ಈ ಬಾರಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡ್ತಾರಾ ಈ ಸೂಪರ್ ಸ್ಟಾರ್ ಮಗ ?
ವರ್ಷಾನುವರ್ಷ ಬಿಗ್ ಬಾಸ್ ಕಾರ್ಯಕ್ರಮ ಶುರುವಾಗುವ ಆಚೀಚೆ, ಈ ಬಾರಿ ಮನೆಯಲ್ಲಿ ಯಾರನ್ನೆಲ್ಲ ಕಣ್ತುಂಬಿಕೊಳ್ಳಬಹುದು ಎನ್ನುವ ಚಿಂತೆ ಕೆಲವರನ್ನು ಕಾಡಲು ಶುರುಮಾಡುತ್ತೆ. ಇದಕ್ಕೆ ಕೈಗನ್ನಡಿ ಎಂಬಂತೆ ಬಿಗ್ ಬಾಸ್ ಕಾರ್ಯಕ್ರಮ ಆರಂಭವಾಗಲು ಇನ್ನೂ ಒಂದೆರಡು ತಿಂಗಳು ಬಾಕಿ ಇರುವಾಗಲೇ ಕೆಲ ಹೆಸರುಗಳು ಸಾಮಾಜಿಕ ಜಾಲತಾಣದಲ್ಲಿ ಏಕಾಏಕಿ ಸದ್ದು ಮಾಡಲು ಶುರು ಮಾಡುತ್ತವೆ. ಈ ಬಾರಿ ಕೂಡ...
ಇದೇ ತರಹದ ವಾತಾವರಣ ಇದೆ. ಹಿಂದಿಯಲ್ಲಿ ಬಿಗ್ ಬಾಸ್ ಹತ್ತೊಂಬತ್ತನೇ ಸೀಸನ್‌ಗೆ ಈಗಾಗಲೇ ದಿನಗಣನೆ ಆರಂಭವಾಗಿದ್ದು, ಹಿಂದಿ ಯೂಟ್ಯೂಬರ್ ಗೌತಮ್ ತನೇಜಾ, ಶಿಲ್ಪಾ ಶೆಟ್ಟಿಯ ಪತಿ ರಾಜ್ ಕುಂದ್ರಾ, ಕೃಷ್ಣಾ ಶ್ರಾಫ್, ಮಿಕ್ಕಿ ಮೇಕ್ ಓವರ್, ಫೈಸಲ್ ಶೇಖ್, ಧೀರಜ್ ಧೋಪರ್, ಮಮತಾ ಕುಲಕರ್ಣಿ, ಹೀಗೆ ಕೆಲ ಹೆಸರುಗಳು ಈ ಬಾರಿಯ ಹಿಂದಿ ಬಿಗ್ ಬಾಸ್ ಮನೆಯ ಸುತ್ತ ಮುತ್ತ ಕೇಳಿ ಬರುತ್ತಿವೆ.

ಇವರಲ್ಲಿ ನಿಜಕ್ಕೂ ಯಾರೆಲ್ಲ ಈ ಬಾರಿ ಬಿಗ್ ಬಾಸ್ ಮನೆಗೆ ಹೋಗಲಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರ ಇನ್ನೇನೂ ಕೆಲ ದಿನಗಳಲ್ಲಿ ಸಿಗಲಿದೆಯಾದರೂ ಸದ್ಯಕ್ಕೆ ಈ ಬಾರಿಯ ಬಿಗ್ ಬಾಸ್ ಮನೆಗೆ ಬಾಬಿಲ್ ಖಾನ್ ಎಂಟ್ರಿ ಕೊಡಲಿದ್ದಾರೆ ಎನ್ನುವ ಸುದ್ದಿ ಸದ್ಯ ಗುಲ್ಲಾಗಿದೆ.
ಹೌದು, ಬಾಬಿಲ್ ಖಾನ್.. ಬಾಲಿವುಡ್ ಕಂಡ ಅತ್ಯಂತ ಪ್ರತಿಭಾವಂತ ಕಲಾವಿದ ಇರ್ಫಾನ್ ಖಾನ್ ಅವರ ಮಗ. ತಂದೆಯ ಹೆಜ್ಜೆಯ ಜಾಡನ್ನು ಹಿಡಿದು ಬಾಲಿವುಡ್‌ಗೆ ಬಂದ ಬಾಬಿಲ್ ಖಾನ್ ಇಲ್ಲಿಯವರೆಗೆ ತಮ್ಮ ಅಭಿನಯದಿಂದ ಅನೇಕರ ಹೃದಯ ಗೆದ್ದಿದ್ದಾರೆ. ಸದ್ಯ ಬಾಲಿವುಡ್‌ನಲ್ಲಿರುವ ಸ್ಟಾರ್ ಕಿಡ್‌ಗಳಿಗಿಂತ ಅಭಿನಯದ ವಿಚಾರದಲ್ಲಿ ನಾನೆಷ್ಟೋ ವಾಸಿ ಎನ್ನುವ ಸಂದೇಶವನ್ನು ಕೂಡ ರವಾನೆ ಮಾಡಿದ್ದಾರೆ.

ಇಂಥಾ ಬಾಬಿಲ್ ಖಾನ್ ಇದ್ದಕ್ಕಿದ್ದಂತೆಯೇ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಕಳೆದ ಮೇ 4ರಂದು ವಿಡಿಯೋ ಹಾಕಿಕೊಂಡಿದ್ದರು. ಕೆಲ ಸ್ಟಾರ್‌ಗಳ ಹೆಸರನ್ನೇಳಿ ಬಾಲಿವುಡ್ ನ ಅನೇಕರದ್ದು ಮುಖವಾಡದ ಬದುಕು ನಕಲಿ ಉದ್ಯಮ ಎಂದು ಹೇಳಿದ್ದರು. ಬಾಲಿವುಡ್ ಚೆನ್ನಾಗಿರಬೇಕೆಂದು ಬಯಸುವರು ಬೆರಳಣಿಕೆಯ ಜನ ಮಾತ್ರ ನಾನು ನಿಮಗೆ ತುಂಬಾ ಹೇಳಬೇಕು ತೋರಿಸಬೇಕೆಂದು ಕಣ್ಣೀರು ಹಾಕಿದ್ದರು.
ಬಾಬಿಲ್ ಖಾನ್ ಅವರ ಈ ಕಣ್ಣೀರನ್ನೇ ಮಾರಾಟದ ಸರಕು ಮಾಡಿಕೊಳ್ಳಲು ಬಿಗ್ ಬಾಸ್ ಆಯೋಜಕರು ಸದ್ಯ ಆಲೋಚನೆ ಮಾಡಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ. ಬಾಬಿಲ್ ಖಾನ್ ಅವರ ಜೊತೆ ಈಗಾಗಲೇ ಈ ಕುರಿತು ಮಾತುಕತೆ ಕೂಡ ನಡೆದಿದೆ ಎಂದು 'ಸಿಯಾಸತ್ ಡೇಲಿ' ವೆಬ್ ಸೈಟ್ ವರದಿಯನ್ನು ಕೂಡ ಮಾಡಿದೆ.
ಹಬ್ಬಿರುವ ಈ ಸುದ್ದಿಯ ಕುರಿತು ಬಾಬಿಲ್ ಖಾನ್ ಇನ್ನು ಪ್ರತಿಕ್ರಿಯೆ ನೀಡಿಲ್ಲವಾದರೂ, ಇರ್ಫಾನ್ ಖಾನ್ ಅವರ ಅಭಿಮಾನಿಗಳು ಈ ಸುದ್ದಿ ಕೇಳಿ ಕುತೂಹಲಗೊಂಡಿದ್ದಾರೆ. ಒಂದು ವೇಳೆ ಬಾಬಿಲ್ ಬಿಗ್ ಬಾಸ್ ಮನೆಗೆ ಹೋಗಿದ್ದೇ ಆದಲ್ಲಿ ಇರ್ಫಾನ್ ಖಾನ್ ಕುರಿತು ಮತ್ತು ಬಾಬಿಲ್ ಕುರಿತು ಹಲವು ವಿಚಾರಗಳನ್ನು ತಿಳಿದುಕೊಳ್ಳಬಹುದು ಎಂದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯನ್ನು ಮಾಡುತ್ತಿದ್ದಾರೆ. ಇನ್ನು ಬಿಗ್ ಬಾಸ್ ಮನೆಗೆ ಬಾಬಿಲ್ ಹೋದರೆ ಬಾಲಿವುಡ್‌ನ ಇನ್ನು ಕೆಲವ 'ನಗ್ನ ಸತ್ಯ'ಗಳು ಕೂಡ ಹೊರ ಬರುವ ಸಾಧ್ಯತೆ ಇದೆ.
ಇನ್ನುಳಿದಂತೆ ಈ ಬಾರಿ ಹಿಂದಿ ಬಿಗ್ ಬಾಸ್ ಕಾರ್ಯಕ್ರಮ ಐದೂವರೆ ತಿಂಗಳು ನಡೆಯಲಿದೆ ಎಂದು ಪಿಂಕ್ ವಿಲ್ಲಾ ತನ್ನ ವರದಿಯಲ್ಲಿ ತಿಳಿಸಿದೆ.ಜುಲೈ 30ರಿಂದ ಕಾರ್ಯಕ್ರಮ ಶುರುವಾಗಲಿದೆ ಎಂದು ಕೂಡ ಪಿಂಕ್ ವಿಲ್ಲಾ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಒಟ್ನಲ್ಲಿ ಸದ್ಯ ಬಾಬಿಲ್ ಖಾನ್ ಬಿಗ್ ಬಾಸ್ ಮನೆಗೆ ಹೋಗ್ತಾರೆ ಎನ್ನುವ ಸುದ್ದಿ ಹೊರ ಬಿದ್ದಿದ್ದು ಬಾಬಿಲ್ ಖಾನ್ ನಿಜಕ್ಕೂ ಬಿಗ್ ಬಾಸ್ ಮನೆಗೆ ಹೋಗ್ತಾರಾ ಎನ್ನುವುದಕ್ಕೆ ಅಧಿಕೃತವಾದ ಉತ್ತರ ಸದ್ಯದಲ್ಲಿಯೇ ಸಿಗಲಿದೆ.


Click it and Unblock the Notifications











