ಇನ್‌ಸ್ಟಾಗ್ರಾಮ್‌ನಲ್ಲಿ ಅರಳಿತು ಪ್ರೀತಿ ; ತನಗಿಂತ 2 ವರ್ಷ ಚಿಕ್ಕವನ ಜೊತೆ ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡ ನಟಿ
ಕೇವಲ ಎರಡು ಅಕ್ಷರದಲ್ಲಿ ಪ್ರೀತಿಯನ್ನು ನಿರೂಪಿಸುವುದು ಕಷ್ಟ. ಯಾಕೆಂದರೆ.. ಪ್ರೀತಿಯನ್ನು ಪದಗಳಲ್ಲಿ ವರ್ಣಿಸಲು ಸಾಧ್ಯ ಇಲ್ಲ. ಈ ಪ್ರೀತಿಯನ್ನು ಅನುಭವಿಸಿಯೇ ತೀರಬೇಕು. ಅದರಲ್ಲಿಯೂ ನಿಜವಾದ ಪ್ರೀತಿ ಅಂದರೆ ಯಾವುದು ? ನಿಜವಾದ ಪ್ರೀತಿ ಅಂದರೇನು ? ನಿಜವಾದ ಪ್ರೀತಿಯನ್ನು ಗುರುತಿಸುವುದು ಹೇಗೆ ? ಎಂಬೆಲ್ಲಾ ಪ್ರಶ್ನೆಗಳು ಪ್ರೀತಿಸಿದವರ ಮನದಲ್ಲಿ ಮೂಡುವುದು ಸಹಜ. ಆದರೆ ನಿಜವಾದ ಪ್ರೀತಿ..
ಎನ್ನುವುದು ಹೃದಯದ ಬಡಿತ ಅಲ್ಲ. ನನ್ನ ಹೃದಯದ ಬಡಿತ ಅನುಕ್ಷಣ ನಿನ್ನದೇ ಹೆಸರು ಹೇಳುತ್ತಿದೆ ಎಂದರೆ ಅದು ನಿಜವೂ ಅಲ್ಲ. ನಿಜವಾದ ಪ್ರೀತಿ ಅನ್ನೋದು ಪರಿಪೂರ್ಣ ಪ್ರಣಯವದು ಎನ್ನುವುದು ಹಲವರ ಅಭಿಪ್ರಾಯ. ಇನ್ನು ಈ ಪ್ರೀತಿ ಯಾರ ಮೇಲೆ ಬೇಕಾದರೂ, ಯಾವಾಗ ಬೇಕಾದರೂ, ಎಲ್ಲಿ ಬೇಕಾದರೂ ಆಗಬಹುದು. ಉದಾಹರಣೆಗೆ ಸೃಷ್ಟಿ ಜೈನ್ ಮತ್ತು ಶ್ರೇಯಸ್ ಗುಪ್ತಾ ಅವರ ಲವ್ ಸ್ಟೋರಿಯನ್ನೇ ತೆಗೆದುಕೊಳ್ಳಿ.

ಹೌದು, ಸೃಷ್ಟಿ ಜೈನ್.. ಹಿಂದಿ ಕಿರುತೆರೆಯ ಪ್ರಖ್ಯಾತ ತಾರೆ. ಬಾಲ್ಯದಲ್ಲಿಯೇ ಬಣ್ಣದ ಗೀಳು ಅಂಟಿಸಿಕೊಂಡ ಸೃಷ್ಟಿ ''ವಾರ್ ಛೋಡ್ ನಾ ಯಾರ್'' ಮೂಲಕ ವೃತ್ತಿ ಬದುಕು ಶುರು ಮಾಡಿದರು. ಆ ನಂತರ ''ಸುಹಾನಿ ಸಿ ಏಕ್ ಲಡ್ಕಿ''.. ಧಾರಾವಾಹಿಯ ಮೂಲಕ ಕಿರುತೆರೆಗೆ ಬಂದ ಸೃಷ್ಟಿ ''ಮೇರಿ ದುರ್ಗಾ''.. '' ಮೇ ಮಾಯಿಕೆ ಚಲೇ ಜಾಹುಂಗಿ''.. ''ಹಮಾರಿ ವಾಲಿ ಗುಡ್ ನ್ಯೂಸ್''.. ''ಕುಂಕುಮ್ ಭಾಗ್ಯ''.. ''ಬಡೆ ಅಚ್ಚೆ ಲಗತೇ ಹೈ 3''... ಧಾರಾವಾಹಿಗಳಲ್ಲಿ ಕಾಣಿಸಿಕೊಂಡರು. ಜನ ಮನ ಗೆದ್ದರು.
ಸದ್ಯ ಸೃಷ್ಟಿ ''ಗಂಗಾ ಮಾ ಕೀ ಬೇಟಿಯಾ'' ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ. ಕನ್ನಡದ ''ಪುಟ್ಟಕ್ಕನ ಮಕ್ಕಳು'' ಧಾರಾವಾಹಿಯ ರಿಮೇಕ್ ಇದು ಎನ್ನುವುದು ವಿಶೇಷ. ಇಲ್ಲಿ ಇವರು ಸಹನಾ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ತಮ್ಮ ಪಾತ್ರದ ಮೂಲಕ ಮತ್ತೊಮ್ಮೆ ಮನೆ ಮಾತಾಗಿದ್ದಾರೆ.
ಇಂಥಾ ಸೃಷ್ಟಿ ಸದ್ಯ ಸದ್ದು ಗದ್ದಲ ಇಲ್ಲದೇ ಶ್ರೇಯಸ್ ಗುಪ್ತಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ವಿಶೇಷ ಅಂದರೆ ಸೃಷ್ಟಿಗೆ ಈಗ 29 ವರ್ಷ. ಆದರೆ ಶ್ರೇಯಸ್ 27 ವರ್ಷ. ಇನ್ನೂ ವಿಶೇಷ ಅಂದರೆ ಸಾಮಾನ್ಯವಾಗಿ ತಾರೆಯರು ತಮ್ಮ ಸುತ್ತ ಮುತ್ತ ಇರುವ ವ್ಯಕ್ತಿಗಳ ಜೊತೆಯಲ್ಲಿಯೇ ಪ್ರೀತಿಯಲ್ಲಿ ಬೀಳುತ್ತಾರೆ. ಇಲ್ಲವಾದಲ್ಲಿ ಮನೆಯಲ್ಲಿ ನೋಡಿದ ಹುಡುಗನ ಜೊತೆ ಸಪ್ತಪದಿಯನ್ನು ತುಳಿಯುತ್ತಾರೆ.
ಆದರೆ. ಸೃಷ್ಟಿ ಮತ್ತು ಶ್ರೇಯಸ್ ಪ್ರೇಮ ಸಂಬಂಧವನ್ನು ಇನ್‌ಸ್ಟಾಗ್ರಾಮ್ ಬೆಸೆದಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾದ ಇಬ್ಬರು ಪರಸ್ಪರ ಸಂದೇಶಗಳನ್ನು ವಿನಿಮಯ ಮಾಡಿಕೊಳ್ಳುತ್ತಾ ಹಾಗೇ ಪ್ರೀತಿಯಲ್ಲಿ ಬಿದ್ದಿದ್ದಾರೆ. ಈ ಪ್ರೀತಿಗೆ ಇವರ ಇಬ್ಬರ ನಡುವೆ ಇರುವ ವಯಸ್ಸಿನ ಅಂತರ ಅಡ್ಡಿಯಾಗಿಲ್ಲ. ಸೃಷ್ಟಿಗಿಂತ ಎರಡು ವರ್ಷ ಚಿಕ್ಕವನಾದರು ಮನೆಯವರು ಬೇಡ ಅಂದಿಲ್ಲ.

ಈ ಹಿನ್ನೆಲೆ ತಮ್ಮ ಆಪ್ತರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿರುವ ಸೃಷ್ಟಿ ನಮ್ಮ ಕಥೆ ಶುರುವಾಗಿದ್ದು ಇಲ್ಲಿಂದಲೇ ಎಂದು ಹೇಳಿದ್ದಾರೆ. ನಾವು ಒಟ್ಟಾಗಿ ನಮ್ಮ ಹೊಸ ಜೀವನವನ್ನು ಪ್ರಾರಂಭಿಸಲು ಹೊರಟಿದ್ದೇವೆ ಎಂದು ಹೇಳಿರುವ ಸೃಷ್ಟಿ ಮದುವೆಯ ದಿನಕ್ಕೆ ಕಾತುರದಿಂದ ಕಾಯುತ್ತಿರುವುದಾಗಿ ಹೇಳಿದ್ದಾರೆ.
ಸದ್ಯ ಸೃಷ್ಟಿ ಜೈನ್ ಅವರಿಗೆ ಅವರ ಅಭಿಮಾನಿಗಳು ಮತ್ತು ಮುಗ್ಧಾ ಛಾಪೇಕರ್, ಮೇಘಾ ರೇ, ಡಾಲಿ ಜೈಸ್ವಾಲ್ ಸೇರಿದಂತೆ ಕಿರುತೆರೆಯ ಹಲವರು ಶುಭಾಶಯಗಳನ್ನು ಕೋರುತ್ತಿದ್ದಾರೆ. ಅಂದ್ಹಾಗೇ ಸೃಷ್ಟಿ ಜೈನ್ ಮನ ಗೆದ್ದ ಶ್ರೇಯಸ್ ಗುಪ್ತಾ ವೃತ್ತಿಯಲ್ಲಿ ಉದ್ಯಮಿ. ಟೆನ್ನಿಸ್ ಮತ್ತು ಫುಟ್ಭಾಲ್ ಆಟಗಾರ ಕೂಡ ಹೌದು. ಕಳೆದೊಂದು ವರ್ಷದಿಂದ ಇವರಿಬ್ಬರು ಪ್ರೇಮ ಗೀತೆಯನ್ನು ಹಾಡುತ್ತಿದ್ದರು. ಈಗ ಮನೆಯವರನ್ನು ಒಪ್ಪಿಸಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಶೀಘ್ರದಲ್ಲಿಯೇ ಸೃಷ್ಟಿ ಮತ್ತು ಶ್ರೇಯಸ್ ಮದುವೆ ನಡೆಯಲಿದೆ.


Click it and Unblock the Notifications











