ಸಂಯುಕ್ತಾ ಹೊರನಾಡು ತೆರೆದಿದ್ದ ಆರ್ಟ್ ರೂಮ್ ಈಗ ಹೇಗಿದೆ?
ನಟಿ ಸಂಯುಕ್ತ ಹೊರನಾಡು 'ಜಿಗರ್‌ತಂಡ', 'ನಾನು ಮತ್ತು ಗುಂಡ', 'ಟೋಬಿ', 'ಒಗ್ಗರಣೆ', 'ಒನ್ ಕಟ್ ಟು ಕಟ್', 'ಹೊಂದಿಸಿ ಬರೆಯಿರಿ', 'ಲೈಫು ಇಷ್ಟೇನೆ' ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಪ್ರಾಣಿ ಪ್ರೀತಿಗೆ ಹೆಸರಾಗಿರುವ ಈಕೆ ಇದೀಗ 'ಮೈ ಸಿಟಿ ಮೈ ಆರ್ಟ್' ಬಗ್ಗೆ ಹೆಚ್ಚಿನ ಒಲವು ತೋರಿಸಿದ್ದಾರೆ.
ಸಂಯುಕ್ತ ಹೊರನಾಡು ದಿ ಟೈಮ್ಸ್ ಆ ಇಂಡಿಯಾ ನಡೆಸುತ್ತಿರುವ ಮೈ ಸಿಟಿ ಮೈ ಆರ್ಟ್ ಎಂಬ ಕಲಾ ಪ್ರಚಾರದಲ್ಲಿ ಭಾಗವಹಿಸಿ, ತಮ್ಮ ಕಲಾ ಪ್ರೀತಿ ಬಗ್ಗೆ ಒಂದಷ್ಟು ವಿಚಾರ ವಿನಿಮಯ ಮಾಡಿಕೊಂಡಿದ್ದಾರೆ.

"ಬೆಂಗಳೂರಿಂನಂಥಹ ನಗರಕ್ಕೆ ಈ ರೀತಿಯ ಪ್ರಚಾರ ಬೇಕಿತ್ತು. ಕಲೆಯೇ ನಮ್ಮನ್ನು ಕ್ರಿಯಾಶೀಲರನ್ನಾಗಿರಿಸಲು ಸಾಧ್ಯ. ಅದರಲ್ಲೂ ಬೆಂಗಳೂರಿನಂತಹ ವೈವಿಧ್ಯಮಯವಾದ ಸಿಟಿಗೆ ಇಂತಹ ಕ್ಯಾಂಪೇನ್‌ಗಳು ಮತ್ತಷ್ಟು ಮೆರುಗನ್ನು ನೀಡುತ್ತೆ. ಇವತ್ತಿನ ಕಾಲದಲ್ಲಿ ನಮ್ಮ ಪ್ರತಿ ಹೆಜ್ಜೆಯನ್ನು ಇನ್ನೊಬ್ಬರು ಹೊಗಳಬೇಕು ಒಪ್ಪಿಕೊಳ್ಳಬೇಕು ಎಂಬ ಮನಸ್ಥಿತಿಯನ್ನು ಬೆಳೆಸಿಕೊಳ್ಳುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಹಲವಾರು ಬಾರಿ ಖಿನ್ನತೆ ಇತ್ಯಾದಿ ಮಾನಸಿಕ ಸಮಸ್ಯೆಗಳು ಎದುರಾಗಬಹುದು. ಆಗಲ್ಲ ಕಲೆಯೇ ನಮ್ಮನ್ನು ಮತ್ತೆ ಸಮಸ್ಯೆಗೆ ತರಲು ಸಾಧ್ಯ." ಎಂದಿದ್ದಾರೆ.
ಪ್ರಾಣಿ ಪ್ರೇಮಿಯೂ ಆಗಿರುವ ನಟಿ ಸಂಯುಕ್ತ ಹೊರನಾಡು ಬಹಳಷ್ಟು ಶ್ವಾನಗಳನ್ನು ತಮ್ಮ ಮನೆಯಲ್ಲಿ ಸಾಕಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಮನೆ ಬಳಿಯೇ ಒಂದು ಆರ್ಟ್ ರೂಮ್ ಅನ್ನು ತೆಗೆದಿರುವ ಈಕೆ ಕಲಾ ವಿಚಾರಗಳಲ್ಲಿ ಬಹಳಷ್ಟು ಆಸಕ್ತಿಯನ್ನು ಹೊಂದಿರುವುದಲ್ಲದೆ ಇತರರಿಗೂ ಪ್ರೋತ್ಸಾಹ ನೀಡುತ್ತಿದ್ದಾರೆ.

"ಲಾಕ್‌ಡೌನ್ ಸಮಯದಲ್ಲಿ ನಾನು ಆರ್ಟ್ ರೂಮ್ ಅನ್ನು ತೆರೆದೆ. ಇಂದಿನ ಯುವ ಜನತೆಗೆ ಇಂತಹದೊಂದು ವೇದಿಕೆ ಬೇಕು ಎಂಬ ಭಾವನೆಯಿಂದ ಈ ರೂಮನ್ನು ನಾನು ನನ್ನ ಮನೆ ಬಳಿಯೇ ಎಲ್ಲರಿಗೂ ಎಟುಕುವಂತೆ ಓಪನ್ ಮಾಡಿದೆ. ಆಶ್ಚರ್ಯವೆಂಬ ರೀತಿಯಲ್ಲಿ ಇಲ್ಲಿಗೆ ಬರುವ ಹಲವಾರು ಜನ ಐವತ್ತು ವರ್ಷ ಮೇಲ್ಪಟ್ಟವರು. ಕಲೆ ಯಾವ ವಯೋಮಿತಿಗೂ ಒಳಪಟ್ಟಿಲ್ಲ ಎಂಬುದಕ್ಕೆ ಇದೊಂದು ಉದಾಹರಣೆ ಸಾಕು. ಚಿತ್ರ ಬಿಡಿಸುವುದರಿಂದ ಹಿಡಿದು ಬೇರೆ ಬೇರೆ ಕಲಾ ಪ್ರಕಾರಗಳಲ್ಲಿ ಜನರು ತಮ್ಮನ್ನು ತಾವು ತೊಡಗಿಸಿ ಕೊಂಡಾಗ ಅವರಿಗೆ ಸಿಗುವ ನೆಮ್ಮದಿ ಅಷ್ಟಿಷ್ಟಲ್ಲ." ಎಂದು ಕಲಾ ಪ್ರೇಮದ ಬಗ್ಗೆ ಹೇಳಿದರು.
ತಾವು ಬಿಡಿಸಿರುವ ಒಂದು ಚಿತ್ರವನ್ನು ಹಂಚಿಕೊಂಡು "ನಾನು ಆರು ವರ್ಷದವಳಿದ್ದಾಗ ಯಾರೋ ಒಬ್ಬರು ನನಗೆ ನೀನು ದೊಡ್ಡವಳಾದ ಮೇಲೆ ಏನಾಗಬೇಕು ಎಂದು ಕೇಳಿದಾಗ ಒಂದು ಹಾಳೆಯಲ್ಲಿ ನನ್ನ ಜೊತೆಗೆ ಒಂದು ನಾಯಿಯನ್ನು ಬಿಡಿಸಿ ನಾವಿಬ್ಬರೂ ಮೋಡದ ಮೇಲೆ ಕೂತು ಚಂದ್ರನ ಬಳಿ ಹೋಗುವಂತಹ ಚಿತ್ರ ಮಾಡಿದ್ದೆ. ಅದೇ ವರ್ಷಗಳು ಕಳೆದ ಮೇಲೆ ಇವತ್ತು ನಾನು ಏನಾಗಬೇಕು ಎಂದು ಯೋಚಿಸಿದಾಗ, ಈ ರೀತಿ ಮೋಡದ ಮೇಲೆ ಹಲವಾರು ಪ್ರಾಣಿಗಳ ನಡುವೆ ನನ್ನನ್ನು ಬಿಡಿಸಿ ಮತ್ತೆ ಚಂದ್ರನ ಬಳಿ ಹೋಗುವ ಚಿತ್ರವನ್ನೇ ಬಿಡಿಸುತ್ತೇನೆ" ಎಂದಿದ್ದಾರೆ.
"ಈ ಸಿನಿಮಾದಲ್ಲಿರುವ ಹಲವಾರು ಪ್ರಾಣಿಗಳು ನಾನು ದತ್ತು ತಗೊಂಡಿರುವಂತಹ ಜೀವಗಳು. ಚಿತ್ರಕಲೆ ನನ್ನ ಭಾವನೆ ಆಸೆ ಆಕಾಂಕ್ಷೆಗಳನ್ನು ಹೊರ ಹಾಕುವಲ್ಲಿ ನನಗೆ ಬಹಳ ಸಹಾಯ ಮಾಡಿದೆ. ಒಂದು ಮಟ್ಟಿಗೆ ಏಕಾಂಗಿತನವನ್ನು ಹೊರಹೋಗುವಂತೆ ಮಾಡಿದೆ. ಇದೇ ರೀತಿ ಪ್ರತಿಯೊಬ್ಬರಿಗೂ ಕಲೆ ಬಹಳ ಮುಖ್ಯ. ಒಂದಲ್ಲ ಒಂದು ಕಲಾ ಪ್ರಕಾರಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುವುದು ಜೀವನದಲ್ಲಿ ತುಂಬಾ ಮುಖ್ಯವಾಗುತ್ತದೆ" ಎಂದಿದ್ದಾರೆ ನಟಿ ಸಂಯುಕ್ತ ಹೊರನಾಡು.


Click it and Unblock the Notifications











