Bigg Boss: ನೂರು ದಿನ ದೊಡ್ಮನೆ ಒಳಗೆ ಇರುತ್ತಾ ಚಾರ್ಲಿ? ತರಬೇತುದಾರ ಪ್ರಮೋದ್ ಏನಂತಾರೆ?
ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್. ಹಿಂದಿಯಲ್ಲಿ ಶುರುವಾದ ಈ ಶೋ ಮುಂದೆ ಕನ್ನಡ, ತೆಲುಗು ಸೇರಿದಂತೆ ಹಲವು ಭಾಷೆಗಳಲ್ಲಿ ಆರಂಭವಾಗಿ ವೀಕ್ಷಕರನ್ನು ರಂಜಿಸುತ್ತಿದೆ. ಬಿಗ್‌ಬಾಸ್ ಕನ್ನಡ ಸೀಸನ್- 10ಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಪ್ರತಿಬಾರಿ ಬಿಗ್ ಬಾಸ್ ಶೋ ಹಲವು ಅಚ್ಚರಿಗಳನ್ನು ಹೊತ್ತು ಬರುತ್ತದೆ.
ವಿವಿಧ ಕ್ಷೇತ್ರಗಳ ವ್ಯಕ್ತಿಗಳನ್ನು ಒಂದು ಮನೆಯಲ್ಲಿ ಕೂಡಿ ಹಾಕಿ ಅವರ ಸುತ್ತಾ ಹತ್ತಾರು ಕ್ಯಾಮರಾಗಳನ್ನು ಇಟ್ಟು ಅವರ ಚಲನವಲನಗಳನ್ನು ಸೆರೆ ಹಿಡಿಯಲಾಗುತ್ತದೆ. ಟಾಸ್ಕ್‌ಗಳನ್ನು ಕೊಟ್ಟು ಸ್ಪರ್ಧಿಗಳ ಸಾಮರ್ಥ್ಯವನ್ನು ಪರೀಕ್ಷಿಸಲಾಗುತ್ತದೆ. ಇಡೀ ದಿನದ ಹೈಲೆಟ್ಸ್‌ನ ಕಟ್ ಮಾಡಿ ಪ್ರತಿದಿನ ಸಂಜೆ ಟಿವಿಯಲ್ಲಿ ಪ್ರಸಾರ ಮಾಡಲಾಗುತ್ತದೆ. ಶನಿವಾರ ಮತ್ತು ಭಾನುವಾರ ವಾರದ ಕತೆ ಕಿಚ್ಚ ಜೊತೆ ನಡೆಯುತ್ತದೆ. ಈ ಬಾರಿ ಕೂಡ ಕಿಚ್ಚ ಸುದೀಪ್ ಶೋ ಹೋಸ್ಟ್ ಮಾಡಲಿದ್ದಾರೆ.

ಸಿನಿಮಾ, ಕಿರುತೆರೆ, ಮಾಡೆಲಿಂಗ್, ಸ್ಪೋರ್ಟ್ಸ್ ಹೀಗೆ ವಿವಿಧ ಕ್ಷೇತ್ರಗಳ ಸ್ಪರ್ಧಿಗಳು ಶೋನಲ್ಲಿ ಭಾಗವಹಿಸುತ್ತಾರೆ. ಆದರೆ ಕನ್ನಡ ಬಿಗ್‌ಬಾಸ್ ಶೋನಲ್ಲಿ ಇದೇ ಮೊದಲ ಬಾರಿಗೆ ಒಂದು ವಿನೂತನ ಪ್ರಯತ್ನ ಮಾಡಲಾಗುತ್ತಿದೆ. ಹೌದು, '777 ಚಾರ್ಲಿ' ಚಿತ್ರದಲ್ಲಿ ನಟಿಸಿದ ಹೆಣ್ಣು ಶ್ವಾನವನ್ನು ಬಿಗ್‌ಬಾಸ್ ಮನೆ ಒಳಗೆ ಕಳುಹಿಸಲಾಗುತ್ತಿದೆ. ಸಾಮಾನ್ಯವಾಗಿ ಸಿನಿಮಾಗಳಲ್ಲಿ ಪ್ರಾಣಿಗಳನ್ನು ತೋರಿಸುವ ಪ್ರಯತ್ನ ನಡೆದಿತ್ತು. ಆದರೆ ರಿಯಾಲಿಟಿ ಶೋನಲ್ಲೂ ಅದರಲ್ಲೂ ಬಿಗ್ ಬಾಸ್ ರೀತಿಯ ಶೋನಲ್ಲಿ ಶ್ವಾನ ಭಾಗವಹಿಸುತ್ತಿರುವುದು ಇದೇ ಮೊದಲು.
ಅಕ್ಟೋಬರ್ 8 ರಿಂದ 'ಬಿಗ್ ಬಾಸ್' ಕನ್ನಡ ಸೀಸನ್- 10 ಆರಂಭವಾಗಲಿದೆ. ಅಕ್ಟೋಬರ್ 8 ರಂದು ಗ್ರ್ಯಾಂಡ್ ಓಪನಿಂಗ್ ಇರುತ್ತದೆ. ಬಳಿಕ ಸೋಮವಾರದಿಂದ ನೂರು ದಿನಗಳ ಕಾಲ ಶೋ ಪ್ರದರ್ಶನವಾಗಲಿದೆ. ಈ ಬಾರಿ ಯಾರೆಲ್ಲಾ ಬಿಗ್‌ಬಾಸ್ ಮನೆ ಪ್ರವೇಶ ಮಾಡುತ್ತಾರೆ ಎನ್ನುವ ಕುತೂಹಲ ಇದೆ. ಯೂಟ್ಯೂಬರ್ ಡಾ. ಬ್ರೋ, ಶಾಸಕ ಪ್ರದೀಪ್ ಈಶ್ವರ್, ರಕ್ಷಕ್ ಬುಲೆಟ್ ಹೀಗೆ ಹಲವರನ್ನು ವೀಕ್ಷಕರು ದೊಡ್ಮನೆಯಲ್ಲಿ ನೋಡಲು ಬಯಸುತ್ತಿದ್ದಾರೆ.

ರಕ್ಷಿತ್ ಶೆಟ್ಟಿ ನಟನೆಯ '777 ಚಾರ್ಲಿ' ಚಿತ್ರದಲ್ಲಿ ನಟಿಸಿದ್ದ ಲ್ಯಾಬ್ರೆಡಾರ್ ಶ್ವಾನ ಸಿನಿರಸಿಕರ ಮನಗೆದ್ದಿತ್ತು. ಮೈಸೂರು ತಾಲೂಕಿನ ಡಿ. ಸಾಲುಂಡಿಯ ಪ್ರಮೋದ್ ಆ ಶ್ವಾನಕ್ಕೆ ತರಬೇತಿ ನೀಡಿದ್ದರು. ಆ ಸಿನಿಮಾ ಬಳಿಕ ಬೇರೆ ಬೇರೆ ಭಾಷೆ ಸಿನಿಮಾಗಳಿಂದ ಚಾರ್ಲಿಗೆ ಅವಕಾಶ ಬಂದಿತ್ತು. ಆದರೆ ಚಿತ್ರತಂಡ ಮಾತ್ರ ಅದಕ್ಕೆ ಒಪ್ಪಲಿಲ್ಲ. ಶ್ವಾನಕ್ಕೆ ರೆಸ್ಟ್ ನೀಡಲು ಬಯಸಿತ್ತು. ಆದರೆ ಇದೀಗ ಬಿಗ್‌ಬಾಸ್ ಮನೆಗೆ ಚಾರ್ಲಿ ಹೋಗುತ್ತಿರುವುದು ವಿಶೇಷ.
ಬಿಗ್‌ಬಾಸ್ ಮನೆಗೆ ಚಾರ್ಲಿ ಹೋಗುತ್ತಿರುವ ಬಗ್ಗೆ ತರಬೇತುದಾರ ಪ್ರಮೋದ್ ಫಿಲ್ಮಿಬೀಟ್ ಜೊತೆ ಮಾತನಾಡಿದ್ದಾರೆ. "ಚಾರ್ಲಿ ಬಿಗ್‌ಬಾಸ್ ಮನೆಗೆ ಹೋಗುತ್ತಿರುವುದು ಖುಷಿಯಾಗುತ್ತಿದೆ. ಅದಕ್ಕಾಗಿ ಎಲ್ಲಾ ಸಿದ್ಧತೆ ನಡೀತಿದೆ. ಚಾರ್ಲಿ ದೊಡ್ಮೆನೆ ಒಳಗೆ ಹೋಗುತ್ತಿರುವುದು ನಿಜ. ಎಷ್ಟು ದಿನ ಇರುತ್ತದೆ? ಏನು ಕತೆ ಎನ್ನುವುದು ಮಾತ್ರ ಗೊತ್ತಿಲ್ಲ. ಗ್ರ್ಯಾಂಡ್ ಫಿನಾಲೆ ದಿನವೇ ಮನೆಯೊಳಗೆ ಪ್ರವೇಶಿಸುತ್ತದೆ. ನಾನು ಕೂಡ ಸೆಟ್‌ನಲ್ಲಿ ಇರ್ತೀನಿ. ಚಾರ್ಲಿಯನ್ನು ನೋಡಿಕೊಳ್ಳುತ್ತೇನೆ" ಎಂದಿದ್ದಾರೆ.
ಪ್ರತಿದಿನ ರಾತ್ರಿ 9.30ಕ್ಕೆ ಬಿಗ್‌ಬಾಸ್-10 ಶೋ ಪ್ರಸಾರವಾಗುವ ಸಾಧ್ಯತೆಯಿದೆ. '777 ಚಾರ್ಲಿ' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಕ್ಸಸ್ ಕಂಡಿತ್ತು. ಕನ್ನಡ ಸಿನಿರಸಿಕರು ಮಾತ್ರವಲ್ಲ ಪರಭಾಷಿಕರು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು. ಚಾರ್ಲಿ ಮೋಡಿಗೆ ಮರುಳಾಗಿದ್ದರು. ಇದೀಗ ಚಾರ್ಲಿ ಬಿಗ್‌ಬಾಸ್ ಮನೆಯೊಳಗೆ ಹೋಗುತ್ತಿರುವುದು ಸಹಜವಾಗಿಯೇ ವೀಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಎಷ್ಟು ದಿನಗಳ ಕಾಲ ಚಾರ್ಲಿ ದೊಡ್ಮನೆಯಲ್ಲಿ ಇರುತ್ತೆ ಕಾದು ನೀಡಬೇಕು.


Click it and Unblock the Notifications











