ನಿರೂಪಣೆಯಿಂದ ನಟನೆಯವರೆಗೆ; ಹೀಗಿದೆ ನೋಡಿ 'ಗಟ್ಟಿಮೇಳ'ದ ಅನ್ವಿತಾ ಸಾಗರ್ ಜರ್ನಿ?
ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳ ಪೈಕಿ 'ಅಣ್ಣ ತಂಗಿ'ಯೂ ಒಂದು. 'ಅಣ್ಣ ತಂಗಿ' ಧಾರಾವಾಹಿಯಲ್ಲಿ ನಾಯಕ ಶಿವಣ್ಣನ ಹೆಂಡತಿ ಜ್ಯೋತಿಯಾಗಿ ನಟಿಸುತ್ತಿರುವ ಚೆಂದುಳ್ಳಿ ಚೆಲುವೆಯ ಹೆಸರು ಅನ್ವಿತಾ ಸಾಗರ್. ತಮ್ಮ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದಿರುವ ಅನ್ವಿತಾ ಸಾಗರ್ ಅವರು ಆದ್ಯಾ ಪಾತ್ರದ ಮೂಲಕ ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ಬೆಡಗಿ.
ಹೌದು, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಗಟ್ಟಿಮೇಳ' ಧಾರಾವಾಹಿಯಲ್ಲಿ ನಾಯಕ ವೇದಾಂತ್ ವಸಿಷ್ಠ ತಂಗಿ ಆದ್ಯಾಳಾಗಿ ಅನ್ವಿತಾ ಸಾಗರ್ ನಟಿಸಿದ್ದರು. ಆದ್ಯಾಳಾಗಿ ತುಂಬಾ ಅದ್ಭುತವಾಗಿ ಅಭಿನಯಿಸಿದ ಅನ್ವಿತಾ ಸಾಗರ್ ಆ ಪಾತ್ರದ ಮೂಲಕ ಕರ್ನಾಟಕದಾದ್ಯಂತ ಜನಪ್ರಿಯತೆಯನ್ನು ಕೂಡಾ ಪಡೆದುಕೊಂಡರು. ಅಣ್ಣನ ಮುದ್ದಿನ ತಂಗಿ ಆದ್ಯಾಳಾಗಿ ನಟಿಸಿದ ಅನ್ವಿತಾ ಸಾಗರ್ ಪಕ್ಕ ಹೋಮ್ಲಿ ಹುಡುಗಿಯಾಗಿ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾದರು.

ಮುಂದೆ ಸ್ಡಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮನಸ್ಸೆಲ್ಲಾ ನೀನೆ' ಧಾರಾವಾಹಿಯಲ್ಲಿ ಅಶ್ವಿನಿಯ ಪಾತ್ರದಲ್ಲಿ ನಟಿಸಿದ ಈಕೆ ಇಲ್ಲಿ ಕಾಣಿಸಿಕೊಂಡಿದ್ದು ಖಳನಾಯಕಿಯಾಗಿ. ಮೊದಲ ಬಾರಿಗೆ ಖಳನಾಯಕಿಯಾಗಿ ನಟಿಸಿದ ಅನ್ವಿತಾ ಸಾಗರ್ ತಮ್ಮ ಹೊಸ ಲುಕ್ ಮೂಲಕ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯೂ ಆದರು.
ಇದೀಗ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಅಣ್ಣ ತಂಗಿ' ಧಾರಾವಾಹಿಯಲ್ಲಿ ಜ್ಯೋತಿಯಾಗಿ ನಟಿಸುತ್ತಿರುವ ಈಕೆ ಅರ್ಧದಲ್ಲಿ ಧಾರಾವಾಹಿ ತಂಡ ಸೇರಿದವರು. ಹೌದು, ಜ್ಯೋತಿಯಾಗಿ ಅಭಿನಯಿಸುತ್ತಿದ್ದ ಛಾಯಾಶ್ರೀ ಪಾತ್ರದಿಂದ ಹೊರಬಂದಾಗ ಆ ಜಾಗಕ್ಕೆ ಅನ್ವಿತಾ ಸಾಗರ್ ಆಯ್ಕೆಯಾದರು. ಹಾಗಾಗಿ ಈಕೆ ಧಾರಾವಾಹಿಗೆ ಎಂಟ್ರಿ ಕೊಟ್ಟಾಗ ಜ್ಯೋತಿ ಪಾತ್ರ ಸಂಪೂರ್ಣ ನೆಗೆಟಿವ್ ಛಾಯೆ ಹೊಂದಿತ್ತು. ಆದರೆ, ಈಗ ಪಾಸಿಟಿವ್ ಆಗಿ ಬದಲಾಗಿದೆ.

ಇನ್ನು ಎಂಬಿಎ ಪದವೀಧರೆಯಾಗಿರುವ ಕುಡ್ಲದ ಕುವರಿ ಅನ್ವಿತಾ ಸಾಗರ್ ಮೊದಲಿನಿಂದಲೂ ಕಂಡಿದ್ದು ನಟಿಯಾಗುವ ಕನಸಲ್ಲ, ಬದಲಿಗೆ ನಿರೂಪಕಿಯಾಗುವ ಕನಸು. ಅದೇ ಕಾರಣದಿಂದ ಕಾಲೇಜು ವಿದ್ಯಾರ್ಥಿನಿಯಾಗಿದ್ದಾಗಲೇ ಮಂಗಳೂರಿನ ಖಾಸಗಿ ವಾಹಿನಿ ನಮ್ಮ ಟಿವಿಯಲ್ಲಿ ನಿರೂಪಕಿಯಾಗಿ ಈಕೆ ಕಾಣಿಸಿಕೊಂಡರು. ತಮ್ಮ ಮಾತಿನ ಮೂಲಕವೇ ಕೇಳುಗರ ಮನ ಸೆಳೆದ ಈಕೆಯ ನಟನಾ ಪಯಣಕ್ಕೆ ಮುನ್ನುಡಿಯಾಗಿದ್ದು ಕೋಸ್ಟಲ್‌ವುಡ್ ಎಂಬುದು ಹಲವರಿಗೆ ತಿಳಿದಿರಲಿಕ್ಕಿಲ್ಲ.
ತುಳು ಸಿನಿಮಾ 'ದಂಡ್' ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟ ಈಕೆ ನಂತರ 'ಬಲೆ ಪುದರ್ ದೀಕ', 'ಪೆಟ್ ಕಮ್ಮಿ' ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು. ಮುದ್ದಾದ ನಟನೆಯ ಮೂಲಕ ಕೋಸ್ಟಲ್‌ವುಡ್‌ನಲ್ಲಿ ಮೋಡಿ ಮಾಡಿದ ಅನ್ವಿತಾ ಸಾಗರ್ 'ಯಜ್ಞ' ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟರು. ತದ ನಂತರ 'ಮಾಯಾ ಕನ್ನಡಿ', 'ವಿರಾಟ ಪರ್ವ' ಸಿನಿಮಾಗಳಲ್ಲಿ ಅನ್ವಿತಾ ಸಾಗರ್ ಅಭಿನಯಿಸಿದ್ದಾರೆ. ಹಿರಿತೆರೆ ನಂತರ ಇದೀಗ ಕಿರುತೆರೆಯಲ್ಲಿ ನಟನಾ ಕಂಪನ್ನು ಪಸರಿಸುತ್ತಿರುವ ಈಕೆ ರಿಯಾಲಿಟಿ ಶೋವಿನಲ್ಲಿಯೂ ಗುರುತಿಸಿಕೊಂಡಿದ್ದಾರೆ. 'ಡ್ಯಾನ್ಸಿಂಗ್ ಚಾಂಪಿಯನ್'ನ ಸ್ಪರ್ಧಿಯಾಗಿ ಕಾಣಿಸಿಕೊಂಡಿರುವ ಈಕೆ ಅಲ್ಲೂ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾದರು.


Click it and Unblock the Notifications











