'ಗಟ್ಟಿಮೇಳ'ದ ಈ ರೌಡಿಬೇಬಿ ಕಿರುತೆರೆ ಜೊತೆಗೆ ಹಿರಿತೆರೆಯಲ್ಲಿಯೂ ಬ್ಯುಸಿ
ವಿಭಿನ್ನ ಕಥಾಹಂದರವನ್ನು ಹೊಂದಿದ್ದ 'ಗಟ್ಟಿಮೇಳ' ಧಾರಾವಾಹಿಯು ಕಿರುತೆರೆ ವೀಕ್ಷಕರ ಮನ ಸೆಳೆದದ್ದು ಗೊತ್ತಿರುವ ವಿಚಾರ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿದ್ದ ಈ ಧಾರಾವಾಹಿಯಲ್ಲಿ ಅಮೂಲ್ಯ ಎಂಬ ಪಾತ್ರದಲ್ಲಿ ಕಾಣಿಸಿಕೊಂಡ ನಿಶಾ ರವಿಕೃಷ್ಣನ್ ತಮ್ಮ ಅದ್ಭುತ ಅಭಿನಯಕ್ಕೆ ಹೆಸರುವಾಸಿಯಾಗಿದ್ದರು.
'ಗಟ್ಟಿಮೇಳ' ಧಾರಾವಾಹಿಯ ನಂತರ ಕಿರುತೆರೆಯಿಂದ ದೂರವಿದ್ದ ನಿಶಾ ರವಿಕೃಷ್ಣನ್ ಇದೀಗ ಹೊಸ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುವ ಸುವರ್ಣಾವಕಾಶ ಪಡೆದುಕೊಂಡಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಧಾರಾವಾಹಿ 'ಅಣ್ಣಯ್ಯ' ಧಾರಾವಾಹಿಯಲ್ಲಿ ನಾಯಕಿ ಪಾರ್ವತಿ ಪಾತ್ರದಲ್ಲಿ ನಿಶಾ ನಟಿಸುತ್ತಿದ್ದಾರೆ.

ವರ್ಷಗಳ ನಂತರ ಕಿರುತೆರೆಗೆ ಕಂ ಬ್ಯಾಕ್ ಆಗಿರುವ ನಟಿ ನಿಶಾ ರವಿಕೃಷ್ಣನ್ ಹೊಸ ಸಿನಿಮಾದೊಂದಿಗೆ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ನಿರ್ದೇಶಕ ಚೆನ್ನಕೇಶವ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ 'ಅಂಶು' ಎಂಬ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.
'ಅಂಶು' ಈಗಾಗಲೇ ಚಿತ್ರೀಕರಣ ಪೂರ್ಣಗೊಂಡಿದ್ದು, ತಮ್ಮ ಪಾತ್ರ ಹಾಗೂ ಚಿತ್ರೀಕರಣದ ಬಗ್ಗೆ ನಿಶಾ ರವಿಕೃಷ್ಣನ್ ಮಾಹಿತಿ ಹಂಚಿಕೊಂಡಿದ್ದಾರೆ. 'ಅಂಶು' ಚಿತ್ರವು ಒಂದು ವಿಶೇಷ ಕಥಾ ಲೋಕ ಮತ್ತು ಇದು ನಮ್ಮ ಚಿತ್ರತಂಡದ ಒಂದು ಹೊಸ ಪ್ರಯತ್ನ. ಸಿನಿಮಾದ ಚಿತ್ರೀಕರಣ ಪ್ರಕ್ರಿಯೆ ಎಲ್ಲವೂ ಮುಗಿದಿದೆ. ಇದೊಂದು ಮಹಿಳಾ ಪ್ರಧಾನ ಚಿತ್ರವಾಗಿದ್ದು, ಮುಖ್ಯವಾಗಿ ಭ್ರೂಣ ಹತ್ಯೆ ಸುತ್ತ ಕಥೆ ಸಾಗುತ್ತದೆ. ಇದರಲ್ಲಿ ನನ್ನದು ಒಂದು ಪ್ರಮುಖ ಪಾತ್ರ ಎಂದು ಈ ಹಿಂದೆ ಚಿತ್ರದ ಬಗ್ಗೆ ಮಾಹಿತಿ ನಟಿ ನಿಶಾ ರವಿಕೃಷ್ಣನ್ ಹಂಚಿಕೊಂಡಿದ್ದರು.
ಇಡೀ ಕಥೆ ಸಾಗುವುದೇ ನಿಶಾ ಅವರ ಪಾತ್ರದ ಮೇಲೆ. ಎಲ್ಲಾ ಹೆಣ್ಣು ಮಕ್ಕಳಿಗೆ ಸ್ಫೂರ್ತಿ ತುಂಬುವಂತಹ ಪಾತ್ರದಲ್ಲಿ ನಿಶಾ ರವಿಕೃಷ್ಣನ್ ಕಾಣಿಸಿಕೊಳ್ಳಲಿದ್ದಾರೆ. ಮಾನಸಿಕವಾಗಿ ಕುಗ್ಗಿದ ಮಹಿಳೆ ಹೇಗೆ ಎಲ್ಲಾ ಸಮಸ್ಯೆಗಳನ್ನು ಗೆದ್ದು ಅದರಿಂದ ಹೊರ ಬರುತ್ತಾಳೆ ಎನ್ನುವುದೇ ಪಾತ್ರದ ಸಾರಾಂಶ. ಅಂದ ಹಾಗೇ 'ಅಂಶು' ಚಿತ್ರದ ರಿಲೀಸ್ ಬಗ್ಗೆ ಇನ್ನೂ ಯಾವುದೇ ರೀತಿಯ ಮಾಹಿತಿ ಹೊರ ಬಂದಿಲ್ಲ.

ನನಗೆ ಧಾರಾವಾಹಿ ಅಥವಾ ಸಿನಿಮಾ ಎಂಬ ಭೇದ ಭಾವವಿಲ್ಲ. ಯಾವುದರಲ್ಲೂ ಒಳ್ಳೆಯ ಅವಕಾಶ ಸಿಕ್ಕರೆ ಖಂಡಿತ ಅಭಿನಯಿಸಲು ಇಷ್ಟಪಡುತ್ತೇನೆ. ಸದ್ಯಕ್ಕೆ ಸಿನಿಮಾ ಸಿಕ್ಕಿರುವುದು ಬಹಳ ಸಂತೋಷ. ಸಿನಿಮಾದ ಹೆಚ್ಚಿನ ಸೀನ್‌ಗಳೆಲ್ಲ ಬೆಂಗಳೂರಿನಲ್ಲಿ ಚಿತ್ರಿಕರಣಗೊಂಡಿದೆ. ಸೀರಿಯಲ್‌ನಲ್ಲಿ ನಾನು ಪ್ರತಿ ದಿನ ಅಭಿನಯಿಸಿರುವುದರಿಂದ ನನಗೆ ಸಿನಿಮಾದಲ್ಲಿ ಅಭಿನಯಿಸಲು ಬಹಳಷ್ಟು ಕಷ್ಟವೇನು ಆಗಲಿಲ್ಲ. ಪ್ರತಿ ದಿನ ಒಂದು ಪಾತ್ರದ ಮೂಲಕ ವಿಭಿನ್ನ ಭಾವನೆಗಳನ್ನು ಅಭಿನಯಿಸಿರುವದರಿಂದ ಈ ಹೊಸ ಪಾತ್ರ ನನಗೆ ಬಹಳ ಸುಲಭವಾಗಿ ಅಭಿನಯಿಸಲು ಸಾಧ್ಯವಾಯಿತು ಎಂದು ನಟಿ ನಿಶಾ ರವಿಕೃಷ್ಣನ್ ಹೇಳಿಕೊಂಡಿದ್ದಾರೆ.
ಇನ್ನು 'ಅಂಶು' ಸಿನಿಮಾ ಬಿಡುಗಡೆ ಯಾವಾಗ ಎಂದು ಪ್ರೇಕ್ಷಕರು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ಸಿನಿಮಾ ಯಾವ ರೀತಿ ಮೂಡಿ ಬರಲಿದೆ ಎಂಬುದನ್ನು ಕಾದು ನೋಡಬೇಕಿದೆ. ಇದರ ಜೊತೆಗೆ ಆಕೆ ಮತ್ತೊಮ್ಮೆ ಕಿರುತೆರೆಗೆ ಮರಳಿ ಬಂದಿರುವುದು ಕೂಡಾ ಕಿರುತೆರೆ ವೀಕ್ಷಕರಿಗೆ ಖುಷಿ ನೀಡಿದೆ.


Click it and Unblock the Notifications











