆಗೆ ಕಾಲಿಟ್ಟ ದೀಪಾ ಕಟ್ಟೆಗೆ ನಟನಾ ಲೋಕದತ್ತ ಒಲವು ಮೂಡಿತ್ತು.

'ಶಾಂತಂ ಪಾಪಂ' ಮೂಲಕ ನಟಿಯಾಗಿ ಭಡ್ತಿ
ನಟಿಯಾಗಬೇಕು ಎಂಬ ಬಯಕೆ ಯಾವಾಗ ದೀಪಾ ಕಟ್ಟೆ ಅವರಲ್ಲಿ ಮೂಡಿತೋ ಆಗ ಆಕೆ ನಟನೆಯ ಬಗ್ಗೆ ಇನ್ನಷ್ಟು ಅರಿಯುವ ಸಲುವಾಗಿ ಅಭಿನಯ ತರಂಗ ಸೇರಿದರು. ಅಭಿನಯ ತರಂಗದಲ್ಲಿ ಒಂದು ವರ್ಷದ ಡಿಪ್ಲೋಮಾ ಕೋರ್ಸ್ ಪಡೆದ ದೀಪಾ ಕಟ್ಟೆ ನಾಟಕಗಳಲ್ಲಿ ನಟಿಸಲು ಆರಂಭಿಸಿದ್ದರು. ಸರಿ ಸುಮಾರು 20 ನಾಟಕಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ದೀಪಾ ಕಟ್ಟೆ 'ಶಾಂತಂ ಪಾಪಂ' ಧಾರಾವಾಹಿಯ ಮೂಲಕ ನಟಿಯಾಗಿ ಕಿರುತೆರೆಯಲ್ಲಿ ಕಾಣಿಸಿಕೊಂಡರು.
ಭಾವನಾ ಪಾತ್ರದಲ್ಲಿ ಮೋಡಿ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಮಿಥುನ ರಾಶಿ' ಧಾರಾವಾಹಿಯಲ್ಲಿ ನಾಯಕ ಮಿಥುನ್ ಚಿಕ್ಕಪ್ಪನ ಮಗಳು ಭಾವನಾ ಆಗಿ ನಟಿಸಿದ್ದರು. ದೀಪಾ ಕಟ್ಟೆಯ ಈ ಪಾತ್ರ ವೀಕ್ಷಕರ ಮನ ಗೆದ್ದಿತ್ತು. ತದ ನಂತರ ಸಿರಿಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಧೃವ ನಕ್ಷತ್ರ' ಧಾರಾವಾಹಿಯಲ್ಲಿ ನಿಸರ್ಗ ಪಾತ್ರಕ್ಕೆ ಜೀವ ತುಂಬಿ ಸೈ ಎನಿಸಿಕೊಂಡಿದ್ದರು ದೀಪಾ ಕಟ್ಟೆ.

ದಿಯಾ ಸಿನಿಮಾದಲ್ಲೂ ಅಭಿನಯ
ಚಂದನವನದ ಜನಪ್ರಿಯ ಸಿನಿಮಾಗಳ ಪೈಕಿ ಒಂದಾಗಿರುವ 'ದಿಯಾ'ದಲ್ಲಿ ನಟಿಸುವ ಮೂಲಕ ಸಿನಿಮಾಗೂ ಎಂಟ್ರಿ ಕೊಟ್ಟಿದ್ದರು. ಸಿನಿಮಾ ಕ್ಷೇತ್ರದಲ್ಲೂ ತಮ್ಮ ನಟನಾ ಕಂಪನ್ನು ದೀಪಾ ಕಟ್ಟೆ ಪಸರಿಸಿದ್ದರು. ದಿಯಾ ಸಿನಿಮಾದಲ್ಲಿ ನಾಯಕಿ ದಿಯಾಳ ಚಿಕ್ಕಮ್ಮನ ಮಗಳಾಗಿ ಅಭಿನಯಿಸಿದ್ದ ದೀಪಾ ಕಟ್ಟೆಗೆ ಸಿನಿಮಾದಲ್ಲಿ ಕೇವಲ ಸಣ್ಣ ಪಾತ್ರವಷ್ಟೆದ ಸಿಕ್ಕಿದ್ದರೂ, ಆಕೆ ಸೊಗಸಾಗಿ ನಟಿಸಿದ ಕಾರಣ ಆ ಪಾತ್ರದ ಮೂಲಕ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾದರು.
ಸದ್ಯ ಸಂಧ್ಯಾ ಆಗಿ ಮೋಡಿ
ಇದೀಗ 'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ಸುಧಾರಾಣಿ ಮಗಳಾಗಿ ಅಭಿನಯಿಸುತ್ತಿರುವ ಈಕೆ ಮನೆಮಂದಿಯನ್ನು ಗೋಳು ಹೊಯ್ದುಕೊಳ್ಳುವ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ವಿಭಿನ್ನ ಪಾತ್ರದ ಮೂಲಕ ಕಿರುತೆರೆ ವೀಕ್ಷಕರಿಗೆ ಮನರಂಜನೆಯ ರಸದೌತಣ ಉಣಬಡಿಸುತ್ತಿರುವ ದೀಪಾ ಕಟ್ಟೆ ಮತ್ತೆ ಸಿನಿಮಾಗಳಲ್ಲಿ ನಟಿಸುತ್ತಾರಾ ಅನ್ನೋದು ಸದ್ಯಕ್ಕೆ ಕುತೂಹಲ.


Click it and Unblock the Notifications











