ಮನೆಗೆ ಬರುತ್ತಿದ್ದ ಆಪ್ತರಿಂದಲೇ ಬಾಲ್ಯದಲ್ಲಿ ನನಗೆ ಕಿರುಕುಳ ಆಗಿತ್ತು; ಗೀತಾ ಭಾರತಿ ಭಟ್ ಭಾವುಕ
ಚಿಕ್ಕ ಮಕ್ಕಳ ಮೇಲೆ ದೌರ್ಜನ್ಯ ಎಸಗುವ ಕಾಮುಕರು ನಮ್ಮ ಸಮಾಜದಲ್ಲಿದ್ದಾರೆ. ಇವತ್ತಿಗೂ ಇದು ಕಮ್ಮಿ ಆಗಿಲ್ಲ. ಸಾಕಷ್ಟು ಜನ ಹೆಣ್ಣುಮಕ್ಕಳು ಬಾಲ್ಯದಲ್ಲೇ ಇಂತಹ ಕಿರುಕುಳಗಳನ್ನು ಎದುರಿಸಿರುತ್ತಾರೆ. ಅದನ್ನು ಯಾರ ಬಳಿ ಹೇಳಿಕೊಳ್ಳಲು ಸಾಧ್ಯವಾಗದೇ ಇದ್ದುಬಿಡುತ್ತಾರೆ. ಅದು ಜೀವನ ಪರ್ಯಂತ ಅವರನ್ನು ಕಾಡುತ್ತಲೇ ಇರುತ್ತದೆ. ಕನ್ನಡ ಕಿರುತೆರೆ ನಟಿ ಗೀತಾ ಭಾರತಿ ಭಟ್ ಕೂಡ ಇದೇ ರೀತಿಯ ಕಹಿ ಅನುಭವವನ್ನು ಬಹಿರಂಗಪಡಿಸಿದ್ದಾರೆ.
ಚಿಕ್ಕಂದಿನಲ್ಲೇ ಸಾಕಷ್ಟು ಟ್ರೋಮಾ ಆಗಿತ್ತು. ಅದರಿಂದ ಹೊರಬರಲು ಸಾಧ್ಯವಾಗಲಿಲ್ಲ. ಇವತ್ತಿಗೂ ಅದು ಕಾಡುತ್ತಲೇ ಇದೆ ಎಂದು ರಾಜೇಶ್ ಗೌಡ ಯೂಟ್ಯೂಬ್ ಚಾನಲ್ ಪಾಡ್‌ಕಾಸ್ಟ್‌ನಲ್ಲಿ ಗೀತಾ ಭಾರತಿ ಭಟ್ ಹೇಳಿದ್ದಾರೆ. ದಿನ ಮನೆಗೆ ಬಂದು ಹೋಗುತ್ತಿದ್ದ ವ್ಯಕ್ತಿಯಿಂದಲೇ ಇಂತಹದ್ದೆಲ್ಲಾ ನಡೆದಾಗ ಅದನ್ನು ಮರೆಕ್ಕಾಗಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ತಂದೆ ತಾಯಿ ಇಬ್ಬರೂ ಕೆಲಸಕ್ಕೆ ಹೋಗುತ್ತಿದ್ದರು. ಹಾಗಾಗಿ ಚಿಕ್ಕಂದಿನಲ್ಲಿ ಮನೆಯಲ್ಲಿ ನನ್ನ ಒಬ್ಬಳನ್ನೇ ಬಿಟ್ಟು ಹೋಗುತ್ತಿದ್ದರು. ನನ್ನ ರಕ್ಷಣೆಗಾಗಿ ಅವರು ಆ ರೀತಿ ಮಾಡುತ್ತಿದ್ದರು. ಅದು ಅವರ ತಪ್ಪಲ್ಲ. ಅದನ್ನು ಟ್ರೋಮಾ ಅನ್ನುವುದಕ್ಕೆ ಸಾಧ್ಯವಿಲ್ಲ. ಕಾರಣ ನನ್ನ ಒಳ್ಳೆಯದ್ದಕ್ಕೆ ಅವ್ರು ಮಾಡಿದ್ದು. ಆದರೆ ಆ ಸಮಯಕ್ಕೆ ನನಗೆ ಬೇಸರವಾಗಿರಬಹುದು. ಅಪ್ಪ ಅಮ್ಮನ ಬಳಿ ಎಲ್ಲಾ ಹೇಳಿಕೊಳ್ಳಲು ಸಾಧ್ಯವಿಲ್ಲ. ಈಗ ಮಾತನಾಡಬಹುದು. ಆಗ ಕೂಡ ದಪ್ಪ ಇದ್ದೆ. ಬಾಡಿಶೇಮಿಂಗ್ ಮಾಡ್ತಿದ್ದರು ಅದನ್ನು ಯಾರ ಬಳಿ ಕೂಡ ಹೇಳಲು ಸಾಧ್ಯವಾಗುತ್ತಿರಲಿಲ್ಲ ಎಂದು ಗೀತಾ ಹೇಳಿದ್ದಾರೆ.
ನಾನು ಹೆಣ್ಣು ಮಕ್ಕಳ ಶಾಲೆಯಲ್ಲೇ ಓದಿದ್ದು. ಪ್ರತಿ ಶಾಲೆ ತರಗತಿಯಲ್ಲಿ ಚೆನ್ನಾಗಿ ಕಾಣುವ ಹುಡುಗಿಯರ ಗುಂಪು ಇರುತ್ತೆ. ಅದೇ ರೀತಿ ದಪ್ಪಗೆ ಅಥವಾ ಕಪ್ಪಗೆ ಇರುವ ಹುಡುಗಿಯರು ಇರ್ತಾರೆ. ಆ ಗುಂಪಿಗೆ ನಾನು ಸೇರುತ್ತಿದ್ದೆ. 7ನೇ 8ನೇ ತರಗತಿಯಲ್ಲಿ ನಾನು ಕೊನೆ ಬೆಂಚ್‌ನಲ್ಲಿ ಕೂರುತ್ತಿದ್ದೆ. ಹೆಣ್ಣು ಮಕ್ಕಳ ಶಾಲೆಯಲ್ಲಿ ಓದಿದ್ದಕ್ಕೆ ಇದು ಜಾಸ್ತಿ ಆಯ್ತು ಅನ್ನಿಸುತ್ತೆ. ಹೆಣ್ಣು ಮಕ್ಕಳೇ ಹೆಣ್ಣು ಮಕ್ಕಳಿಗೆ ಶತ್ರು ಎನ್ನುವಂತೆ ನಮ್ಮ ಕೆಲವರು ತಾತ್ಸಾರ ಮಾಡಿ ಹೀಯ್ಯಾಳಿಸುತ್ತಿದ್ರು ಎಂದು ಗೀತಾ ನೋವು ಹೊರ ಹಾಕಿದ್ದಾರೆ.

ಬಸ್‌ಗಳಲ್ಲಿ ಓಡಾಡುವಾಗ ಕೆಲವರು ಕೆಟ್ಟದಾಗಿ ತಳ್ಳಾಡುತ್ತಿದ್ರು. ಅದನ್ನೆಲ್ಲಾ ಯಾರಿಗೂ ಹೇಳಲು ಸಾಧ್ಯವಾಗುತ್ತಿರಲಿಲ್ಲ. ನಾನು ಈ ವಿಚಾರ ಎಲ್ಲಿ ಕೂಡ ಹೇಳಿಲ್ಲ. ಬಹಳ ಆಪ್ತರೇ ಒಬ್ಬರು ಕೆಟ್ಟದಾಗಿ ನಡೆದುಕೊಂಡಿದ್ದರು. ಪ್ರತಿದಿನ ಮನೆಗೆ ಬಂದು ಹೋಗುವವರು, ಕುಟುಂಬದಲ್ಲೇ ಯಾರೂ ಒಬ್ಬರು ಹೀಗೆ ನಡೆದುಕೊಂಡಿದ್ದು ಇದೆ. ಅದು ಮನಸ್ಸಿನಲ್ಲಿ ಉಳಿದುಬಿಟ್ಟಿದೆ. ಯಾವತ್ತೂ ಮರೆಯೋಕೆ ಸಾಧ್ಯವಿಲ್ಲ. ಪ್ರತಿಯೊಂದು ನೆನಪಿದೆ. ಹಾಗಾಗಿ ಅದು ಗಾಯದಂತೆ ಶಾಶ್ವತವಾಗಿ ಉಳಿದುಬಿಟ್ಟಿದೆ. ಮೊದಲೇ ಗೊತ್ತಿದ್ದರೆ ಹೇಳಿಕೊಳ್ಳಬಹುದಿತ್ತು. ಆಗ ಸಾಧ್ಯವಾಗಲಿಲ್ಲ ಎಂದು ಗೀತಾ ಭಾರತಿ ಭಟ್ ಹೇಳಿ ಭಾವುಕರಾಗಿದ್ದಾರೆ.
ಹೆಣ್ಣು ಮಕ್ಕಳಲ್ಲಿ ಯಾರಿಗಾದರೂ ಇಂತಹ ಕಹಿ ಅನುಭವ ಆಗುತ್ತಿದ್ದರೆ ಹೇಳಿಕೊಳ್ಳಿ. ನಾನು ಮಾಡಿದ ತಪ್ಪು ಯಾರೂ ಮಾಡಬೇಡಿ. ಈಗ ನಾನು ಹೇಳಿಕೊಂಡರೂ ಆ ಗಾಯ ಮಾಸುವುದಿಲ್ಲ. ಆಗಲೇ ಸರಿ ಆಗಬೇಕಿತ್ತು. ಆಗಲಿಲ್ಲ. ಹೋಗಲಿ ಅದೆಲ್ಲಾ ನನ್ನನ್ನು ಮತ್ತಷ್ಟು ಗಟ್ಟಿಯಾಗುವಂತೆ ಮಾಡಿದೆ ಎಂದು ಗೀತಾ ಭಾರತಿ ಹೇಳಿದ್ದಾರೆ.
'ಬ್ರಹ್ಮಗಂಟು' ಧಾರಾವಾಹಿಯಲ್ಲಿ ನಟಿಸಿ ಗೀತಾ ಭಾರತಿ ಭಟ್ ಗಮನ ಸೆಳೆದಿದ್ದರು. ಒಳ್ಳೆ ಗಾಯಕಿ ಸಹ ಆಗಿರುವ ಗೀತಾ ಬಿಗ್‌ಬಾಸ್ ಕನ್ನಡ ಸೀಸನ್-8ರ ಸ್ಪರ್ಧಿಯಾಗಿ ದೊಡ್ಮನೆ ಒಳಗೆ ಹೋಗಿದ್ದರು. 'ಲವ್ ಮಾಕ್ಟೇಲ್' ಚಿತ್ರದಲ್ಲಿ ನಟಿಸಿ ತಪ್ಪು ಮಾಡಿಬಿಟ್ಟೆ ಎಂದು ಕೂಡ ಗೀತಾ ಹೇಳಿಕೊಂಡಿದ್ದಾರೆ.


Click it and Unblock the Notifications











