"ಪಾಸಿಟಿವ್ ಪಾತ್ರಗಳಷ್ಟೇ ಅಲ್ಲ.." ತಮ್ಮ ಜರ್ನಿ ಬಗ್ಗೆ ರಶ್ಮಿತಾ ಚೆಂಗಪ್ಪ ಹೇಳಿದ್ದೇನು ಗೊತ್ತಾ?
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಕಾವೇರಿ ಕನ್ನಡ ಮೀಡಿಯಂ' ಧಾರಾವಾಹಿಯಲ್ಲಿ ವೃಂದಾ ಎನ್ನುವ ಖಳನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟಿ ರಶ್ಮಿತಾ ಚಂಗಪ್ಪ ಅವರು ತಮ್ಮ ಪಾತ್ರಗಳ ಆಯ್ಕೆ ಬಗ್ಗೆ ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಮನ ಬಿಚ್ಚಿ ಮಾತನಾಡಿದ್ದಾರೆ.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮಹಾರಾಣಿ' ಧಾರಾವಾಹಿಯ ಎಂಬ ಮೂಲಕ ಮೊದಲ ಬಾರಿಗೆ ಕಿರುತೆರೆಯಲ್ಲಿ ಕಾಣಿಸಿಕೊಂಡ ಈ ನಟಿ ಇದೀಗ 'ಕಾವೇರಿ ಕನ್ನಡ ಮೀಡಿಯಂ' ಧಾರಾವಾಹಿಯಲ್ಲಿ ನೆಗೆಟಿವ್ ಶೇಡ್ ಇದ್ದ ವೃಂದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಗಳಲ್ಲೊಂದಾದ 'ಗಟ್ಟಿಮೇಳ' ಧಾರಾವಾಹಿಯಲ್ಲೂ ನೆಗೆಟಿವ್ ರೋಲ್‌ನಲ್ಲಿ ಕಾಣಿಸಿಕೊಂಡ ಈಕೆ ಕನ್ನಡ ಭಾಷೆ ಅಲ್ಲದೆ ತಮಿಳು ಕಿರುತೆರೆಯಲ್ಲೂ ನಟಿಸಿದರು. ಹೀಗೆ ಪಾಸಿಟಿವ್ ಅಥವಾ ನೆಗೆಟಿವ್ ಪಾತ್ರಗಳಷ್ಟೇ ಅಲ್ಲದೆ ಮಿಶ್ರಣದ ಊರ್ಮಿಳ ಎಂಬ ಪಾತ್ರದಲ್ಲಿಯೂ ಕಾಣಿಸಿಕೊಂಡರು.

ಪಾತ್ರಗಳ ಆಯ್ಕೆ ಬಗ್ಗೆ ಮಾತನಾಡಿದ ನಟಿ ರಶ್ಮಿತಾ ಚಂಗಪ್ಪ "ಯಾವುದೇ ಧಾರಾವಾಹಿ ಆಗಲಿ ಕಥೆಯಲ್ಲಿ ನಾನು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತೇನೆ ಇಲ್ಲವೋ ಎಂಬುದಕ್ಕಿಂತ ಹೆಚ್ಚಾಗಿ ಕಥೆಯೇ ಪ್ರಮುಖ ಪಾತ್ರವಾಗುತ್ತದೆಯೇ ಎಂಬುದನ್ನು ನಾನು ಗಮನಿಸುತ್ತೇನೆ. ಬರೀ ನನ್ನ ಪಾತ್ರಕ್ಕಿರುವ ಪ್ರಾಮುಖ್ಯತೆ ಅಷ್ಟೇ ಅಲ್ಲದೆ ಕಥೆ ಯಾವ ರೀತಿ ಓಡುತ್ತದೆ ಮತ್ತು ಇಡೀ ಕಥಾ ಅಂದರೆ ಏನ ಪ್ರತಿನಿಧಿಸುತ್ತಿದೆ, ಕಥೆ ಜನರಿಗೆ ಏನನ್ನು ಹೇಳಲು ಪ್ರಯತ್ನಿಸುತ್ತಿದೆ ಎಂಬ ವಿಚಾರಗಳನ್ನು ನಾನು ಸೂಕ್ಷ್ಮವಾಗಿ ಗಮನಿಸಿ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತೇನೆ" ಎಂದಿದ್ದಾರೆ.
ಇನ್ನು ತಾವು ಈಗಾಗಲೇ ನಟಿಸಿರುವ ಪಾತ್ರಗಳ ಬಗ್ಗೆ ಮಾತನಾಡಿದ ಅವರು "ನನಗೆ ನೆಗೆಟಿವ್ ಅಥವಾ ಪಾಸಿಟಿವ್ ರೋಲ್‌ಗಳಿಗಿಂತಲೂ ಎರಡರ ಮಿಶ್ರಣದ ಪಾತ್ರಗಳನ್ನು ಮಾಡಲು ಹೆಚ್ಚು ಇಷ್ಟ. ಈ ಗ್ರೇ ಶೇಡ್ ಪಾತ್ರಗಳು ಧಾರಾವಾಹಿಯಲ್ಲಿ ಬಹಳ ವಿರಳ ಅಂತಹ ಪಾತ್ರಗಳಿಗೆ ನನ್ನ ಮೊದಲ ಆದ್ಯತೆ. ಜೀವನದಲ್ಲಿ ನಾವು ಪೂರ್ತಿ ನೆಗೆಟಿವ್ ಅಥವಾ ಪೂರ್ತಿಯಾಗಿ ಪಾಸಿಟಿವ್ ಇರುವುದಿಲ್ಲ. ಬದಲಾಗಿ ಎರಡು ಗುಣ ಅವಗುಣಗಳ ಮಿಶ್ರಣವಾಗಿರುತ್ತೇವೆ. ಹಾಗಾಗಿ ಇಂತಹ ಪಾತ್ರಗಳು ಬಹಳ ನೈಜವಾಗಿ ಕಾಣಿಸುತ್ತದೆ. ಅಲ್ಲದೆ ಇಂತಹ ಪಾತ್ರಗಳು ನೈಜವಾಗಿದ್ದರೂ ಇದನ್ನು ಅಭಿನಯಿಸುವುದು ಸುಲಭವಲ್ಲ ಹಾಗಾಗಿ ನನಗೆ ಇಂತಹ ಪಾತ್ರಗಳೇ ಇಷ್ಟ." ಎಂದರು
ಇತ್ತೀಚೆಗಷ್ಟೇ ವೈವಾಹಿಕ ಜೀವನವನ್ನು ಆರಂಭ ಮಾಡಿರುವ ನಟಿ ರಶ್ಮಿತಾ ಚಂಗಪ್ಪ ಪ್ರತಿ ಜೀವನ ಹಾಗೂ ವೈಯಕ್ತಿಕ ಜೀವನದ ನಡುವಿನ ಬ್ಯಾಲೆನ್ಸ್ ಬಗ್ಗೆಯೂ ಮುಕ್ತವಾಗಿ ಮಾತನಾಡಿದ್ದಾರೆ. "ಈವರೆಗೂ ನಾನು ನಾಲ್ಕು ಐದು ಧಾರಾವಾಹಿಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ನಟಿಸಿದ್ದೇನೆ. ವೃತ್ತಿ ಜೀವನ ಈವರೆಗೂ ಬಹಳ ಚೆನ್ನಾಗಿತ್ತು. ಕೆಲ ಪಾತ್ರಗಳು ಜನಮನ ಗೆದ್ದು ಕ್ಲಿಕ್ ಆಗಿವೆ. ಇತ್ತೀಚೆಗಷ್ಟೇ ನಾನು ವೈವಾಹಿಕ ಜೀವನದ ಕಡೆಗೆ ಕಾಲಿಟ್ಟಿದ್ದೇನೆ. ನನ್ನ ತಂದೆ ತಾಯಿ ಹಾಗೂ ಕುಟುಂಬದವರು ನನ್ನ ವೃತ್ತಿ ಜೀವನಕ್ಕೆ ನಟನೆಗೆ ಯಾವ ರೀತಿ ಸ್ಪಂದಿಸಿದ್ದರು. ಅದೇ ರೀತಿ ಈಗ ನನ್ನ ಗಂಡನ ಮನೆಯವರು ಅತ್ತೆ ಮಾವ ಎಲ್ಲರೂ ಸಹ ಸ್ಪಂದಿಸಿ ನನ್ನ ವೃತ್ತಿಗೆ ಸಹಕರಿಸುತ್ತಿದ್ದಾರೆ. ಹಾಗಾಗಿ ನನಗೆ ವೃತ್ತಿ ಜೀವನ ಹಾಗೂ ವೈಯಕ್ತಿಕ ಜೀವನವನ್ನು ಬ್ಯಾಲೆನ್ಸ್ ಮಾಡಲು ಬಹಳ ಕಷ್ಟವೇನು ಆಗುತ್ತಿಲ್ಲ. ಆದರೂ ಮೊದಲಿನಂತೆ ಹೆಚ್ಚು ವೃತ್ತಿ ಪಾತ್ರಗಳ ಇತ್ಯಾದಿಗಳ ಕಡೆಗೆ ಗಮನಹರಿಸಲು ಸಾಧ್ಯವಾಗುತ್ತಿಲ್ಲ. ಸಹಜವಾಗಿ ನಾನು ನನ್ನ ವೈಯಕ್ತಿಕ ಜೀವನ ಗಂಡ ಹಾಗೂ ಗಂಡನ ಮನೆಯವರಿಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿರುವುದರಿಂದ ಯಾವುದೇ ಪಾತ್ರಗಳನ್ನು ಒಪ್ಪಿಕೊಂಡರು ಧಾರಾವಾಹಿಗಳಲ್ಲಿ ನನ್ನ ಪಾತ್ರಕ್ಕೆ ಶೆಡ್ಯೂಲ್‌ಗಳನ್ನು ಮೊದಲೇ ನಿಗದಿಪಡಿಸಿಕೊಳ್ಳುತ್ತೇನೆ. ಹಾಗಾಗಿ ಈವರೆಗೂ ಯಾವುದೇ ರೀತಿಯ ತೊಂದರೆ ಆಗಿಲ್ಲ" ಎಂದು ಹೇಳಿಕೊಂಡಿದ್ದಾರೆ.
ಇನ್ನು ಧಾರಾವಾಹಿ ಹಾಗೂ ಸಿನಿಮಾಗಳ ಬಗ್ಗೆ ಮಾತನಾಡಿದ ಇವರು "ಇಂದು ದಿನಕ್ಕೆ ಎರಡು ಮೂರು ಸಿನಿಮಾಗಳು ಬಿಡುಗಡೆಯಾಗುತ್ತಿದ್ದರೂ ಸಹ, ಮಧ್ಯ ವಯಸ್ಕರಿಗೆ ಸಿನಿಮಾ ಕಥೆಗಳು ಹೆಚ್ಚು ರೀಚ್ ಆಗುತ್ತಿಲ್ಲ, ಬದಲಿಗೆ ದಾರಾವಾಹಿಗಳೆ ಎಲ್ಲಾ ವಯಸ್ಕರನ್ನು ತಲುಪುತ್ತಿರುವುದು ಎಂಬುದು ನನ್ನ ವೈಯಕ್ತಿಕ ಅನಿಸಿಕೆ. ಹಾಗಾಗಿ ಧಾರಾವಾಹಿಗಳೇ ವಿಭಿನ್ನ ಕಥೆಗಳ ಜೊತೆಗೆ ಸಾಮಾಜಿಕ ಮೌಲ್ಯಗಳು ನೀಡುತ್ತಾ ಪ್ರೇಕ್ಷಕರನ್ನು ರಂಜಿಸುವುದು ಅತ್ಯಗತ್ಯ." ಎಂದರು.


Click it and Unblock the Notifications











