ಬಿಗ್ ಬಾಸ್‌ನಲ್ಲಿ ಚಿಗುರಿದ ಪ್ರೀತಿ, ಸದ್ದಿಲ್ಲದೇ ಮದುವೆಯಾದ ಖ್ಯಾತ ಜೋಡಿ..!
ಪ್ರೀತಿಯೇ ಸರ್ವಸ್ವವಲ್ಲ. ಆದರೆ ಬದುಕಿನ ಈ ಬಹುಮುಖ್ಯ ಅಧ್ಯಾಯವನ್ನು ಅಷ್ಟೇ ಜತನದಿಂದ, ಅದಕ್ಕಿರುವ ಆಳ- ಅರ್ಥವನ್ನೊಮ್ಮೆ ಮನಗಂಡ, ಆಲೋಚಿಸಿ, ಅಭ್ಯಸಿಸಿ ಆಯ್ದುಕೊಳ್ಳುವ ಪ್ರವೃತ್ತಿ ಪ್ರೀತಿಗೆ ಹೊಸ ಅರ್ಥವನ್ನು ತುಂಬಿದೆ. ಅದು ಕೇವಲ ಭಾವೋದ್ವೇಗದ ಭ್ರಮಾಲೋಕವಾಗಿ ಉಳಿದಿಲ್ಲ ಬದಲಿಗೆ. ವಾಸ್ತವದ ಭೂತಗನ್ನಡಿಯಲ್ಲಿಟ್ಟು ಪರೀಕ್ಷಿಸಿ, ಒಪ್ಪಿಕೊಳ್ಳುವ ಮತ್ತು ಅಪ್ಪಿಕೊಳ್ಳುವ ಜಮಾನಾ ಈಗಿನದು. ನೇರವಂತಿಕೆ ಈಗ ಪ್ರೀತಿಯ ಬಹುಮುಖ್ಯ ಅಂಶ.
ಇದಕ್ಕೆ ಪಾವನಿ ರೆಡ್ಡಿ ಮತ್ತು ಆಮಿರ್ ಸದ್ಯದ ಉದಾಹರಣೆ. ಹೌದು ಪಾವನಿ ರೆಡ್ಡಿ, ತೆಲುಗು ಕಿರುತೆರೆ ಮತ್ತು ಬೆಳ್ಳಿತೆರೆಯ ಪ್ರೇಕ್ಷಕರಿಗೆ ಚಿರಪರಿಚಿತವಾದ ಹೆಸರು. ಡಬಲ್ ಟ್ರಬಲ್, ಡ್ರೀಮ್, ಗರುಮ್, ಲಜ್ಜ, ಪ್ರೇಮಕು ರೈನ್ ಚೆಕ್, ಸೇನಾ ಪತಿ, ಮಲ್ಲಿ, ಹೀಗೆ ಹಲವು ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿರುವ ಪಾವನಿ ತೆಲುಗು ಬಿಗ್ ಬಾಸ್‌ನ ಐದನೇ ಸೀಸನ್‌ನ ಸ್ಫರ್ಧಿ ಕೂಡ ಹೌದು.

ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಎರಡನೇ ರನ್ನರ್ ಅಪ್ ಆಗಿ ಹೊರ ಹೊಮ್ಮಿದವರು ಇವರು. ಇಂಥಾ ಪಾವನಿ ಇದೇ ಬಿಗ್ ಬಾಸ್ ಮನೆಯಲ್ಲಿದ್ದಾಗ ನೃತ್ಯ ನಿರ್ದೇಶಕ ಆಮಿರ್ ಜೊತೆ ಪ್ರೀತಿಯಲ್ಲಿ ಬಿದ್ದಿದ್ದರು. ಬಿಗ್ ಬಾಸ್ ಇವರಿಬ್ಬರ ಪ್ರೇಮ ಕಥೆಗೆ ಸಾಕ್ಷಿಯಾಗಿತ್ತು.
ಅಲ್ಲಿಂದ ಅಂದರೆ 2021ರಿಂದ ಇಲ್ಲಿಯವರೆಗೆ ಪ್ರೇಮದ ಅಲೆಯಲ್ಲಿ ತೇಲಿದ ಇಬ್ಬರು ಇಂದು ಮದುವೆಯಾಗಿದ್ದಾರೆ. ಗುರು ಹಿರಿಯರ ಆಶೀರ್ವಾದ ಪಡೆದು ಸ್ನೇಹಿತರ ಸಮ್ಮುಖದಲ್ಲಿ ಹೊಸ ಬದುಕಿಗೆ ಮುನ್ನುಡಿಯನ್ನು ಬರೆದಿದ್ದಾರೆ. ತಮ್ಮ ಅಭಿಮಾನಿಗಳಿಗಾಗಿ ಮದುವೆಯ ಫೋಟೊ ಮತ್ತು ವಿಡಿಯೋಗಳನ್ನು ಕೂಡ ಹಂಚಿಕೊಂಡಿದ್ದಾರೆ.
ಮದುವೆಯ ಮುನ್ನ ಪ್ರೀ ವೆಡ್ಡಿಂಗ್ ಫೋಟೊಶೂಟ್ ಕೂಡ ಮಾಡಿಸಿರುವ ಈ ಜೋಡಿ ಹಳದಿ ಸಂಭ್ರಮದ ಫೋಟೊಗಳನ್ನು ಕೂಡ ಹಂಚಿಕೊಂಡಿದೆ. ಸದ್ಯ ಪಾವನಿ ರೆಡ್ಡಿ ಮತ್ತು ಆಮಿರ್ ಅವರ ಮದುವೆಯ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅನೇಕರು ನವ ಜೋಡಿಗೆ ಶುಭಾಶಯವನ್ನು ಕೋರುತ್ತಿದ್ದಾರೆ. ಇನ್ನು ಮೊನ್ನೆಯಷ್ಟೇ ವಾಸಿ ಸಾಚಿ ಅವರ ಜೊತೆ ಮದುವೆಯಾದ ಖ್ಯಾತ ನಿರೂಪಕಿ ಪ್ರಿಯಾಂಕ ದೇಶಪಾಂಡೆ ತಮ್ಮ ಪತಿಯ ಜೊತೆ ಮದುವೆಗೆ ತೆರಳಿ ಪಾವನಿ ರೆಡ್ಡಿ ಮತ್ತು ಆಮಿರ್‌ಗೆ ಶುಭ ಕೋರಿದ್ದಾರೆ.
ಇನ್ನು ಬಿಗ್ ಬಾಸ್ ಮನೆಯಲ್ಲಿ ಇಬ್ಬರು ಇದ್ದಾಗ ಅನೇಕರು ಈ ಜೋಡಿಯನ್ನು ಮೆಚ್ಚಿಕೊಂಡಿದ್ದರು. ಇಬ್ಬರದ್ದು ಹೇಳಿ ಮಾಡಿಸಿದ ಜೋಡಿ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇಬ್ಬರು ಮದುವೆಯಾಗಬೇಕು ಎಂದು ಆಶಿಸಿದ್ದರು. ಈಗ ಮದುವೆಯಾಗುವ ಮೂಲಕ ತಮ್ಮ ಅಭಿಮಾನಿಗಳ ಆಸೆಯನ್ನು ಈಡೇರಿಸಿದ್ದಾರೆ ಇವರಿಬ್ಬರು.
ಅಂದ್ಹಾಗೇ 2013ರಲ್ಲಿ ಪಾವನಿ ರೆಡ್ಡಿ ತೆಲುಗು ಕಿರುತೆರೆಯ ನಟ ಪ್ರದೀಪ್ ಕುಮಾರ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಪ್ರೇಮಿಗಳ ದಿನದಂದೇ ಪ್ರದೀಪ್ ಜೊತೆ ಸಪ್ತಪದಿ ತುಳಿದಿದ್ದರು.
ಆದರೆ ಆ ನಂತರ ಅದೇನಾಯ್ತೋ ? 2017ರಲ್ಲಿ ಪ್ರದೀಪ್ ಕುಮಾರ್ ನೇಣಿಗೆ ಕೊರಳೊಡ್ಡಿದರು. ಹೈದರಾಬಾದ್‌ನ ಪುಷ್ಪಲ ಗುಡದಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆಯನ್ನು ಮಾಡಿಕೊಂಡರು. ಈ ವಿಚಾರ ಆಗ ಸಿಕ್ಕಾಪಟ್ಟೆ ಸದ್ದು ಮಾಡಿತ್ತು.
ತಮ್ಮ ಸ್ನೇಹಿತನ ಜೊತೆ ಪಾವನಿ ರೆಡ್ಡಿ ಅನೈತಿಕ ಸಂಬಂಧವನ್ನು ಹೊಂದಿರುವ ವಿಚಾರ ಗೊತ್ತಾಗಿ ಪ್ರದೀಪ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಹೈದರಾಬಾದ್‌ನಲ್ಲೆಡೆ ಗುಲ್ಲಾಗಿತ್ತು.ಗಂಡನ ಸಾವು, ಪೊಲೀಸರ ತನಿಖೆ, ಸಮಾಜ ನೋಡುವ ದೃಷ್ಟಿಕೋನದಿಂದ ಪಾವನಿ ಬದುಕು ಅಲ್ಲೋಲ ಕಲ್ಲೋಲವಾಗಿತ್ತು.
ಆ ನಂತರ ಆನಂದ್ ಜಾಯ್ ಜೊತೆ ಇವರ ಹೆಸರು ಥಳುಕು ಹಾಕಿಕೊಂಡಿತ್ತಾದರೂ ಇಬ್ಬರು ಹರಿದಾಡುತ್ತಿರುವ ಸುದ್ದಿ ನಿಜಾ ಅಲ್ಲ ಎಂದು ಸ್ಪಷ್ಟಪಡಿಸಿದ್ದರು. ಹೀಗೆ ವ್ಯೆಯಕ್ತಿಕ ಬದುಕಿನಲ್ಲಿ ಹಲವು ಏರಿಳಿತ ಕಂಡ ಪಾವನಿ ಆ ನಂತರ ಬಿಗ್ ಬಾಸ್ ಮನೆಯಲ್ಲಿ ಆಮಿರ್‌ಗೆ ಮನ ಸೋತರು. ಸದ್ಯ ಇಬ್ಬರು ಮದುವೆಯಾಗಿದ್ದು ಹೊಸ ಬದುಕನ್ನು ಶುರು ಮಾಡಿದ್ದಾರೆ. ಇನ್ನು, ಪಾವನಿ ಮತ್ತು ಆಮಿರ್ ಅವರದ್ದು ಅಂತರ ಧರ್ಮಿಯ ವಿವಾಹ. ಈ ಹಿನ್ನೆಲೆ ಕೆಲವರು ಅಪಸ್ವರ ತೆಗೆಯುತ್ತಿದ್ದು ಪಾವನಿ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ನಿಂದಿಸುತ್ತಿದ್ದಾರೆ. ನಿಮ್ಮ ದಾಂಪತ್ಯ ಹೆಚ್ಚು ದಿನ ಉಳಿಯಲ್ಲ ಎಂಬ ಕಾಮೆಂಟ್‌ಗಳನ್ನು ಕೂಡ ಮಾಡುತ್ತಿದ್ದಾರೆ.


Click it and Unblock the Notifications











