Video: ಅಂದು ವೇದಿಕೆಯಲ್ಲಿ ಗಿಲ್ಲಿ ನಟನನ್ನು ಪಕ್ಕಕ್ಕೆ ಸರಿಸಿದ್ರು; ಆದ್ರೆ ಇಂದು?
ಬಿಗ್‌ಬಾಸ್ ವಿನ್ನರ್ ಗಿಲ್ಲಿ ಕ್ರೇಜ್ ಕಮ್ಮಿ ಆಗ್ತಿಲ್ಲ. ಹೋದಲ್ಲಿ ಬಂದಲ್ಲಿ ಅಭಿಮಾನಿಗಳು ಮುತ್ತಿಕೊಳ್ಳುತ್ತಿದ್ದಾರೆ. ಗಿಲ್ಲಿ ಗಿಲ್ಲಿ ಎಂದು ಜೈಕಾರ ಹಾಕುತ್ತಿದ್ದಾರೆ. ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುವಂತಾಗಿದೆ. ಗಿಲ್ಲಿ ನಟನನ್ನು ನೋಡಲು ಅಭಿಮಾನಿಗಳು ವೇದಿಕೆಗೆ ಏರಿ ರಾದ್ಧಾಂತ ಆಗ್ತಿದೆ. ಆದರೆ 4 ತಿಂಗಳ ಹಿಂದೆ ಪರಿಸ್ಥಿತಿ ಹೀಗೆ ಇರಲಿಲ್ಲ.
ಕಿರುತೆರೆ ಧಾರಾವಾಹಿಗಳಿಗೆ ಸೆಟ್ ಕೆಲಸ ಮಾಡಿಕೊಂಡಿದ್ದವರು ಗಿಲ್ಲಿ. ಬಳಿಕ ಸಣ್ಣ ಪುಟ್ಟ ಅವಕಾಶಗಳು ಸಿಕ್ಕಿತ್ತು. ಸೋಶಿಯಲ್ ಮೀಡಿಯಾದಲ್ಲಿ ಸ್ಕಿಟ್ ವಿಡಿಯೋಗಳನ್ನು ಮಾಡಿ ಗಮನ ಸೆಳೆದರು. ಬಳಿಕ ರಿಯಾಲಿಟಿ ಶೋಗಳಲ್ಲಿ ಅವಕಾಶ ಸಿಕ್ಕಿತ್ತು. ಅಂತಿಮವಾಗಿ ಬಿಗ್‌ಬಾಸ್ ಮನೆ ಪ್ರವೇಶಿಸಿ ಕಮಾಲ್ ಮಾಡಿದರು. ಟ್ರೋಫಿ ಗೆದ್ದು ಅಭಿಮಾನಿಗಳ ಮನಸೂರೆಗೊಂಡರು. ಈಗ ರಾಜಕೀಯ ಮುಖಂಡರು ಕರೆದು ಗಿಲ್ಲಿಗೆ ಸನ್ಮಾನ ಮಾಡುತ್ತಿದ್ದಾರೆ. ದೊಡ್ಡ ದೊಡ್ಡ ಕಾರ್ಯಕ್ರಮಗಳಿಗೆ ಅತಿಥಿಯಾಗಿ ಆಹ್ವಾನಿಸುತ್ತಿದ್ದಾರೆ.

ಈ ಹಿಂದೆ ಕೂಡ ಗಿಲ್ಲಿ ಕೆಲ ವೇದಿಕೆಗಳಿಗೆ ಹೋಗಿದ್ದರು. ಬೇರೆ ಹಾಸ್ಯ ಕಲಾವಿದರ ಜೊತೆಗೆ ವೇದಿಕೆ ಏರಿದ್ದರು. ಆಗ ಗಿಲ್ಲಿಗೆ ಅಷ್ಟೇನು ಕ್ರೇಜ್ ಇರಲಿಲ್ಲ. ಅಂಥದ್ದೇ ವಿಡಿಯೋವೊಂದು ಈಗ ವೈರಲ್ ಆಗ್ತಿದೆ. ಈ ಹಿಂದೆ ಕಾರ್ಯಕ್ರಮವೊಂದಕ್ಕೆ ಗಿಚ್ಚಿ ಗಿಲಿಗಿಲಿ ಕಲಾವಿದರಾದ ಹುಲಿ ಕಾರ್ತಿಕ್ ಹಾಗೂ ರಾಘವೇಂದ್ರ ಜೊತೆ ಗಿಲ್ಲಿ ಹೋಗಿದ್ದರು. ಅಂದು ವೇದಿಕೆಯಲ್ಲಿ ಜಾಗ ಇಲ್ಲದೇ ಅಸ್ತವ್ಯಸ್ತ ಆಗಿತ್ತು. ಆಯೋಜಕರು ಪರಿಸ್ಥಿತಿ ಹತೋಟಿಗೆ ತರುವ ಪ್ರಯತ್ನ ಮಾಡಿದ್ದರು. ಆಗ ಅಲ್ಲೇ ನಿಂತಿದ್ದ ಗಿಲ್ಲಿ ನಟನನ್ನು ಪಕ್ಕಕ್ಕೆ ಸರಿಸಿರುವಂತೆ ವಿಡಿಯೋ ವೈರಲ್ ಆಗ್ತಿದೆ.
ಅಂದು ವೇದಿಕೆಯಲ್ಲಿ ಗಿಲ್ಲಿಗೆ ಜಾಗ ಇರಲಿಲ್ಲ. ಆದರೆ ಈಗ ವೇದಿಕೆಯಲ್ಲಿ ಗಿಲ್ಲಿ ಬಿಟ್ಟು ಬೇರೆ ಯಾರು ಇರದಂತೆ ತಳ್ಳುತ್ತಿದ್ದಾರೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. "ಮೊದಲು ಅವಮಾನ ಆಮೇಲೆ ಸನ್ಮಾನ, ಇದು ಬೆಳವಣಿಗೆ ಅಂದ್ರೆ" ಎಂದು ಎರಡು ವೀಡಿಯೋ ಸೇರಿಸಿ ಎಡಿಟ್ ಮಾಡಿ ತೇಲಿ ಬಿಡುತ್ತಿದ್ದಾರೆ.
ಬಿಗ್‌ಬಾಸ್ ಮನೆಯಲ್ಲಿ 112 ದಿನ ಉಳಿದುಕೊಂಡು ಗಿಲ್ಲಿ ಕೊನೆಗೆ ಟ್ರೋಫಿ ಗೆದ್ದರು. ಈ ಹಿಂದಿನ ಬಿಗ್‌ಬಾಸ್ ಸೀಸನ್‌ಗಳಲ್ಲಿ ಯಾರಿಗೂ ಸಿಗದ ಕ್ರೇಜ್ ಆತನಿಗೆ ಸಿಕ್ಕಿದೆ. 50 ಲಕ್ಷ ರೂ. ಬಹುಮಾನದ ಮೊತ್ತದ ಜೊತೆಗೆ ಒಂದು ಕಾರ್ ಬಹುಮಾನವಾಗಿ ಸಿಕ್ಕಿದೆ. ಕಿಚ್ಚ ಸುದೀಪ್ ವೈಯಕ್ತಿಕವಾಗಿ 10 ಲಕ್ಷ ರೂ. ಹಣ ಕೊಟ್ಟಿದ್ದಾರೆ. ಸಿನಿಮಾ ಅವಕಾಶಗಳು ಅರಸಿ ಬರ್ತಿದೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಹವಾ ಜೋರಾಗಿದೆ.
ಬಿಗ್‌ಬಾಸ್ ಮನೆ ಒಳಗೆ ಹೋಗುವ ಮುನ್ನ ಗಿಲ್ಲಿಗೆ ಇನ್‌ಸ್ಟಾಗ್ರಾಮ್‌ನಲ್ಲಿ 1 ಲಕ್ಷ ಫಾಲೋವರ್ಸ್ ಇದ್ದರು. ಈಗ ಅದು 20 ಲಕ್ಷ ದಾಟಿದೆ. ಕೇವಲ 3 ತಿಂಗಳಲ್ಲಿ ಈ ಪಾಟಿ ಕ್ರೇಜ್ ಸೃಷ್ಟಿಯಾಗಿದೆ. ಇನ್ನು ಗಿಲ್ಲಿ ಮಾಡುವ ಪೋಸ್ಟ್‌ಗಳಿಗೆ ಮಿಲಿಯನ್‌ಗಟ್ಟಲೆ ಲೈಕ್ಸ್, ಸಾವಿರಾರು ಕಾಮೆಂಟ್ಸ್ ಸಿಗುತ್ತಿದೆ. ಗಿಲ್ಲಿ ಜನಪ್ರಿಯತೆ ಬಗ್ಗೆ ಸಿಎಂ ಸಿದ್ದರಾಮಯ್ಯ ಕೂಡ ಅಚ್ಚರಿ ವ್ಯಕ್ತಪಡಿಸಿದ್ದರು.
ಇತ್ತೀಚೆಗೆ ಶಾಸಕ ಪ್ರದೀಪ್ ಈಶ್ವರ್ ಸದನದಲ್ಲಿ ಗಿಲ್ಲಿ ನಟನ ಹೆಸರು ಪ್ರಸ್ತಾಪ ಮಾಡಿದ್ದರು. ಅಷ್ಟರಮಟ್ಟಿಗೆ ಮಂಡ್ಯ ಹೈದನ ಹವಾ ನಡೀತಿದೆ. ಬಿಗ್‌ಬಾಸ್ ಮನೆಯಲ್ಲಿ ಗಿಲ್ಲಿ ಟಾಸ್ಕ್‌ಗಳಲ್ಲಿ ಅಷ್ಟೇನು ಚೆನ್ನಾಗಿ ಆಡಲಿಲ್ಲ. ಆದರೆ ಬರೀ ಮಾತಿನಲ್ಲೇ ವೀಕ್ಷಕರನ್ನು ರಂಜಿಸಿದ್ದರು. ಒಳ್ಳೆ ಎಂಟರ್‌ಟೈನರ್ ಎನಿಸಿಕೊಂಡಿದ್ದರು. ಗಿಲ್ಲಿ ಕಾಣಿಸಿಕೊಂಡಿದ್ದ 3 ಬಿಗ್‌ಬಾಸ್ ಪ್ರೋಮೊಗಳು 1 ಮಿಲಿಯನ್ ಲೈಕ್ಸ್ ಗಿಟ್ಟಿಸಿದ್ದವು. ಇನ್ನು ಗಿಲ್ಲಿ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.


Click it and Unblock the Notifications











