Kaveri Kannada Medium: ಹಿರಿಯ ನಟಿ ಮಹಾಲಕ್ಷ್ಮಿ ಈ ಸೀರಿಯಲ್‌ನಿಂದಾನೇ ನಟನೆಗೆ ಮರಳಿದ್ಯಾಕೆ ಗೊತ್ತಾ..?
ಸ್ಟಾರ್ ಸುವರ್ಣ ಹೊಸ ಹೊಸ ಧಾರಾವಾಹಿಗಳನ್ನು ಕಿರುತೆರೆ ವೀಕ್ಷಕರಿಗೆ ನೀಡುತ್ತಲೇ ಇರುತ್ತೆ. ಅರ್ಥಪೂರ್ಣ ಧಾರಾವಾಹಿಗಳನ್ನು ವೀಕ್ಷಕರಿಗೆ ನೀಡುವ ನಿಟ್ಟಿನಲ್ಲಿ 'ಕಾವೇರಿ ಕನ್ನಡ ಮೀಡಿಯಂ' ಎಂಬ ಧಾರಾವಾಹಿ ಶುರು ಮಾಡಿದೆ. ಈ ಧಾರಾವಾಹಿ ಸದ್ಯದ ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಂತೆ ಆಗುತ್ತಾ ಎಂಬುದನ್ನು ನೋಡಬೇಕಿದೆ.
ಈ ಧಾರಾವಾಹಿಯಲ್ಲಿ ಮತ್ತೊಂದು ವಿಶೇಷ ಅಂದ್ರೆ, ಹಿರಿಯ ನಟಿ ಮಹಾಲಕ್ಷ್ಮಿ ಮತ್ತೆ ಕನ್ನಡಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ. 30 ವರ್ಷಗಳ ಬಳಿಕ ಮಹಾಲಕ್ಷ್ಮಿಯನ್ನು ಕಿರುತೆರೆಯಲ್ಲಿ ಕಂಡು ವೀಕ್ಷಕರು ಹಿರಿ ಹಿರಿ ಹಿಗ್ಗಿದ್ದಾರೆ. ಅದರಲ್ಲೂ ಧಾರಾವಾಹಿ ಲೋಕಕ್ಕೆ ಬಂದು, ಕಿರುತೆರೆ ಪ್ರಿಯರನ್ನು ರಂಜಿಸುವುದಕ್ಕೆ ಹೊರಟಿದ್ದಾರೆ. ಸ್ಟಾರ್ ಸುವರ್ಣದಲ್ಲಿ 'ಕಾವೇರಿ ಕನ್ನಡ ಮೀಡಿಯಂ' ಧಾರಾವಾಹಿಗೆ ಯಾಕೆ ಬಂದೆ ಅನ್ನೋದನ್ನು ಹಂಚಿಕೊಂಡಿದ್ದಾರೆ.

ಯಜಮಾನಿ ಪಾತ್ರದಲ್ಲಿ ಮಹಾಲಕ್ಷ್ಮಿ
ಮಹಾಲಕ್ಷ್ಮಿ ಆ ಕಾಲದಲ್ಲಿ ಟಾಪ್‌ನಲ್ಲಿದ್ದ ನಟಿ. ಮದುವೆಯಾದ ಮೇಲೆ ಕೊಂಚ ಬ್ರೇಕ್ ತೆಗೆದುಕೊಂಡಿದ್ದರು. ಮಕ್ಕಳು, ಮೊಮ್ಮಕ್ಕಳು ಅಂತ ಚೆನ್ನೈನಲ್ಲಿ ಸೆಟಲ್ ಆಗಿದ್ದ ಮಹಾಲಕ್ಷ್ಮಿ ಇದೀಗ 'ಕಾವೇರಿ ಕನ್ನಡ ಮೀಡಿಯಂ' ಅನ್ನೋ ಧಾರಾವಾಹಿ ಮೂಲಕ ಬಂದಿದ್ದಾರೆ. ಹಿರಿಯ ನಟಿಯರು ಧಾರಾವಾಹಿಗೆ ಬರ್ತಾರೆ ಅಂದ್ರೆ ಅವರಿಗೆ ದೊಡ್ಡ ಪಾತ್ರವನ್ನೇ ಕೊಡುತ್ತೆ ವಾಹಿನಿ. ಕಡಿಮೆ ಸಮಯದ ಪಾತ್ರವಾದರೂ ಬಹಳ ಮುಖ್ಯವಾದ ಪಾತ್ರವಾಗಿರುತ್ತದೆ. ಈಗ ಮಹಾಲಕ್ಷ್ಮಿಯವರದ್ದು ಮನೆಯ ಯಜಮಾನಿಯ ಪಾತ್ರ.
ಮಕ್ಕಳು ಹೇಗೆ ನೋಡಿಕೊಳ್ತಾರೆ..?
ಸದ್ಯ ಸ್ಟಾರ್ ಸುವರ್ಣ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಮಹಾಲಕ್ಷ್ಮಿ ಸೆಟ್‌ನಲ್ಲಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಶೂಟಿಂಗ್ ಸಮಯದಲ್ಲಿ ಏನೆಲ್ಲ ಮಾಡ್ತಾರೆ ಎಂಬುದನ್ನು ಈ ವಿಡಿಯೋದಲ್ಲಿ ತೋರಿಸಿದ್ದಾರೆ. ಮನೆಯ ಯಜಮಾನಿಯಾಗಿರುವುದರಿಂದ ಆಯಾಸವಾದ ಮಹಾಲಕ್ಷ್ಮಿಯವರನ್ನು ಮನೆಯವರೆಲ್ಲ ಕಾಳಜಿ ವಹಿಸುತ್ತಿರವುದು ವಿಡಿಯೋದಲ್ಲಿ ಕಾಣುತ್ತಿದೆ. ಹಿರಿಯರನ್ನು ಗೌರವಿಸುವುದು ಕಾಣುತ್ತಿದೆ. ತಾಯಿಯ ಪಕ್ಕದಲ್ಲಿಯೇ ಮಗ ಕೂತು ಕಾಳಜಿ ವಹಿಸಿದ್ದಾನೆ.

ಕಮ್ ಬ್ಯಾಕ್ ಬಗ್ಗೆ ಹೇಳಿದ್ದೇನು..?
ಇನ್ನು ಧಾರಾವಾಹಿಗೆ ಕಮ್ ಬ್ಯಾಕ್ ಆಗಿದ್ದರ ಬಗ್ಗೆ ಮಹಾಲಕ್ಷ್ಮಿ ಮಾತನಾಡಿದ್ದು, " 30 ವರ್ಷಗಳ ಕಾಲ ಚಿತ್ರರಂಗದಲ್ಲಿದ್ದು, ಸ್ವಲ್ಪ ರಿಲ್ಯಾಕ್ಸ್ ಆಗಿದ್ದೀನಿ. ನಿಮ್ಮ ಸಪೋರ್ಟ್ ನಂಗೆ ಬೇಕು. ನಮ್ಮ ಟೀಂಗೆ ಬೇಕು. ಈ ಸಿನಿಮಾ ಪ್ರೊಫೇಷನ್‌ಗೆ ಆಸೆ ಪಟ್ಟು ಬಂದಿದ್ದೆ. ಈಗಲೂ ಆ ಆಸೆ ಹಾಗೇ ಇದೆ. ಕೆಲಸ ಮಾಡಬೇಕು, ದುಡಿಬೇಕು, ಈ ವಯಸ್ಸಲ್ಲೂ ದುಡಿಬೇಕು ಎಂಬುದಿದೆ. ಬೆಂಬಲ ಚೆನ್ನಾಗಿಯೇ ಸಿಕ್ಕಿದೆ. ಅಂದು ಸಿಕ್ಕಿದೆ, ಇಂದು ಯಂಗ್ ಸ್ಟಾರ್‌ಗಳು ಬೆಂಬಲ ನೀಡುತ್ತಲೇ ಬಂದಿದ್ದಾರೆ." ಎಂದು ಹೇಳಿದ್ದಾರೆ. ಈ ಮೂಲಕ ಧಾರಾವಾಹಿ ಟೀಂನಲ್ಲೂ ಎಲ್ಲರೂ ಚೆನ್ನಾಗಿ ನೋಡಿಕೊಳ್ಳುತ್ತಿರುವ ಬಗ್ಗೆ ತಿಳಿಸಿದ್ದಾರೆ.
ಸಪೋರ್ಟ್ ಮಾಡಲು ಕೇಳಿದ ಹಿರಿಯ ನಟಿ
ಇನ್ನು ಹಿರಿಯ ನಟಿ ಮಹಾಲಕ್ಷ್ಮೀ ಅವರ ಕ್ಯಾರೆಕ್ಟರ್ ಹೇಗಿರಬಹುದು ಎಂಬುದು ಎಲ್ಲರಿಗೂ ಕುತೂಹಲವೇ ಸರಿ. ಇಂದಿನಿಂದ ಧಾರಾವಾಹಿ ಕೂಡ ಆರಂಭವಾಗಿದೆ. ಅದರ ಜೊತೆಗೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. "ಇದರಲ್ಲಿ ನನ್ನ ಕ್ಯಾರೆಕ್ಟರ್ ತುಂಬಾ ತುಂಬಾ ಸ್ಪೂರ್ತಿ ನೀಡುವಂತ ಕ್ಯಾರೆಕ್ಟರ್. ಕಾವೇರಿ ಕನ್ನಡ ಮೀಡಿಯಂನಿಂದ ಕಮ್ ಬ್ಯಾಕ್ ಮಾಡಿರೋದಕ್ಕೆ ತುಂಬಾ ಖುಷಿ ಇದೆ. ಎಲ್ಲರೂ ಸಪೋರ್ಟ್ ಮಾಡಿ, ಧಾರಾವಾಹಿಯನ್ನು ನೋಡಿ" ಎಂದಿದ್ದಾರೆ. ಮಹಾಲಕ್ಷ್ಮಿ 'ಕಾವೇರಿ ಕನ್ನಡ ಮೀಡಿಯಂ' ಧಾರಾವಾಹಿಯಲ್ಲಿ ಅಭಿನಯಿಸ್ತಾ ಇರೋದಕ್ಕೆ ಇಡೀ ಟೀಂ ಖುಷಿಯಾಗಿದೆ.


Click it and Unblock the Notifications











