Rashmitha Changappa: ಸ್ಕೂಲ್ ಟೀಚರ್ ಆಗಿ ಕಿರುತೆರೆಗೆ ಮರಳಿದ 'ಗಟ್ಟಿಮೇಳ' ನಟಿ ರಶ್ಮಿತಾ ಚೆಂಗಪ್ಪ
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ 'ಗಟ್ಟಿಮೇಳ'. ಈ ಧಾರಾವಾಹಿಯಲ್ಲಿ ಖಳನಾಯಕಿ ಸಾರಿಕಾ ಆಗಿ ನಟಿಸಿ ಕರ್ನಾಟಕದಾದ್ಯಂತ ಮನೆ ಮಾತಾಗಿದ್ದ ರಶ್ಮಿತಾ ಚೆಂಗಪ್ಪ ಇದೀಗ ಊರ್ಮಿಳ ಆಗಿ ಬದಲಾಗಿದ್ದಾರೆ. ಅಂದ ಮಾತ್ರಕ್ಕೆ ಆಕೆ ತಮ್ಮ ಹೆಸರನ್ನು ಬದಲಾಯಿಸುತ್ತಿಲ್ಲ. ಬದಲಿಗೆ ಊರ್ಮಿಳಾ ಧಾರಾವಾಹಿಯ ಮೂಲಕ ನಿಮ್ಮನ್ನು ರಂಜಿಸಲು ಬರುತ್ತಿದ್ದಾರೆ.
ಹೌದು, ಸಿರಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ಹೊಚ್ಚ ಹೊಸ ಧಾರಾವಾಹಿ 'ಊರ್ಮಿಳಾ'. ಈ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಲಿದ್ದಾರೆ ರಶ್ಮಿತಾ ಚೆಂಗಪ್ಪ. ಅಂದ್ಹಾಗೆ, 'ಊರ್ಮಿಳಾ' ಧಾರಾವಾಹಿಯಲ್ಲಿ ಶಿಕ್ಷಕಿಯಾಗಿ ಅಭಿನಯಿಸಲಿರುವ ರಶ್ಮಿತಾ ಚೆಂಗಪ್ಪ ಪಾಸಿಟಿವ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ.

'ಮಹಾರಾಣಿ'ಯ ಮೂಲಕ ನಟನೆಗೆ ಪ್ರವೇಶ
ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿದ್ದ 'ಮಹಾರಾಣಿ' ಧಾರಾವಾಹಿಯಲ್ಲಿ ಇಶಾ ಆಗಿ ನಟಿಸುವ ಮೂಲಕ ಕಿರುತೆರೆಗೆ ಕಾಲಿಟ್ಟ ರಶ್ಮಿತಾ ಚೆಂಗಪ್ಪ ಮನೋಜ್ಞ ನಟನೆಯ ಮೂಲಕ ವೀಕ್ಷಕರ ಮನ ಸೆಳೆದ ಚೆಲುವೆ. ಮುಂದೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಗಟ್ಟಿಮೇಳ' ಧಾರಾವಾಹಿ ಸೇರಿದ ರಶ್ಮಿತಾ, ಖಳನಾಯಕಿಯಾಗಿ ನಟಿಸಿದ್ದರು.
ಹೆಸರು ತಂದುಕೊಟ್ಟಿತು 'ಸಾರಿಕಾ' ಪಾತ್ರ
'ಸಾರಿಕಾ' ಎನ್ನುವ ಖಳನಾಯಕಿ ಪಾತ್ರಕ್ಕೆ ರಶ್ಮಿತಾ ಚೆಂಗಪ್ಪ ಜೀವ ತುಂಬಿದ್ದರು. ಆ ಪಾತ್ರದ ಮೂಲಕ ಕಿರುತೆರೆ ಜಗತ್ತಿನಲ್ಲಿ ಮನೆ ಮಾತಾದರು. ಮುಂದೆ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿರುವ 'ಮತ್ತೆ ವಸಂತ' ಧಾರಾವಾಹಿಯಲ್ಲಿಯೂ ಖಳನಾಯಕಿಯಾಗಿ ಮೋಡಿ ಮಾಡಿದ್ದರು.

ಖಳನಾಯಕಿಯಾಗಿ ಸೈ ಎನಿಸಿಕೊಂಡ ರಶ್ಮಿತಾ
ಮುಂದೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ 'ಯಾರಿವಳು' ಧಾರಾವಾಹಿಯಲ್ಲಿ ಖಳನಾಯಕಿ ಗೌತಮಿ ಪಾತ್ರಕ್ಕೆ ಜೀವ ತುಂಬಿ ವೀಕ್ಷಕರ ಮನ ಸೆಳೆದಿದ್ದರು. ಹಾಗೇ ರಶ್ಮಿತಾ ಚೆಂಗಪ್ಪ ಕಲರ್ಸ್ ಕನ್ನಡದಲ್ಲಿ 'ಮೂರುಗಂಟು' ಧಾರಾವಾಹಿಯಲ್ಲಿ ನಾಯಕನ ಪ್ರೇಯಸಿಯಾಗಿ ಕಾಣಿಸಿಕೊಂಡಿದ್ದರು. ರಶ್ಮಿತಾ ಚೆಂಗಪ್ಪ ಅಲ್ಲೂ ಜೀವ ತುಂಬಿದ್ದು ನೆಗೆಟಿವ್ ಪಾತ್ರಕ್ಕೆ.
ಚರಿತಾ ಆಗಿ ಮೋಡಿ
ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿರುವ 'ಕಥೆಯೊಂದು ಶುರುವಾಗಿದೆ'ಯಲ್ಲಿ ನಾಯಕ ಯುವರಾಜ್ ಬಹಾದ್ಧೂರ್ ಅಮ್ಮ, ಶಾಂತಲಾದೇವಿ ಗೆಳತಿ ಕನ್ನಿಕಾಳ ಮಗಳು ಚರಿತಾ ಆಗಿ ಅಭಿನಯಿಸಿದ್ದರು. ಇದೀಗ ಪೂರ್ಣ ಪ್ರಮಾಣದ ನಾಯಕಿಯಾಗಿ ಕಿರುತೆರೆಗೆ ಕಾಲಿಡಲಿರುವ ರಶ್ಮಿತಾ ಚೆಂಗಪ್ಪ ಸಕತ್ ಖುಷಿಯಲ್ಲಿದ್ದಾರೆ.
ಬದಲಾವಣೆ ಬಯಸಿದ್ದೆ
"ಯುವರಾಣಿ ಧಾರಾವಾಹಿಯಲ್ಲಿ ಇಶಾ ಆಗಿ ನಟಿಸಿದ್ದ ನಾನು ನಂತರದ ಧಾರಾವಾಹಿಗಳಲ್ಲಿ ಖಳನಾಯಕಿಯಾಗಿ ನಟಿಸಿದ್ದೇ ಹೆಚ್ಚು. ಇದೀಗ ದೊಡ್ಡ ಗ್ಯಾಪ್‌ನ ನಂತರ ಮತ್ತೆ ಪಾಸಿಟಿವ್ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮಹಾದಾಸೆಯಾಗಿದೆ. ಮೊದಲ ಧಾರಾವಾಹಿಯ ನಂತರ ಇದೀಗ ಮತ್ತೆ ನಾಯಕಿಯಾಗಿ ನಟಿಸುತ್ತಿರುವುದಕ್ಕೆ ಖುಷಿಯಿದೆ. ನಾನು ಕೂಡಾ ಬದಲಾವಣೆ ಬೇಕು ಎಂದು ಬಯಸಿದ್ದೆ. ಅಂತಹ ಪಾತ್ರವೂ ದೊರಕಿತು" ಎಂದು ಫಿಲ್ಮಿಬೀಟ್ ಜೊತೆಗೆ ಸಂತಸ ವ್ಯಕ್ತಪಡಿಸಿದರು ರಶ್ಮಿತಾ ಚೆಂಗಪ್ಪ.


Click it and Unblock the Notifications











