ಬಿಡುಗಡೆಯಾದ 2 ವರ್ಷದ ನಂತರ ಸ್ಯಾಟ್‌ಲೈಟ್ ಡೀಲ್ ಕ್ಲೋಸ್ ; ಕಿರುತೆರೆಯಲ್ಲಿ ಪ್ರಸಾರವಾಗಲಿದೆ ₹292 ಕೋಟಿ ದೋಚಿದ್ದ ಸಿನಿಮಾ
ಹಿಂದೊಂದು ಕಾಲ ಇತ್ತು. ಆ ಕಾಲದಲ್ಲಿ ಚಿತ್ರಮಂದಿರದ ಎದುರು ಜಾತ್ರೆ ನಡೆಯುತ್ತಿತ್ತು. ಜನರಿಂದ ಚಿತ್ರಮಂದಿರದ ಆವರಣ ಕಿಕ್ಕಿರಿದು ತುಂಬಿ ತುಳುಕುತ್ತಿತ್ತು. ಇನ್ನೂ ಮೊದಲಾದರೆ ಬೆಳ್ಳಿತೆರೆಯಲ್ಲಿ ನೋಡುವ ಅವಕಾಶದಿಂದ ವಂಚಿತರಾದರೆ ಆ ಚಿತ್ರ ಕಿರುತೆರೆಗೆ ಬರುವವರೆಗೆ ಕಾಯಬೇಕಿತ್ತು. ಆದರೆ ಈಗ ಕಾಲ ಬದಲಾಗಿದೆ.
ಬದಲಾದ ಈ ಕಾಲದಲ್ಲಿ ಅಂಗೈಯಲ್ಲಿಯೇ ಮನರಂಜನೆ ಇದೆ.ಚಿತ್ರಮಂದಿರದಲ್ಲಿ ಚಿತ್ರವೊಂದು ಬಿಡುಗಡೆಯಾಗಿ ನಾಲ್ಕು ವಾರ ಕೂಡ ಆಗಿರುವುದಿಲ್ಲ. ಅಷ್ಟರಲ್ಲೇ ಆ ಸಿನಿಮಾ ಓಟಿಟಿಗೆ ಬಂದಿರುತ್ತೆ. ಇದರಿಂದಾಗಿ ಪ್ರೇಕ್ಷಕರು ಕೂಡ ಹೇಗೂ 4 ವಾರದಲ್ಲಿ ಸಿನಿಮಾ ಓಟಿಟಿಗೆ ಬರುತ್ತೆ ಎಂದು ಚಿತ್ರಮಂದಿರಗಳಿಗೆ ಹೋಗುವುದನ್ನೇ ಕಡಿಮೆ ಮಾಡುತ್ತಿದ್ದಾರೆ.

ಇದರಿಂದ ಚಿತ್ರಮಂದಿರ ಮತ್ತು ಓಟಿಟಿ ನಡುವೆ ಅಂತರ ತುಂಬಾನೇ ಕಡಿಮೆ ಇದೆ. ಆದರೆ ಕಿರುತೆರೆ ಮತ್ತು ಬೆಳ್ಳಿತೆರೆಯ ನಡುವಿನ ಅಂತರ ಹೆಚ್ಚುತ್ತಲೇ ಇದೆ. ತಮ್ಮ ಚಿತ್ರದ ಸ್ಯಾಟ್‌ಲೈಟ್ ಹಕ್ಕು ಮಾರಲು ನಿರ್ಮಾಪಕ ಇಂದು ಪರದಾಡಬೇಕಾದ ಸ್ಥಿತಿ ಇದೆ.
ಮೊದಲಿನಂತೆ ಚಾನೆಲ್‌ನವರು ಸುಲಭಕ್ಕೀಗ ಚಿತ್ರದ ಹಕ್ಕುಗಳನ್ನು ಖರೀದಿ ಮಾಡುತ್ತಿಲ್ಲ. ಒಂದು ವೇಳೆ ಖರೀದಿ ಮಾಡಲು ಮುಂದಾದರೂ ಕೂಡ ಅಲ್ಲಿಯೂ ಹತ್ತಾರು ಷರತ್ತುಗಳಿರುತ್ತವೆ. ಇದಕ್ಕೆ ಕೈಗನ್ನಡಿ ಎಂಬಂತೆ ಬಿಡುಗಡೆಯಾದ ಜ್ಯೂನಿಯರ್ ಎನ್‌ಟಿಆರ್ ಅಭಿನಯದ ''ದೇವರ'' ಚಿತ್ರದ ಸ್ಯಾಟ್‌ಲೈಟ್ ಹಕ್ಕು ಎರಡು ವರ್ಷದ ನಂತರ ಬಿಕರಿಯಾಗಿದೆ.
ಹೌದು, ''ದೇವರ'' ಸೆಪ್ಟೆಂಬರ್ 27-2024ರಂದು ತೆರೆಗೆ ಬಂದಿದ್ದ ಸಿನಿಮಾ.ಕೊರಟಾಲ ಶಿವ ನಿರ್ದೇಶನದ ಈ ಚಿತ್ರದಲ್ಲಿ ಜ್ಯೂ.ಎನ್‌ಟಿಆರ್ ಎದುರು ಸೈಫ್ ಅಲಿ ಖಾನ್ ಖಳನಾಯಕನಾಗಿ ಅಬ್ಬರಿಸಿದ್ದರು. ಜಾಹ್ನವಿ ಕಪೂರ್ ನಾಯಕಿಯಾಗಿ ಮಿಂಚಿದ್ದರು. ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ಕೇವಲ ಭಾರತದಲ್ಲಿ ₹292.47 ಕೋಟಿಯನ್ನು ''ದೇವರ'' ಗಳಿಸಿತ್ತು.
ಚಿತ್ರಮಂದಿರದಲ್ಲಿ ಹೀಗೆ ಅಬ್ಬರಿಸಿದ ''ದೇವರ'' ಆ ನಂತರ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗಿತ್ತು. ಅಲ್ಲಿಯೂ ದಾಖಲೆ ಮಟ್ಟದ ವೀಕ್ಷಣೆ ಪಡೆದು ಭಾರತದೆಲ್ಲೆಡೆ ಸದ್ದು ಮಾಡಿತ್ತು. ಆದರೆ, ಥಿಯೇಟರ್ ಮತ್ತು ಓಟಿಟಿಯಲ್ಲಿ ಗೆಲುವಿನ ಧ್ವಜ ಹಾರಿಸಿದರೂ ಕೂಡ ಸ್ಯಾಟ್ ಲೈಟ್ ಹಕ್ಕು ಮಾತ್ರ ಮಾರಾಟವಾಗಿರಲಿಲ್ಲ.

ಹೀಗಾಗಿ ನಿರ್ಮಾಪಕರು ಸ್ಯಾಟಲೈಟ್ ಹಕ್ಕುಗಳಿಗಾಗಿ ಬೃಹತ್ ಮೊತ್ತವನ್ನು ಕೇಳುತ್ತಿದ್ದಾರೆ. ಆದರೆ ವಾಹಿನಿಯವರು ನಿರ್ಮಾಪಕರ ಮಾತುಗಳಿಗೆ ಬೆಲೆ ಕೊಡುತ್ತಿಲ್ಲ ಎನ್ನುವ ಮಾತು ಕೇಳಿ ಬಂದಿತ್ತು. ಆದರೆ, ಅಸಲಿ ಸತ್ಯ ಇದ್ದಿದ್ದು ಬೇರೆ.
''ನ್ಯೂಸ್ 18'' ವರದಿಯ ಪ್ರಕಾರ ''ದೇವರ'' ಚಿತ್ರದ ಹಕ್ಕುಗಳನ್ನು ನೆಟ್‌ಫ್ಲಿಕ್ಸ್ 155 ಕೋಟಿ ನೀಡಿ ಪಡೆದುಕೊಂಡಿತ್ತು. ಆದರೆ ಇದೇ ವೇಳೆ ಎರಡು ವರ್ಷದವರೆಗೆ ಸ್ಯಾಟ್ ಲೈಟ್ ಹಕ್ಕು ಮಾರದಂತೆ ಒಪ್ಪಂದವೂ ಮಾಡಿಕೊಂಡಿತ್ತು. ಈ ಒಪ್ಪಂದದಿಂದ ತಾರಕ್ ಅಭಿಮಾನಿಗಳಿಗೆ ಇಷ್ಟು ದಿನ ''ದೇವರ'' ಚಿತ್ರವನ್ನು ಕಿರುತೆರೆಯಲ್ಲಿ ಕಣ್ತುಂಬಿಕೊಳ್ಳಲು ಸಾಧ್ಯವಾಗಿರಲಿಲ್ಲ.
ಆದರೆ ಈಗ ಒಪ್ಪಂದದ ಅವಧಿ ಮುಗಿದಿದೆ. ಈ ಹಿನ್ನೆಲೆ ಸ್ಯಾಟಲೈಟ್ ಹಕ್ಕುಗಳನ್ನು ಮಾರಲಾಗಿದ್ದು, ''ಈಟಿವಿ'' ಭಾರಿ ಮೊತ್ತಕ್ಕೆ ''ದೇವರ'' ಚಿತ್ರದ ಹಕ್ಕುಗಳನ್ನು ಖರೀದಿ ಮಾಡಿದೆ. ಶೀಘ್ರದಲ್ಲಿಯೇ ಚಿತ್ರವನ್ನು ಪ್ರಸಾರ ಮಾಡಲಿದೆ.
ಸಾಮಾನ್ಯವಾಗಿ ಕೌಟುಂಬಿಕ ಧಾರಾವಾಹಿಗಳು ಮತ್ತು ಸಾಫ್ಟ್ ಸಿನಿಮಾಗಳಿಗೆ ಹೆಸರಾಗಿರುವ ಈಟಿವಿ ತೆಲುಗು ವಾಹಿನಿ, ಇಷ್ಟು ದೊಡ್ಡ ಕಮರ್ಷಿಯಲ್ ಆಕ್ಷನ್ ಸಿನಿಮಾವನ್ನು ಅತಿ ಹೆಚ್ಚು ಹಣ ನೀಡಿ ಖರೀದಿಸಿರುವ ಹಿನ್ನೆಲೆ ಸದ್ಯ ತೆಲುಗು ಚಿತ್ರರಂಗದಲ್ಲಿ ಚರ್ಚೆಗೆ ಕಾರಣವಾಗಿದೆ.
ಒಟ್ನಲ್ಲಿ ಕೊನೆಗೂ ''ದೇವರ'' ಚಿತ್ರದ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಗೆ ವೇದಿಕೆ ಸಿದ್ಧವಾಗಿದೆ. ಚಿತ್ರಮಂದಿರ ಮತ್ತು ಓಟಿಟಿಯಲ್ಲಿ ಮಿಸ್ ಮಾಡಿಕೊಂಡಿದ್ದ ಎನ್‌ಟಿಆರ್ ಅವರ ಅಸಂಖ್ಯಾತ ಅಭಿಮಾನಿಗಳು ಕಿರುತೆರೆಯಲ್ಲೇ ಈಗ ''ದೇವರ'' ಚಿತ್ರವನ್ನು ನೋಡಬಹುದು. ಸದ್ಯ ಈ ಪ್ರೀಮಿಯರ್ ನ ಟಿಆರ್ ಪಿ ಮೇಲೀಗ ಹಲವರ ಕಣ್ಣಿದ್ದು, ಎಷ್ಟರ ಮಟ್ಟಿಗೆ ಕಿರುತೆರೆಯಲ್ಲಿ ''ದೇವರ'' ಮ್ಯಾಜಿಕ್ ಮಾಡುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications