Disha - Dhananjay: ಚಿತ್ರದುರ್ಗದಲ್ಲಿ ಗೌಡ್ರಿಗೆ ಅಭಯ ನೀಡಿದ ಭಾವನಾ; ಏನದು ಗೊತ್ತಾ..?
'ಲಕ್ಷ್ಮೀ ನಿವಾಸ' ಧಾರಾವಾಹಿಯಲ್ಲಿ ಭಾವನಾಗೆ ತಾಳಿ ಕಟ್ಟಿದವನು ಯಾರೂ ಅಂತ ಹುಡುಕುವುದೇ ದೊಡ್ಡ ಟಾಸ್ಕ್. ಕುತ್ತಿಗೆಗೆ ತಾಳಿ ಬಿದ್ದ ಮೇಲೆ ಹೇಗೋ ಭಾವನಾ ತುಂಬಾ ಜೋಪಾನವಾಗಿ ಕಾಪಾಡಿಕೊಂಡು ಬರುತ್ತಿದ್ದಳು. ಆದರೆ ಖುಷಿ ಕಣ್ಣಿಗೆ ಬಿದ್ದಿದ್ದೆ ತಡ, ತಾಳಿಯ ವಿಚಾರ ಒಬ್ಬೊಬ್ಬರಿಗೆ ತಿಳಿಯುತ್ತಾ ಹೋಯ್ತು. ಈಗಾಗಲೇ ಲಕ್ಷ್ಮೀ, ವೀಣಾ, ವೆಂಕಿ, ಜಾನುಗೆ ಸತ್ಯ ಗೊತ್ತಾಗಿದೆ. ಎಲ್ಲರೂ ಭಾವನಾಳಿಗೆ ಸಮಾಧಾನ ಮಾಡಿದ್ದಾರೆ. ಭಾವನಾಗೂ ಎಲ್ಲರಿಗೂ ಒಂದೇ ಉತ್ತರ ಹೇಳಿ ಹೇಳಿ ಸಾಕಾಗಿದೆ.
ಧೈರ್ಯವಾಗಿರು ಅಕ್ಕ ನಾವಿದ್ದೇವೆ ಎಂದಿದ್ದಾರೆ. ಅದಷ್ಟೇ ಅಲ್ಲ ತಾಳಿ ಕಟ್ಟಿದವನಿಗೇನೆ ಆತನನ್ನು ಹುಡುಕುವಂತೆ ಮನವಿ ಮಾಡಿದ್ದಾರೆ. ಪ್ರೀತಿ ಕಳೆದುಕೊಳ್ಳುವ ಭಯದಲ್ಲಿದ್ದ ಸಿದ್ದೇಗೌಡ್ರು ಪ್ರೀತಿ ಉಳಿಸಿಕೊಳ್ಳಲು ತಾಳಿಯನ್ನೇನೋ ಕಟ್ಟಿದ್ದಾನೆ. ಆದರೆ ಭಾವನಾಗೆ ಆ ತಾಳಿಯನ್ನ ಬಚ್ಚಿಡುವುದೇ ಸೆರಗಲ್ಲಿ ಕೆಂಡ ಕಟ್ಟಿಕೊಂಡಂತ ಅನುಭವ ನೀಡುತ್ತಿದೆ. ಗೌಡ್ರು ಸತ್ಯ ಹೇಳುವುದಕ್ಕೆ ಹೆದರುತ್ತಿದ್ರು. ಈಗ ಭಾವನಾನೇ ದಾರಿಯನ್ನು ಸುಲಭ ಮಾಡಿಕೊಟ್ಟವರೆ.

ಗಣೇಶೋತ್ಸವದಲ್ಲಿ ಲಕ್ಷ್ಮೀ ನಿವಾಸ ಭಾಗಿ
ಜೀ ಕನ್ನಡ ಆಗಾಗ ವೀಕ್ಷಕರ ಮುಂದೆ ಸಂವಾದ ನಡೆಸುತ್ತಾ ಇರುತ್ತದೆ. ಅವರ ಅಭಿಪ್ರಾಯ, ಅನುಮಾನಗಳನ್ನು ಕೇಳಿದಾಗ ತಾನೇ ಕಥೆ ಏನಾಗುತ್ತಿದೆ..? ಮುಂದೆ ಯಾವ ಥರ ಬದಲಾವಣೆ ಮಾಡಿಕೊಳ್ಳಬೇಕು ಎಂಬುದು ತಿಳಿಯುವುದು. ಈ ಬಾರಿ ಗಣೇಶನ ಉತ್ಸವವನ್ನು ಚಿತ್ರದುರ್ಗದಲ್ಲಿ ಹಮ್ಮಿಕೊಳ್ಳಲಾಗಿತ್ತು. ಲಕ್ಷ್ಮೀ ನಿವಾಸ ಧಾರಾವಾಹಿಯ ಇಡೀ ಕುಟುಂಬ ಈ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿತ್ತು.
ಭಾವನಾಳಿಗೆ ಎದುರಾಯ್ತು ಪ್ರಶ್ನೆ
ಗೌಡ್ರು, ಭಾವನಾಳಿಗೆ ತಾಳಿ ಕಟ್ಟಿ ಈಗ ಮತ್ತೊಂದು ಮದುವೆಗೆ ಸಿದ್ಧರಾಗುತ್ತಿದ್ದಾರೆ. ಅದು ಅವರಿಷ್ಟ ಪಟ್ಟಿರುವ ಮದುವೆಯಲ್ಲ, ಮನೆಯವರ ಬಲವಂತದ ಮದುವೆ. ಭಾವನಾ ಮುಂದೆ ಸತ್ಯ ಹೇಳುವುದಕ್ಕೆ ಹೆದರುತ್ತಿರುವ ಗೌಡ್ರಿಗೆ, ಚಿತ್ರದುರ್ಗದಲ್ಲಿ ಉಪಾಯ ಸಿಕ್ಕಿದೆ. ಲಕ್ಷ್ಮೀ ನಿವಾಸ ಅಭಿಮಾನಿಯೊಬ್ಬರು ಭಾವನಾ ಮುಂದೆ ಪ್ರಶ್ನೆಯೊಂದನ್ನ ಕೇಳಿದ್ದಾರೆ. ಒಂದು ವೇಳೆ ತಾಳಿ ಕಟ್ಟಿದವರು ನಿಮ್ಮ ಕಣ್ಣ ಮುಂದೆ ಬಂದರೆ ಏನು ಮಾಡುತ್ತೀರಿ ಎಂದು. ಇದೇ ಪ್ರಶ್ನೆ ಗೌಡರ ಮನಸ್ಸಲ್ಲೂ ಕಾಡುತ್ತಿತ್ತು. ಭಾವನಾ ಇನ್ನೇನು ಮಾಡಿ ಬಿಡುತ್ತಾರೋ ಎಂಬ ಭಯಕ್ಕೆ ಸುಮ್ಮನೆ ಇದ್ದರು. ಈಗ ಉತ್ತರ ಸಿಕ್ಕಿದೆ.

ಗೌಡ್ರು ಈಗ ಭಯ ಪಡುವಂತಿಲ್ಲ!
ಅಭಿಮಾನಿಯೊಬ್ಬರ ಪ್ರಶ್ನೆಗೆ ಭಾವನಾ ತುಂಬಾ ಕೂಲ್ ಆಗಿ ಉತ್ತರಿಸಿದ್ದಾರೆ. ನಂಗೆ ತಾಳಿ ಕಟ್ಟಿದವನೇನಾದ್ರೂ ಕಣ್ಣ ಮುಂದೆ ಬಂದ್ರೆ ಖಂಡಿತ ಬ್ಯಾಗ್ ತೆಗೆದುಕೊಂಡು ಅವನ ಜೊತೆಗೆ ಹೊರಟು ಬಿಡುತ್ತೇನೆ. ಯಾಕಂದ್ರೆ ಮನೆಯವರಿಗೆಲ್ಲ ಉತ್ತರ ಕೊಟ್ಟು ಕೊಟ್ಟು ಸಾಕಾಗಿದೆ. ಅವನು ನನ್ನ ಕಣ್ಣ ಮುಂದೆ ಬಂದರೆ ಸುಮ್ಮನೆ ಹೋಗಿ ಬಿಡುತ್ತೇನೆ ಎಂದಿದ್ದಾರೆ. ಗೌಡ್ರ ಮನಸ್ಸು ಈ ಉತ್ತರ ಕೇಳಿ ನಿರಾಳವಾಗಿದೆ.
ಭಾವನಾ-ಗೌಡ್ರ ಜೋಡಿಗೆ ವೀಕ್ಷಕರು ಫಿದಾ
ಸಿದ್ದೇಗೌಡ್ರು ಹಾಗೂ ಭಾವನಾಗೆ ದೊಡ್ಡ ಫ್ಯಾನ್ಸ್ ಬೇಸ್ ಇದೆ. ಇಬ್ಬರ ವಿಡಿಯೋಗಳನ್ನೇ ಹೆಚ್ಚಾಗಿ ಹಾಕಿ ಎಂಬ ಡಿಮ್ಯಾಂಡ್ ಕೂಡ ಇದೆ. ಭಾವನಾ ಹಾಗೂ ಸಿದ್ದೇಗೌಡ್ರು ಒಂದಾಗಲಿ ಎಂದೇ ಹಾರೈಸಿದ್ದಾರೆ. ಆದರೆ ಮದುವೆ ತಯಾರಿ ಪೂರ್ವಿ ಜೊತೆಗೆ ನಡೆಯುತ್ತಿದೆ. ಇತ್ತ ತ್ರಿಕಾಲ ಜ್ಞಾನಿಗಳು ಈ ಮದುವೆ ನಡೆಯಕೂಡದು ಎಂದು ಎಚ್ಚರಿಕೆ ಕೊಟ್ಟಿದ್ದಾರೆ. ಜ್ಞಾನಿಗಳು ಕೂಡ ಗೌಡ್ರಿಗೆ ನೀನು ಧೈರ್ಯ ಮಾಡಿ ಸತ್ಯ ಹೇಳಲೇಬೇಕು ಎಂದಿದ್ದಾರೆ.


Click it and Unblock the Notifications











