'ಆಸೆ'ಯೇ ದುಃಖಕ್ಕೆ ಮೂಲ ; ಅಮೃತಾ ಜಾಗಕ್ಕೆ ಬಂದಿದ್ದ ರೋಶಿನಿ ಒಂದೇ ದಿನಕ್ಕೆ ಸುಸ್ತು-ಈ ಮ್ಯೂಸಿಕಲ್ ಚೇರ್ ರಹಸ್ಯವೇನು?
"ಆಸೆ"ಯೇ ದುಃಖಕ್ಕೆ ಮೂಲ .. ಗೌತಮ ಬುದ್ದನ ಈ ಮಾತು ಕನ್ನಡ ಧಾರಾವಾಹಿ ''ಆಸೆ'' ವಿಚಾರದಲ್ಲಿ ಅಕ್ಷರಶಃ ನಿಜವಾಗುತ್ತಿದೆ. ಯಾಕೆಂದರೆ.. ಹಿಂದೊಮ್ಮೆ ಈ ಧಾರಾವಾಹಿಯನ್ನು ಪ್ರೇಕ್ಷಕರು ಕುತೂಹಲದಿಂದ ನೋಡುತ್ತಿದ್ದರು. ಮುಂದೇನಾಗಬಹುದು ಎಂದು ಕಾತುರದಿಂದ ತುಂಬಾ ''ಆಸೆ''ಯಿಂದ ಕಾಯುತ್ತಿದ್ದರು. ಆದರೆ ಈಗ ಇದೇ ''ಆಸೆ'' ಪ್ರೇಕ್ಷಕರ ನಿರಾಸೆಗೆ ಕಾರಣವಾಗುತ್ತಿದೆ. ಸಂಚಿಕೆಯಲ್ಲಿನ ತಿರುವುಗಳಿಗಿಂತ ತೆರೆ ಮರೆಯ ಹಿಂದಿನ ಕಸರತ್ತು ಪ್ರೇಕ್ಷಕರ ಕುತೂಹಲವನ್ನು ಕೆರಳಿಸುತ್ತಿದೆ.
ಹೌದು, ಎಲ್ಲರಿಗೆ ಗೊತ್ತಿರುವಂತೆ ''ಆಸೆ'' ಧಾರಾವಾಹಿಯಲ್ಲಿ ರೋಹಿಣಿ ಎಂಬ ಪವರ್ ಫುಲ್ ಪಾತ್ರವನ್ನು ಮೊನ್ನೆಯವರೆಗೆ ''ಕುಲವಧು'' .. ''ಕಸ್ತೂರಿ ನಿವಾಸ'' .. ಧಾರಾವಾಹಿಗಳ ಮೂಲಕ ಮನೆ ಮಾತಾದ, ''ಮಿಸ್ಟರ್ & ಮಿಸೆಸ್ ರಂಗೇಗೌಡ'' .. ''ಮೇಘ ಮಯೂರಿ''.. ಧಾರಾವಾಹಿಗಳಲ್ಲಿ ಕೂಡ ಕಾಣಿಸಿಕೊಂಡು ಗಮನ ಸೆಳೆದ ಅಮೃತಾ ರಾಮಮೂರ್ತಿ ಮಾಡುತ್ತಿದ್ದರು. ಆದರೆ.. ಅದೇನಾಯ್ತು ಗೊತ್ತಿಲ್ಲ. ಅಮೃತಾ ಏಕಾಏಕಿ ಆಸೆ ಜೊತೆಗಿನ ತಮ್ಮ ಸಂಬಂಧ ಕಡಿದುಕೊಂಡರು. ಏಕಾಏಕಿ ಧಾರಾವಾಹಿಯಿಂದ ಹೊರ ಬಂದರು.

ಸಾಕಷ್ಟು ಕಾರಣಗಳಿಂದ ನಾನು ಈ ಧಾರಾವಾಹಿಯಿಂದ ಹೊರನಡೆಯುತ್ತಿದ್ದೇನೆ ಎಂದು ಹೇಳಿದ್ದ ಅಮೃತಾ ರಾಮಮೂರ್ತಿ ನೀವೆಲ್ಲರೂ ''ಆಸೆ'' ಸೀರಿಯಲ್ ಮೇಲೆ ತುಂಬಾ ಪ್ರೀತಿ ತೋರಿಸಿದ್ದೀರಿ. ಹಾಗೇ ನನ್ನ ಮೇಲೂ ತುಂಬಾ ಪ್ರೀತಿ ತೋರಿಸಿದ್ದೀರ, ಈ ಪ್ರೀತಿ ಸದಾ ಹೀಗೇ ಇರಲಿ ಎಂದು ಮನವಿ ಮಾಡಿಕೊಂಡಿದ್ದರು. ನಾನು ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳುತ್ತೇನೆ, ಒಂದು ಚಿಕ್ಕ ಬ್ರೇಕ್ ಪಡೆದು ಮತ್ತೆ ಮರಳಿ ಬರುತ್ತೇನೆ, ಅಲ್ಲಿವರೆಗೂ ನನಗೆ ಇಷ್ಟೆಲ್ಲ ಸಪೋರ್ಟ್ ಮಾಡಿದ ನಿಮಗೆಲ್ಲ ತುಂಬು ಹೃದಯದ ಧನ್ಯವಾದಗಳು ಎಂದು ಅಮೃತಾ ತಮ್ಮ ಅಭಿಮಾನಿಗಳಿಗೆ ವಿಡಿಯೋ ಮೂಲಕ ಸಂದೇಶವನ್ನು ರವಾನೆ ಮಾಡಿದ್ದರು.
ಅಮೃತಾ ಈ ಧಾರಾವಾಹಿಯಿಂದ ಹೊರ ಬಂದ ನಂತರ ಅವರ ಜಾಗಕ್ಕೆ ''ಕಿನ್ನರಿ'' ಧಾರಾವಾಹಿಯ ಮೂಲಕ ಮನೆ ಮಾತಾದ ರೋಶಿನಿ ತೇಲ್ಕರ್ ಬಂದಿದ್ದರು. ಆದರೆ.. ಅಚ್ಚರಿ ಅಂದರೆ, ಹೀಗೆ ಬಂದ ರೋಶಿನಿ ಕೇವಲ ಒಂದೇ ದಿನಕ್ಕೆ ಸುಸ್ತಾಗಿದ್ದಾರೆ. "ಆಸೆ" ತಂಡಕ್ಕೆ ದೀರ್ಘ ದಂಡ ನಮಸ್ಕಾರ ಹಾಕಿ ಧಾರಾವಾಹಿಯಿಂದ ಹೊರ ಬಂದಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾ ಮೂಲಕ ತಾವು ''ಆಸೆ'' ಧಾರಾವಾಹಿಯಿಂದ ಹೊರ ಬಂದಿರುವ ವಿಷಯವನ್ನು ಕೂಡ ತಿಳಿಸಿದ್ದಾರೆ.
ಅಮೃತಾ ರಾಮಮೂರ್ತಿ ಅವರ ನಿರ್ಗಮನದಿಂದ ಮೊದಲೇ ಬೇಸರಗೊಂಡಿದ್ದ ಅಭಿಮಾನಿಗಳಿಗೆ ಈಗ ರೋಶಿನಿಯ ಈ ಹಠಾತ್ ಎಕ್ಸಿಟ್‌ನಿಂದಾಗಿ ಗಾಯದ ಮೇಲೆ ಬರೆ ಎಳೆದಂತಾಗಿದೆ. ಒಬ್ಬರ ಹಿಂದೆ ಒಬ್ಬರು ಧಾರಾವಾಹಿಯಿಂದ ಹೊರ ಬಂದಿರುವುದು ಕಿರುತೆರೆ ವಲಯದಲ್ಲಿ ವ್ಯಾಪಕ ಚರ್ಚೆಗೆ ಕೂಡ ಕಾರಣವಾಗಿದೆ.
ವ್ಯೆಯಕ್ತಿಕ ಕಾರಣಗಳಿಂದ ಅಮೃತಾ ಧಾರಾವಾಹಿಯಿಂದ ಹೊರ ಬಂದಿರಬಹುದು, ಆದರೆ.. ರೋಶಿನಿ ತೇಲ್ಕರ್ ಕೇವಲ ಒಂದೇ ದಿನಕ್ಕೆ ಹೊರ ಬಂದಿದ್ದೇಕೆ..? ಎನ್ನುವ ಪ್ರಶ್ನೆ ಸದ್ಯ ಹಲವರನ್ನು ಕಾಡುತ್ತಿದೆ. ತಂಡದಲ್ಲಿ ಭಿನ್ನಾಭಿಪ್ರಾಯಗಳಿವೆಯಾ..? ಅಸ್ಥಿರದ ವಾತಾವರಣ ಇದೆಯಾ..? ಹೀಗೆ ಕಿರುತೆರೆ ವಲಯದಿಂದ ಹಿಡಿದು ಪ್ರೇಕ್ಷಕರ ಬಣದವರೆಗೆ ''ಆಸೆ'' ಧಾರಾವಾಹಿಯ ಈ ಬದಲಾವಣೆಗಳ ಕುರಿತು ಚರ್ಚೆ ನಡೆಯುತ್ತಿದೆ.

ಇನ್ನೂ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸೋಶಿಯಲ್ ಮೀಡಿಯಾದಲ್ಲಿ ಕೆಲ ಧಾರಾವಾಹಿ ಪ್ರೇಮಿಗಳು ತಮ್ಮ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಪದೇ ಪದೇ ಪ್ರಮುಖ ನಾಯಕಿಯನ್ನು ಬದಲು ಮಾಡಿದರೆ ಕಥೆಯ ಜೊತೆಗಿನ ನಮ್ಮ ಭಾವನಾತ್ಮಕವಾದ ಸಂಬಂಧ ಕಡಿದು ಹೋಗುತ್ತೆ ಎಂದು ತಮ್ಮ ನೋವು ವ್ಯಕ್ತಪಡಿಸುತ್ತಿದ್ದಾರೆ. ರೋಹಿಣಿ ಪಾತ್ರವನ್ನು ಮಾಡಲು ಇನ್ನೂ ಯಾರ್ಯಾರು ಬರ್ತಾರೋ ಏನೋ ಎಂದು ಕೂಡ ಕೆಲವರು ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.
ಒಟ್ನಲ್ಲಿ ಸದ್ಯ ''ಆಸೆ''ಧಾರಾವಾಹಿಯಿಂದ ಅಮೃತಾ ರಾಮಮೂರ್ತಿ ಅವರ ಬೆನ್ನಲ್ಲೇ ರೋಶಿನಿ ಕೂಡ ಹೊರ ಬಂದಿದ್ದಾರೆ. ರೋಹಿಣಿ ಪಾತ್ರ ಯಾರ ಪಾಲಾಗುತ್ತೆ ಎನ್ನುವುದನ್ನು ನೋಡಬೇಕಿದೆ. ಈ ಮ್ಯೂಸಿಕಲ್ ಚೇರ್ ಹಿಂದಿನ ಅಸಲಿ ರಹಸ್ಯವನ್ನು ಧಾರಾವಾಹಿ ತಂಡವೇ ಹೇಳಬೇಕಿದೆ.


Click it and Unblock the Notifications











