ಕನ್ನಡ ಕಿರುತೆರೆಯಲ್ಲಿ ಭಕ್ತಿಯ ಹೊಳೆ ಹರಿಸಿದ ಧಾರಾವಾಹಿಗಳ್ಯಾವುದು? ನಿಮಗ್ಯಾವುದಿಷ್ಟು?
ಹಲವು ವಿಚಾರಗಳನ್ನು ಇಟ್ಟುಕೊಂಡು ಕಿರುತೆರೆ ಧಾರಾವಾಹಿಗಳು ಪ್ರಸಾರವಾಗುತ್ತಿದೆ. ಜನರು ತಮ್ಮ ಅಭಿರುಚಿಗೆ ಸರಿಯಾದ ಧಾರಾವಾಹಿಗಳನ್ನು ಆಯ್ದು ವೀಕ್ಷಿಸುತ್ತಾರೆ. ಕಾಮಿಡಿ, ಥ್ರಿಲ್ಲರ್, ರಾಜಕೀಯ, ಸಾಮಾಜಿಕ ಹೀಗೆ ಜನರಿಗೆ ಬಹುದೊಡ್ಡ ಆಯ್ಕೆಯ ಪಟ್ಟಿಯನ್ನು ಕನ್ನಡ ಕಿರುತೆರೆ ಕೊಟ್ಟಿದೆ.
ಈ ಪಟ್ಟಿಯನ್ನು ಮುಂದುವರಿಸುತ್ತಾ ಹೋಗುವುದಾದರೆ ದೈವ ಭಕ್ತಿಗೆ ಸಂಬಂಧಪಟ್ಟ ಹಲವು ಕನ್ನಡ ಧಾರಾವಾಹಿಗಳು ಪ್ರಸಾರವಾಗಿ ಜನಮನ ಗೆದ್ದಿವೆ. ಒಂದಷ್ಟು ಕನ್ನಡ ಕಿರುತೆರೆಯ ಭಕ್ತಿ ಪೂರಕ ಧಾರಾವಾಹಿಗಳ ಪಟ್ಟಿ ಇಲ್ಲಿದೆ

ಹೆಳವನ ಕಟ್ಟೆ ಗಿರಿಯಮ್ಮ
ಕನ್ನಡದ ಅಪ್ರತಿಮ ಕವಯಿತ್ರಿಗಳಲ್ಲೊಬ್ಬಳಾದ 'ಹೆಳವನಕಟ್ಟೆ ಗಿರಿಯಮ್ಮ' ವೇಣುಗೋಪಾಲ ಸ್ವಾಮಿಯ ಮಹಾಭಕ್ತೆ. ಈಕೆ ಕರ್ನಾಟಕದ ಮೊದಲ ಕವಯಿತ್ರಿ ಎಂದೂ ಹೇಳುತ್ತಾರೆ. ಹೆಳವನಕಟ್ಟೆ ಗಿರಿಯಮ್ಮನ ಜೀವನಾಧಾರಿತ ಧಾರವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿತ್ತು. ಗಿರಿಯಮ್ಮನ ಬಾಲ್ಯ ಹಾಗೂ ವೇಣುಗೋಪಾಲ ಸ್ವಾಮಿಯ ಮೇಲಿನ ಭಕ್ತಿ ಮುಂತಾದ ವಿಚಾರಗಳನ್ನು ಆಧಾರವಾಗಿಟ್ಟುಕೊಂಡು ಹಲವಾರು ಹರಿದಾಸ ಸಾಹಿತ್ಯವನ್ನು ಸೇರಿಸಿ ವೀಕ್ಷಕರ ಮುಂದೆ ಈ ಧಾರಾವಾಹಿಯನ್ನು ಪ್ರಸ್ತುತಪಡಿಸಲಾಗಿತ್ತು. ನಿರ್ದೇಶಕ ಸುಬ್ರಮಣ್ಯ ಎಮ್ ಕೆ ಅವರ ನಿರ್ದೇಶನದಲ್ಲಿ ಮೂಡಿ ಬಂದ ಈ ಧಾರಾವಾಹಿ ಕನ್ನಡ ಕಿರುತೆರೆ ಪ್ರೇಕ್ಷಕರ ಮನ ಗೆದ್ದಿತ್ತು. ಕಲಾವಿದರಾದ ಬೇಬಿ ಶ್ರೇಯ, ಚಿತ್ರಾ ಶೆಣೈ ಮುಂತಾದವರು ಈ ಧಾರಾವಾಹಿಯಲ್ಲಿ ನಟಿಸಿದ್ದಾರೆ.
ದೇವಿ
ನಟಿ ನಿರ್ದೇಶಕಿ ಶ್ರುತಿ ನಾಯ್ಡು ಅವರ ನಿರ್ದೇಶನದಲ್ಲಿ ಮೂಡಿ ಬಂದ 'ದೇವಿ' ಧಾರಾವಾಹಿ ಬಹುದೊಡ್ಡ ವೀಕ್ಷಕ ವೃಂದವನ್ನು ಪಡೆದಿತ್ತು. ನಟಿ ವೈಷ್ಣವಿ ಗೌಡ ಅವರ ಪ್ರಾಮುಖ್ಯ ಪಾತ್ರವಾದ 'ದೇವಿ' ಧಾರಾವಾಹಿ 2010 ರಿಂದ 2013ರವರೆಗೆ ಬರೋಬ್ಬರಿ ಮೂರು ವರ್ಷಗಳ ಕಾಲ ಜನಮನ ರಂಜಿಸಿತ್ತು. ದೇವಿಯನ್ನು ನಂಬುವ ಧೈರ್ಯವಂತ ಹುಡುಗಿಯ ಜೀವನದಲ್ಲಾಗುವ ಪವಾಡಗಳು ಈ ಧಾರಾವಾಹಿಯ ಮುಖ್ಯ ಕಥಾ ಹಂದರವಾಗಿತ್ತು. ಕಲಾವಿದರಾದ ಪವಿತ್ರ ಲೋಕೇಶ್, ಅಕ್ಷತಾ ಲೋಕೇಶ್ ವೈಷ್ಣವಿ ಗೌಡ ಅನಂತವೇಲು ರಮೇಶ್ ಇಂದಿರಾ ಮುಂತಾದವರು ಈ ಧಾರಾವಾಹಿಯಲ್ಲಿ ನಟಿಸಿದ್ದಾರೆ.
ಮಹಾದೇವಿ
ನಟಿ ನಿರ್ದೇಶಕಿ ಶ್ರುತಿ ನಾಯ್ಡು ಅವರದ್ದೇ ನಿರ್ದೇಶನದಲ್ಲಿ 'ಮಹಾದೇವಿ' ಎಂಬ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಯಿತು. ದೇವಿ ಅಸ್ತಿತ್ವವನ್ನು ದ್ವೇಷಿಸುವ ಸುಂದರಿ ಎಂಬ ಪಾತ್ರದ ಸುತ್ತ ಸುತ್ತುವ ಕಥೆ ಇದು. 2015 ರಿಂದ ಬರೋಬ್ಬರಿ ನಾಲ್ಕು ವರ್ಷಗಳ ಕಾಲ ಈ ಧಾರಾವಾಹಿ ಪ್ರೇಕ್ಷಕರನ್ನು ರಂಜಿಸಿತ್ತು. ಕಲಾವಿದರಾದ ಅರ್ಚನಾ ಜೋಯಿಸ್, ಮಾನಸ ಜೋಷಿ, ಸುಂದರ್ ರಾಜ್, ದಿವ್ಯಾ, ಸ್ವಾತಿ, ವೀಣಾ ಸುಂದರ್, ಗಗನಾ ಮುಂತಾದವರು ಈ ಧಾರಾವಾಹಿಯಲ್ಲಿ ನಟಿಸಿದ್ದಾರೆ.
ದಾಸ ಪುರಂದರ
2022 ರಲ್ಲಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಆರಂಭವಾದ ದಾಸ ಪುರಂದರ ಧಾರಾವಾಹಿ ವಿಭಿನ್ನ ತಾರಾಗಣ ಹಾಗೂ ವಿಶೇಷ ಧಾರಾವಾಹಿ ಸೆಟ್ ಮೂಲಕ ಜನಮನ ಆಕರ್ಷಿಸಿತು. ಶ್ರೀನಿವಾಸ ನಾಯಕ ಎಂಬ ಯುವಕ ಕೃಷ್ಣನ ಮೇಲಿನ ತನ್ನ ಭಕ್ತಿ ಹಾಗೂ ಕರ್ನಾಟಕ ಶಾಸ್ತ್ರೀಯ ಸಂಗೀತದ ಮೇಲಿನ ಆಸಕ್ತಿಯ ಮೂಲಕ ಪುರಂದರ ದಾಸನಾಗಿ ಜಗತ್ತಿಗೆ ಪರಿಚಯವಾಗುವ, ಕರ್ನಾಟಕದ ಹರಿದಾಸ ಸಾಹಿತಿಗಳಲ್ಲೊಬ್ಬರಾದ ಪುರಂದರ ದಾಸರ ಜೀವನ ಗಾಥೆಯೇ ದಾಸ ಪುರಂದರ ಧಾರಾವಾಹಿಯ ಕಥಾ ಹಂದರ. ಕಲಾವಿದರಾದ ದೀಪಕ್ ಸುಬ್ರಮಣ್ಯ, ಅಮೂಲ್ಯ ಭಾರದ್ವಾಜ್, ಚಂದ್ರಕಲಾ ಮೋಹನ್, ಚಂದ್ರಶೇಖರ್ ಶಾಸ್ತ್ರಿ, ಅನುರಾಗ್, ಲಕ್ಷ್ಮಿ ನಾಡಗೋಡು, ಹರೀಶ್ ಪ್ರಭಾತ್, ಶರ್ಮಿಳಾ, ಯಾಸೀನ್ ನಡಾಫ್, ದಿವ್ಯಶ್ರೀ ಗ್ರಾಮ, ಲಾವಣ್ಯ, ಛಾಯಶ್ರೀ, ಶ್ರೇಯ, ಆಖಿಲೇಶ್, ಮಹೇಶ್, ಅನಿಲ್, ಏನ್ ಟಿ ರಾಮಸ್ವಾಮಿ, ದೀಪಾ, ಆಶಾರಾಣಿ ನಾಗೇಶ್, ಶೋಭಾ ರೈ ಮುಂತಾದವರು ನಟಿಸಿದ್ದಾರೆ.


Click it and Unblock the Notifications











