Gicchi Gili Gili 3: ವೀಕ್ಷಕರನ್ನು ನಕ್ಕು ನಗಿಸಲು ಬರ್ತಿದೆ ಗಿಚ್ಚಿ ಗಿಲಿ ಗಿಲಿ ಸೀಸನ್ -3: ಯಾವಾಗಿಂದ ಆರಂಭ?
ಕಲರ್ಸ್ ಕನ್ನಡ ವಾಹಿನಿ ಸೀಸನ್-3 ಶೀಘ್ರವಾಗಿ ವೀಕ್ಷಕರನ್ನು ನಕ್ಕು-ನಗಿಸಲು ಬರುತ್ತಿದೆ. ಫೆಬ್ರವರಿ 3ರಂದು ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ಪ್ರಸಾರವನ್ನು ಕಾಣಲಿದೆ. ಈಗಾಗಲೇ ಎರಡು ಸೀಸನ್‌ಗಳನ್ನು ಯಶಸ್ವಿಯಾಗಿ ಮುಗಿಸಿ ಹಲವಾರು ಕಾಮಿಡಿ ಸ್ಟಾರ್‌ಗಳನ್ನು ಚಲನಚಿತ್ರ ರಂಗಕ್ಕೆ ಕಲರ್ಸ್ ಕನ್ನಡ ಕೊಟ್ಟಿದೆ. ಹೊಸ ಹೊಸ ಪ್ರತಿಭೆಗಳಿಗೆ ಅವಕಾಶವನ್ನು ಕೊಡಲು ಮೂವರು ಜಡ್ಜ್‌ಗಳು ಕಾಯುತ್ತಾ ಇದ್ದಾರೆ.
ಈಗ ಹೊಸದಾಗಿ ಕೋಮಲ್ ಅವರು ಜಡ್ಜ್ ಆಗಿ ಕಾಣಿಸಿಕೊಂಡು ಜನರ ಮನಸಿಗೆ ಮತ್ತಷ್ಟು ಹತ್ತಿರವಾಗಲಿದ್ದಾರೆ. ಗಿಚ್ಚಿ ಗಿಲಿಗಿಲಿ-3 ಸೀಸನ್‌ನಲ್ಲಿ ಕೋಮಲ್ ಅವರು ಬರುತ್ತಿರುವುದು ಅವರಿಗೆ ಕಮ್ ಬ್ಯಾಕ್ ಕೊಟ್ಟಂತೆ ಆಗುತ್ತಿದೆ. ಈಗಾಗಲೇ ಈ ಕಾರ್ಯಕ್ರಮದಿಂದ ಸಾಕಷ್ಟು ಪ್ರತಿಭೆಗಳು ಕರ್ನಾಟಕದಲ್ಲಿ ಮನೆ ಮಾತಾಗಿದ್ದಾರೆ. ರಾಘವೇಂದ್ರ, ನಿವೇದಿತಾ, ಚಂದ್ರಪ್ರಭ, ತುಕಾಲಿ ಸಂತೋಷ್, ಪ್ರಿಯಾಂಕ ಕಾಮತ್, ವಂಶಿಕಾ ಮೊದಲಾದವರಿಗೆ ಉತ್ತಮವಾದ ವೇದಿಕೆಯನ್ನು ಕಲ್ಪಿಸಿ ಉತ್ತಮವಾದ ಅವಕಾಶ ನೀಡಿತ್ತು.

ಗಿಚ್ಚಿ ಗಿಲಿಗಿಲಿ ಮೊದಲ ಸೀಸನ್ ನಲ್ಲಿ ನಿವೇದಿತಾ ಗೌಡ, ಜಗ್ಗಪ್ಪ, ಪ್ರಶಾಂತ್, ಚಂದ್ರಪ್ರಭ ಮೊದಲಾದವರು ಭಾಗವಹಿಸಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದ್ದರು. ಇನ್ನು ಹಲವಾರು ಪ್ರತಿಭೆಗಳಿಗೆ ಶೋನಲ್ಲಿ ಜಾಗವನ್ನು ನೀಡಲಾಗಿತ್ತು. ಆದರೆ, ಇಲ್ಲಿ ಪ್ರಮುಖ ಸ್ಪರ್ಧಿಗಳು ಮಾತ್ರ ಉಳಿದುಕೊಂಡು ಟ್ರೋಫಿಯನ್ನು ತಮ್ಮದಾಗಿಸಿಕೊಂಡರು.
ಗಿಚ್ಚಿ ಗಿಲಿ ಗಿಲಿ ಸೀಸನ್ ಒಂದರಲ್ಲಿ ವಂಶಿಕಾ ಅಂಜನಿ ಕಶ್ಯಪ ಹಾಗೂ ಶಿವು ವಿಜೇತರಾಗಿ ಹೊರ ಹೊಮ್ಮಿದ್ದರು. ಇಲ್ಲಿ ಮಾಸ್ಟರ್ ಆನಂದ್ ಅವರ ಮಗಳ ಟ್ಯಾಲೆಂಟ್‌ಗೆ ಮನ ಸೋಲದವರೇ ಇಲ್ಲ. ಆ ಹುಡುಗಿ ವೇದಿಕೆ ಮೇಲೆ ಬಂತು ಎಂದರೆ ಬರೀ ಚಪ್ಪಾಳೆ ಸುರಿಮಳೆಗಳನ್ನೇ ವೀಕ್ಷಕರು ಸುರಿಸುತ್ತಿದ್ದರು. ವಂಶಿಕಾ ಅವರ ಪ್ರತಿಭೆಯನ್ನು ಮೆಚ್ಚಿಕೊಂಡಿದ್ದರು. ವಿನೋದ್ ಗೊಬ್ರಗಾಲ್, ನಿವೇದಿತಾ ಗೌಡ ಮೊದಲ ಸೀಸನ್‌ನ ರನ್ನರ್ ಆಪ್ ಆಗಿದ್ದರು. ಗಿಚ್ಚ ಗಿಲಿಗಿಲಿ ಸೀಸನ್-2ರ ವಿನ್ನರ್ ಆಗಿ ಚಂದ್ರಪ್ರಭಾ ಅಲಂಕರಿಸಿದ್ದರು.
ಫೆಬ್ರವರಿ 3ಕ್ಕೆ ಗಿಚ್ಚ ಗಿಲಿಗಿಲಿ, ಸೀಸನ್ ಮೂರಕ್ಕೆ ಸಜ್ಜಾದ ಕಾಮಿಡಿ ವೇದಿಕೆ
ಗಿಚ್ಚಿ ಗಿಲಿ ಗಿಲಿ ಸೀಸನ್-3 ಫೆಬ್ರವರಿ ಮೂರಕ್ಕೆ ಪ್ರಸಾರ ಕಾಣಲು ಸಿದ್ದವಾಗಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವನ್ನು ಕಾಣಲಿದೆ. ಕಳೆದ ಸೀಸನ್ ನಲ್ಲಿ ಹಾಸ್ಯ ನಟ ಸಾಧು ಕೋಕಿಲ, ಹಿರಿಯಾ ನಟಿ ಶ್ರುತಿ ಹಾಗೂ ಸೃಜನ್ ಲೋಕೇಶ್ ಜಡ್ಜ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ ಈಗ ನನ್ನಮ್ಮ ಸೂಪರ್ ಸ್ಟಾರ್ ಸೀಸನ್ ಬರುತ್ತಿರುವುದರಿಂದ ಸೃಜನ್ ಲೋಕೇಶ್ ಅವರು ಆ ಒಂದು ರಿಯಾಲಿಟಿ ಶೋಗೆ ಜಡ್ಜ್ ಆಗಿ ಹೋಗಿರುವ ಕಾರಣ ಆ ಜಾಗಕ್ಕೆ ಕೋಮಲ್ ಎಂಟ್ರಿ ಕೊಟ್ಟಿರುವಂತೆ ಕಾಣಿಸುತ್ತಿದೆ.

ಈ ವಾರ ಯಾವ ಯಾವ ಕಲಾವಿದರು ಬಂದು ತಮ್ಮ ಪ್ರತಿಭೆಯ ಮೂಲಕ ಕರ್ನಾಟಕದ ಜನರನ್ನು ರಂಜಿಸಲಿದ್ದಾರೆ ಎಂಬುದು ಕುತೂಹಲವಾಗಿದೆ. ಕಲರ್ಸ್ ಕನ್ನಡ ವಾಹಿನಿ ಹೊಸ ಸೀಸನ್ ಬರುತ್ತಿರುವ ಬಗ್ಗೆ ಈಗಾಗಲೇ ಅಧಿಕೃತವಾಗಿ ಪ್ರೋಮೋವನ್ನು ಬಿಡುಗಡೆ ಮಾಡಿದೆ. ನಿರಂಜನ್ ದೇಶಪಾಂಡೆ ಅವರು ಒಂದು ಹೋಟೆಲ್‌ಗೆ ಬಂದು ಟಿವಿಯನ್ನು ನೋಡುತ್ತಿರುವಾಗ ಯಾರು ಯಾರು ಗಿಚ್ಚಿ ಗಿಲಿಗಿಲಿ ಹೊಸ ಸೀಸನ್‌ಗೆ ಕಾಯುತ್ತಾ ಇದ್ದಾರೆ ಎಂಬ ರೀತಿ ಪ್ರೋಮೋ ಶೂಟ್ ಮಾಡಲಾಗಿದೆ. ಪ್ರೋಮೋ ಎಲ್ಲರ ಗಮನವನ್ನು ಸೆಳೆಯುತ್ತಿದೆ.
ಜಡ್ಜ್ ಆಗಿ ಎಂಟ್ರಿ ಕೊಟ್ಟ ಕೋಮಲ್
ಕಾಮಿಡಿ ಶೋ ಒಂದರಲ್ಲಿ ಕೋಮಲ್ ಅವರು ಜಡ್ಜ್ ಆಗಿ ಕಾಣಿಸಿಕೊಂಡಿದ್ದು ಅವರ ಅಭಿಮಾನಿಗಳಲ್ಲಿ ಎಲ್ಲಿಲ್ಲದ ಸಂತಸವನ್ನು ತಂದಿದೆ. ಸದ್ಯಕ್ಕೆ ಎಲ್ಲೂ ಕಾಣಿಸಿಕೊಳ್ಳದೆ ತಮ್ಮ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಕೋಮಲ್ ಅವರನ್ನು ನೋಡಿದ ಅಭಿಮಾನಿಗಳಿಗೆ ಖುಷಿಯಾಗಿದೆ. ಸಾಧು ಕೋಕಿಲ ಹಾಗೂ ಹಿರಿಯ ನಟಿ ಶ್ರುತಿ ಅವರ ಜೊತೆಗೆ ಕೋಮಲ್ ಕೂಡ ಕಾಣಿಸಿಕೊಂಡಿದ್ದಾರೆ. ಎಂದಿನಂತೆ ನಿರಂಜನ್ ದೇಶಪಾಂಡೆ ಅವರ ನಿರೂಪಣೆಯಲ್ಲಿ ಕಾರ್ಯಕ್ರಮ ಮೂಡಿ ಬರುತ್ತಿದೆ.
ಇಷ್ಟೇ ಅಲ್ಲದೆ ಕಲರ್ಸ್ ಕನ್ನಡದಲ್ಲಿ ಹೊಸ ಧಾರಾವಾಹಿ ಶ್ರೀ ಗೌರಿ ಕೂಡ ಪ್ರಸಾರವನ್ನು ಕಾಣಲಿದೆ. ಹೊಸ ಕಾಮಿಡಿ ಸೀಸನ್ ಜೊತೆಗೆ ನನ್ನಮ್ಮ ಸೂಪರ್ ಸ್ಟಾರ್ ಕೂಡ ಬರುತ್ತಿದ್ದು, ಮಕ್ಕಳು ಬಹಳಷ್ಟು ಎಂಜಾಯ್ ಮಾಡಲು ಕಾತುರದಿಂದ ಕಾಯುತ್ತಿದ್ದಾರೆ. ಇನ್ನು ಗಿಚ್ಚಿ ಗಿಲಿ ಗಿಲಿ ಶೋ ತಮ್ಮದೇ ಆದ ವೀಕ್ಷಕ ವರ್ಗವನ್ನ ಹೊಂದಿದ್ದು, ಯಾರು ಕಾಮಿಡಿ ಮಾಡಲು ಬರುತ್ತಾರೆ. ಯಾರಿಗೆಲ್ಲ ಅವಕಾಶ ಸಿಗುತ್ತದೆ ಎಂಬುದನ್ನು ನೋಡಲು ವೀಕ್ಷಕರು ಕೂಡ ಕಾತರದಿಂದ ಕಾಯುತ್ತಿದ್ದಾರೆ.


Click it and Unblock the Notifications











