ಗಗನ್ ಚಿನ್ನಪ್ಪಗೆ ಬಾಲ್ಯದಿಂದಲೂ ನಟಿಸೋ ಆಸೆ: ಕೊನೆಗೂ ಆ ಆಸೆ ಈಡೇರಿಸಿಕೊಂಡಿದ್ದೇಗೆ 'ಸೀತಾರಾಮ'ದ ರಾಮ
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳ ಪೈಕಿ 'ಸೀತಾರಾಮ' ಧಾರಾವಾಹಿಯೂ ಕೂಡಾ ಒಂದು. 'ಸೀತಾರಾಮ' ಧಾರಾವಾಹಿಯಲ್ಲಿ ನಾಯಕ ರಾಮ್ ಆಗಿ ನಟಿಸುತ್ತಿರುವ ಈತನ ಹೆಸರು ಗಗನ್ ಚಿನ್ನಪ್ಪ. ತಮ್ಮ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಅದರಲ್ಲೂ ಹೆಣ್ ಮಕ್ಕಳ ಮನ ಗೆದ್ದ ಗಗನ್ ಚಿನ್ನಪ್ಪ ಅವರಿಗೆ ಇದು ಎರಡನೇ ಧಾರಾವಾಹಿ ಹೌದು.
ಈ ಮೊದಲು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮಂಗಳ ಗೌರಿ ಮದುವೆ' ಧಾರಾವಾಹಿಯಲ್ಲಿ ನಾಯಕನಾಗಿ ಕಮಾಲ್ ಮಾಡಿದ್ದರು ಗಗನ್ ಚಿನ್ನಪ್ಪ. ಇದೀಗ ರಾಮ್ ಆಗಿ ನಟಿಸುತ್ತಿರುವ ಗಗನ್ ಅವರು ತಮ್ಮದೇ ಆದ ಅಭಿಮಾನಿಗಳನ್ನು ಹೊಂದಿರುವುದು ಅವರ ಅದ್ಭುತ ನಟನೆಗೆ ಸಾಕ್ಷಿ.

ನಟಿಸಿದ್ದು ಬರೀ ಎರಡು ಧಾರಾವಾಹಿಗಳಲ್ಲಷ್ಟೇ ಆದರೂ ನಟನೆಯ ಮೂಲಕ ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ಗಗನ್ ಅವರಿಗೆ ಸಣ್ಣ ವಯಸ್ಸಿನಿಂದಲೂ ನಟನೆಯ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವ ಬಯಕೆಯಿತ್ತು. ಹಾಗಾಗಿ ಐಟಿ ಉದ್ಯೋಗಕ್ಕೆ ವಿದಾಯ ಹೇಳಿದ ಗಗನ್ ಇದೀಗ ನಟನೆಯಲ್ಲಿ ಬದುಕು ರೂಪಿಸಿಕೊಂಡಿದ್ದಾರೆ.
ಹೌದು, ಬರೋಬ್ಬರಿ ಮೂರು ವರ್ಷಗಳ ಕಾಲ ಜರ್ಮನಿ, ಓಮನ್‌ನಲ್ಲಿ ಆಟೋಮೊಬೈಲ್ ಇಂಡಸ್ಟ್ರಿಯಲ್ಲಿ ಮಾರ್ಕೆಟಿಂಗ್ ಹೆಡ್ ಆಗಿ ಕೆಲಸ ಮಾಡಿದ ಗಗನ್ ಅವರು ತದ ನಂತರ ಭಾರತಕ್ಕೆ ಮರಳಿದ್ದು ಮಾತ್ರವಲ್ಲದೆ ಇಲ್ಲಿಯೂ ಅದೇ ಕೆಲಸವನ್ನು ಮುಂದುವರಿಸಿಕೊಂಡು ಹೋಗಿದ್ದರು. ಇನ್ನು ನಟನಾಗಬೇಕು ಎಂಬ ಬಯಕೆ ಮೊದಲಿನಿಂದಲೂ ಇದ್ದ ಕಾರಣದಿಂದ ಕೆಲಸದಿಂದ ಬಿಡುವು ಸಿಕ್ಕಾಗಲೆಲ್ಲಾ ಆಡಿಶನ್‌ಗಳನ್ನು ಅಟೆಂಡ್ ಮಾಡುತ್ತಿದ್ದರು.
'ಮಂಗಳ ಗೌರಿ ಮದುವೆ' ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟು, ಇನ್ಸ್‌ಪೆಕ್ಟರ್ ರಾಜೀವನಾಗಿ ನಟಿಸಿ ಕಿರುತೆರೆ ವೀಕ್ಷಕರ ಮನ ಸೆಳೆದಿರುವ ಗಗನ್ ಚಿನ್ನಪ್ಪ ಮೊದಲ ಧಾರಾವಾಹಿಯಲ್ಲಿ ನಾಯಕನಾಗಿ ಮಿಂಚಿದರು. 'ಮಂಗಳ ಗೌರಿ ಮದುವೆ' ಧಾರಾವಾಹಿ ಮುಗಿದದ್ದೇ ತಡ, ತೆಲುಗು ಧಾರಾವಾಹಿಯಲ್ಲಿ ಅಭಿನಯಿಸುವ ಸುವರ್ಣ ಅವಕಾಶವನ್ನು ಇವರು ಪಡೆದುಕೊಂಡರು. ಸ್ಡಾರ್ ಮಾ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕೃಷ್ಣ ಮುಕುಂದ ಮುರಾರಿ' ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸಿರುವ ಗಗನ್ ಚಿನ್ನಪ್ಪ ಅಲ್ಲೂ ಕೂಡಾ ಮಿಂಚಿದ್ದು ಪೋಲಿಸ್ ಇನ್ಸ್‌ಪೆಕ್ಟರ್ ಆಗಿಯೇ ಎನ್ನುವುದು ಆಶ್ಚರ್ಯದ ಸಂಗತಿ.
ಅಂದ ಹಾಗೇ ಗಗನ್ ಚಿನ್ನಪ್ಪ ಅವರ ತಂದೆ ವೃತ್ತಿಯಲ್ಲಿ ಡಿಟೆಕ್ಟಿವ್ ಆಗಿದ್ದರು. ಮಗನನ್ನು ಪೊಲೀಸ್ ಅಧಿಕಾರಿಯನ್ನಾಗಿ ಮಾಡಬೇಕು ಎಂಬುದು ಅವರ ಕನಸಾಗಿತ್ತು. ಆದರೆ ರಿಯಲ್ ಲೈಫ್‌ನಲ್ಲಿ ಅದು ಸಾಧ್ಯವಾಗಲಿಲ್ಲ. ಆದರೆ, ಕಾಕತಾಳೀಯವೆಂದರೆ ರೀಲ್ ಲೈಫ್‌ನಲ್ಲಿ ತಮ್ಮ ಮಗನನ್ನು ಪೋಲಿಸ್ ಅಧಿಕಾರಿಯಾಗಿ ನೋಡಿ ಕಣ್ತುಂಬಿಸಿಕೊಳ್ಳುವ ಭಾಗ್ಯ ಗಗನ್ ಚಿನ್ನಪ್ಪ ಅವರ ತಂದೆಗೆ ದೊರಕಿದೆ.


Click it and Unblock the Notifications











