ಶಿವಣ್ಣನೊಂದಿಗೆ ಹಾಡಿ, ಕುಣಿದು, ನಲಿದ ಕಾಫಿನಾಡು ಚಂದು!
ಕಾಫಿನಾಡು ಚಂದು ಎಂದ ಕೂಡಲೇ, ಹಲವಾರು ಹುಟ್ಟುಹಬ್ಬದ ಶುಭಾಶಯದ ಹಾಡು ನೆನಪಾಗುತ್ತದೆ. ಯಾಕೆಂದರೆ ವಿಭಿನ್ನ ಬರ್ತ್ ಡೇ ವಿಶ್ ಮೂಲಕ ರಾಜ್ಯದಲ್ಲಿ ಸೆನ್ಸೇಷನ್ ಸೃಷ್ಟಿ ಮಾಡಿದ್ದಾರೆ ಕಾಫಿ ನಾಡು ಚಂದು. ನಾನು ಅಪ್ಪು, ಶಿವಣ್ಣ ಅಭಿಮಾನಿ ಅಂತ ಹೇಳುತ್ತಲೇ ಫೇಮಸ್ ಆಗಿದ್ದಾರೆ.
ಕಾಫಿನಾಡು ಚಂದು ಅವರ ಕೈಯಲ್ಲಿ ಹುಟ್ಟುಹಬ್ಬಕ್ಕೆ ವಿಶ್ ಮಾಡಿಸೋದು ಈಗ ದೊಡ್ಡ ಟ್ರೆಂಡ್ ಆಗಿದೆ. ಸೋಶಿಯಲ್ ಮಿಡಿಯಾದಲ್ಲಿ ಕಾಫಿ ನಾಡು ಚಂದು ಅವರನ್ನು ಸಾಕಷ್ಟು ಅಭಿಮಾನಿಗಳು ಫಾಲೋ ಮಾಡ್ತಾ ಇದ್ದಾರೆ.
ಆದರೆ ಕಾಫಿ ನಾಡು ಚಂದುಗೆ ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಅವರನ್ನು ಭೇಟಿ ಮಾಡಲು ತುಂಬಾ ಆಸೆ ಇತ್ತು. ಅದನ್ನು ಅನುಶ್ರೀ ಅವರಿಗೆ ಚಂದು ಕೇಳಿಕೊಂಡಿದ್ದರು. ಅನುಶ್ರೀ ಶಿವರಾಜ್ ಕುಮಾರ್ ಅವರಿಗೆ ಸುದ್ದಿ ಮುಟ್ಟಿಸಿದ್ದರು. ಕಾಫಿ ನಾಡು ಚಂದು ಆಸೆಯನ್ನು ಈಗ ಜೀ ಕನ್ನಡ ವಾಹಿನಿ ಈಡೇರಿಸಿದೆ.

ಶಿವಣ್ಣ ನಿಮ್ಮನ್ನು ನೋಡಬೇಕು, ನಿಮ್ಮ ಜೊತೆ ಕಾಫಿ ಕುಡಿಬೇಕು, ನಿಮ್ಮನ್ನ ಮೀಟ್ ಮಾಡಲೇ ಬೇಕು ಎಂದು ಕಾಫಿನಾಡಿನ ಚಂದು ಹಾಡಿದ್ದರು. ಅಂತೆಯೇ ಈ ಬಾರಿ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋನಲ್ಲಿ ಶಿವಣ್ಣನನ್ನು ಭೇಟಿ ಮಾಡೋ ಅವಕಾಶ ಸಿಕ್ಕಿದೆ.
ಡಿಕೆಡಿ ವೇದಿಕೆಗೆ ಬಂದ ಕಾಫಿ ನಾಡು ಚಂದು ಶಿವಣ್ಣ ಮುಂದೆ ತಮ್ಮದೇ ಶೈಲಿಯಲ್ಲಿ ಹಾಡು ಹೇಳಿದ್ದಾರೆ. ನಾನು ಕಾಫಿ ನಾಡು ಚಂದು, ಅಪ್ಪು, ಶಿವಣ್ಣನ ಅಭಿಮಾನಿ ಎಂದು ಹೇಳಿದ್ದಾರೆ. ಈ ಮೂಲಕ ಶಿವಣ್ಣನ ಮನಸ್ಸು ಕದ್ದಿದ್ದಾರೆ. ಶಿವಣ್ಣ ಸಹ ವೇದಿಕೆಗೆ ಬಂದು ಕಾಫಿ ನಾಡು ಚಂದುವನ್ನು ತಬ್ಬಿಕೊಂಡು, ನಿಮ್ಮಂಥಾ ಅಭಿಮಾನಿ ಪಡೆದಿದ್ದು ನಮ್ಮ ಪುಣ್ಯ ಎಂದಿದ್ದಾರೆ. ಜೊತೆಗೆ ಶಿವಣ್ಣಗೆ ಕಾಫಿ ನಾಡು ಚಂದು ಉಡುಗೊರೆಯೊಂದನ್ನು ನೀಡಿದ್ದಾರೆ. ಪುನೀತ್, ಶಿವಣ್ಣ ಇರೋ ಫೋಟೊವನ್ನು ಉಡುಗೊರೆಯಾಗಿ ಕೊಟ್ಟು ಶಿವಣ್ಣನ ಜೊತೆಗೆ ಫೋಟೊ ತೆಗೆಸಿಕೊಂಡಿದ್ದಾರೆ.

ಡಿಕೆಡಿ ವೇದಿಕೆಯಲ್ಲಿ ಶಿವಣ್ಣ ಹಲವು ಬಾರಿ ಮಸ್ತ್ ಡಾನ್ಸ್ ಮಾಡಿದ್ದಾರೆ. ಈ ಬಾರಿಯೂ ಕೂಡ ಕರುನಾಡ ಚಕ್ರವರ್ತಿ ಶಿವಣ್ಣ ಸ್ಟೇಜ್ ಮೇಲೆ ಹೋಗಿ ಡ್ಯಾನ್ಸ್ ಮಾಡಿದ್ದರೆ. 'ಚಾಂಗು ಬಡ ಚಾಂಗುರೇ, ನೋಡು ಮಗಾ ಊರ ತುಂಬಾ ಜಾತರೆ' ಹಾಡಿಗೆ ಸಖತ್ ಆಗಿ ಹೆಜ್ಜೆ ಹಾಕಿದ್ದಾರೆ. ಶಿವಣ್ಣನ ಡ್ಯಾನ್ಸ್ ನೋಡಿ ಎಲ್ಲರೂ ಫಿದಾ ಆಗಿದ್ದಾರೆ.


Click it and Unblock the Notifications











