ಮಾವನ ವಿರುದ್ಧ ತೊಡೆ ತಟ್ಟಿದ ಕಾವ್ಯಾ ಗೌಡ ; ವಿಡಿಯೋ ವೈರಲ್ - ಇದಕ್ಕೇನಂತಾರೆ ಕಿರುತೆರೆಯ 'ಗಾಂಧಾರಿ' ?
ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ರಕ್ತ ಸಂಬಂಧಕ್ಕಿಂತ ಬ್ಯಾಂಕ್ ಬ್ಯಾಲೆನ್ಸ್ ಮುಖ್ಯ.ಪ್ರೀತಿ ವಿಶ್ವಾಸಕ್ಕಿಂತ ಆಸ್ತಿ ಪಾಸ್ತಿ ಮುಖ್ಯ. ಕೋಟಿ ಕೋಟಿ ಹಣ ಕಣ್ಮುಂದೆ ಇದ್ದಾಗ ಹೆತ್ತವರು, ಒಡಹುಟ್ಟಿದವರು, ಸಂಬಂಧಿಕರು, ಯಾರು ಕಣ್ಣಿಗೆ ಕಾಣಿಸುವುದಿಲ್ಲ. ಕಾಸು, ಪಣಂ, ದುಡ್ಡು, ಮನಿ, ಮಾತ್ರ. ಇದಕ್ಕೆ ಹಲವಾರು ಉದಾಹರಣೆಗಳು ಕಣ್ಮುಂದೆ ಇವೆ. ಈ ಸಾಲಿಗೆ ಕಾವ್ಯಾ ಗೌಡ ಸೇರಿಕೊಂಡಿದ್ದಾರಾ..? ಇಂತಹದ್ದೊಂದು ಅನುಮಾನ ಸದ್ಯ ಹಲವರನ್ನು ಕಾಡುತ್ತಿದೆ. ವೈರಲ್ ಆದ ವಿಡಿಯೋ ಹಲವರಿಗೆ ಆಘಾತವನ್ನುಂಟು ಮಾಡಿದೆ.
ಹೌದು, ಕಾವ್ಯ ಗೌಡ.. ಕನ್ನಡ ಕಿರುತೆರೆಯ ಚೆಲುವೆ. ''ಮೀರಾ ಮಾಧವ''.. ''ಗಾಂಧಾರಿ''.. ''ರಾಧಾ ರಮಣ''.. ಇವರ ಪ್ರಖ್ಯಾತ ಧಾರಾವಾಹಿಗಳು. 2021ರಲ್ಲಿ ಸೋಮಶೇಖರ್ ಅವರನ್ನು ಮದುವೆಯಾದ ಕಾವ್ಯ ಗೌಡ ಸದ್ಯ ಕಿರುತೆರೆಯಿಂದ ಅಂತರ ಕಾಪಾಡಿಕೊಂಡಿದ್ದಾರೆ. ಆದರೆ ಕಳೆದ ಮೂರು ತಿಂಗಳಿಂದ ಮಾತ್ರ ಸುದ್ದಿಯಲ್ಲಿದ್ದಾರೆ.

ಕಾವ್ಯಾ ಗೌಡ ಸುದ್ದಿಯ ಕೇಂದ್ರ ಬಿಂದುವಾಗಿದ್ದೇಕೆ..? ಎನ್ನುವುದು ಎಲ್ಲರಿಗೆ ಗೊತ್ತಿರುವ ವಿಚಾರ. ಯಾಕೆಂದರೆ ಕರುನಾಡಿನಲ್ಲಿ ಈ ವರ್ಷದ ಆರಂಭದಲ್ಲಿ ಸದ್ದು ಮಾಡಿದ ಪ್ರಕರಣ ಇದು. ಆದರೂ ಕೂಡ ಸಂಕ್ಷಿಪ್ತವಾಗಿ ಈ ಸ್ಟೋರಿಯನ್ನು ರಿಕಾಲ್ ಮಾಡಬೇಕೆಂದ್ರೆ ಈ ವರ್ಷದ ಜನವರಿಯಲ್ಲಿ ಕಾವ್ಯ ಗೌಡ ಅವರ 100 ಕೋಟಿ ಆಸ್ತಿ ಕಲಹ ಬೀದಿಗೆ ಬಂದಿತ್ತು.
ತಮ್ಮ ವೃತ್ತಿ ಬದುಕಿನಲ್ಲಿ ಯಾವತ್ತೂ ಪೊಲೀಸ್ ಠಾಣೆಯ ಮೆಟ್ಟಿಲು ಹತ್ತದ ಕಾವ್ಯಾ ಗೌಡ, 100 ಕೋಟಿ ಆಸ್ತಿಗಾಗಿ ಕೋರ್ಟ್ ಕಚೇರಿ ಅಲೆಯುವಂತಾಗಿತ್ತು. ತಮ್ಮ ಓರಗಿತ್ತಿ ಪ್ರೇಮಾ ಅವರ ಜೊತೆ ಕಿರಿಕ್ ಮಾಡಿಕೊಂಡಿದ್ದ ಕಾವ್ಯಾ ಗೌಡ ತಮ್ಮ ಗಂಡ ಸೋಮಶೇಖರ್ ಅವರ ಅಣ್ಣ ನಂದೀಶ್ ಮತ್ತು ಅವರ ಪತ್ನಿ ಪ್ರೇಮಾ ಹಾಗೂ ಅವರ ತಂದೆ ರವಿಕುಮಾರ್ ವಿರುದ್ಧ ಗುಡುಗಿದ್ದರು. ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ, ನನ್ನ ಗಂಡ ಸೋಮಶೇಖರ್ ಅವರ ಮೇಲೆ ಚಾಕುವಿನಿಂದ ಇರಿದು ಕೊಲೆ ಮಾಡುವ ಯತ್ನ ಮಾಡಿದ್ದಾರೆ, ನನ್ನ ಮೇಲೆ ಕೂಡ ಹಲ್ಲೆ ಮಾಡಿ ನನ್ನ ಖಾಸಗಿ ಭಾಗಕ್ಕೆ ಒದ್ದಿದ್ದಾರೆ, ಅ*ತ್ಯಾಚಾರ ಮಾಡುವ ಬೆದರಿಕೆಯನ್ನು ಕೂಡ ಹಾಕಿದ್ದಾರೆ, ಎಂದು ಗಳಗಳನೆ ಕಣ್ಣೀರು ಹಾಕಿದ್ದರು.
ಇಷ್ಟೇ ಅಲ್ಲ ಇಡೀ ಪ್ರಕರಣದಲ್ಲಿ ನನ್ನದೇನು ತಪ್ಪಿಲ್ಲ ಎನ್ನುವಂತೆ ವಾದ ಮಾಡಿದ್ದ ಕಾವ್ಯಾ ಗೌಡ, ವಿಡಿಯೋ ಸಾಕ್ಷಿ ಬಿಡುಗಡೆ ಮಾಡಿದ್ದರು.ಪ್ರೇಮಾನೇ ಹಲ್ಲೆ ಮಾಡಿದ್ದಾರೆ ಎಂಬುದಕ್ಕೆ ಸಾಕ್ಷ್ಯ ಒದಗಿಸಿದ್ದರು.ಪ್ರೇಮಾ ಅವರೇ ನಮ್ಮ ಮೇಲೆ ಚಪ್ಪಲಿ ಎಸೆದು, ಹಲ್ಲೆ ಮಾಡಿದ್ದಾರೆ ಎಂದು ಸಾಬೀತು ಮಾಡುವ ಪ್ರಯತ್ನ ಮಾಡಿದ್ದ ಕಾವ್ಯಾ ಗೌಡ, ಮನಸ್ಸು ಮಾಡಿದ್ದರೆ ಜನವರಿ 26ರಂದೇ ವಿಡಿಯೋ ಬಿಡುಗಡೆ ಮಾಡಬಹುದಿತ್ತು, ಆದರೆ ನಮ್ಮ ವಕೀಲರು ನೀಡಿದ ಸಲಹೆಯಿಂದಾಗಿ ಸುಮ್ಮನಾದೆ ಎಂದು ಹೇಳಿದ್ದರು. ಸಾಕಷ್ಟು ವಿಡಿಯೋ ಸಾಕ್ಷಿ ನನ್ನ ಬಳಿ ಇದ್ದು, ಅದರಲ್ಲಿ ಕೆಲವಷ್ಟನ್ನೇ ಬಿಡುಗಡೆ ಮಾಡಿದ್ದೀನಿ. ಇನ್ನುಳಿದ ವಿಡಿಯೋಗಳನ್ನು ನ್ಯಾಯಾಲಯಕ್ಕೆ ನೀಡಲಿದ್ದೇನೆ ಎಂದಿದ್ದರು.
ಇಷ್ಟೇ ಆಗಿದ್ದರೆ ಸದ್ಯ ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡುವ ಪ್ರಮೇಯ ಈಗ ಬರುತ್ತಿರಲಿಲ್ಲ. ಆದರೆ, ಇದೇ ಸಮಯದಲ್ಲಿ ಮಾತನಾಡಿದ್ದ ಕಾವ್ಯಾ ಗೌಡ ನಮ್ಮ ಮಾವ ತುಂಬಾ ಒಳ್ಳೆಯವರು, ಅವರ ಮೇಲೆ ನಾನು ಯಾವುದೇ ಆರೋಪಗಳು ಮಾಡಲ್ಲ ಎಂದು ಹೇಳಿದ್ದರು. ಈ ಹಿಂದೆ ರಾಮಮೂರ್ತಿ ನಗರದ ಕಾರ್ಪೊರೇಟರ್ ಆಗಿದ್ದ, ದಿನಾಲ್ಕು ವರ್ಷಗಳ ಕಾಲ ಗ್ರಾಮ ಪಂಚಾಯತಿ ಚೇರ್‌ಮ್ಯಾನ್ ಆಗಿದ್ದ, ಬೆಂಗಳೂರಿನ ಅತೀ ಶ್ರೀಮಂತ ಕಾರ್ಪೊರೇಟರ್ ಗಳಲ್ಲಿ ಒಬ್ಬರಾದ ತಮ್ಮ ಮಾವ ರೇವಣ್ಣ ಅವರ ಗುಣಗಾನ ಮಾಡಿದ್ದರು. ನನ್ನ ಮಾವ ರೇವಣ್ಣ ಮತ್ತು ನನ್ನ ಅತ್ತೆ ದೇವರಂಥವರು. ಅವರೊಂದಿಗೆ ನನಗೆ ಯಾವುದೇ ಮನಸ್ತಾಪವಿಲ್ಲ. ಅವರೂ ಕೂಡ ಮಗಳಂತೆ ನನ್ನನ್ನು ನೋಡಿದ್ದಾರೆ ಎಂದೆಲ್ಲಾ ಹೇಳಿದ್ದರು.
ಆದರೆ, ಈಗ ನೋಡಿದರೆ ಸಾಕ್ಷಾತ್ ಕಾವ್ಯಾ ಗೌಡ ಅವರೇ ತಮ್ಮ ಮಾವ ರೇವಣ್ಣ ವಿರುದ್ದ ತೊಡೆ ತಟ್ಟಿದ್ದಾರೆ. ದೊಣ್ಣೆಯನ್ನು ಕೈಯಲ್ಲಿ ಹಿಡಿದುಕೊಂಡು ಪುಡಿ ರೌಡಿಯಂತೆ ಮನೆಯ ಅಂಗಳದಲ್ಲಿ ಓಡಾಡಿದ್ದಾರೆ.
ಸದ್ಯ ಕಾವ್ಯಾ ಗೌಡ ಅವರ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ವೈರಲ್ ಆದ ವಿಡಿಯೋದಲ್ಲಿ ಕಾವ್ಯಾ ಗೌಡ ತಮ್ಮ ಮಾವನಿಗೆ ತೊಡೆ ತಟ್ಟಿ ಅವಾಜ್ ಹಾಕಿದ್ದು ಸ್ಪಷ್ಟವಾಗಿ ಸೆರೆಯಾಗಿದೆ. ಪೊಲೀಸರ ಸಮ್ಮುಖದಲ್ಲೇ ಮಾವನ ವಿರುದ್ಧ ದರ್ಪ ತೋರುತ್ತಿರುವುದು ಕೂಡ ಕಂಡು ಬಂದಿದೆ.
ವೈರಲ್ ಆದ ಈ ವಿಡಿಯೋ ಈಗ ಹಲವರ ಮನದಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ದೇವರಂತಹ ಮಾವನ ಎದುರು ಈ ತರ ರೌಡಿಯಂತೆ ವರ್ತನೆ ಮಾಡುವುದು ಸರೀನಾ ಎನ್ನುವ ಚರ್ಚೆ ಸದ್ಯ ನಡೆಯುತ್ತಿದೆ. ಹಣದ ಬಲವೋ ಅಥವಾ ಹತಾಶೆಯೋ..? ವಿಡಿಯೋ ವೈರಲ್ ಆದ ನಂತರ ಮೊನ್ನೆ ಮೊನ್ನೆವರೆಗೆ ಕಾವ್ಯಾ ಗೌಡ ಪರವಾಗಿದ್ದ ಹಲವರು ಈಗ ತಮ್ಮ ಪಕ್ಷವನ್ನು ಬದಲಿಸಿದ್ದಾರೆ. ಕನ್ನಡ ಕಿರುತೆರೆಯ 'ಗಾಂಧಾರಿ' ಇದಕ್ಕೆ ಹೇಗೆ ಪ್ರತಿಕ್ರಿಯೆ ನೀಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











