ಸಾವಿರ ಸಂಚಿಕೆ ಗಡಿ ಮುಟ್ಟಿದ 'ಸುವರ್ಣ ಸೂಪರ್ ಸ್ಟಾರ್'; ಶಾಲಿನಿಗೆ ಗಾನವಿ, ಮಾನ್ವಿತಾ ಶ್ವೇತಾ ಸಾಥ್!
ಹೌದು, ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ ರಿಯಾಲಿಟಿ ಶೋ 'ಸುವರ್ಣ ಸೂಪರ್ ಸ್ಟಾರ್ ' ಸಾವಿರ ಎಪಿಸೋಡ್‌ಗಳನ್ನು ಮುಗಿಸಿರುವ ಭಾರಿ ಸಂಭ್ರಮದಲ್ಲಿದೆ. ಅಂದ ಹಾಗೆ ಈ ವಾಹಿನಿ 'ಸುವರ್ಣ ಸೂಪರ್ ಸ್ಟಾರ್' ಕಾರ್ಯಕ್ರಮದ ಮೂಲಕ ವೀಕ್ಷಕರನ್ನು ರಂಜಿಸಿಕೊಂಡು ಬಂದಿದೆ. ಮಹಿಳೆಯರನ್ನೇ ಮುಖ್ಯವಾಗಿ ಫೋಕಸ್ ಮಾಡುವ ಈ ರಿಯಾಲಿಟಿ ಶೋ ಕರ್ನಾಟಕದ ಹಲವಾರು ಮಹಿಳಾ ಮಣಿಗಳಿಗೆ ಒಂದೊಳ್ಳೆಯ ವೇದಿಕೆಯಾಗಿದೆ.
ಸೆಲೆಬ್ರಿಟಿ ಗಳಿಂದ ಹಿಡಿದು ಸಾಮಾನ್ಯ ಮಹಿಳೆಯವರೆಗೂ ಎಲ್ಲರನ್ನೂ ಒಳಗೊಂಡ ಈ ಕಾರ್ಯಕ್ರಮದ ಸಾವಿರ ಎಪಿಸೋಡ್‌ಗಳಲ್ಲಿ ಈವರೆಗೂ 3000ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದಾರೆ. ಕಾರ್ಯಕ್ರಮದ ವಿಶೇಷತೆ ಏನೆಂದರೆ ಮಹಿಳೆಯರು ಭಾಗವಹಿಸುವುದಷ್ಟೇ ಅಲ್ಲದೆ ತಮ್ಮ ಅಳಲುಗಳನ್ನು ತೋಡಿಕೊಳ್ಳುತ್ತಾರೆ. ಈ ಮೂಲಕ ಮಹಿಳಾ ಪ್ರಪಂಚದ ಹೊಸ ಆಯಾಮ ವೀಕ್ಷಕರಿಗೆ ಕಾಣಿಸುತ್ತದೆ.

ಎಲೆ ಮರೆಯ ಕಾಯಂತೆ ಇರುವ ಅದೆಷ್ಟೋ ಪ್ರತಿಭೆಗಳು, ದೈನಂದಿನ ಜೀವನದ ಹಲವಾರು ಸವಾಲುಗಳನ್ನು ಎದುರಿಸುತ್ತಿರುವ ಅದೆಷ್ಟೋ ಮಹಿಳೆಯರು ತಮ್ಮ ಸಾಧನೆಯ ಸಂಕಷ್ಟಗಳನ್ನು ಹೇಳಿಕೊಳ್ಳುವ ಮೂಲಕ ಬೇರೆಯವರಿಗೆ ಪ್ರೇರಣೆಯಾಗುವುದಷ್ಟೇ ಅಲ್ಲದೆ ಅವರ ಆತ್ಮವಿಶ್ವಾಸ ಹಾಗೂ ಪ್ರತಿಭೆಗೆ ಸುವರ್ಣ ಸೂಪರ್ ಸ್ಟಾರ್ ಕಾರ್ಯಕ್ರಮವನ್ನು ವೇದಿಕೆ ಮಾಡಿಕೊಂಡಿದ್ದಾರೆ.
ಈ ಸಂಭ್ರಮದಲ್ಲಿ ಕಾರ್ಯಕ್ರಮದ ನಿರೂಪಕಿ ಹಾಗೂ ನಟಿ ಶಾಲಿನಿಯವರು ಮಾತನಾಡಿದ್ದು 'ಸುವರ್ಣ ಸೂಪರ್ ಸ್ಟಾರ್ ಸಾವಿರ ಸಂಚಿಕೆಗಳನ್ನು ಮುಟ್ಟಿರುವುದು ನನಗಂತೂ ಬಹಳ ಖುಷಿ ಇದೆ. ನಾನು ಈ ಕಾರ್ಯಕ್ರಮದ ನಿರೂಪಕಿಯಾಗಿ ನಿಮ್ಮೆಲ್ಲರ ಮುಂದೆ ಕಾಣಿಸಿಕೊಳ್ಳಬಹುದು. ಆದರೆ, ಇದರ ಹಿಂದೆ ಹಲವಾರು ಜನರ ಪರಿಶ್ರಮವಿದೆ. ಅವರು ಯಾರು ನನ್ನಂತೆ ಎದುರಿಗೆ ಕಾಣಿಸಿಕೊಳ್ಳದಿದ್ದರೂ ಪ್ರತಿದಿನ ಹಗಲು ರಾತ್ರಿ ಈ ಕಾರ್ಯಕ್ರಮದ ಯಶಸ್ವಿಗಾಗಿ ದುಡಿದಿದ್ದಾರೆ" ಎಂದು ಖಾಸಗಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಇದರ ಜೊತೆಗೆ "ಇದುವರೆಗೂ ಯಾವುದೇ ವಾಹಿನಿಯಲ್ಲಿ ಮಹಿಳೆಯರಿಗೇ ಮೀಸಲಿಟ್ಟ ಯಾವುದೇ ಕಾರ್ಯಕ್ರಮ ಇಷ್ಟು ದೂರ ನಡೆದು ಬಂದ ಇತಿಹಾಸವೇ ಇಲ್ಲ. ಅವರೆಲ್ಲರ ಪರಿಶ್ರಮದಿಂದಲೇ ಇಂದು ನಾವು ಈ ಘಟ್ಟದಲ್ಲಿ ನಿಂತಿದ್ದೇವೆ. ಹಾಗಾಗಿ ನಾನು ಅವರೆಲ್ಲರಿಗೂ ತುಂಬು ಹೃದಯದ ಧನ್ಯವಾದಗಳು ತಿಳಿಸುತ್ತೇನೆ" ಎಂದಿದ್ದಾರೆ.
ಸುವರ್ಣವಾಹಿನಿಯಲ್ಲಿ ಬರುವ 'ಸುವರ್ಣ ಸೂಪರ್ ಸ್ಟಾರ್'ನ ಇನ್ನೊಂದು ವಿಶೇಷತೆ ಎಂದರೆ ಇದರಲ್ಲಿ ಭಾಗವಹಿಸಿದ ಎಲ್ಲಾ ಮಹಿಳೆಯರಿಗೂ ಬಹುಮಾನದ ರೂಪದಲ್ಲಿ ಅಥವಾ ಕಾಣಿಕೆ ರೂಪದಲ್ಲಿ ಹೋಮ್ ಅಪ್ಲೈಯನ್ಸಸ್, ಅಡುಗೆ ಅಥವಾ ಗೃಹೋಪಯೋಗಿ ಉಪಕರಣಗಳನ್ನು ಕೊಡುವ ಮೂಲಕ ಅರ್ಥಪೂರ್ಣ ಉಡುಗೊರೆಗೂ ಉದಾಹರಣೆಯಾಗಿ ನಿಂತಿದೆ.


Click it and Unblock the Notifications











