ಗಿಲ್ಲಿ, ಕಾವು ಟ್ಯಾಟೂ ಹಾಕಿಸಿಕೊಂಡು ಅಭಿಮಾನಿ ಬೇಡಿಕೆ; ಕಾವ್ಯಾ ಪ್ರತಿಕ್ರಿಯೆ ಏನು?
ಈ ಬಾರಿ ಬಿಗ್‌ಬಾಸ್ ಕನ್ನಡ ಸೀಸನ್ ಸೂಪರ್ ಹಿಟ್ ಆಗಿದೆ. ಗಿಲ್ಲಿ ಎಲ್ಲರ ಗಮನ ಸೆಳೆದಿದ್ದು ಗೊತ್ತೇಯಿದೆ. ದಾಖಲೆ ಮಟ್ಟದಲ್ಲಿ ವೀಕ್ಷಕರು ತಮ್ಮ ನೆಚ್ಚಿನ ಸ್ಪರ್ಧಿಗಳಿಗೆ ವೋಟ್ ಮಾಡಿದ್ದರು. ಗಿಲ್ಲಿ, ಕಾವ್ಯಾ, ಅಶ್ವಿನಿ, ರಕ್ಷಿತಾ ಹಾಗೂ ಧ್ರುವಂತ್ ದೊಡ್ಡಮಟ್ಟದಲ್ಲಿ ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿದ್ದಾರೆ. ಗಿಲ್ಲಿ, ಕಾವ್ಯಾ ಭಾವಚಿತ್ರಗಳನ್ನು ಟ್ಯಾಟೂ ಹಾಕಿಸಿಕೊಂಡಿರುವ ಅಭಿಮಾನಿಗಳು ಇದ್ದಾರೆ.
ಬಿಗ್‌ಬಾಸ್ ಮನೆಯಲ್ಲಿ ಗಿಲ್ಲಿ ಹಾಗೂ ಕಾವ್ಯಾ ಜೋಡಿ ಮೋಡಿ ಮಾಡಿತ್ತು. ಕಾವು ಕಾವು ಎಂದು ಕಾವ್ಯಾ ಶೈವ ಹಿಂದೆ ಗಿಲ್ಲಿ ಸುತ್ತಾಡಿದ್ದರು. ಇವರಿಬ್ಬರ ಸ್ನೇಹ, ಕಿರಿಕ್ ಎಲ್ಲವೂ ವೀಕ್ಷಕರ ಗಮನ ಸೆಳೆದಿತ್ತು. ಇಬ್ಬರ ಹೆಸರಿನಲ್ಲಿ ಫ್ಯಾನ್ ಪೇಜ್‌ಗಳು ಹುಟ್ಟಿಕೊಂಡವು. ಇಬ್ಬರೂ ಮದುವೆ ಆಗಬೇಕು ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಇಲ್ಲೊಬ್ಬ ಅಭಿಮಾನಿ ಇವರಿಬ್ಬರ ಭಾವಚಿತ್ರಗಳನ್ನು ತಮ್ಮ ಭುಜದ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದಾರೆ.

ಲವ ಎಂಬ ಅಭಿಮಾನಿಯೊಬ್ಬರು ತಮ್ಮ ಬಲಗೈ ಭುಜದ ಮೇಲೆ ಗಿಲ್ಲಿ ಭಾವಚಿತ್ರ ಹಾಗೂ ಎಡಗೈ ಭುಜದ ಮೇಲೆ ಕಾವ್ಯಾ ಶೈವ ಭಾವಚಿತ್ರವನ್ನು ಟ್ಯಾಟೂ ಹಾಕಿಸಿಕೊಂಡು ಅಭಿಮಾನ ಮೆರೆದಿದ್ದಾರೆ. ಇಬ್ಬರನ್ನು ಭೇಟಿ ಆಗಲು ಮನಸ್ಸು ಮಾಡಿದ್ದಾರೆ. ಈಗಾಗಲೇ ಗಿಲ್ಲಿ ಅವರನ್ನು ಭೇಟಿ ಮಾಡಿ ಮಾತನಾಡಿ ಜೊತೆಗೆ ಫೋಟೊ ಕ್ಲಿಕ್ಕಿಸಿಕೊಂಡು ಖುಷಿಯಾಗಿದ್ದಾರೆ. ಕಾವ್ಯಾ ಅವರ ಭೇಟಿಗೆ ಬೇಡಿಕೆ ಇಟ್ಟಿದ್ದಾರೆ. ಎಂಸಿಆರ್ ಮಧು ಎಂಬುವವರು ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೋ ಹಂಚಿಕೊಂಡಿದ್ದಾರೆ.
ಇವ್ರು ಲವ, ಅಂತ ಗಿಲ್ಲಿ ಹಾಗೂ ಕಾವ್ಯಾ ಅವರ ಹುಚ್ಚು ಅಭಿಮಾನಿ. ಕಾವ್ಯಾ ಅವರನ್ನು ಯಾರಾದರೂ ಭೇಟಿ ಮಾಡಿಸಿ ಎಂದು ಕೇಳುತ್ತಿದ್ದಾರೆ. ಯಾರಾದರೂ ಕಾವ್ಯಾ ಅವರನ್ನು ಭೇಟಿ ಮಾಡಿಸಿ ಎಂದು ವಿಡಿಯೋದಲ್ಲಿ ಮನವಿ ಮಾಡಿದ್ದಾರೆ. ಈ ವೀಡಿಯೋ ವೈರಲ್ ಆಗಿದ್ದು ಕಾವ್ಯಾ ಶೈವ ಕೂಡ ರಿಪ್ಲೇ ಮಾಡಿದ್ದಾರೆ. "ಅವರನ್ನು ಭೇಟಿಯಾಗಲು ಇಷ್ಟಪಡುತ್ತೇನೆ. ಇವತ್ತೇ ಕಾಂಟೆಕ್ಟ್ ಮಾಡ್ತೀನಿ" ಎಂದು ಕಾಮೆಂಟ್ ಮಾಡಿದ್ದಾರೆ. ಸಾಕಷ್ಟು ಜನ ಅಭಿಮಾನಿಗಳು ಅದಕ್ಕೆ ಪ್ರತಿಕ್ರಿಯಿಸಿದ್ದಾರೆ.
ಕಿರುತೆರೆ ಧಾರಾವಾಹಿಗಳಲ್ಲಿ ನಟಿಸಿ, ರಿಯಾಲಿಟಿ ಶೋಗಳಲ್ಲಿ ಮಿಂಚಿದ್ದ ಕಾವ್ಯಾ ಸಿನಿಮಾ ನಾಯಕಿ ಕೂಡ ಆಗಿದ್ದಾರೆ. 'ಕೊತ್ತಲವಾಡಿ' ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು. ಬಳಿಕ ಬಿಗ್‌ಬಾಸ್ ಮನೆಗೆ ಹೋಗುವ ಅವಕಾಶ ಸಿಕ್ಕಿತ್ತು. ಗಿಲ್ಲಿ ಜೊತೆ ಜಂಟಿ ಸ್ಪರ್ಧಿಯಾಗಿ ಮನೆ ಒಳಗೆ ಹೋಗಿದ್ದರು. ಬಳಿಕ ಕೂಡ ಇಬ್ಬರ ಸ್ನೇಹ ಮುಂದುವರೆದಿತ್ತು. ಇಬ್ಬರೂ ಟಾಪ್ -2ವರೆಗೆ ಹೋಗುವ ಕನಸು ಕಂಡಿದ್ದರು. ಗಿಲ್ಲಿ ಮಾತ್ರ ಮೊದಲ ಸ್ಥಾನಕ್ಕೇರಿ ಟ್ರೋಫಿ ಎತ್ತಿ ಹಿಡಿದರು. ಕಾವ್ಯಾ 3ನೇ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟರು.
ಬಿಗ್ ಬಾಸ್ ಮನೆಯಲ್ಲಿ ಕಾವ್ಯಾ ಅವರನ್ನು ಗಿಲ್ಲಿ ಕೊನೆಯವರೆಗೂ ಬಿಟ್ಟುಕೊಡಲಿಲ್ಲ. ಶೋ ಮುಗಿಸಿ ಹೊರಬಂದ ಬಳಿಕ ಕೂಡ ಇಬ್ಬರ ಸ್ನೇಹ ಮುಂದುವರೆದಿದೆ. ಇಬ್ಬರೂ ಅತಿಥಿಗಳಾಗಿ ಕೆಲ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಮುಂದೆ ಒಟ್ಟಿಗೆ ಸಿನಿಮಾ ಮಾಡುವ ಆಸೆ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಮದುವೆ ಆಗುವ ಮಾತೆಲ್ಲಾ ಸುಳ್ಳು, ನಾವಿಬ್ಬರು ಒಳ್ಳೆ ಸ್ನೇಹಿತರು ಎಂದು ಹೇಳಿದ್ದಾರೆ.
ಶೋನಲ್ಲಿ 3ನೇ ರನ್ನರ್ ಅಪ್ ಆಗಿದ್ದ ಕಾವ್ಯಾಗೆ 10 ಲಕ್ಷ ರೂ. ನಗದು ಬಹುಮಾನ ಸಿಕ್ಕಿತ್ತು. ಶೀಘ್ರದಲ್ಲೇ ಮತ್ತಷ್ಟು ಸಿನಿಮಾಗಳಲ್ಲಿ ಕಾವ್ಯಾ ನಟಿಸಲು ಮನಸ್ಸು ಮಾಡಿದ್ದಾರೆ. 'ದೊಡ್ಮನೆ ಹಬ್ಬ' ವಿಶೇಷ ಕಾರ್ಯಕ್ರಮದಲ್ಲಿ ಮತ್ತೆ ಬಿಗ್‌ಬಾಸ್ ಸ್ಪರ್ಧಿಗಳೆಲ್ಲಾ ಭೇಟಿ ಆಗಿ ಸಂಭ್ರಮಿಸಿದ್ದಾರೆ. ಗಿಲ್ಲಿ, ಕಾವ್ಯಾ ಇಬ್ಬರು ಈ ಶೋನಲ್ಲಿ ಹೈಲೆಟ್ ಆಗಿದ್ದಾರೆ.


Click it and Unblock the Notifications











