ಮಗಳು ಸಮನ್ವಿಯನ್ನು ನೆನೆದು ಅಮೃತಾ ನಾಯ್ಡು ಭಾವುಕ, ಹೇಳಿದ್ದೇನು ನನ್ನಮ್ಮ ಸೂಪರ್ ಸ್ಟಾರ್ ಸ್ಫರ್ಧಿ?
ನಟಿ, ನಿರೂಪಕಿ ಹರಿಕಥಾ ಪ್ರವೀಣೆ ಅಮೃತ ನಾಯ್ಡು ಕೆಲ ವರ್ಷಗಳ ನಂತರ ಇದೀಗ ಮತ್ತೆ ತೆರೆ ಮುಂದೆ ಕಾಣಿಸಿಕೊಂಡಿದ್ದಾರೆ. ಹೌದು ನಟಿ ಅಮೃತಾ ನಾಯ್ಡು ಮೂರು ವರ್ಷಗಳ ಹಿಂದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ "ನನ್ನಮ್ಮ ಸೂಪರ್ ಸ್ಟಾರ್" ರಿಯಾಲಿಟಿ ಶೋ ನಲ್ಲಿ ಕೊನೆಯ ಬಾರಿ ಕಾಣಿಸಿಕೊಂಡಿದ್ದರು. ಈ ರಿಯಾಲಿಟಿ ಶೋನಲ್ಲಿ ಅದ್ಭುತವಾಗಿಯೇ ತಾಯಿ ಮಗಳು ಸ್ಪರ್ಧಿಸಿದ್ದರು. ಇದೇ ಸಂದರ್ಭದಲ್ಲಿ ಅಮೃತ ನಾಯ್ಡು ಅವರ ಜೀವನದಲ್ಲಿ ದುರ್ಘಟನೆ ಒಂದು ನಡೆದಿತ್ತು.
ಆರು ವರ್ಷದ ಮಗಳು ಸಮನ್ವಿಯೊಂದಿಗೆ ತಮ್ಮ ಟೂ ವಿಲ್ಲರ್ ನಲ್ಲಿ ಪ್ರಯಾಣಿಸುತ್ತಿದ್ದಾಗ ಲಾರಿ ಒಂದು ಗುದ್ದಿ ಅಪಘಾತವಾಗಿತ್ತು. ಇದೇ ಅಪಘಾತದಲ್ಲಿ ಮಗಳು ಸಮನ್ವಿಯನ್ನು ಕಳೆದುಕೊಂಡರು ಅಮೃತಾ ನಾಯ್ಡು. ಆ ಸಮಯದಲ್ಲಿ ಎರಡನೇ ಮಗುವಿನ ಆಗಮನಕ್ಕೆ ಕಾಯುತ್ತಿದ್ದ ಅಮೃತಾ ನಾಯ್ಡು ದಂಪತಿಗೆ ತಮ್ಮ ಕಂದಮ್ಮ ಸಮನ್ವಿಯನ್ನು ಕಳೆದುಕೊಂಡಿದ್ದು ಬರಸಿಡಿಲು ಬಡಿದಂತಾಗಿತ್ತು.

ಇದಾದ ಮೇಲೆ ಯಾವುದೇ ಸಮಸ್ಯೆ ಇಲ್ಲದೆ ಮಗುವಿಗೆ ಜನ್ಮವಿತ್ತ ಅಮೃತಾ ನಾಯ್ಡು ಈಗ ಹರ್ಷ್ ಎಂಬ ಗಂಡು ಮಗುವಿನ ತಾಯಿ. ಇದೀಗ ಆರ್ ಜೆ ಸೌಜನ್ಯ ಅವರ ಯೂಟ್ಯೂಬ್ ಚಾನೆಲ್ ಗೆ ಸಂದರ್ಶನ ನೀಡಿರುವ ನಟಿ ಅಮೃತಾ ನಾಯ್ಡು ಬಹಳಷ್ಟು ವೈಯಕ್ತಿಕ ವಿಚಾರಗಳನ್ನು ಶೇರ್ ಮಾಡಿಕೊಂಡಿದ್ದಾರೆ.
ತಮ್ಮ ಮಗಳು ಸಮನ್ವಿಯನ್ನು ಕಳೆದುಕೊಂಡ ನಂತರ ಅವರ ಬದುಕಿನ ಕರಾಳ ದಿನಗಳನ್ನು ಕಳೆದ ರೀತಿಯನ್ನು ಹಂಚಿಕೊಂಡಿದ್ದಾರೆ. ಹಾಗೆಯೇ ಇದೀಗ ತಮ್ಮ ಎರಡು ವರ್ಷದ ಮಗನಾದ ಹರ್ಷ್ ನೊಂದಿಗಿನ ದಿನಗಳನ್ನು ಹರುಷದಿಂದ ಕಳೆಯುತ್ತಿರುವುದರ ಬಗ್ಗೆಯೂ ಮಾಹಿತಿ ಹಂಚಿಕೊಂಡಿದ್ದಾರೆ.
ಎಷ್ಟೋ ಬಾರಿ ನಾವು ಊಹಿಸದಿರುವುದು ಜೀವನದಲ್ಲಿ ನಡೆದು ಹೋಗುತ್ತದೆ. ನಮಗೆ ಹೀಗಾಗಬೇಕಿತ್ತಾ ಎಂಬ ಪ್ರಶ್ನೆ ಜಿಜ್ಞಾಸೇ ನಮ್ಮಲ್ಲಿ ಮೂಡಲು ಆರಂಭವಾಗುತ್ತದೆ. ಇಂಥದ್ದೇ ಒಂದು ದುರ್ಘಟನೆ ನಮ್ಮ ಜೀವನದಲ್ಲೂ ನಡೆಯಿತು. ಮಗಳನ್ನು ಕಳೆದುಕೊಂಡ ದುಃಖ ನೋವು ಒಂದೆಡೆಯಾದರೆ ಹೊಟ್ಟೆಯಲ್ಲಿರುವ ಮಗುವನ್ನು ಉಳಿಸಿಕೊಳ್ಳಬೇಕು ಎಂಬ ಹಟವು ನನ್ನಲ್ಲಿತ್ತು. ದೇವರ ದಯೆಯಿಂದ ಆರೋಗ್ಯವಂತ ಮಗು ಹುಟ್ಟಿದೆ. ಹರ್ಷ್ ಎಂದು ಹೆಸರಿಟ್ಟಿದ್ದೇವೆ. ನನ್ನ ಮಗಳು ಸಮನ್ವಿಯೇ ನನ್ನ ಹೊಟ್ಟೆಯಲ್ಲಿ ಹರ್ಷ್ ನ ರೂಪದಲ್ಲಿ ಮತ್ತೆ ಹುಟ್ಟಿ ಬಂದಿದ್ದಾಳೆ ಎಂದು ದೃಢವಾಗಿ ನಂಬಿದ್ದೇನೆ" ಎಂದಿದ್ದಾರೆ.
ಜೀವನದಲ್ಲಿ ಎಲ್ಲವೂ ನಾವು ಎಣಿಸಿದಂತೆ ಆದರೆ, ಮನುಷ್ಯರು ನಾವು ಅಹಂಕಾರದಲ್ಲಿ ಮೆರೆಯುತ್ತೇವೆ. ಅದೆಷ್ಟೋ ಬಾರಿ ನಡೆಯುವ ದುರ್ಘಟನೆಗಳು, ನಮ್ಮನ್ನು ಸ್ಟ್ರಾಂಗ್ ಮಾಡುತ್ತವೆ. ಒಂದಲ್ಲ ಒಂದು ಕಾರಣಕ್ಕೆ ನಾವು ಈ ಭೂಮಿಗೆ ಬಂದಿರುವುದರಿಂದ ನಮ್ಮ ಕರ್ಮಗಳನ್ನು ನಾವು ಸವಿಸಲೇಬೇಕು. ಆದರೂ ಆದ ನೋವಿನ ಘಟನೆಗಳನ್ನು ನೆನೆದು ಇನ್ನೇನು ಇಂತಹ ನೋವಿನ ಸಂಗತಿಗಳು ಕೊಡಬೇಡಪ್ಪ ಎಂದು ದೇವರಿಗೆ ಬೇಡುವುದಿದೆ. ಜೀವನವೇ ವೇದನೆ ಎಂದೆನಿಸಿದರೆ ಬೇಗ ಮುಕ್ತಿ ಸಿಗಲಿ ಎಂದು ಹಾರೈಸುತ್ತೇವೆ. ಇಂದು ಪ್ರತಿಯೊಬ್ಬರಿಗೂ ಅವರವರ ಬದುಕಿನಲ್ಲಿ ಅವರದ್ದೇ ಆದ ಕಷ್ಟ ಸಂಕಷ್ಟಗಳು ಇದ್ದೇ ಇದೆ. ಅದನ್ನು ಯಾವೆಲ್ಲ ರೀತಿಯಲ್ಲಿ ಸರಿದೂಗಿಸಿಕೊಂಡು ಪ್ರತಿಕ್ಷಣವನ್ನು ಜೀವಿಸುತ್ತೇವೆ ಎಂಬುದೇ ಜೀವನ" ಎಂದಿದ್ದಾರೆ.
"ಅದೃಷ್ಟವಶಾತ್ ನನಗೆ ತುಂಬಾ ಒಳ್ಳೆಯ ಸ್ನೇಹಿತರ ಬಳಗವಿದೆ. ತುಂಬಾ ಸಪೋರ್ಟ್ ಮಾಡುವ ಫ್ಯಾಮಿಲಿ ಇದೆ. ಇವರೆಲ್ಲರ ಸಹಕಾರದಿಂದ ನಾನು ನನ್ನ ಜೀವನದಲ್ಲಾದ ದುಃಖದ ಕ್ಷಣಗಳಿಂದ ಹೊರಬರಲು ಸಾಧ್ಯವಾಯಿತು. ಇರುವುದೊಂದು ಬಾಳು, ಅನಾವಶ್ಯಕ ನಕಾರಾತ್ಮಕ ಚಿಂತನೆಗಳನ್ನು ಬಿತ್ತುವುದರ ಬದಲು ಒಬ್ಬರಿಗೊಬ್ಬರು ಸಹಕರಿಸಿ ಸಹಬಾಳ್ವೆ ನಡೆಸಬೇಕು ಎಂಬುದೇ ನನ್ನ ಕೋರಿಕೆ" ಎಂದಿದ್ದಾರೆ ನಟಿ ಅಮೃತಾ ನಾಯ್ಡು.
ಅಂದ;ಹಾಗೆ ನಟಿ ಅಮೃತಾ ನಾಯ್ಡು ಚಿಕ್ಕವಯಸ್ಸಿನಿಂದಲೂ ಹಲವು ಸಿನಿಮಾಗಳಲ್ಲಿ ನಟಿಸಿರುವುದಷ್ಟೇ ಅಲ್ಲದೆ ಆರ್ ಜೆ ಆಗಿ, ವಿಜೆ ಆಗಿ ಹಲವು ಕಾರ್ಯಕ್ರಮಗಳನ್ನು ಚಂದಗಾಣಿಸಿದ್ದಾರೆ. ಕನ್ನಡ ಕಿರುತೆರೆಯಲ್ಲಿ ಕಳೆದೆರಡು ದಶಕಗಳಿಂದಲೂ ಸಕ್ರಿಯವಾಗಿರುವ ಅಮೃತಾ ನಾಯ್ಡು ಧಾರಾವಾಹಿ ರಿಯಾಲಿಟಿ ಶೋ ಹೀಗೆ ನಾನಾ ರೀತಿಯ ಕಲಾತ್ಮಕ ವಿಚಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹರಿಕಥಾ ಪ್ರವೀಣೆ ಆದ ಇವರು ಇಂದಿಗೂ ಬಹಳ ಅದ್ಭುತವಾಗಿ ಹರಿಕಥೆ ಪ್ರದರ್ಶನಗಳನ್ನು ನೀಡುತ್ತಾರೆ.
ಕನ್ನಡ ಚಿತ್ರರಂಗದ ಪ್ರಪ್ರಥಮ ನಾಯಕ ನಟ ಸುಬ್ಬಯ್ಯ ನಾಯ್ಡು ಹಾಗೂ ಕನ್ನಡದ ಮಹಾನ್ ಕಲಾವಿದೆ ಲಕ್ಷ್ಮೀಬಾಯಿ ಅವರ ಮರಿ ಮೊಮ್ಮಗಳೇ ಅಮೃತಾ ನಾಯ್ಡು. ತಮ್ಮ ತಾತನಿಂದ ಹರಿಕಥೆಯನ್ನು ಕಲಿತ ನಟಿ ಅಮೃತಾ ನಾಯ್ಡು, ಬಹಳ ಅದ್ಭುತವಾಗಿ ಕನ್ನಡ ಮಾತನಾಡುತ್ತಾರೆ. ಸದ್ಯಕ್ಕೆ ಈಕೆ ಯಾವ ಕಾರ್ಯಕ್ರಮದ ಮೂಲಕ ಮತ್ತೆ ಕಿರುತೆರೆಗೆ ಕಾಲಿಡುತ್ತಾರೆ ಎಂಬುದು ಇವರ ಅಭಿಮಾನಿಗಳು ಹಾಗೂ ಪ್ರೇಕ್ಷಕರ ಕುತೂಹಲವಾಗಿದೆ.


Click it and Unblock the Notifications











