'ಬಿಗ್ ಬಾಸ್' ಬಗ್ಗೆ 'ಬಿಗ್ ನ್ಯೂಸ್' ನೀಡಿದ ಕಿಚ್ಚ ಸುದೀಪ್
ಪ್ರತಿ ವರ್ಷ ಜೂನ್ ಆಚೀಚೆ ಹಲವರ ತಲೆಯಲ್ಲಿ ''ಬಿಗ್ ಬಾಸ್'' ಕುರಿತ ಪ್ರಶ್ನೆಗಳು ಗಿರಕಿ ಹೊಡೆಯಲು ಶುರುವಾಗುತ್ತಾವೆ. ಸ್ಫರ್ಧಿಗಳ ವಿಚಾರದಲ್ಲಿ ಇರಲಿ.. ನಿರೂಪಕರ ವಿಚಾರದಲ್ಲಿರಲಿ.. ''ಬಿಗ್ ಬಾಸ್'' ಮನೆಯ ಸುತ್ತ ಮುತ್ತ ಕುತೂಹಲ ಗರಿಗೆದರಿ ಬಿಡುತ್ತದೆ. ಇದಕ್ಕೆ ತಕ್ಕಂತೆ ಕಾರ್ಯಕ್ರಮದ ಆಯೋಜಕರು ಮತ್ತು ವಾಹಿನಿಯವರು ಕೂಡಾ ಕೊನೆಯ ಕ್ಷಣದವರೆಗೆ ಗೌಪ್ಯತೆಯನ್ನು ಕಾಪಾಡಿಕೊಂಡು ಬರುತ್ತಾರೆ.
ಸಮಯ ಸಂದರ್ಭ ಬಂದಾಗ ಕಾಲ .. ಕಾಲಕ್ಕೆ .. ಬಿಗ್ ಬಾಸ್ ಕುರಿತು ಮಾಹಿತಿಯನ್ನು ಹಂಚಿಕೊಳ್ಳಲು ಶುರು ಮಾಡುತ್ತಾರೆ. ಈ ವರ್ಷ ಕೂಡ ಇದೇ ನಿಯಮದಡಿ ಹಿಂದಿಯಲ್ಲಿ ''ಬಿಗ್ ಬಾಸ್'' ಕಾರ್ಯಕ್ರಮವನ್ನು ಶುರು ಮಾಡಲಾಗಿದೆ. ಮಲಯಾಳಂನಲ್ಲಿ ಕೂಡ ಕಹಳೆ ಊದಿಯಾಗಿದೆ. ಇನ್ನೂ ತೆಲುಗಿನಲ್ಲಿ ಈ ಸೆಪ್ಟೆಂಬರ್ 8ರಿಂದ ಕಾರ್ಯಕ್ರಮ ಆರಂಭವಾಗಲಿದೆ.

ಆದರೆ.. ಕನ್ನಡದಲ್ಲಿ..? ಈ ಪ್ರಶ್ನೆಗೆ ಇಲ್ಲಿಯವರೆಗೆ ಉತ್ತರ ಇರಲಿಲ್ಲ. ಯಾಕೆಂದರೆ.. ಹೊಸ ಲೋಗೋವನ್ನು ಅನಾವರಣ ಮಾಡಿದ್ದಷ್ಟೇ ಬಂತು. ಆ ನಂತರ ಕಾರ್ಯಕ್ರಮದ ಕುರಿತು ಯಾವ ಮಾಹಿತಿಯನ್ನು ಕೂಡ ಇಲ್ಲಿಯವರೆಗೆ ಆಯೋಜಕರಾಗಲಿ.. ವಾಹಿನಿಯವರಾಗಲಿ ಹಂಚಿಕೊಂಡಿಲ್ಲ.
ಈ ಹಿನ್ನೆಲೆ ಸುದೀಪ್ ಸಾರಥ್ಯದ ಕನ್ನಡದ ''ಬಿಗ್ ಬಾಸ್'' ಕುರಿತು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಲೇ ಇದೆ. ಪ್ರಸಾರ ಎಂದಿನಿಂದ ಆರಂಭವಾಗಬಹುದು ಎಂದು ಗೆಸ್ಸಿಂಗ್ ಗೇಮ್ ಕೂಡ ನಡೆಯುತ್ತಿದೆ. ಹೀಗಿರುವಾಗ ಇದೀಗ ಖುದ್ದು ಅಭಿನಯ ಚಕ್ರವರ್ತಿ ಈ ಕುತೂಹಲಕ್ಕೆ ತೆರೆ ಎಳೆದಿದ್ದಾರೆ.
ಹೌದು, ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ, ಉದ್ಯಮಿ, ರಾಜಕಾರಣಿ ಮತ್ತು ಒಂದ್ಕಾಲದಲ್ಲಿ ದರ್ಶನ್ ಅವರ ಪಾಲಿನ ನೆಚ್ಚಿನ ನಿರ್ಮಾಪಕರಾಗಿದ್ದ ಸಂದೇಶ್ ನಾಗರಾಜ್ ಅವರ ಹುಟ್ಟುಹಬ್ಬದ ಪ್ರಯುಕ್ತ, ಮೈಸೂರಿನಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮಕ್ಕೆ ಕರುನಾಡಿನ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ.. ಸಚಿವ ಜಮೀರ್ ಅಹ್ಮದ್.. ಸೇರಿ ಇನ್ನೂ ಕೆಲವು ಗಣ್ಯರು ಬಂದಿದ್ದರು. ಸುದೀಪ್ ಕೂಡ ಇದೇ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದರು.

ಇನ್ನೂ ಸುದೀಪ್ ಕನ್ನಡ ಚಿತ್ರರಂಗದ ಮಾಸ್ & ಕ್ಲಾಸ್ ಆಕ್ಟರ್. ಇವರಿಗೆ ಇವ್ರದ್ದೇ ಆದ ಅಭಿಮಾನಿಗಳಿದ್ದಾರೆ. ಮೈಸೂರಿನಲ್ಲಿ ಸುದೀಪ್ ಬಂದ ವಿಚಾರ ತಿಳಿದು ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಈ ಅಭಿಮಾನಿಗಳೆಲ್ಲಾ ದಾಂಗುಡಿಯನ್ನು ಇಟ್ಟಿದ್ದರು. ಸುದೀಪ್ ವೇದಿಕೆಯನ್ನೇರುತ್ತಿದ್ದಂತೆಯೇ ಹರ್ಷೋದ್ಘಾರದಿಂದ ಕೂಗಾಡಿದರು. ಶಿಳ್ಳೆ ಹೊಡೆದರು. ಇದೇ ಸಮಯದಲ್ಲಿ ಬಿಗ್ ಬಾಸ್ ಪ್ರಸಾರವಾಗುತ್ತಿರುವ ದಿನಾಂಕವನ್ನು ರಿವೀಲ್ ಮಾಡಿದ ಸುದೀಪ್, ಅತೀ ಶೀಘ್ರದಲ್ಲೇ ಪರದೆ ಮೇಲೆ ಸಿಕ್ತೇನೆ. ಸೆಪ್ಟೆಂಬರ್ 28ರಿಂದ ನಿಮಗೆ ಟಿವಿಯಲ್ಲಿ ಸಿಗುತ್ತೇನೆ. ನಿಮ್ಮ ಪ್ರೀತಿಗೆ ಥ್ಯಾಂಕ್ಯೂ, ಲವ್ ಯೂ ಆಲ್ ಎಂದು ಹೇಳಿದರು.
ಅಂದ್ಹಾಗೇ ಕಳೆದ ವರ್ಷ ಕೂಡ ''ಬಿಗ್ ಬಾಸ್'' ಕಾರ್ಯಕ್ರಮ ಸೆಪ್ಟೆಂಬರ್ 29ರಂದು ಪ್ರಾರಂಭವಾಗಿತ್ತು. ಈ ಬಾರಿ ಕೂಡ ಸೆಪ್ಟೆಂಬರ್ 28ರಂದು ಶುರುವಾಗುತ್ತಿರುವುದು ವಿಶೇಷ. ಇನ್ನುಳಿದಂತೆ ಕಳೆದ ವರ್ಷ ಸುದೀಪ್ ಈ ಬಾರಿ ಇದು ನನ್ನ ಕೊನೆಯ ''ಬಿಗ್ ಬಾಸ್'' ಕಾರ್ಯಕ್ರಮ ಎಂದು ಹೇಳಿದ್ದರು. ಆದರೆ ಆ ನಂತರ ಆಯೋಜಕರ ನಿರಂತರ ಪ್ರಯತ್ನ ಸುದೀಪ್ ತಮ್ಮ ಮನಸು ಬದಲಿಸಿದರು. ಇನ್ನೂ ನಾಲ್ಕು ಸೀಸನ್ ಮಾಡುವುದಾಗಿ ಕೂಡ ಹೇಳಿದರು. ಅದ್ರಂತೆ ಈಗ ಸೆಪ್ಟೆಂಬರ್ 28ರಿಂದ ನಿಮ್ಮ ಮನೆಯ ಟಿವಿಯಲ್ಲಿ ಸುದೀಪ್ ಪ್ರತ್ಯಕ್ಷವಾಗಲಿದ್ದಾರೆ.
ಇನ್ನು ಸ್ಫರ್ಧಿಗಳ ವಿಚಾರಕ್ಕೆ ಬಂದರೆ ಅಂತೆ ಕಂತೆಯ ಸಂತೆಯಲ್ಲಿ ಹಲವರ ಹೆಸರುಗಳು ಕೇಳಿ ಬರುತ್ತಿವೆ. ಈಗಾಗಲೇ ಸ್ಫರ್ಧಿಗಳನ್ನು ಆಯ್ಕೆ ಮಾಡಲಾಗಿದೆ ಎನ್ನುವ ಸುದ್ದಿ ಕೂಡ ಇದೆ. ಆದರೆ ಯಾರೆಲ್ಲಾ ಆಯ್ಕೆಯಾಗಿದ್ದಾರೆ ? ಯಾರೆಲ್ಲಾ ಈ ಬಾರಿ ಮನೆಗೆ ಬರುತ್ತಾರೆ ? ಎನ್ನುವುದಕ್ಕೆ ಉತ್ತರ ಸೆಪ್ಟೆಂಬರ್ 28ರಂದೇ ಅಧಿಕೃತವಾಗಿ ಸಿಗಲಿದೆ.


Click it and Unblock the Notifications











