'ಅಬ್ಬಬ್ಬಾ' ಚಿತ್ರದ ಮೂಲಕ ಹಿರಿತೆರೆಗೆ ಎಂಟ್ರಿ ಕೊಟ್ಟ ಧನರಾಜ್ ಆಚಾರ್ ಬಗ್ಗೆ ನಿಮಗೆಷ್ಟು ಗೊತ್ತು?
'ಗಿಚ್ಚಿ ಗಿಲಿಗಿಲಿ ಸೀಸನ್- 2' ಮೂಲಕ ಮಿಂಚಿದ ಮಂಗಳೂರಿನ ಪ್ರತಿಭೆ, ಹಲವು ರೀಲ್ಸ್ ಮಾಡಿ ನೆಟ್ಟಿಗೆ ಮನಗೆದ್ದ ಹಾಸ್ಯ ಕಲಾವಿದ ಧನರಾಜ್ ಆಚಾರ್. ಆತನ ಕಾಮಿಡಿ ವಿಡಿಯೋಗಳನ್ನು ಅಭಿಮಾನಿಗಳು ಖುಷಿಪಟ್ಟಿದ್ದು ಸತ್ಯ. ಎಲ್ಲಾ ವರ್ಗದವರಿಗೆ ಮನರಂಜನೆ ನೀಡುತ್ತಿರುವ ಧನರಾಜ್ ಆಚಾರ್‌ಗೆ ಪತ್ನಿ ಪ್ರಜ್ಞಾ ಕೂಡ ಬೆಂಬಲ ನೀಡುತ್ತಾರೆ.
ಫನ್ನಿ ವಿಡಿಯೋಗಳನ್ನು ಮಾಡಿ ರಂಜಿಸುವುದರ ಜೊತೆಗೆ ರೀಲ್ಸ್ ಮೂಲಕ ಮೋಡಿ ಮಾಡುತ್ತಾರೆ ಧನರಾಜ್. ಕಲೆಗೆ ಬೆಲೆ ಕಟ್ಟಲು ಸಾಧ್ಯ ಇಲ್ಲ. ಕಲಾವಿದರು ಒಂದಲ್ಲ ಒಂದು ರೀತಿಯಲ್ಲಿ ಜನರನ್ನು ನಗಿಸುತ್ತಾ ತಾವು ಖುಷಿಯಿಂದ ಇರುವುದನ್ನು ಕಲಿತುಕೊಂಡಿರುತ್ತಾರೆ. ಕೆಲವರು ಮನದಲ್ಲಿ ನೋವು ನುಂಗಿ ರಂಜಿಸುವ ಕಾಯಕ ಮಾಡುತ್ತಿರುತ್ತಾರೆ. ಧನರಾಜ್ ಆಚಾರ್ 'ಅಬ್ಬಬ್ಬಾ' ಸಿನಿಮಾ ಮೂಲಕ ಜನಪ್ರಿಯರಾಗಿರುವ ನಟ.

ಧನರಾಜ್ ಬೆಳೆದು ಬಂದ ದಾರಿಯತ್ತ ಒಮ್ಮೆ ಚಿತ್ತ ಹರಿಸೋಣ.. ಚಿಕ್ಕ ವಯಸ್ಸಿನಿಂದಲೂ ಬಹಳ ಪ್ರತಿಭಾವಂತ ಹುಡುಗ. ಅಭಿನಯ ಮಾಡಬೇಕು ಎನ್ನುವ ಹುಚ್ಚು ಬಯಕೆಗೆ ಉತ್ತಮ ಸಾಧನವಾಗಿದ್ದು ಟಿಕ್ ಟಾಕ್. ಹೀಗೆ ವೀಡಿಯೋಗಳನ್ನು ಮಾಡುತ್ತಾ ಜನರ ಮನ ಗೆದ್ದ ನಟ ಎಂದರೆ ತಪ್ಪಾಗದು. ಜನರನ್ನು ನಗಿಸುವ ಕೆಲಸ ಬಹಳ ಕಷ್ಟವಾದ ಕೆಲಸ. ಆದರೆ ಧನರಾಜ್ ಆಚಾರ್ ಅದನ್ನು ಸಲೀಸಾಗಿ ಮಾಡುತ್ತಿದ್ದರು.
ಧನರಾಜ್ ಪ್ರಯತ್ನಕ್ಕೆ ಕುಟುಂಬಸ್ಥರ ಸಾಥ್
ಕುಟುಂಬಸ್ಥರ ಹಾಗೂ ಗೆಳೆಯರ ಸಾಥ್ ಕೂಡ ಧನರಾಜ್‌ಗೆ ಸಿಕ್ಕಿತ್ತು. ಇವರು ಮೂಲತಃ ಬಂಟ್ವಾಳದ ಅನಂತಾಡಿಯವರು. ರಾಘವೇಂದ್ರ ಆಚಾರ್ ಮತ್ತು ಸಂಧ್ಯಾ .ಎಸ್ ದಂಪತಿಯ ಪುತ್ರ. ಪ್ರಾಥಮಿಕ ಶಾಲೆಯನ್ನು ಅನಂತಾಡಿಯಲ್ಲಿ ಮುಗಿಸಿದ ಬಳಿಕ ಪ್ರೌಢ ಹಾಗೂ ಪದವಿ ಪೂರ್ವ ಶಿಕ್ಷಣವನ್ನು ಕೊಂಬೆಟ್ಟು ಶಾಲೆಯಲ್ಲಿ ಹಾಗೂ ಪದವಿ ಶಿಕ್ಷಣವನ್ನು ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಮುಗಿಸಿದ್ದಾರೆ. ಕಾಲೇಜಿನ ದಿನಗಳಲ್ಲಿ ಕೂಡ ಧನರಾಜ್ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿ ಇದ್ದರು. ಹಾಸ್ಯ ನಟನಾಗಬೇಕು ಎನ್ನುವ ಆಸೆ ಹೆಚ್ಚಾಗುತ್ತಾ ಬಂತು.
ಗಿಚ್ಚಿ ಗಿಲಿಗಿಲಿಯಲ್ಲಿ ಭಾಗಿ
'ಗಿಚ್ಚಿ ಗಿಲಿಗಿಲಿ ಸೀಸನ್- 2'ಗೆ ಆಯ್ಕೆ ಆದರು. ಇನ್ನು ಧನರಾಜ್ ತಾಯಿ ಕೂಡ ಕಲಾವಿದೆ. ಚಿಕ್ಕ ವಯಸ್ಸಿನಲ್ಲಿ ಧನರಾಜ್, ತಾಯಿ ಎಲ್ಲಿಗೆ ಹೋಗುತ್ತಾರೋ ಅವರೊಂದಿಗೆ ಹೋಗುತ್ತಾ ಇದ್ದರು. ತಾಯಿ ನಟನೆಯನ್ನು ನೋಡಿ ಇನ್ನಷ್ಟು ನಟನೆಯತ್ತ ಆಕರ್ಷಣೆ ಹೆಚ್ಚಾಗುತ್ತಾ ಬಂತು. ಹಾಗೆಯೇ ಮೊದಲ ಬಾರಿಗೆ ನಾಟಕವೊಂದರಲ್ಲಿ ಧನರಾಜ್ ಮೂಗನ ಪಾತ್ರದಲ್ಲಿ ನಟನೆ ಮಾಡಿ ಎಲ್ಲಾ ಚಪ್ಪಾಳೆ ಗಿಟ್ಟಿಸಿದ್ದರು.
ಧಾರಾವಾಹಿಯಲ್ಲಿ ಕೆಲಸ
ರಂಗಭೂಮಿಯಲ್ಲಿ ಕಲಿತು 'ಅಮೃತ ವರ್ಷಿಣಿ' ಧಾರಾವಾಹಿಯಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಸೇರಿಕೊಂಡು ಟೆಕ್ನಿಕಲ್ ಹಾಗೂ ಕ್ಯಾಮೆರಾ ವಿಷಯ ಸಂಬಂಧಪಟ್ಟ ಕೆಲವು ವಿಚಾರಗಳನ್ನು ತಿಳಿದುಕೊಂಡರು. ಇನ್ನು ಧನರಾಜ್ ಆಚಾರ್ ನಟನೆ ಮಾಡಲು, ರೀಲ್ಸ್ ಮಾಡಲು ಸಹಕಾರ ಕೊಡುತ್ತಾರೆ ಮನೆ ಮಂದಿ. ಕೂಡು ಕುಟುಂಬವಿದ್ದರೆ ಆ ಕುಟುಂಬವನ್ನು ನೋಡುವುದೇ ಬಹಳ ಅಂದ ಎಂದು ಹೇಳಿದರೆ ತಪ್ಪಾಗದು . ಧನರಾಜ್ ಆಚಾರ್ ಹೀಗೆ ಎಲ್ಲರನ್ನು ರಂಜಿಸಲಿ, ಸಿನಿಮಾಗಳಲ್ಲಿ ಕೂಡ ನಟಿಸಲಿ ಎನ್ನುವುದು ನಮ್ಮ ಆಶಯ.


Click it and Unblock the Notifications











