ಜಾಲಿವುಡ್ ಸ್ಟುಡಿಯೋ ಸುತ್ತ ಮುತ್ತ ಖಾಕಿ ಕೋಟೆ ; ಗಿಲ್ಲಿ ಹವಾಗೆ ನಡುಗಿದ ಬಿಡದಿ- ಒಳಗೆ ಫಿನಾಲೆ, ಹೊರಗಡೆ ಲಾಠಿ ಚಾರ್ಜ್
ಅಭಿಮಾನಿಗಳ ಅಭಿಮಾನಕ್ಕೆ ಬೆಲೆ ಕಟ್ಟಲು ಸಾಧ್ಯ ಇಲ್ಲ. ಈ ಕಾರಣಕ್ಕಾಗಿಯೇ ಕನ್ನಡದ ವರನಟ ಡಾ.ರಾಜ್ ಕುಮಾರ್ ಅಭಿಮಾನಿಗಳಲ್ಲಿ ದೇವರನ್ನ ಕಂಡರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಅಭಿಮಾನಿಗಳಿಗೆ ಸೆಲೆಬ್ರಿಟಿ ಪಟ್ಟವನ್ನ ಕಟ್ಟಿದರು. ಧ್ರುವಾ ಸರ್ಜಾ ತಮ್ಮ ಅಭಿಮಾನಿಗಳನ್ನ ವಿಐಪಿ ಎಂದು ಕರೆದರು. ಕನ್ನಡದ ಹಲವು ತಾರೆಯರು ಅಭಿಮಾನಿಗಳ ಅಭಿಮಾನಕ್ಕೆ ಶರಣೆಂದರು.ಪ್ರೀತಿಯಿಂದ ತಲೆ ಬಾಗಿದರು.
ಇಂತಹ ಅಭಿಮಾನವನ್ನು ಗಿಲ್ಲಿಗೆ ಬಿಗ್ ಬಾಸ್ ಕರುಣಿಸಿದೆ. ಗಲ್ಲಿ ಗಲ್ಲಿಗಳಲ್ಲಿಯೂ ಕೂಡ ಇಂದು ಗಿಲ್ಲಿ ಹೆಸರು ರಾರಾಜಿಸುತ್ತಿದೆ. ಆದರೆ.. ಬೆಳ್ಳಿತೆರೆ ಇರಲಿ.. ಕಿರುತೆರೆ ಇರಲಿ.. ಜನ ಮನ ಗೆದ್ದ ತಾರೆಯರ ಮೇಲೆ ಅಥವಾ ಸ್ಫರ್ಧಿಯ ಮೇಲೆ ಮೇಲೆ ಅಭಿಮಾನ ಇರಬೇಕು. ಆದರೆ ಅತಿಯಾಗಿರಬಾರದು. ಯಾಕೆಂದರೆ ಅತಿಯಾದರೆ ಅಮೃತ ಕೂಡ ವಿಷವಾಗುತ್ತೆ. ಸದ್ಯ ಗಿಲ್ಲಿಯ ವಿಚಾರದಲ್ಲಿ ಕೂಡ ಇದೇ ಆಗುತ್ತಿದೆಯಾ ಎನ್ನುವ ಅನುಮಾನ ಹಲವರನ್ನು ಕಾಡುತ್ತಿದೆ.

ಇದಕ್ಕೆ ಕೈಗನ್ನಡಿ ಎಂಬಂತೆ ''ಬಿಗ್ ಬಾಸ್'' ಫಲಿತಾಂಶ ಬರುವ ಮುನ್ನವೇ ಜಾಲಿವುಡ್ ಸ್ಟುಡಿಯೋ ಬಳಿ ಜನಸಾಗರ ಹರಿದು ಬಂದಿದೆ. ಇಷ್ಟೇ ಆಗಿದ್ದರೆ ಗಿಲ್ಲಿ ಅಭಿಮಾನಿಗಳ ಅಭಿಮಾನವನ್ನು ಕಂಡು ಖುಷಿ ಪಡುತ್ತಿದ್ದರು. ಆದರೆ ಇದೇ ಸಮಯದಲ್ಲಿ ಕೆಲವರು ಮೀತಿ ಮೀರಿ ವರ್ತಿಸಿದ್ದಾರೆ.
ಹೌದು, ಡೋಲು.. ಕುಣಿತ.. ಜೈಕಾರ.. ಇದೆಲ್ಲವೂ ಜಾಲಿವುಡ್ ಸ್ಟುಡಿಯೋ ಸುತ್ತ ಮುತ್ತ ಮೊಳಗಿದೆ. ಗಿಲ್ಲಿಯ ಬ್ಯಾನರ್, ಫ್ಲೆಕ್ಸ್, ಕಟೌಟ್ ಕಣ್ಣಾಯಿಸಿದ ಕಡೆಯೆಲ್ಲಾ ಕಾಣಿಸುತ್ತಿವೆ. ಹರ್ಷೋದ್ಘಾರ ಮುಗಿಲು ಮುಟ್ಟಿದೆ.
ಆದರೆ.. ಇದೇ ಸಮಯದಲ್ಲಿ ಕೆಲವರು ಸ್ಟುಡಿಯೋ ಒಳಗಡೆ ನುಗ್ಗುವ ಪ್ರಯತ್ನ ಮಾಡಿದ್ದಾರೆ. ಬೈಕ್ ಸೈಲೆನ್ಸರ್‌ದಿಂದ ಕರ್ಕಶ ಶಬ್ದ ಮಾಡಿ ಸುತ್ತ ಮುತ್ತ ಇದ್ದವರಿಗೆ ಕಿರಿಕಿರಿ ಕೊಟ್ಟಿದ್ದಾರೆ. ರಸ್ತೆಯ ಮಧ್ಯೆ ನಿಂತು ಜೈಕಾರ ಕೂಗಿದ್ದಾರೆ.
ಇದೆಲ್ಲದರಿಂದ ಜಾಲಿವುಡ್ ಸುತ್ತ ಮುತ್ತ ಗದ್ದಲದ ವಾತಾವರಣ ನಿರ್ಮಾಣವಾಗಿದೆ. ಉದ್ವಿಗ್ನತೆ ನಿರ್ಮಾಣವಾಗಿದೆ. ಜನರನ್ನು ನಿಯಂತ್ರಣ ಮಾಡಲಾಗದೆ ಪೊಲೀಸರು ಒಂದು ಕೆಎಸ್‌ಆರ್‌ಪಿ ತುಕಡಿ ಸೇರಿದಂತೆ 50ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಿದ್ದಾರೆ. ಇದರ ಜೊತೆಗೆ ಬಿಡದಿ ಪೊಲೀಸರು ಕೂಡ ಸ್ಥಳದಲ್ಲಿದ್ದಾರೆ. ಆದರೂ ಕೂಡ ಜನರನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ.

ಈ ಹಿನ್ನೆಲೆ ಅನಿವಾರ್ಯವಾಗಿ ಜನರನ್ನು ಕಂಟ್ರೋಲ್ ಮಾಡಲು ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಇನ್ನೂ ಫಲಿತಾಂಶ ಹೊರ ಬರುತ್ತಿದ್ದಂತೆ ಜಾಲಿವುಡ್ ಸುತ್ತ ಮುತ್ತ ಇನ್ನು ಜನಜಂಗುಳಿ ಹೆಚ್ಚಾಗುವ ಸಾಧ್ಯತೆ ಇದೆ.
ಒಟ್ನಲ್ಲಿ ''ಬಿಗ್ ಬಾಸ್'' ಕಾರ್ಯಕ್ರಮ ಹಲವರ ಬದುಕು ಬದಲಿಸಿದೆ. ಗಿಲ್ಲಿಯ ಬದುಕು ಕೂಡ ಸಂಪೂರ್ಣವಾಗಿ ಬದಲಾಗಿದೆ. ಸಿಕ್ಕ ಈ ಜನಪ್ರಿಯತೆಯನ್ನು ಗಿಲ್ಲಿ ಮುಂಬರುವ ದಿನಗಳಲ್ಲಿ ಬಳಸಿಕೊಂಡು ಇನ್ನೂ ಮೇಲಕ್ಕೇರುವಂತಾಗಲಿ, ಚಿತ್ರರಂಗದಲ್ಲಿ ಹೆಸರು ಮಾಡುವಂತಾಗಲಿ ಎನ್ನುವ ಹಲವರ ಆಶಯದ ನಡುವೆ ಎಲ್ಲಿ ಗಿಲ್ಲಿ ಈ ಜನಪ್ರಿಯತೆಯ ಅಮಲಿನಲ್ಲಿ ಮೈ ಮರೆಯುತ್ತಾರೆ ಎನ್ನುವ ಆತಂಕ ಕೂಡ ಈಗ ಹಲವರನ್ನು ಕಾಡುತ್ತಿದೆ.


Click it and Unblock the Notifications











