Netra Jadhav: ಜೀ ಕನ್ನಡದ ನೆಚ್ಚಿನ ಖಳನಟಿ ನೇತ್ರಾ ಜಾಧವ್..ಪ್ರಶಸ್ತಿ ಪಡೆದು ಹೇಳಿದ್ದೇನು?
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ 'ಶ್ರೀರಸ್ತು ಶುಭಮಸ್ತು' ವಿಭಿನ್ನ ಕಥೆಯ ಜೊತೆಗೆ ಪಾತ್ರ ವರ್ಗದ ಮೂಲಕವೂ ಪ್ರೇಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. 'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ಮಾಧವನ ತಮ್ಮ ಮಹೇಶನ ಹೆಂಡತಿ ಶಾರ್ವರಿ ಆಗಿ ಅಭಿನಯಿಸುತ್ತಿರುವ ನೇತ್ರಾ ಜಾಧವ್ ಖಳನಾಯಕಿಯಾಗಿ ಕಿರುತೆರೆ ವೀಕ್ಷಕರ ಮನ ಸೆಳೆದ ಚೆಲುವೆ. ಅಂದ ಹಾಗೇ ನೇತ್ರಾ ಜಾಧವ್ ಅವರು ಖಳನಾಯಕಿಯಾಗಿ ಸೈ ಎನಿಸಿಕೊಂಡಿದ್ದಾರೆ ಎಂದರೆ ಅದಕ್ಕೆ ಅವರು ಪಡೆದ ನೆಚ್ಚಿನ ಖಳನಟಿ ಪ್ರಶಸ್ತಿ ಸಾಕ್ಷಿ.
ಜೀ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮ ಈಗ ನಡೆಯುತ್ತಿದ್ದು ಅದರಲ್ಲಿ 'ನೆಚ್ಚಿನ ಖಳನಟಿ' ಪ್ರಶಸ್ತಿಯನ್ನು ಪಡೆದುಕೊಂಡಿರುವ ನೇತ್ರಾ ಜಾಧವ್ ಅವರಂತೂ ಬಹಳ ಖುಷಿಯಲ್ಲಿದ್ದಾರೆ. ಪ್ರಶಸ್ತಿ ಸ್ವೀಕರಿಸಿದ ನಟಿ "ಕರ್ನಾಟಕದ ಸಮಸ್ತ ಜನರಿಗೆ ನನ್ನ ಹೃತ್ಪೂರ್ವಕ ವಂದನೆಗಳು. ನಾನು ಶಾರ್ವರಿ ಆಗಿ ಒಂದು ಹೆಜ್ಜೆ ಇಟ್ಟಿದ್ದೆ ಅಷ್ಟೇ. ನೀವು ಸಾವಿರ ಹೆಜ್ಜೆಯನ್ನು ನಡೆಸಿಬಿಟ್ಟಿದ್ದೀರ. ನಿಮ್ಮ ಪ್ರೀತಿ ವಿಶ್ವಾಸ ಹೀಗೆ ಸದಾ ನನ್ನ ಮೇಲೆ ಇರಲಿ. ನಾನು ಇನ್ನು ಮುಂದೆ ಇನ್ನಷ್ಟು ಹುಮ್ಮಸ್ಸಿನಿಂದ ಶಾರ್ವರಿ ಪಾತ್ರ ಮಾಡುತ್ತೇನೆ. ನಿಮ್ಮನ್ನೆಲ್ಲಾ ರಂಜಿಸುತ್ತೇನೆ" ಎಂದು ಹೇಳಿಕೊಂಡಿದ್ದಾರೆ.

ವಯಸ್ಸಿಗೂ ಮೀರಿದ ಪಾತ್ರದ ಮೂಲಕ ಕಿರುತೆರೆಯಲ್ಲಿ ಮೋಡಿ ಮಾಡುತ್ತಿರುವ ನೇತ್ರಾ ಜಾಧವ್ ಅವರು ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ರಥಸಪ್ತಮಿ' ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟರು. ವಿಶೇಷವೆಂದರೆ ಆ ಧಾರಾವಾಹಿಯಲ್ಲಿ ನೇತ್ರಾ ಜಾಧವ್ ಅವರು ಸುಧಾರಾಣಿ ಅವರೊಂದಿಗೆ ತೆರೆ ಹಂಚಿಕೊಂಡಿದ್ದು ಸುಧಾರಾಣಿ ಅವರ ಸಹೋದರಿಯಾಗಿ ಕಾಣಿಸಿಕೊಂಡಿದ್ದರು.
ಮುಂದೆ 'ಸಾಗುತಾ ದೂರ ದೂರ' ಧಾರಾವಾಹಿಯಲ್ಲಿ ನಟಿಸಿದ್ದ ಈಕೆ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಆಕೃತಿ' ಧಾರಾವಾಹಿಯಲ್ಲಿ ನಾಯಕಿಯ ಅಮ್ಮನಾಗಿ ನಟಿಸಿದರು. ತದ ನಂತರ ಅದೇ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸುಂದರಿ' ಧಾರಾವಾಹಿಯಲ್ಲಿಯೂ ನಾಯಕಿಯ ಅಮ್ಮನ ಪಾತ್ರದಲ್ಲಿ ಕಾಣಿಸಿಕೊಂಡ ಆಕೆ ಪಾಸಿಟಿವ್ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು.

ಇದೀಗ ಮೊದಲ ಬಾರಿಗೆ ಕನ್ನಡ ಕಿರುತೆರೆಯಲ್ಲಿ ವಿಲನ್ ಆಗಿ ಮೋಡಿ ಮಾಡುತ್ತಿರುವ ನೇತ್ರಾ ಜಾಧವ್ ಪರಭಾಷೆಯ ಕಿರುತೆರೆಯಲ್ಲಿ ಲೇಡಿ ರೌಡಿಯಾಗಿ ಅಭಿನಯಿಸಿದ್ದಾರೆ. ತೆಲುಗಿನ 'ರಾವೋಯಿ ಚಂದಮಾಮ' ಧಾರಾವಾಹಿಯಲ್ಲಿ ಇಂದ್ರಸೇನಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು ನೇತ್ರಾ ಜಾಧವ್. ಒಳ್ಳೆಯವರಿಗೆ ಒಳ್ಳೆಯದನ್ನೇ ಮಾಡುವ, ಕೆಟ್ಟವರಿಗೆ ಕೆಟ್ಟದ್ದನ್ನು ಮಾಡುವ ಹೆಣ್ಣು ಮಗಳಾಗಿ ಆಕೆ ಪರಭಾಷೆಯ ಕಿರುತೆರೆಯಲ್ಲಿ ಕಮಾಲ್ ಮಾಡಿದ್ದರು.


Click it and Unblock the Notifications











