Amruthadhaare :ಶಸ್ತ್ರತ್ಯಾಗ ಮಾಡಿದ ಭೂಮಿಕಾ,ಕ್ಯಾಬ್ ಡ್ರೈವರ್ ಆದ ಕೋಟ್ಯಾಧಿಪತಿ ಗೌತಮ್ -ಬೆಚ್ಚಿ ಬಿದ್ದ ಪ್ರೇಕ್ಷಕರು
ಅಮೃತಧಾರೆ ಧಾರಾವಾಹಿಯಲ್ಲಿ ತನಗೆ ಎರಡು ಮಕ್ಕಳಿದ್ದ ವಿಚಾರ ಭೂಮಿಕಾಗೆ ಗೊತ್ತಾಗಿದೆ. ಒಂದು ಮಗುವನ್ನು ಶಕುಂತಲಾ ಕಿಡ್ನಾಪ್ ಮಾಡಿರುವ ಕಹಿ ಸತ್ಯ ಗೊತ್ತಾಗಿದೆ. ಮನದಲ್ಲಿ ಆಕ್ರೋಶದ ಜ್ವಾಲೆ ಹೊತ್ತಿ ಉರಿಯುತ್ತಿದ್ದರು ಕೂಡ ಏನೆಂದರೇನು ಮಾಡಲಾಗದ ಅಸಹಾಯಕ ಸ್ಥಿತಿಯಲ್ಲಿ ಭೂಮಿಕಾ ಇದ್ದಾಳೆ. ಯಾಕೆಂದರೆ.. ದಿವಾನ್ ಮನೆತನವನ್ನೇ ಸರ್ವನಾಶ ಮಾಡುವ ಶಪಥ ಮಾಡಿರುವ ಶಕುಂತಲಾ ನಿನ್ನ ಮನೆಯಲ್ಲಿ ಅಮ್ಮ.. ಜೀವ.. ಮಹಿಮಾ ಇದ್ದಾರೆ.
ಅಪೇಕ್ಷಾ ಕೂಡ ನಿನ್ನ ಮನೆಯಲ್ಲಿಯೇ ಇದ್ದಾಳೆ. ಅಲ್ಲಿ ನಮ್ಮ ಹುಡುಗ ತಲುಪಿದ್ದಾನೆ. ಯಾವಾಗ ಏನು ಬೇಕಾದರೂ ಆಗಬಹುದು ಎಂದು ಹೇಳಿದ್ದಾಳೆ. ಸುಧಾ ಪ್ರಾಣಕ್ಕೂ ಕೂಡ ಕುತ್ತು ಇರುವ ವಿಚಾರ ತಿಳಿಸಿದ್ದಾಳೆ. ನಿನ್ನ ಗಂಡ ವಿಮಾನ ನಿಲ್ದಾಣದಿಂದ ಹೊರ ಬರುತ್ತಿದ್ದಂತೆಯೇ ಕೊಲ್ಲಲು ಹೊಂಚು ಹಾಕಿ ಶಾರ್ಪ್ ಶೂಟರ್ ಕೂಡ ಕಾಯುತ್ತಿದ್ದಾನೆ ಎಂದಿದ್ದಾಳೆ. ಒಂದು ಮಗುವನ್ನು ಬಲಿ ಪಡೆದು ಆಗಿದೆ. ತಾಕತ್ತಿದ್ದರೆ ಇನ್ನೊಂದು ಮಗು ಉಳಿಸಿಕೋ ಎಂದು ಸವಾಲು ಹಾಕಿದ್ದಾಳೆ.

ಇದೆಲ್ಲದರಿಂದ ನೊಂದು.. ಬೆಂದು.. ಹೋಗಿರುವ ಭೂಮಿಕಾ, ಅಸಹಾಯಕ ಪರಿಸ್ಥೀತಿಯಲ್ಲಿದ್ದರೂ ಕೂಡ ಮುಂದೊಂದು ದಿನ ಬೆಂಕಿಯಾಗುತ್ತಾಳೆ. ಆ ಬೆಂಕಿಯಲ್ಲಿ ಶಕುಂತಲಾ ಮತ್ತು ಜೈದೇವ್ ಪಡೆ ಬೂದಿಯಾಗುತ್ತೆ ಎಂದೇ ಎಲ್ಲ ಅಂದುಕೊಂಡಿದ್ದರು. ಇನ್ನೂ ಶಕುಂತಲಾ ಮಗು ವಿಚಾರ ಹೇಳಿದ ಹಿನ್ನೆಲೆ ಗೌತಮ್ ವಿರುದ್ಧ ಭೂಮಿಕಾ ಮುನಿಸಿಕೊಳ್ಳಬಹುದು, ಜನುಮದ ಜೋಡಿಯ ದಾಂಪತ್ಯದಲ್ಲಿ ಈ ವಿಚಾರದಿಂದ ಬಿರುಕು ಮೂಡಬಹುದು ಎಂದು ಕೂಡ ಹಲವರು ಲೆಕ್ಕ ಹಾಕಿದ್ದರು.
ಆದರೆ.. ಅಂದುಕೊಂಡಿದ್ದೇ ಒಂದು. ಆಗಿದ್ದೇ ಇನ್ನೊಂದು. ಯಾಕೆಂದರೆ ಅಮೃತಧಾರೆ ಧಾರಾವಾಹಿ ಸದ್ಯ ಯಾರು ಊಹಿಸದ ರಣ ರೋಚಕ ತಿರುವು ಪಡೆದಿದೆ. ತಿರುವು ಪಡೆದ ಈ ಧಾರಾವಾಹಿಯಲ್ಲಿ ಭೂಮಿಕಾ ಶಸ್ತ್ರ ತ್ಯಾಗ ಮಾಡಿದ್ದಾಳೆ. ಶಕುಂತಲಾನ ಎದುರಿಸಲಾಗದೇ ಸೋಲು ಒಪ್ಪಿಕೊಂಡು ಮನೆಯಿಂದ ಹೊರ ನಡೆದಿದ್ದಾಳೆ.
ಇನ್ನೊಂದು ಮಗುವನ್ನು ನಿನ್ನ ಕಣ್ಮುಂದೆಯೇ ಸಾಯಿಸಬೇಕೆಂದುಕೊಂಡಿದ್ದೇನೆ, ನಿನಗೆ ಈ ಮಗು ಮೇಲೆ ಆಸೆ ಇದ್ದರೆ ಮನೆ ಬಿಟ್ಟು ತೊಲಗು ಎಂದು ಶಕುಂತಲಾ ಹೇಳಿದ್ದು, ಭೂಮಿಕಾ ಕಣ್ಣೀರು ಹಾಕುತ್ತಾ ಮನೆಯ ಹೊಸಿಲು ದಾಟಿದ್ದಾಳೆ. ಮನೆಯಾಚೆ ಹೋಗುವ ಮುನ್ನ ಮಗು ಮತ್ತು ಗೌತಮ್ ಅವರ ಜವಾಬ್ಧಾರಿ ನಿಮ್ಮದು ಎಂದು ದೇವರಲ್ಲಿ ಕೇಳಿಕೊಂಡಿದ್ದಾಳೆ.
ಭೂಮಿಕಾ ಮನೆಯಿಂದ ಹೊರಗಡೆ ಹೋದ ಬೆನ್ನಲ್ಲಿಯೇ, ಶಕುಂತಲಾ ತನ್ನ ಮುದ್ದಿನ ಮಗ ಜೈದೇವ್ ಜೊತೆ ಸಂಭ್ರಮ ಪಟ್ಟಿದ್ದು ಭೂಮಿಕಾ ಮನೆ ಬಿಟ್ಟು ಹೊರಗೆ ಹೋಗಿದ್ದಾಯ್ತು ಇನ್ನೇನು ಆ ಗೌತಮ್ ದಿವಾನ್ ನಾನು ಹಾಕೋ ತಾಳಕ್ಕೆ ಕುಣಿಯಬೇಕು ಎಂದು ಹೇಳುತ್ತಿರುತ್ತಾಳೆ. ಇದೇ ಸಮಯದಲ್ಲಿ ಅಲ್ಲಿ ಬಂದ ಗೌತಮ್ ತನ್ನ ಸಾಕುತಾಯಿಯ ಮಾತುಗಳನ್ನು ಕೇಳಿಸಿಕೊಂಡು ಆಘಾತಕ್ಕೊಳಗಾಗುತ್ತಾನೆ.

ಭಾರವಾದ ಹೃದಯದಿಂದಲೇ ನಿಮ್ಮನ್ನು ನಾನು ಹೆತ್ತ ತಾಯಿಯಂತೆ ಅಂದುಕೊಂಡೆ ಅಲ್ಲಮ್ಮ, ಆದರೆ ನೀವು ವಿಷವನ್ನೇ ಕೊಟ್ಟುಬಿಟ್ಟಿರಿ ಎಂದು ಹೇಳುವ ಗೌತಮ್, ಇಷ್ಟೆಲ್ಲಾ ನೀವು ಮಾಡಿರೋದು ಈ ಆಸ್ತಿಗೋಸ್ಕರ ಅಲ್ವಾ ಎನ್ನುತ್ತಾ, ಆಸ್ತಿ ಪತ್ರಗಳನ್ನೆಲ್ಲಾ ಶಕುಂತಲಾ ಮುಖಕ್ಕೆ ಬೀಸಾಕುತ್ತಾನೆ. ನನಗೆ ಬೇಕಾಗಿರೋದು ಭೂಮಿಕಾ ಪ್ರೀತಿ ಮಾತ್ರ, ಆಕೆಯನ್ನು ನಾನು ಹುಡುಕಿಯೇ ತೀರುತ್ತೇನೆ ಎಂದು ತನ್ನ ತಾಯಿಯನ್ನು ಕರೆದುಕೊಂಡು ಹೊರಡುತ್ತಾನೆ.
ಆ ನಂತರ ಕಥೆ ಐದು ವರ್ಷಗಳ ನಂತರ ತೆರೆದುಕೊಂಡಿದ್ದು, ಕೋಟ್ಯಾಧಿಪತಿಯಾಗಿದ್ದ ಗೌತಮ್‌ನ ಕ್ಯಾಬ್ ಡ್ರೈವರ್‌ನಂತೆ ಬಿಡುಗಡೆಯಾದ ಪ್ರೋಮೊದಲ್ಲಿ ತೋರಿಸಲಾಗಿದೆ. ಇನ್ನೂ ಕೊನೆಯಲ್ಲಿ ಪತ್ನಿಯ ಹುಡುಕಾಟದಲ್ಲಿರುವ ಗೌತಮ್‌ಗೆ ಭೂಮಿಕಾ ಸಿಕ್ಕಿದ್ದು ಗೌತಮ್ ತನಗೆ ಪರಿಚಯವೇ ಇಲ್ಲವೆನ್ನುವಂತೆ ಯಾವ ಭಾವನೆಯನ್ನು ವ್ಯಕ್ತಪಡಿಸದೇ ಭೂಮಿಕಾ ತನ್ನ ಮಗ ಆಕಾಶನ ಕರೆದುಕೊಂಡು ಹೋಗಿದ್ದಾಳೆ. ಈ ಹಿನ್ನೆಲೆ ಕುತೂಹಲ ಈಗ ಗರಿಗೆದರಿದ್ದು ಮುಂದೇನಾಗುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











