ನಟನೆ ಎಂದರೆ ಮ್ಯಾಜಿಕ್ ಎಂದ 'ಗಟ್ಟಿಮೇಳ' ಖ್ಯಾತಿಯ ರಕ್ಷ್
ಕನಸುಗಳು ಹಲವು, ಕೆಲವರಿಗೆ ಸಾಕಾರವಾಗುವ ದಾರಿ ಸುಲಭದಲ್ಲಿ ಕಾಣಿಸಿಕೊಂಡರೆ ಇನ್ನು ಕೆಲವರು ಅತಿಯಾದ ಪರಿಶ್ರಮವನ್ನು ಪಡಬೇಕಾಗುತ್ತದೆ. ಮತ್ತೆ ಕೆಲವರಿಗೆ ತಾವು ಕಂಡ ಕನಸು ಒಂದಾದರೆ, ನನಸಾಗುವುದು ಇನ್ನೊಂದು ರೀತಿಯಲ್ಲಾಗಿರುತ್ತದೆ. ಇದಕ್ಕೆ ನಟನ ರಂಗವೂ ಹೊರತೇನಲ್ಲ. ಅಂತಹ ನಟರಲ್ಲಿ ರಕ್ಷ್ ಕೂಡ ಒಬ್ಬರು.
ಚಲನಚಿತ್ರರಂಗದ ಕನಸನ್ನು ಕಂಡು ಧಾರಾವಾಹಿಯ ಮೂಲಕ ಇಂದು ಜೀ ಕನ್ನಡದಲ್ಲಿ ಖ್ಯಾತರಾಗಿರುವ ನಟ ರಕ್ಷ್ ಧಾರಾವಾಹಿ ಪ್ರಿಯರ ನೆಚ್ಚಿನ ನಟ. ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಂಬರ್ ವನ್ ಧಾರಾವಾಹಿ 'ಗಟ್ಟಿಮೇಳ'ದಲ್ಲಿ ನಾಯಕನ ಪಾತ್ರವನ್ನು ನಿಭಾಯಿಸುತ್ತಿರುವ ರಕ್ಷ್ ಸದ್ಯ ವೇದಾಂತ್ ವಸಿಷ್ಠ ಎಂದೇ ಕರುನಾಡಿನಾದ್ಯಂತ ಫೇಮಸ್ಸು!

ಶುಂಠಿ ಶಂಕರನಾಗಿ ಮೋಡಿ ಮಾಡಿದ್ದ ಶಂಕರ್
ಕೆ.ಎಸ್. ರಾಮ್ ಜೀ ನಿರ್ದೇಶನದ 'ಪುಟ್ಟ ಗೌರಿ ಮದುವೆ' ಧಾರಾವಾಹಿಯಲ್ಲಿ ನಾಯಕನಾಗಿ ಕಿರುತೆರೆಗೆ ಕಾಲಿಟ್ಟ ರಕ್ಷ್ ಮೊದಲ ಧಾರಾವಾಹಿಯಲ್ಲಿಯೇ ನಾಯಕನಾಗಿ ಮಿಂಚುವ ಅವಕಾಶ ಗಿಟ್ಟಿಸಿಕೊಂಡಿರುವ ಹ್ಯಾಂಡ್ ಸಮ್ ಹುಡುಗ. ತದ ನಂತರ ಒಂದೆರಡು ಸಿನಿಮಾದಲ್ಲಿಯೂ ಕಾಣಿಸಿಕೊಂಡಿದ್ದ ರಕ್ಷ್ ಅವರಿಗೆ ಅದೃಷ್ಟ ತಂದುಕೊಟ್ಟದ್ದು ಕಿರುತೆರೆಯೇ! 'ಪುಟ್ಟ ಗೌರಿ ಮದುವೆ' ಧಾರಾವಾಹಿಯ ನಂತರ 'ಗಟ್ಟಿಮೇಳ' ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ರಕ್ಷ್ ಕೇವಲ ರೌಡಿಬೇಬಿಯ ಜೊತೆಗೆ ಕರುನಾಡಿನ ಶುಂಠಿ ಶಂಕರನಾಗಿ ಮೋಡಿ ಮಾಡುತ್ತಿದ್ದಾರೆ.

ರಕ್ಷ್ ಬದುಕು ಬದಲಿಸಿದ್ದು ಕಿರುತೆರೆ
ಸಣ್ಣ ವಯಸ್ಸಿನಿಂದಲೂ ರಕ್ಷ್ ಅವರು ನಟನಾಗುವ ಕನಸು ಕಂಡಿದ್ದ ರಕ್ಷ್ ಗೆ ಕಿರುತೆರೆಗಿಂತಲೂ ಹಿರಿತೆರೆಯತ್ತ ವಿಶೇಷ ಒಲವು. ಅದೇ ರೀತಿ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಬಂದಾಗಲೂ ಅಷ್ಟೇ, ಮೊದಲಿಗೆ ಖಡಾಖಂಡಿತವಾಗಿ ಬೇಡ ಎಂದು ಹೇಳಿದ್ದ ರಕ್ಷ್ ನಂತರ ನೋಡೋಣ ಎಂದು ಒಲ್ಲದ ಮನಸ್ಸಿನಿಂದಲೇ ಒಪ್ಪಿಕೊಂಡರು. ಆದರೆ ಅದುವೇ ಅವರ ಬದುಕನ್ನು ಬದಲಾಯಿಸಿತು.

ನರಗುಂದ ಬಂಡಾಯ ಚಿತ್ರದಲ್ಲಿ ನಟನೆ
ಕಿರುತೆರೆಯಲ್ಲಿ ಬಣ್ಣ ಹಚ್ಚುವ ಮೊದಲು ರಕ್ಷ್ ರಂಗಭೂಮಿಯಲ್ಲಿ ಪಳಗಿದ ಹ್ಯಾಂಡ್ ಸಮ್ ಹುಡುಗ. ಇತಿಹಾಸ ಕಥೆಗಳಾದ 'ತೆನಾಲಿ ರಾಮ', 'ಅಕ್ಬರ್ ಬೀರ್‌ಬಲ್' ಮುಂತಾದ ನಾಟಕಗಳ ಮೂಲಕ ರಂಗದಲ್ಲಿ ಕಾಣಿಸಿಕೊಂಡಿದ್ದಾರೆ. ಪೌರಾಣಿಕ ಪಾತ್ರಗಳಲ್ಲಿ ನಟಿಸುವ ಇರಾದೆ ಹೊಂದಿರುವ ರಕ್ಷ್ 'ನನಗೂ ನಿನಗೂ' ಮತ್ತು 'ನರಗುಂದ ಬಂಡಾಯ' ಚಿತ್ರಗಳ ಮೂಲಕ ಸಿನಿಪ್ರಿಯರನ್ನು ರಂಜಿಸಿದ್ದಾರೆ.

"ನನ್ನ ಪ್ರಕಾರ ಮ್ಯಾಜಿಕ್"
"ನಟನೆ ಎಂದರೆ ನನ್ನ ಪ್ರಕಾರ ಮ್ಯಾಜಿಕ್ ಎನ್ನಬಹುದು. ಕಲಾವಿದ ಎಂದ ಮೇಲೆ ಆತ ಯಾವುದೇ ಪಾತ್ರ ನೀಡಿದರೂ ನಟಿಸುವುದಕ್ಕೆ ತಯಾರಿರಬೇಕು. ನಾನು ಕೂಡಾ ಸಿಕ್ಕಿರುವಂತಹ ಪಾತ್ರಗಳಿಗೆ ಜೀವ ತುಂಬುತ್ತೇನೆ" ಎಂದು ಸಂತಸದಿಂದ ಹೇಳುವ ರಕ್ಷ್ ನಟನೆಗೆ ಬಂದು ತಾಳ್ಮೆಯನ್ನು ಕಲಿತರು.


Click it and Unblock the Notifications