ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡ ಬಿಗ್ ಬಾಸ್ ಜೋಡಿ ? ತಲೆಗೆ ಹುಳ ಬಿಟ್ಕೊಂಡ ಫ್ಯಾನ್ಸ್
ಬೆಳ್ಳಿತೆರೆ ಇರಲಿ.. ಕಿರುತೆರೆ ಇರಲಿ.. ಹಾಗಂತೆ -ಹೀಗಂತೆ ಎಂಬ ಸುದ್ದಿಗಳಿಗೆ ಇಲ್ಲಿ ಬರ ಇಲ್ಲ. ಒಂದು ಸಣ್ಣ ಕಿಡಿ ಇಲ್ಲಿ ಕ್ಷಣಾರ್ಧದಲ್ಲಿ ಕಾಡ್ಗಿಚ್ಚಿನಂತೆ ಹಬ್ಬುತ್ತೆ. ಇಡೀ ಸೋಶಿಯಲ್ ಮೀಡಿಯಾವನ್ನು ಆವರಿಸಿಕೊಳ್ಳುತ್ತೆ.ಇಲ್ಲಿ ಹಲವರ ವೃತ್ತಿ ಜೀವನ ಮತ್ತು ವ್ಯೆಯಕ್ತಿಕ ಬದುಕು ಕೆಲ ಒಮ್ಮೆ ಮಸುಕು ಮಸುಕಾಗಿಯೇ ಕಾಣಿಸುತ್ತೆ. ಈ ಸೆಲೆಬ್ರೆಟಿಗಳು ಹಂಚಿಕೊಳ್ಳುವ ಪ್ರತಿಯೊಂದು ಪೋಸ್ಟ್.. ಪ್ರತಿಯೊಂದು ಫೋಟೊ.. ಹಿಂದೆ ಕೂಡ ಒಂದೊಂದು ಕಥೆ ಇರುತ್ತೆ.
ಇನ್ನೂ ಈ ತಾರೆಯರು ಕೂಡ ಕಡಿಮೆ ಇಲ್ಲ. ಅಭಿಮಾನಿಗಳಲ್ಲಿ, ತಮ್ಮ ಹಿಂಬಾಲಕರಲ್ಲಿ.. ಕುತೂಹಲ ಹೇಗೆ ಕೆರಳಿಸಬೇಕು.. ಸದಾ ಸುದ್ದಿಯಲ್ಲಿ ಹೇಗೆ ಇರಬೇಕು ಎನ್ನುವ ಕಲೆ ಇವರಿಗೆ ಚೆನ್ನಾಗಿಯೇ ಕರಗತವಾಗಿರುತ್ತೆ. ಉದಾಹರಣೆಗೆ ಎಲ್ವಿಶ್ ಯಾದವ್ ಮತ್ತು ಜಿಯಾ ಶಂಕರ್ ಅವರನ್ನೇ ತೆಗೆದುಕೊಳ್ಳಿ.

ಹೌದು, ಎಲ್ವಿಶ್ ಯಾದವ್.. ಉತ್ತರದ ಪ್ರಖ್ಯಾತ ಯೂಟ್ಯೂಬರ್ ಗಳಲ್ಲಿ ಒಬ್ಬರು. 2023ರಲ್ಲಿ ವೈಲ್ಡ್ ಕಾರ್ಡ್ ಮೂಲಕ ''ಬಿಗ್ ಬಾಸ್'' ಒಟಿಟಿ ಸೀಸನ್ 2ರ ಮನೆಯನ್ನು ಪ್ರವೇಶ ಮಾಡಿದ್ದ ಎಲ್ವಿಶ್ ಕಪ್ ಸಮೇತ ಮನೆಯಾಚೆ ಬಂದಿದ್ದರು. ಗೆದ್ದು ಬೀಗಿದ್ದರು.
ಆ ನಂತರ ''ಪ್ಲೇ ಗ್ರೌಂಡ್'' ಸೀಸನ್ 4.. ''ಲಾಫ್ಟರ್ ಶೆಫ್ಸ್''.. ''MTV ರೋಡೀಸ್ XX''.. ಅಂತಹ ರಿಯಾಲಿಟಿ ಶೋಗಳಲ್ಲಿ ಕೂಡ ಭಾಗವಹಿಸಿದ ಎಲ್ವಿಶ್ ಅರ್ಧ ಡಜನ್ ಆಲ್ಬಂ ಹಾಡುಗಳನ್ನು ಕೂಡ ಮಾಡಿದ್ದಾರೆ. ಇನ್ನು ಇವರು ಮಾಡಿಕೊಂಡ ವಿವಾದಗಳು ಒಂದೆರಡಲ್ಲ.
ಇನ್ನು ಜಿಯಾ ಶಂಕರ್ ವೃತ್ತಿಯಲ್ಲಿ ನಟಿ. ''ಮೇರಿ ಹಾನಿಕಾರಕ್ ಬೀವಿ''.. ''ಕಾಟೇಲಾಲ್ & ಸನ್ಸ್''.. ''ಕ್ವೀನ್ಸ್ ಹೈ ಹಮ್'' ಅಂತಹ ಧಾರಾವಾಹಿಗಳಲ್ಲಿ ಅಭಿನಯಿಸುವ ಮೂಲಕ ಜನ ಮನ ಗೆದ್ದ ಜಿಯಾ ಮರಾಠಿಯಲ್ಲಿ ರಿತೇಶ್ ದೇಶಮುಖ್ ನಿರ್ದೇಶನದ ''ವೆಡ್'' ಚಿತ್ರದಲ್ಲಿ ಕೂಡ ಅಭಿನಯಿಸಿದ್ದಾರೆ. ''ವರ್ಜಿನ್ ಭಾಸ್ಕರ್ 2'' ಎಂಬ ವೆಬ್ ಸರಣಿಯನ್ನು ಕೂಡ ಮಾಡಿದ್ದಾರೆ.
ಇಷ್ಟೇ ಅಲ್ಲ ತೆಲುಗು ಮತ್ತು ತಮಿಳಿನಲ್ಲಿ ಕೂಡ ಸಿನಿಮಾ ಮಾಡಿದ್ದಾರೆ. ಇವರ ಅಭಿನಯದ ''ಕಾದಲ್ ರಿಸೆಟ್ ರಿಪೀಟ್'' ಚಿತ್ರ ಇನ್ನೇನು ಈ ವರ್ಷ ತೆರೆಗೆ ಬರಲಿದೆ. ವಿಶೇಷ ಅಂದರೆ ಜಿಯಾ ಶಂಕರ್ ಕೂಡ ''ಬಿಗ್ ಬಾಸ್'' ಸ್ಫರ್ಧಿ. 2023ರಲ್ಲಿ ಎಲ್ವಿಶ್ ಯಾದವ್ ಭಾಗವಹಿಸಿದ್ದ ''ಬಿಗ್ ಬಾಸ್'' ಒಟಿಟಿ ಸೀಸನ್ 2ರಲ್ಲಿ ಜಿಯಾ ಕೂಡ ಭಾಗವಹಿಸಿದ್ದರು.

ಇಂಥಾ ಎಲ್ವಿಶ್ ಯಾದವ್ ಮತ್ತು ಜಿಯಾ ಶಂಕರ್ ನಡುವೆ ಪ್ರೇಮಾಂಕುರವಾಗಿದೆ ಎನ್ನುವ ಸುದ್ದಿ ಸದ್ಯ ಹಬ್ಬಿದೆ. ಖುದ್ದು ಎಲ್ವಿಶ್ ಯಾದವ್ ಇಂತಹದ್ದೊಂದು ಸುದ್ದಿಗೆ ಮುನ್ನುಡಿಯನ್ನು ಬರೆದಿದ್ದು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹುಡುಗಿಯ ಕೈ ಹಿಡಿದಿರುವ ಫೋಟೊ ಹಂಚಿಕೊಂಡಿದ್ದಾರೆ.
ಹೀಗೆ ಹಂಚಿಕೊಳ್ಳಲಾದ ಫೋಟೊದಲ್ಲಿ ಹುಡುಗಿಯ ಬೆರಳಿನಲ್ಲಿ ವಜ್ರದ ಉಂಗುರ ಇದ್ದು ಪ್ರೀತಿಗೆ ನಾನು ಮತ್ತೊಂದು ಅವಕಾಶವನ್ನು ನೀಡಿದೆ, ನನಗೀಗ ನನ್ನ ಹೃದಯ ಸಿಕ್ಕಿದೆ ಎಂದು ಬೇರೆ ಎಲ್ವಿಶ್ ಬರೆದುಕೊಂಡಿದ್ದಾರೆ. ಎಲ್ವಿಶ್ ಹಂಚಿಕೊಂಡ ಇದೇ ಪೋಸ್ಟ್‌ನ್ನು ಜಿಯಾ ಶಂಕರ್ ರೀಪೋಸ್ಟ್ ಮಾಡಿದ್ದು ಹೃದಯದ ಎಮೋಜಿಯನ್ನು ಹಂಚಿಕೊಂಡಿದ್ದಾರೆ. ಇದರಿಂದ ಬೆಂಕಿಗೆ ತುಪ್ಪ ಸುರಿದಂತಾಗಿ ಸದ್ಯ ಇವರಿಬ್ಬರ ಸಂಬಂಧದ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ. ಈ ನಿಗೂಢ ಪೋಸ್ಟ್‌ನ ರಹಸ್ಯವನ್ನು ಇವರ ಅಭಿಮಾನಿ ಬಳಗ ಹುಡುಕುತ್ತಿದೆ.
ಕೆಲವರು ಇದು ಇವರಿಬ್ಬರು ಮಾಡುತ್ತಿರುವ ಯಾವುದಾದರೂ ಹೊಸ ಪ್ರಾಜೆಕ್ಟ್ ಇರಬಹುದು, ಅಥವಾ ಯಾವುದಾದರೂ ಬ್ರ್ಯಾಂಡ್‌ನ ಪ್ರಚಾರ ಭಾಗವಾಗಿರಬಹುದು, ಇಲ್ಲವಾದಲ್ಲಿ ತಮ್ಮ ಮುಂಬರುವ ಮ್ಯೂಸಿಕ್ ವಿಡಿಯೋಗಾಗಿ ಈ ರೀತಿ 'ಹೈಪ್' ಸೃಷ್ಟಿಸುತ್ತಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದರೆ ಇನ್ನೂ ಕೆಲವರು ಎಲ್ವಿಶ್ ಯಾದವನ್ ತೀರಾ ಇತ್ತೀಚೆಗಷ್ಟೇ ಮದುವೆಯಾಗಲು ತಾವು ಸಿದ್ದ ಎಂದು ಹೇಳಿದ್ದರು. ಈ ಹಿನ್ನೆಲೆ ನಿಜಕ್ಕೂ ಸದ್ದಿಲ್ಲದೇ ಜಿಯಾ ಶಂಕರ್ ಜೊತೆ ಎಲ್ವಿಶ್ ಎಂಗೇಜ್ ಆಗಿರಬಹುದು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಮತ್ತೂ ಕೆಲವರು ಇದೆಲ್ಲ ಪ್ರಚಾರದ ಗಿಮಿಕ್ ಈ ಸೆಲೆಬ್ರೇಟಿಗಳಿಗೆ ಸುದ್ದಿಯಲ್ಲಿರುವುದು ಹೇಗೆ ಎನ್ನುವುದು ಚೆನ್ನಾಗಿ ಗೊತ್ತು. ಹೀಗಾಗಿ ಜನರ ಭಾವನೆಗಳ ಜೊತೆ ಆಟ ಆಡ್ತಾರೆ ಎಂದು ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.
ಒಟ್ನಲ್ಲಿ ಸದ್ಯ ಎಲ್ವಿಶ್ ಯಾದವ್ ಮತ್ತು ಜಿಯಾ ಶಂಕರ್ ಹಂಚಿಕೊಂಡ ಸ್ಟೋರಿ, ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದ್ದು ಎಂದಿನಂತೆ, ಎಲ್ಲರಂತೆ ಇಬ್ಬರು ಈ ವಿಚಾರಕ್ಕೆ ಸಂಬಂಧಿಸಿದಂತೆ ಸ್ಪಷ್ಟೀಕರಣ ನೀಡಿಲ್ಲ. ಮುಂಬರುವ ದಿನಗಳಲ್ಲಿ ಇಬ್ಬರು ನಿಜಕ್ಕೂ ಮದುವೆಯಾಗ್ತಾರಾ..? ಅಥವಾ ತಮ್ಮ ಹೊಸ ವಿಡಿಯೋ ಶೀಘ್ರದಲ್ಲಿಯೇ ಬರುತ್ತಿದೆ ಎಂದು ಹೇಳುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.



Click it and Unblock the Notifications










